ಬೆಳ್ತಂಗಡಿ| ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವತಿಯಿಂದ ಉದ್ಯಮಿಗೆ 87 ಲಕ್ಷ ರೂ. ವಂಚನೆ; ಪ್ರಕರಣ ದಾಖಲು
ಬೆಳ್ತಂಗಡಿ : ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಪರಿಚಯವಾಗಿ ಮದುವೆಯಾಗುವುದಾಗಿ ನಂಬಿಸಿ ಯುವತಿ ಯೋರ್ವಳು ಬೆಳ್ತಂಗಡಿಯ ಉದ್ಯಮಿಯಿಂದ 87 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಸಾರಾಂಶ: ಬೆಳ್ತಂಗಡಿ ನಿವಾಸಿ, ಉದ್ಯಮಿಗೆ 2024ರ ಮೇ ತಿಂಗಳಲ್ಲಿ ಮ್ಯಾಟ್ರಿಮೋನಿ ಮೂಲಕ ಶಿವಮೊಗ್ಗ/ಬೆಂಗಳೂರು ಮೂಲದ ಅನಿಷಾ ಪಾಲನ್ನ (35) ಎಂಬ ಯುವತಿಯ ಪರಿಚಯವಾಗಿತ್ತು. ಬಳಿಕ ಇಬ್ಬರೂ ಇನ್‌ಸ್ಟಾಗ್ರಾಂ ಹಾಗೂ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದು, ಮದುವೆಯಾಗುವ ಕುರಿತು ಮೊಬೈಲ್ ನಲ್ಲಿ ಮಾತುಕತೆ ನಡೆಸುತ್ತಿದ್ದರು.
ಈ ವೇಳೆ ಯುವತಿ ವ್ಯವಹಾರದಲ್ಲಿ ಆರ್ಥಿಕ ತೊಂದರೆ ಉಂಟಾಗಿದೆ ಎಂದು ಹೇಳಿ ವಿವಿಧ ವ್ಯಕ್ತಿಗಳ ಬ್ಯಾಂಕ್ ಖಾತೆ ಗಳಿಗೆ ಹಾಗೂ ತನ್ನ ಖಾತೆ ಮತ್ತು ಗೂಗಲ್ ಪೇ ಮೂಲಕ ಹಂತ ಹಂತವಾಗಿ ಹಣ ವರ್ಗಾಯಿಸಿಕೊಳ್ಳುತ್ತಿದ್ದಳು. ಜೊತೆಗೆ ಬೆಂಗಳೂರಿನಲ್ಲಿ ತನ್ನ ಪರವಾಗಿ ಬಂದ ವ್ಯಕ್ತಿಯ ಮೂಲಕ ಲಕ್ಷಾಂತರ ರೂ. ಹಣವನ್ನೂ ಅನನ್ಯ ಕೃಷ್ಣ ಅವರಿಂದ ಪಡೆದುಕೊಂಡಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ವಿವಿಧ ಹಂತಗಳಲ್ಲಿ 87,22,710 ರೂ. ಪಡೆದುಕೊಂಡ ಬಳಿಕ ಅನಿಷಾ ಪಾಲನ್ನ ಮೊಬೈಲ್ ಸಂಪರ್ಕಕ್ಕೂ ಸಿಗದೆ, ಹಣವನ್ನು ಹಿಂದಿರುಗಿಸದೆ ವಂಚಿಸಿರುವುದಾಗಿ ದೂರುದಾರರು ತಿಳಿಸಿದ್ದಾರೆ.
ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 318(4) ಅಡಿಯಲ್ಲಿ ಜು.18 ರಂದು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.