ಅಡ್ಕರೆ ಪಡ್ಪು : ಉಳ್ಳಾಲ ಹೋಬಳಿ ಮಟ್ಟದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ
ದೇರಳಕಟ್ಟೆ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಮಂಗಳೂರು ದಕ್ಷಿಣ ವಲಯ ಹಾಗೂ ಜಮೀಯ್ಯತುಲ್ ಫಲಾಹ್ ಗ್ರೀನ್ ವೀವ್ ಪ್ರೌಢ ಶಾಲೆ, ಅಡ್ಕರೆ ಪಡ್ಪು, ಕೊಣಾಜೆ ಇವರ ಸಹಯೋಗದಲ್ಲಿ 17 ವರ್ಷದ ವಯೋಮಿತಿಯ 2026-27 ನೇ ಸಾಲಿನ ಪ್ರೌಢ ಶಾಲಾ ಬಾಲಕ - ಬಾಲಕಿಯರ ಹೋಬಳಿ ಮಟ್ಟದ ಕಬಡ್ಡಿ ಪಂದ್ಯಾಟವು ಜಮೀಯ್ಯತುಲ್ ಫಲಾಹ್ ಗ್ರೀನ್ ವೀವ್ ಪ್ರೌಢ ಶಾಲೆಯಲ್ಲಿ ಸೋಮವಾರ ಜರುಗಿತು.
ಡೆಲ್ಟಾ ಇಂಡಸ್ಟ್ರೀಸ್ ನಿರ್ದೇಶಕರು ನೂರುಲ್ ಹುದಾ ವಿದ್ಯಾ ಸಂಸ್ಥೆಯ ಮಾಜಿ ಅಧ್ಯಕ್ಷರು ರಾಜ್ಯ ಕಬಡ್ಡಿ ತಂಡದ ಮಾಜಿ ಆಟಗಾರರು ಆಗಿರುವ ಬದ್ರುದ್ದೀನ್ ಪಣಂಬೂರು ಅವರು ಕಬಡ್ಡಿ ಪಂದ್ಯಾಟವನ್ನು ಪ್ರಾತ್ಯಕ್ಷಿಕೆಯ ಮೂಲಕ ಉದ್ಘಾಟಿಸಿ ಕ್ರೀಡೆಯಲ್ಲಿ ಶಿಸ್ತು, ತಂಡದ ಮನೋಭಾವ, ಕ್ರೀಡಾಸ್ಪೂರ್ತಿಯನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರೀನ್ ವೀವ್ ವಿದ್ಯಾ ಸಂಸ್ಥೆಯ ಸಂಚಾಲಕರಾದ ಪರ್ವೇಜ್ ಅಲಿ, ದೈಹಿಕ ಶಿಕ್ಷಣ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ, ದೈಹಿಕ ಶಿಕ್ಷಣ ಶಿಕ್ಷಕ ಸಂಘದ ತಾಲೂಕು ಕಾರ್ಯದರ್ಶಿ ಮೋಹನ್ ಶಿರ್ಲಾಲ್, ದೈಹಿಕ ಶಿಕ್ಷಣ ಶಿಕ್ಷಕ ಸಂಘದ ನೋಡಲ್ ಅಧಿಕಾರಿ ರಾಜೀವ್ ನಾಯ್ಕ್ , ಶಾಲಿನಿ ಮೇಡಂ, ಎಸ್. ಬಿ. ಸಿ ಅಧ್ಯಕ್ಷ ಎ. ಬಿ. ಹಸೈನಾರ್, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ನಮಿತಾ.ಬಿ.ಎನ್ ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ತಿಪ್ಪೊಜಿ.ಎಂ. ವೈ ಅವರು ಉಪಸ್ಥಿತರಿದ್ದರು.
ಉಳ್ಳಾಲ "ಎ" ವಲಯದ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಭಗವತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಉಚ್ಚಿಲ,ಉಳ್ಳಾಲ "ಬಿ" ವಲಯದ ಬಾಲಕರ ವಿಭಾಗದಲ್ಲಿ ಜಮೀಯತುಲ್ ಫಲಾಹ್ ಗ್ರೀನ್ ವೀವ್ ಪ್ರೌಢ ಶಾಲೆ, ಅಡ್ಕರೆ ಪಡ್ಪು, ಬಾಲಕಿಯರ ವಿಭಾಗದಲ್ಲಿ ಸರಕಾರಿ ಪ್ರೌಢ ಶಾಲೆ ಕೊಣಾಜೆ ಪದವು - ಶಾಲೆಗಳ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದು ಮಂಗಳೂರು ತಾಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆ ಆಗಿರುತ್ತಾರೆ.
ಗ್ರೀನ್ ವೀವ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಅಬೂಬಕ್ಕರ್ ಅವರು ಸ್ವಾಗತಿಸಿ ದೈಹಿಕ ಶಿಕ್ಷಣ ಶಿಕ್ಷಕ ಮೊಹಮ್ಮದ್ ಅಶ್ರಫ್.ಎಂ.ಕೆ ವಂದಿಸಿದರು. ಶಿಕ್ಷಕಿ ರಶ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು.