ಮೀನುಗಾರರ ಕನಸು ನಸಾಗುವ ನಿರೀಕ್ಷೆ: ಚೇತನ್ ಬೆಂಗ್ರೆ
ಮಂಗಳೂರು, ಸೆ.21: ಮೀನುಗಾರಿಕಾ ಧಕ್ಕೆಗೆ ಬಂದು ಮೀನುಗಾರನ್ನು ಹತ್ತಿರದಿಂದ ಕಂಡು ಅವರಿಂದ ಸಮಸ್ಯೆ ಅರಿಯುವ ಪ್ರಯತ್ನವನ್ನು ನಾಡಿನ ದೊರೆ ಮಾಡಿದ್ದಾರೆ. ಈ ಮೂಲಕ ಮೀನುಗಾರರ ಪ್ರಮುಖ ಬೇಡಿಕೆಗಳು ಈಡೇರುವ ಹಾಗೂ ಕನಸು ನನಸಾಗುವ ನಿರೀಕ್ಷೆ ಮೂಡಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಮೀನುಗಾರರ ಘಟಕದ ಅಧ್ಯಕ್ಷ ಚೇತನ್ ಬೆಂಗ್ರೆ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀನುಗಾರರ ಹಲವು ಸಮಸ್ಯೆಗಳನ್ನು ಈಗಾಗಲೇ ಸರಕಾರದ ಗಮನಕ್ಕೆ ತರಲಾಗಿದೆ ಎಂದರು.
ಈಗಾಗಲೇ ಮೂರನೆ ಹಂತದ ಜೆಟ್ಟಿ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಸಚಿವ ಸಂಪುಟ ಸಭೆಯಲ್ಲಿ ಕೋಟೆಪುರದಲ್ಲಿ ನಾಡದೋಣಿ ತಂಗುದಾಣಕ್ಕೆ 8 ಕೋಟಿ ರೂ., ಮಂಗಳೂರು ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾನಿಲಯವನ್ನಾಗಿಸುವ ಪ್ರಕ್ರಿಯೆ, ಎಕ್ಕೂರಿನಲ್ಲಿ ಸುಸಜ್ಜಿತ ಸಗಟು ಮೀನು ಮಾರುಕಟ್ಟೆ ನಿರ್ಮಾಣ, ಕೊಂಡಿ ರಸ್ತೆಗಳ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಮುಖ್ಯವಾಗಿ ನೇತ್ರಾವತಿ, ಫಲ್ಗುಣಿ ಹಾಗೂ ಅಳಿವೆಬಾಗಿಲಿನಲ್ಲಿ ಸಮರ್ಪಕವಾಗಿ ಹೂಳೆತ್ತದೆ 25 ವರ್ಷಗಳಾಗಿವೆ. ಸಣ್ಣ ಪ್ರಮಾಣದಲ್ಲಿ ಆಗಾಗ್ಗೆ ಹೂಳೆತ್ತಲಾಗಿದ್ದರೂ ಕಟ್ಟಿಂಗ್ ಡ್ರೆಜ್ಜರ್ ಯಂತ್ರದ ಮೂಲಕ ಹೂಳೆತ್ತಬೇಕೆಂಬುದು ನಮ್ಮ ಆಗ್ರಹವಾಗಿದೆ. ಜೊತೆಗೆ ಹೂಳೆತ್ತಿದ ಮರಳನ್ನು ಮತ್ತೆ ಸಮುದ್ರಕ್ಕೆ ಹಾಕದೆ ಅದನ್ನು ಬೆಂಗ್ರೆಯಿಂದ ಕೂಳೂರುವರೆಗಿನ ಬಂದರು ಇಲಾಖೆಗೊಳಪಡುವ ಭೂಮಿಯಲ್ಲಿ ಸುರಿದು ಅಲ್ಲಿನ ಎತ್ತರ ತಗ್ಗು, ನೀರು ನಿಲ್ಲುವ ಗುಂಡಿಗಳನ್ನು ಸರಿಪಡಿಸಿದರೆ ಅಲ್ಲಲ್ಲಿ ಮೀನುಗಾರಿಕಾ ದೋಣಿಗಳ ತಂಗುದಾಣ(ಡಾಕ್)ಗಳನ್ನು ನಿರ್ಮಾಣ ಮಾಡಬಹುದು. ಈಗಿರುವ ಡಾಕ್ನಲ್ಲಿ ಕೇವಲ 200ರಷ್ಟು ಮೀನುಗಾರಿಕಾ ದೋಣಿಗಳು ಮಾತ್ರ ನಿಲುಗಡೆ ಮಾಡಬಹುದಾಗಿದ್ದು, ನಾಡದೋಣಿ ಸೇರಿದಂತೆ 4,000ದಷ್ಟು ಮೀನುಗಾರಿಕಾ ದೋಣಿಗಳ ತಂಗುದಾಣದ ಸಮಸ್ಯೆ ಈ ಮೂಲಕ ಬಗೆಹರಿಯಲಿದೆ. ಈ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತರಲಾಗಿದ್ದು, ಪೂರಕವಾಗಿ ಸ್ಪಂದಿಸಿದ್ದಾರೆ. ಹೊಸ ಹೂಳೆತ್ತುವ ಯಂತ್ರ ಖರೀದಿ ಬಗ್ಗೆಯೂ ಆಸಕ್ತಿ ತೋರಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಈಗಾಗಲೇ ಮೀನುಗಾರರ ಸಮಸ್ಯೆಗಳನ್ನು ಅರಿತಿರುವುದರಿಂದ ಈ ಬಗ್ಗೆ ಶೀಘ್ರವೇ ಸಭೆ ನಡೆಸಿ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸುವುದಾಗಿ ತಿಳಿಸಿದ್ದಾರೆ ಎಂದು ಚೇತನ್ ಬೆಂಗ್ರೆ ವಿವರ ನೀಡಿದರು.
ಮರಳುಗಾರಿಕೆಗೂ ಮೀನುಗಾರರಿಗೂ ಯಾವುದೇ ಸಂಬಂಧವಿಲ್ಲ. ನಾವು ಹೂಳೆತ್ತಿದ ಮರಳನ್ನು ಸಮುದ್ರಕ್ಕೆ ಹಾಕದೆ ಅದನ್ನು ನದಿ ಬದಿಯಲ್ಲಿ ಡಾಕ್ ಳ ನಿರ್ಮಾಣಕ್ಕೆ ಸಹಕಾರಿಯಾಗುವಂತೆ ಉಪಯೋಗ ಮಾಡಬೇಕೆಂದು ಹೇಳುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಚೇತನ್ ಬೆಂಗ್ರೆ ಉತ್ತರಿಸಿದರು.
ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಬಂದರು ಅಭಿವೃದ್ಧಿಗೆ ಪೂರಕವಾಗಿಯೇ ಮಂಗಳೂರಿಗೆ ಅನುಮೋದನೆಗೊಂಡಿತ್ತು. ಆದರೆ ಸುಮಾರು 600 ಕೋಟಿ ರೂ.ಗಳನ್ನು ರಸ್ತೆಗೆ ಮತ್ತು ತೋಡಿಗೆ ಸುರಿಯಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮುಖಂಡರಾದ ರವಿ ಶ್ರೀಯನ್, ಮಾಜಿ ಕಾರ್ಪೊರೇಟರ್ಗಳಾದ ಸರಳ ಕರ್ಕೇರ, ಕವಿತಾ ವಾಸು, ಕುಮಾರ್ ಮೆಂಡನ್, ಜಿಲ್ಲಾ ಮುಖಂಡರಾದ ನವೀನ್ ಕರ್ಕೇರ, ಪವಿತ್ರಾ ಕರ್ಕೇರ ಉಪಸ್ಥಿತರಿದ್ದರು.