ಸಿವಿಲ್ ವ್ಯಾಜ್ಯದಲ್ಲಿ ಪೊಲೀಸ್ ಪ್ರವೇಶ | ಉಳ್ಳಾಲ ಠಾಣೆ ಇನ್ ಸ್ಪೆಕ್ಟರ್ ಗೆ ಹೈಕೋರ್ಟ್ ತೀವ್ರ ತರಾಟೆ
"ನಿಮ್ಮನ್ನು ನ್ಯಾಯಾಲಯ ಸಸ್ಪೆಂಡ್ ಮಾಡಿದರೆ ಬಟ್ಟೆ ಬಿಚ್ಚಿ ಕೋರ್ಟ್ ಸುತ್ತ ಅಲೆಯಬೇಕಾಗುತ್ತದೆ"
Photo credit: PTI
ಬೆಂಗಳೂರು: ಸಿವಿಲ್ ವ್ಯಾಜ್ಯವೊಂದರಲ್ಲಿ ಖಾಸಗಿ ಕಂಪೆನಿಯ ನಿರ್ದೇಶಕರು ಹಾಗೂ ಉದ್ಯೋಗಿಗಳ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿದ್ದ ಪೊಲೀಸ್ ಕ್ರಮಕ್ಕೆ ರಾಜ್ಯ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ವಿರೂಪಾಕ್ಷಯ್ಯ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿ ವರದಿ ನೀಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನ್ಯಾಯಮೂರ್ತಿ ಶ್ರೀಶಾನಂದ ಅವರಿದ್ದ ಪೀಠ ಸೂಚಿಸಿದೆ.
ವಾಣಿಜ್ಯ ಕಟ್ಟಡವೊಂದರಲ್ಲಿ ವಿದ್ಯುತ್ ಕಾಮಗಾರಿ ಪೂರ್ಣಗೊಳಿಸಿದ್ದರೂ ಒಪ್ಪಂದದಂತೆ ಸುಮಾರು 60.39 ಲಕ್ಷ ರೂ. ಪಾವತಿಸಿಲ್ಲ ಎಂದು ಇಲೆಕ್ಟ್ರಿಕಲ್ ಗುತ್ತಿಗೆದಾರ ಸುನೀಲ್ ಕುಮಾರ್ ಎಂಬವರು ಪೊಲೀಸ್ ದೂರು ನೀಡಿದ್ದರು. ಈ ದೂರಿನನ್ವಯ ಉಳ್ಳಾಲ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು.
ಈ ಎಫ್ ಐಆರ್ ರದ್ದು ಕೋರಿ ಕಂಪೆನಿ ಹಾಗೂ ನಿರ್ದೇಶಕರು ಹೈಕೋರ್ಟ್ ಮೊರೆ ಹೋಗಿದ್ದರು. ಇದರ ವಿಚಾರಣೆಯ ವೇಳೆ ಕಂಪೆನಿ ಪರ ವಕೀಲರು, "ಕಂಪೆನಿ ಹಾಗೂ ಇಲೆಕ್ಟ್ರಿಕ್ ಗುತ್ತಿಗೆದಾರರ ನಡುವೆ ಒಪ್ಪಂದ ಆಗಿದ್ದು, ಏನಾದರು ಸಮಸ್ಯೆಯಾದರೆ ನ್ಯಾಯಾಲಯ ಅಥವಾ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ಒಪ್ಪಂದದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಇದನ್ನು ಮೀರಿ ಉಳ್ಳಾಲ ಠಾಣೆಯ ಇನ್ ಸ್ಪೆಕ್ಟರ್ ಕಂಪೆನಿಯ ಹಾಗೂ ನಿರ್ದೇಶಕರ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ'' ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಈ ವೇಳೆ ಉಳ್ಳಾಲ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ವಿರೂಪಾಕ್ಷಯ್ಯ ಖುದ್ದು ಹಾಜರಿದ್ದು, ಮಂಗಳೂರು ನಗರ ಪೊಲೀಸ್ ಆಯುಕ್ತರು ವೀಡಿಯೋ ಕಾನ್ಫರೆನ್ಸ್ ನಲ್ಲಿ ಹಾಜರಿದ್ದರು. ನ್ಯಾಯಾಲಯವು ತನಿಖಾಧಿಕಾರಿಯ ಕಾರ್ಯ ವೈಖರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ "ಸಿವಿಲ್ ವ್ಯಾಜ್ಯದಲ್ಲಿ ಪೊಲೀಸರು ಯಾಕೆ ಮಧ್ಯಪ್ರವೇಶ ಮಾಡುತ್ತಾರೆ?" ಎಂದು ಖಾರವಾಗಿ ಪ್ರಶ್ನಿಸಿತು.
ಅಲ್ಲದೆ ತನಿಖಾಧಿಕಾರಿಯ 28 ವರ್ಷಗಳ ಸೇವೆಯನ್ನ ಉಲ್ಲೇಖ ಮಾಡಿ, "ನಿಮ್ಮನ್ನು ನ್ಯಾಯಾಲಯ ಸಸ್ಪೆಂಡ್ ಮಾಡಿದರೆ ಬಟ್ಟೆ ಬಿಚ್ಚಿ ಕೋರ್ಟ್ ಸುತ್ತ ಅಲೆಯಬೇಕಾಗುತ್ತದೆ" ಎಂದು ಕಟು ಮಾತುಗಳಲ್ಲಿ ಎಚ್ಚರಿಸಿತು. ಈ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೆ ಸೂಚಿಸಿ ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಿತು.