ದೋಷಪೂರಿತ ಎಸ್ ಐಆರ್ ಪ್ರಕ್ರಿಯೆ ರದ್ದುಪಡಿಸಲು ಪ್ರಕಾಶ್ ರಾಜ್ ಆಗ್ರಹ
''2023ರಿಂದ ದೇಶದ ಚುನಾವಣಾ ಆಯೋಗದ ಎಲ್ಲಾ ಪ್ರಕ್ರಿಯೆಗಳು ಸುಪ್ರೀಂ ಕೋರ್ಟ್ ನಿಂದ ತನಿಖೆಯಾಗಲಿ''
ಮಂಗಳೂರು, ಸೆ.28;ರಾಜ್ಯದಲ್ಲಿ ನಡೆಯುತ್ತಿರುವ ದೋಷ ಪೂರಿತವಾದ ಎಸ್ ಐಆರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಮತ್ತು 2023ರಿಂದ ದೇಶದ ಚುನಾವಣಾ ಆಯೋಗದ ಎಲ್ಲಾ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ತನಿಖೆ ನಡೆಸಬೇಕು ಎಂದು ಖ್ಯಾತ ಚಲನಚಿತ್ರ ನಟ, ರಾಜ್ಯದ ಎಸ್ಐಆರ್ ಪರಿಶೋಧ ಮತ್ತು ಪ್ರತಿರೋಧ ಸಂಘಟನೆಯ ಮುಖಂಡ ಪ್ರಕಾಶ್ ರಾಜ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 1950ರಿಂದ ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಆ ಸಂದರ್ಭದಲ್ಲಿ ಅರ್ಹ ಮತದಾರರು ಚುನಾವಣಾ ಸಂದರ್ಭದಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂಬ ಧ್ಯೇಯದೊಂದಿಗೆ ಆಯೋಗವು ಕಾರ್ಯ ನಿರ್ವಹಿಸುತ್ತಾ ಬಂದಿದೆ. ಆದರೆ ಈ ಬಾರಿ ದೇಶದಲ್ಲಿ
ಮತದಾರರ ಪಟ್ಟಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಎಸ್ ಐಆರ್ ಪ್ರಕ್ರಿಯೆ ಆರಂಭಿಸಿತು. ನುಸುಳುಕೋರರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟು,ಅರ್ಹ ಮತದಾರರು ಸೇರಿಸಿಕೊಂಡು ಹೊಸದಾಗಿ ಮತದಾರರ ಪಟ್ಟಿಪಟ್ಟಿ ಸ್ವಚ್ಛಪಡಿಸಿ ರಚಿಸುವುದಾಗಿ ಹೇಳಿದ ಚುನಾವಣಾ ಆಯೋಗ 13 ಕೋಟಿ ಮತದಾರರನ್ನು ಮತದಾನದ ಪಟ್ಟಿಯಿಂದ ಹೊರಗಿಟ್ಟಿದೆ. ಆದರೆ ನುಸುಳುಕೋರರು ಎಷ್ಟಿದ್ದಾರೆ ಎಂಬ ಪಟ್ಟಿ ಇದು ವರೆಗೆ ಬಿಡುಗಡೆ ಮಾಡಿಲ್ಲ ಎಂದು ಪ್ರಕಾಶ್ ರಾಜ್ ಹೇಳಿದರು.
ಕರ್ನಾಟಕದಲ್ಲಿ ಐದೂವರೆ ಕೋಟಿ ಮತದಾರರಿದ್ದಾರೆ. ಈ ಮತದಾರರ ಪಟ್ಟಿ ಸಿದ್ಧಪಡಿಸಲು ಸಾಕಷ್ಟು ಸಮಯದ ಅಗತ್ಯವಿತ್ತು. ಆದರೆ ಚುನಾವಣಾ ಆಯೋಗ ಕೇವಲ ಒಂದು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸುವ ಗಡುವು ನೀಡಿ ಬಳಿಕ ಕೇವಲ 15 ದಿನಗಳ ವಿಸ್ತರಣೆ ಮಾಡಿತು. ಈ ಬಗ್ಗೆ ರಾಜ್ಯ ಸರಕಾರ ಚುನಾವಣಾ ಆಯೋಗಕ್ಕೆ ಹೆಚ್ಚಿನ ಸಮಯ ಕೋರಿ ಮಾಡಿದ ಮನವಿಗೆ ಉತ್ತರ ದೊರೆತಿಲ್ಲ. ಜೀವಂತ ಇರುವವರನ್ನು ಸತ್ತವರ ಪಟ್ಟಿಯಲ್ಲಿ ಸೇರಿಸಲಾಗಿದೆ. ವಿವಿಧ ಕಾರಣದಿಂದ ಗಣತಿದಾರರು ಮನೆಗೆ ಬಂದಾಗ ಆತ ಮನೆಯಲ್ಲಿ ಇಲ್ಲದೆ ಹೋದರೆ ಆತನ ಹೆಸರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಅನಾರೋಗ್ಯ ಪೀಡಿತರು, ಅನಕ್ಷರಸ್ಥ ರು, ಲಿಂಗ ಪರಿವರ್ತನೆ ಗೊಂಡವರು, ಕೆಲಸದ ನಿಮಿತ್ತ ವಾಸ ಸ್ಥಳದಿಂದ ದೂರ ಇರುವವರು, ಎಸ್ಐಆರ್ ಪ್ರಕ್ರಿಯೆಯಲ್ಲಿ ಹಾಜರು ಪಡಿಸಲು ಸೂಚಿಸಲಾಗುತ್ತಿರುವ ದಾಖಲೆಗಳನ್ನು ಹೊಂದದೆ ಇರುವವರು, ಮತದಾರರ ಪಟ್ಟಿಯಲ್ಲಿ ಹೆಸರು ತಪ್ಪಾಗಿ ನಮೂದಾಗಿ ಇರುವವರು ಭಾರತೀಯ ಪ್ರಜೆಗಳಾಗಿದ್ದರೂ ಮತದಾರರ ಪಟ್ಟಿಯಿಂದ ಹೊರಗುಳಿಯುತ್ತಿದ್ದಾರೆ. ಬಿಎಲ್ ಒಗಳಿಗೆ ಮಾಹಿತಿಯ ಕೊರತೆ ಇದೆ, ಸ್ಥಳ ಭೇಟಿ ಮಾಡದೆ ಇರುವವರು ಇದ್ದಾರೆ. ಸಾಕಷ್ಟು ಬಿಎಲ್ ಒ ಗಳಿಗೆ ಫಾರಂ ಸಂಖ್ಯೆ 6 ಮತ್ತು 8ನ್ನು ಭರ್ತಿ ಮಾಡುವ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ ಕಡೆ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಆಳುವ ಪಕ್ಷದ ಬೆಂಬಲದಿಂದ ನೇಮಕಗೊಂಡ ದೇಶದ ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ಚುನಾವಣಾ ಪ್ರಕ್ರೀಯೆಯನ್ನು ಕೇಂದ್ರೀಕರಿಸಲು ಪ್ರಯತ್ನಿಸುತ್ತಿದ್ದಾರೆ. ಇತರ ಇಬ್ಬರು ಚುನಾವಣಾ ಆಯುಕ್ತರು ಇದ್ದರೂ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ. ಸ್ವತಂತ್ರ ಚುನಾವಣಾ ಆಯೋಗದ ಆಯುಕ್ತರಂತೆ ವರ್ತಿಸುತ್ತಿಲ್ಲ. ಇದರಿಂದಾಗಿ ದೇಶದ ಪ್ರಜಾಪ್ರಭುತ್ವ, ಸಂವಿಧಾನ,ಜನರ ಸ್ವಾಭಿಮಾನದ ಕೊಲೆಯಾಗುತ್ತಿದೆ ಈ ಬಗ್ಗೆ ಮುಂದಿನ ಸಂಸತ್ ಅಧಿವೇಶನದಲ್ಲಿ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸಂಸದರು ಅವಿಶ್ವಾಸ ನಿರ್ಣಯ ಮಂಡಿಸಬೇಕು ಎಂದು ಪ್ರಕಾಶ್ ರಾಜ್ ಆಗ್ರಹಿಸಿದ್ದಾರೆ.
