ಸುರತ್ಕಲ್: ಕ್ರೀಡೆಗಳು ಮನಸ್ಸು ಮತ್ತು ದೇಹವನ್ನು ಸದೃಢಗೊಳಿಸುವ ಚಟುವಟಿಕೆಗಳಾಗಿವೆ. ಆದುದರಿಂದ ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಬೇಕು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿದರು.

ಕಾಟಿಪಳ್ಳದ  ಇನ್ಫೆಂಟ್ ಮೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 17ರ ವಯೋಮಿತಿಯ ಬಾಲಕ-ಬಾಲಕಿಯರ ಖೋ-ಖೋ ಪಂದ್ಯಾಕೂಟ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತಾಡುತ್ತಿದ್ದರು.

ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಸೋನಲ್ ಡಿಮೆಲ್ಲೊರವರು ಪಂದ್ಯಾಟವನ್ನು ಉದ್ಘಾಟಿಸಿದರು. ಶಾಲಾ ಸಂಚಾಲಕರಾದ ಫಾ. ಸಂತೋಷ್ ಲೋಬೊ ಆಶೀರ್ವಚನ ನೀಡಿದರು.

ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್, ಮಂಗಳೂರು ಉತ್ತರ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಜೀವನ್ ಕುಮಾ‌ರ್ ಶೆಟ್ಟಿ, ಶಾಲಾ ಮುಖ್ಯಸ್ಥರಾದ ಫ್ರಾನ್ಸಿಸ್ ಡಿಕುನ್ಹಾ ಮತ್ತು ಪಂದ್ಯಾಟದ ಸಂಘಟನಾ ಕಾರ್ಯದರ್ಶಿ ವಿನ್ಯಾಸ್ ಉಪಸ್ಥಿತರಿದ್ದರು.

ಬಾಲಕ ಮತ್ತು ಬಾಲಕಿಯರ ಎರಡೂ ವಿಭಾಗಗಳಲ್ಲಿ ಕಾಟಿಪಳ್ಳದ  ಇನ್ಫೆಂಟ್ ಮೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ನೇತೃತ್ವದ ಮಂಗಳೂರು ಉತ್ತರ ವಲಯದ ತಂಡಗಳು ಜಯಶಾಲಿಯಾದವು. ಪುತ್ತೂರು ವಲಯದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಬಾಲಕರ ಹಾಗೂ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಬಿಳಿನೆಲೆ ಬಾಲಕಿಯರ ತಂಡಗಳು ದ್ವಿತೀಯ ಸ್ಥಾನವನ್ನು ಪಡೆದವು.

ಕಾಟಿಪಳ್ಳ ಇನ್ಫೆಂಟ್ ಮೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ತೃಪ್ತಿ ಸಿ. ಶೆಟ್ಟಿ ಮತ್ತು ಆದಿತ್ಯ ಪೀಟರ್ ಲಕ್ರಾ ಅತ್ಯುತ್ತಮ ಸವ್ಯಸಾಚಿಯಾಗಿ, ಕನ್ನಿಕಾ ಶೆಟ್ಟಿ ಮತ್ತು ವರ್ಷಿತ್ ಜಿ.ಶೆಟ್ಟಿ ಅತ್ಯುತ್ತಮ ಹಿಡಿತಗಾರರಾಗಿ ಆಯ್ಕೆಯಾದರು. ಶ್ರೀ ಗೋಪಲಕೃಷ್ಣ ಪ್ರೌಢಶಾಲೆಯ ಪೂರ್ಣವಿ ಮತ್ತು ಪುತ್ತೂರು ವಿವೇಕಾನಂದ ಪ್ರೌಢಶಾಲೆಯ ಯಾಶ್ವಿನ್ ಅತ್ಯುತ್ತಮ ಓಟಗಾರ ಪ್ರಶಸ್ತಿಯನ್ನು ಪಡೆದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor