ಆಹಾರ ಗುಣಮಟ್ಟ, ಸ್ವಚ್ಛತೆ ಪರಿಶೀಲನಾ ದಾಳಿ ಮುಂದುವರಿಕೆ; ಆರೋಗ್ಯ ಸಲಹೆಗಳ ಬಗ್ಗೆ ಸೂಚನಾ ಫಲಕ ಅಳವಡಿಕೆಗೆ ಕ್ರಮ: ಯು.ಟಿ.ಖಾದರ್
ಮಂಗಳೂರು, ಸೆ.2: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹೊಟೇಲ್, ರೆಸ್ಟೋರೆಂಟ್, ಆಹಾರ ಮಳಿಗೆಗಳು ಮಾತ್ರವಲ್ಲದೆ, ಪಿಜಿಗಳಿಗೂ ಅಧಿಕಾರಿಗಳಿಂದ ತಪಾಸಣೆ, ದಾಳಿ ಕ್ರಮಗಳು ಮುಂದುವರಿಯಲಿದೆ. ಜತೆಗೆ ಸಾರ್ವಜನಿಕ ಸ್ಥಳವನ್ನು ಒಳಗೊಂಡು ಆಹಾರ ಗುಣಮಟ್ಟದ ಬಗ್ಗೆ ದೂರು ನೀಡಲು ಅನುಕೂಲವಾಗುವಂತೆ ಕ್ಯೂಆರ್ ಕೋಡ್ ಅಳವಡಿಸುವ ಜತೆಗೆ ಆರೋಗ್ಯ ಸಲಹೆಗಳ ಸೂಚನಾ ಫಲಕಗಳನ್ನು ಅಳವಡಿಸಲು ಕ್ರಮ ವಹಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ವಿಭಾಗದಿಂದ ಹಲವೆಡೆ ದಾಳಿ ನಡೆಯುತ್ತಿದೆ. ಯಾರೇ ನಿಯಮ ಉಲ್ಲಂಘನೆ ಮಾಡಿ ಸಿಕ್ಕಿ ಬಿದ್ದರೂ ನನ್ನ ಆತ್ಮೀಯರಾಗಿದ್ದರೂ ಬಿಡುವ ಪ್ರಶ್ನೆ ಇಲ್ಲ. ಯಾಕೆಂದರೆ ಅಲ್ಲಿ ಆಹಾರ ಸೇವಿಸುವವರೂ ನನ್ನ ಆತ್ಮೀಯರಾಗಿದ್ದು, ಅವರ ಪರವಾಗಿ ನಾನು ನಿಲ್ಲಬೇಕು. ಹಾಗಾಗಿ ಎಲ್ಲರೂ ಆಹಾರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಮಂಗಳೂರಿನಲ್ಲಿಯೂ ಕ್ಯೂಆರ್ ಕೋಡ್ ಮೂಲಕ ಬಂದ ದೂರಿನ ಹಿನ್ನೆಲೆಯಲ್ಲಿ ಈಗಾಗಲೇ ಎರಡು ದಾಳಿ ನಡೆದಿದೆ. ಆ್ಯಪ್‌ನಲ್ಲಿರುವ ಕ್ಯೂಆರ್ ಕೋಡ್‌ಗಳನ್ನು ಹೊಟೇಲ್, ಆಹಾರ ಮಳಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲೂ ಅಳವಡಿಸಲು ಕ್ರಮ ವಹಿಸಲಾಗುವುದು. ಯಾರ ವ್ಯಾಪಾರ ಬಂದ್ ಮಾಡಿಸಬೇಕೆಂಬುದು ನಮ್ಮ ಉದ್ದೇಶವವಲ್ಲ. ಆದರೆ ಜನರಿಗೆ ಮೋಸ ಆಗಬಾರದು. ವ್ಯಾಪಾರಿಗಳೂ ತಮ್ಮ ಬದುಕಟ್ಟಿಕೊಳ್ಳಬೇಕು. ವ್ಯಾಪಾರದ ಮೂಲಕ ಅವರೂ ಸಮಾಜಕ್ಕೆ ಕೊಡುಗೆ ನೀಡಬೇಕು. ಹಾಗಾಗಿ ಇದೀಗ ಪ್ರಥಮ ಹಂತದಲ್ಲಿ ಕನಿಷ್ಟ ದಂಡದ ಮೂಲಕ ಎಚ್ಚರಿಕೆ ನೀಡುವ ಕ್ರಮ ಆಗುತ್ತಿದೆ ಎಂದು ಅವರು ಹೇಳಿದರು.
ಪಡಿತರ ಹಾಗೂ ಇತರ ಆಹಾರದ ಕಲಬೆರಕೆಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಯು.ಟಿ.ಖಾದರ್, ಈ ಬಗ್ಗೆ ದೂರು ಬಂದಾಗ ಕ್ರಮ ಆಗಲಿದೆ ಎಂದರು.
ಎಸ್‌ಐಆರ್‌ನಿಂದ ಅರ್ಹರನ್ನು ಕೈಬಿಡಬಾರದು
ಎಸ್‌ಐಆರ್‌ಗೆ ಸಂಬಂಧಿಸಿ ದ್ವಿತೀಯ ಹಂತದ ಪರಿಶೀಲನೆ ನಡೆಯುತ್ತಿದ್ದು, ಈ ಸಂದರ್ಭ ಪಟ್ಟಿಯಿಂದ ಹೆಸರು ತೆಗೆಯುವುದು ಮಾತ್ರವಲ್ಲ, ಅರ್ಹ ಮತದಾರರ ಹೆಸರು ಸೇರ್ಪಡೆ ಬಗ್ಗೆ ಗಮನ ಹರಿಸುವಂತೆ ಚುನಾವಣಾ ಆಯೋಗದ ಆಯುಕ್ತರಿಗೆ ಮನವಿ ಮಾಡಲಾಗಿದೆ. ಹೆಸರಿನಲ್ಲಿ ತೊಂದರೆ ಇದ್ದಾಗ ಸರಿಪಡಿಸುವ ಕೆಲಸವಾಗಬೇಕು. ಮ್ಯಾಪಿಂಗ್‌ಗೆ ಸಂಬಂಧಿಸಿ ವಿದೇಶದಲ್ಲಿ ಇರುವ ನೆಪದಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಬಾರದು. ಅವರಿಗೆ ವಿಶೇಷ ವ್ಯವಸ್ಥೆ ಮಾಡಿ ಮತದಾನದ ಹಕ್ಕು ಒದಗಿಸಬೇಕು. ನನ್ನ ವ್ಯಾಪ್ತಿಯಲ್ಲಿ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಎನ್ಯುಮರೇಶನ್ ಫಾರಂ ಭರ್ತಿ ಮಾಡಿ ಬಿಎಲ್‌ಒಗಳಿಗೆ ನೀಡದಿದ್ದಲ್ಲಿ ಅದು ಜನರ ಸಮಸ್ಯೆಯೇ ಹೊರತು ಅಧಿಕಾರಿಗಳದ್ದಲ್ಲ. ಹಾಗಾಗಿ ದ್ವಿತೀಯ ಹಂತ ಸೇರಿದಂತೆ ಮುಂದಿನ ಹಂತದ ಎಲ್ಲಾ ರೀತಿಯ ಪರಿಶೀಲನಾ ವ್ಯವಸ್ಥೆಯನ್ನು ರಾಜ್ಯಕ್ಕೆ ಏಕ ಮಾದರಿಯಲ್ಲಿ ನಡೆಸಲು ಚುನಾವಣಾ ಆಯೋಗ ಕ್ರಮ ವಹಿಸಬೇಕು ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ಶಾಸಕರು ಕೆಆರ್‌ಐಡಿಎಲ್‌ಗೆ ಕಾಮಗಾರಿ ವಹಿಸುವುದೇಕೆ?
ಕೆಆರ್‌ಐಡಿಎಲ್ ಬಗ್ಗೆ ಶಾಸಕ ಅಶೋಕ್ ರೈ ನೀಡಿರುವ ದೂರಿನ ಕುರಿತಂತೆ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ಶಾಸಕರು ಸರಕಾರದ ಮೇಲಿನ ಕಾಳಜಿಯಿಂದ ದೂರು ನೀಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಸಚಿವರ ಜತೆ ಮಾತುಕತೆ ನಡೆಸಲಾಗಿದೆ. ಅಧಿಕಾರಿಗಳು ತಪ್ಪು ಮಾಡಿದ್ದರೆ ಅವರನ್ನು ಕೆಲಸದಿಂದ ವಜಾ ಮಾಡಬೇಕು. ಈ ಬಗ್ಗೆ ತನಿಖೆ ನಡೆದು ಸತ್ಯಾಂಶ ಹೊರಬರಲಿ ಎಂದು ಹೇಳಿದರು.
ಶಾಸಕರು ಕೆಆರ್‌ಐಡಿಎಲ್‌ಗೆ ಕಾಮಗಾರಿ ಯಾಕೆ ವಹಿಸುತ್ತಾರೆ ಗೊತ್ತಾಗುವುದಿಲ್ಲ. ಅಲ್ಲಿ ಕಾಮಗಾರಿ ತಪಾಸಣೆಗೆ ಸೂಕ್ತವಾದ ಇಂಜಿನಿಯರಿಂಗ್ ವ್ಯವಸ್ಥೆಯಾಗಲಿ, ಸಿಬ್ಬಂದಿಯಾಗಲಿ ಇಲ್ಲ.
ಟೆಂಡರ್ ಮಾಡುವುದಿಲ್ಲ. ಹಾಗಾಗಿ ನಾನು ಪಿಡಬ್ಲ್ಯುಡಿ ಅಥವಾ ಆರ್‌ಡಿಪಿಆರ್‌ಗೆ ಮಾತ್ರ ಕೊಡುವುದು. ಕೆಆರ್‌ಐಡಿಎಲ್‌ನ ಸಮಸ್ಯೆ ಬಗ್ಗೆ ನಾನು ಅಸೆಂಬ್ಲಿಯಲ್ಲಿಯೂ ಮಾತನಾಡಿದ್ದೇನೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮುಡಾದ ನೂತನ ಅಧ್ಯಕ್ಷ ಸಂತೋಷ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಹೈದರ್ ಕೈರಂಗಳ ಉಪಸ್ಥಿತರಿದ್ದರು.
ಬಸವರಾಜ ರಾಯರೆಡ್ಡಿ ಅಪಾರ ಜ್ಞಾನಭರಿತ ಹಾಗೂ ಪ್ರಾಮಾಣಿಕ ಶಾಸಕ. ಅವರು ನನ್ನ ತಂದೆಯ ಕಾಲದಲ್ಲೇ ಶಾಸಕರಾಗಿದ್ದವರು. ಅಂತಹ ವ್ಯಕ್ತಿತ್ವಕ್ಕೆ ನಾವು ಗೌರವ ಕೊಡಬೇಕು. ಅವರು ಯಾವುದೇ ಪಕ್ಷದಲ್ಲಿ ಇದ್ದರೂ ಗೌರವಿಸಬೇಕು. ಅವರು ಯಾವತ್ತೂ ಜನರಿಗೆ ತೊಂದರೆ ಮಾಡಿಲ್ಲ. ಶಾಸರಕಾಗಿದ್ದ ಸಂದರ್ಭ 1 ರೂ. ಮಾತ್ರ ಪಡೆಯುತ್ತಿದ್ದ ಅವರನ್ನು ರಾಯಲ್ ರೆಡ್ಡಿ ಎಂದೇ ಕರೆಯಲಾಗುತ್ತಿತ್ತು. ಅವರು ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ಸಂದರ್ಭಕ್ಕೆ ತಕ್ಕ ಹಾಗೆ ತಮ್ಮ ಮನಸ್ಸಿಗೆ ಬಂದಿದ್ದನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಅವರು ಹಿಂದೂ ಧರ್ಮವನ್ನು ಅತ್ಯುತ್ತಮವಾಗಿ ಪಾಲಿಸುತ್ತಾರೆ, ಅವರು ದೇವಭಕ್ತ ಕೂಡಾ. ಅವರ ಹೇಳಿಕೆಯನ್ನು ರಾಜಕೀಯ ಮಾಡುವ ನೀಚ ಮನಸ್ಥಿತಿ ಯಾಕೆ ಎಂದು ಪ್ರಶ್ನಿಸಿದ ಯು.ಟಿ.ಖಾದರ್, ಈ ರೀತಿ ರಾಜಕೀಯ ಮಾಡುವವರು ದೇಶಪ್ರೇಮಿ ಆಗಲು ಸಾಧ್ಯವಿಲ್ಲ ಎಂದರು.
ಆಹಾರ ಗುಣಮಟ್ಟ ತಪಾಸಣೆಗೆ ಸಂಬಂಧಿಸಿ ಸುಸಜ್ಜಿತ ಲ್ಯಾಬ್ ಆರಂಭಿಸುವ ಯೋಜನೆ ಆರಂಭಿಕ ಹಂತದಲ್ಲಿದೆ. ಕಳಪೆ ಆಹಾರ ಪೂರೈಕೆ ಸಂಬಂಧಿಸಿ ನಡೆಯುವ ದಾಳಿ ವೇಳೆ ಸಿಕ್ಕಿಬೀಳುವ ದೊಡ್ಡ ಕಂಪನಿಗಳು ನ್ಯಾಯಾಲಯದ ಮೂಲಕ ರಕ್ಷಣೆ ಪಡೆದು ಲ್ಯಾಬ್ ಸರಿ ಇಲ್ಲ ಎಂಬ ಸಬೂಬು ನೀಡಿ ಬಚಾವ್ ಆಗುತ್ತಾರೆ. ಅದಕ್ಕೆ ಅವಕಾಶ ಆಗದಂತೆ ಸುಪ್ರೀಂ ಕೋರ್ಟ್ ಹೋದರೂ ಪ್ರಯೋಗಾಲಯದ ವರದಿಯನ್ನು ಎತ್ತಿ ಹಿಡಿಯುವ ರೀತಿಯ ಸುಸಜ್ಜಿತ ಲ್ಯಾಬ್ ಅಸ್ತಿತ್ವಕ್ಕೆ ಬರಲಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.