ಪಶ್ಚಿಮ ಬಂಗಾಲದಲ್ಲಿ ಎಸ್ ಐಆರ್ ಪ್ರಕ್ರಿಯೆ ನಡೆದು 38 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟ ಬಗ್ಗೆ ಸುಪ್ರೀಂ ಕೋರ್ಟ್ ಗೆ ದೂರು ನೀಡಲಾಯಿತು. ಬಳಿಕ ದಿಲ್ಲಿಯಿಂದ ಬಂದ ಉನ್ನತ ಅಧಿಕಾರಿಗಳ ತಜ್ಞರ ತಂಡ 27 ಲಕ್ಷ ಮತದಾರರ ಪಟ್ಟಿ ಸರಿ ಇದೆ ಎಂದ ಹೇಳಿತ್ತು, ಆದರೂ ರಾತ್ರಿ ಬೆಳಗಾಗುವುದರೊಳಗೆ 16 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡ ಲಾಯಿತು. ಈ ಬಗ್ಗೆ ವಿಚಾರಣೆ ನಡೆಸಲು 12ರಿಂದ 15 ವರ್ಷ ಬೇಕಾಗಬಹುದು ಎಂದು ನ್ಯಾಯಾಲಯ ಹೇಳಿದೆ.ವಿಚಾರಣೆ ನಡೆಸಿದ ಪ್ರಕರಣಗಳಲ್ಲಿ ಶೇ.90ರಷ್ಟು ಅರ್ಹ ಮತದಾರರು ಎನ್ನುವ ಸತ್ಯಾಂಶ ಹೊರಬಂದಿದೆ ಎಂದು ಅವರು ತಿಳಿಸಿದರು.
ಜಾರ್ಖಂಡ್ ನಲ್ಲಿ ಬಿಜೆಪಿ ಕಾರ್ಯಕರ್ತ ಒಬ್ಬ ಫಾರಂ ನಂಬರ್ 7ರಲ್ಲಿ ಭರ್ತಿ ಮಾಡಿ 200 ಅರ್ಜಿ ಸಲ್ಲಿಸಿದ್ದಾನೆ. ಕರ್ನಾಟಕದಲ್ಲಿ ಎಸ್ಐಆರ್ ಆರಂಭ ವಾಗುವ ಸಂದರ್ಭದಲ್ಲಿ ಈ ಬಗ್ಗೆ ಸಾಕಷ್ಟು ಅನುಮಾನಗಳಿತ್ತು, ಅವುಗಳು ಈಗ ರಾಜ್ಯದಲ್ಲೂ ನಿಜವಾಗಿರುವುದು ನಮಗೆ ಮನಟದಟ್ಟಾಗಿದೆ. ಸುಮಾರು ಒಂದುಕೋಟಿ 8 ಲಕ್ಷ ಮತದಾರರನ್ನು ಪ್ರತ್ಯೇಕಿಸಿ ಪಟ್ಟಿ ಮಾಡ ಲಾಗಿದೆ. ಇದರಲ್ಲಿ ಮೃತಪಟ್ಟವರು, ಸ್ಥಳಾಂತರಗೊಂಡವರು, ಬರಗಾಲದಿಂದ ವಲಸೆ ಹೋದವರು, ಸಮೀಕ್ಷೆಯ ಸಂದರ್ಭದಲ್ಲಿ ಹಾಜರಿಲ್ಲದವರು, ಇತರರು ಎಂದು ಗುರುತಿಸಲಾಗಿದೆ. ಇವರೆಲ್ಲರಿಗೂ ಸೂಚನೆ ನೀಡಲಾಗಿಲ್ಲ. ಹೊಸ ಮತದಾರರಾಗಿ ಅರ್ಜಿ ಸಲ್ಲಿಸಿದವರ ಪೈಕಿ ಶೇ7.14 ಮತದಾರರನ್ನು ಸೇರಿಸಲಾಗಿದೆ. ಕೊನೆಯ ಎರಡು ಮೂರು ದಿನಗಳಲ್ಲಿ ಫಾರಂ ನಂಬರ್ 7ರಲ್ಲಿ ಮುಸ್ಲಿಂ, ಕ್ರೈಸ್ತರು, ಬುಡಕಟ್ಟು ಜನರ ಹೆಸರುಗಳನ್ನು ಭರ್ತಿ ಮಾಡಿ ಕೊಟ್ಟಿರುವ ಬಗ್ಗೆ ಮಾಹಿತಿ ಬಂದಿರುತ್ತದೆ. ಆದುದರಿಂದ ಇದರ ವಿರುದ್ಧ ರಾಜ್ಯದಲ್ಲಿ ಸಂಚರಿಸಿ ವಿವಿಧ ನಾಗರಿಕರ ಸಂಘಟನೆಗಳ ಜೊತೆ ಸೇರಿ ಎಸ್ ಐಆರ್ ಪರಿಶೋಧ ಮತ್ತು ಪ್ರತಿರೋಧ ನಡೆಸುವ ಕೆಲಸ ನಡೆಯುತ್ತಿದೆ. ರಾಜ್ಯದಲ್ಲಿ ಸುಮಾರು 100 ಮತಗಟ್ಟೆಗಳಲ್ಲಿ ಈ ಬಗ್ಗೆ ಸಾಮಾಜಿಕ ಸಮೀಕ್ಷೆ ನಡೆಸಿ ಈ ದೋಷಪೂರಿತ ಎಸ್ಐಆರ್ ಪ್ರಕ್ರಿಯೆಯ ಬಗ್ಗೆ ರಾಜ್ಯದ ಸಚಿವ ಸಂಪುಟದ ಸಚಿವರಿಗೆ ಮತ್ತು ಮಾಧ್ಯಮ ಗಳ ಮೂಲಕ ಸಾರ್ವಜನಿಕ ರಿಗೆ ವಾಸ್ತವಾಂಶವನ್ನು ಬಹಿರಂಗಪಡಿಸಲಾಗುವುದು.ಅಕ್ಟೋಬರ್ ನಲ್ಲಿ ದಿಲ್ಲಿಯ ಜಂತರ್ ಮಂತರ್ ನಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಈ ಬಗ್ಗೆ ಹಕ್ಕೊತ್ತಾಯ ನಡೆಸಲಿದ್ದಾರೆ ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ.
ದೇಶದ ಚುನಾವಣಾ ಆಯೋಗದ ಮೂವರು ಸಮಾನ ಅಧಿಕಾರವುಳ್ಳ ಆಯುಕ್ತ ರ ನೇಮಕವಾಗಿದ್ದರೂ ಅವರಲ್ಲಿ ಜ್ಞಾನೇಶ್ ಕುಮಾರ್ ಅವರನ್ನು ನೇಮಕ ಮಾಡಿರುವುದರಲ್ಲಿ ಆಳುವ ಪಕ್ಷದ ಪ್ರಮುಖ ಪಾತ್ರ ಸ್ಪಷ್ಟವಾಗಿದೆ. ಅವರ ಮೇಲೆ ಪ್ರಕರಣ ದಾಖಲಿಸುವುದನ್ನು ತಡೆಯಲು 2023ರಲ್ಲಿ ಶಾಸನದಲ್ಲಿ ತಿದ್ದುಪಡಿ ಮಾಡಲಾಗಿದೆ. ಇಬ್ಬರು ಚುನಾವಣಾ ಆಯುಕ್ತರು ಎಸ್ಐಆರ್ ಪ್ರಕ್ರಿಯೆಯ ನ್ಯೂನತೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ 2023ರ ನಂತರದ ಚುನಾವಣಾ ಆಯೋಗದ ನಡೆಗಳ ಬಗ್ಗೆ ದೇಶದ ಜನ ಸಂಶಯ ಪಡುವಂತಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ 2023ರಿಂದಲೇ ದಾಖಲೆಗಳ ಸಮಗ್ರ ತನಿಖೆ ನಡೆಸಬೇಕು ಎಂದು ಪ್ರಕಾಶ್ ರಾಜ್ ಒತ್ತಾಯಿಸಿದರು..
ಸುದ್ದಿಗೋಷ್ಠಿಯಲ್ಲಿ ಎಸ್ಐಆರ್ ಪ್ರತಿಶೋಧ ಮತ್ತು ಪ್ರತಿರೋಧ ಅಭಿಯಾನದ ಮುಖಂಡರಾದ ಕೆ.ಎಲ್.ಅಶೋಕ್, ಅಬ್ದುಲ್ ಮಜೀದ್, ವಿನೋದ್ ಮಸ್ಕರೇನಸ್, ಅಬ್ದುಲ್ ಸಲಾಂ ಸಿ.ಎಚ್. ಮೊದಲಾದವರು ಉಪಸ್ಥಿತರಿದ್ದರು.