ಮಂಗಳೂರು: ಮಳೆಗಾಲದಲ್ಲಿ ಉಂಟಾಗುವ ತೀವ್ರ ಮಣ್ಣಿನ ಸವಕಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ನವಮಂಗಳೂರು ಬಂದರು ಪ್ರಾಧಿಕಾರದ ಸಿಐಎಸ್‌ಎಫ್ ಘಟಕದ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯ ನಂದಿನಿ ನದಿ ತೀರದಲ್ಲಿ ಸುಮಾರು 3,000 ಲಾವಂಚ (Vetiver/ಖಸ್) ಸಸಿಗಳನ್ನು ನೆಡಲಾಯಿತು.

ದೇಶದ ಪ್ರಮುಖ ಮೂಲಸೌಕರ್ಯಗಳ ಭದ್ರತೆಯ ಜೊತೆಗೆ ಪರಿಸರ ಸಂರಕ್ಷಣೆಗೂ ಒತ್ತು ನೀಡಿರುವ ಸಿಐಎಸ್‌ಎಫ್, ಮಹಾನಿರ್ದೇಶಕ ಪ್ರವೀರ್ ರಂಜನ್ ಅವರ ನೇತೃತ್ವದಲ್ಲಿ 2026ರ ಆಗಸ್ಟ್‌ನಿಂದ ದೇಶವ್ಯಾಪಿ 'ಲಾವಂಚ ನಾಟಿ ಅಭಿಯಾನ'ವನ್ನು ಹಮ್ಮಿಕೊಂಡಿದೆ. ಮಣ್ಣಿನ ಸವಕಳಿ ನಿಯಂತ್ರಣ, ಭೂಕುಸಿತ ತಡೆ ಮತ್ತು ಅಂತರ್ಜಲ ಮರುಪೂರಣಕ್ಕೆ ಲಾವಂಚ ಹುಲ್ಲು ಅತ್ಯಂತ ಪರಿಣಾಮಕಾರಿಯಾಗಿದೆ. ಇದರ ಬೇರುಗಳು ನೆಲದಾಳಕ್ಕೆ ಸುಮಾರು 3 ರಿಂದ 4 ಮೀಟರ್‌ಗಳಷ್ಟು ನೇರವಾಗಿ ಬೆಳೆಯುವುದರಿಂದ ಮಣ್ಣನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳುತ್ತವೆ. ಅಲ್ಲದೆ, ಒಂದು ಲಕ್ಷ ಲಾವಂಚ ಸಸಿಗಳು ಎರಡು ವರ್ಷಗಳಲ್ಲಿ ಸುಮಾರು 20,000 ಪೂರ್ಣ ಬೆಳೆದ ಮರಗಳಿಗೆ ಸಮನಾದ ಇಂಗಾಲ ಹೀರುವಿಕೆ ಮತ್ತು ತಂಪಾದ ವಾತಾವರಣವನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿವೆ.

ಕೇಂದ್ರ ಸರ್ಕಾರದ 'ಏಕ್ ಪೇಡ್ ಮಾ ಕೆ ನಾಮ್' ಅಭಿಯಾನಕ್ಕೆ ಪೂರಕವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕಟೀಲು ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹರಿನಾರಾಯಣ ಆಸ್ರಣ್ಣ, ಪಿಲಿಕುಳ ನಿಸರ್ಗಧಾಮದ ಔಷಧೀಯ ಸಸ್ಯೋದ್ಯಾನದ ಅಧಿಕಾರಿ ಉದಯ ಕುಮಾರ್ ಶೆಟ್ಟಿ, ಎನ್‌ಎಂಪಿಎ ಸಿಐಎಸ್‌ಎಫ್ ಉಪ ಕಮಾಂಡೆಂಟ್ ಆರ್.ಪಿ. ಪಾಠಕ್ ಉಪಸ್ಥಿತರಿದ್ದರು.

ಸಿಐಎಸ್‌ಎಫ್ ಸಿಬ್ಬಂದಿ, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸ್ಥಳೀಯರು ಸೇರಿದಂತೆ ಸುಮಾರು 60 ಮಂದಿ ಪಾಲ್ಗೊಂಡು ಸಸಿಗಳನ್ನು ನೆಟ್ಟರು.

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor