ವಾಣಿಜ್ಯ ಹಡಗಿನ ಮೇಲೆ ಇರಾನ್‌ನಿಂದ ಕ್ಷಿಪಣಿ ದಾಳಿ: ಒಮನ್ ನೌಕಾಪಡೆಯಿಂದ ಉಪ್ಪಿನಂಗಡಿಯ ಯುವ ನಾವಿಕನ ರಕ್ಷಣೆ
ರಚನ್ ಆರ್.ಕೆ.
ಉಪ್ಪಿನಂಗಡಿ, ಜು.14: ಹಾರ್ಮುಝ್ ಜಲಸಂಧಿಯ ಒಮನ್ ಕರಾವಳಿಯ ಸಮೀಪ ಸಂಚರಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಶನಿವಾರ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ದಾಳಿಯ ಬಳಿಕ ಒಮನ್ ನೌಕಾಪಡೆ ರಕ್ಷಿಸಿದ 10 ಭಾರತೀಯರಲ್ಲಿ ಯುವ ನಾವಿಕ, ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಳಿಯೂರು ನಿವಾಸಿ ರಚನ್ ಆರ್.ಕೆ. ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ರಚನ್ ಒಮಾನ್ ಶಿಪ್ಪಿಂಗ್ ಕಂಪೆನಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸುರಕ್ಷಿತರಾಗಿದ್ದು, ದುಬೈಗೆ ಪ್ರಯಾಣ ಬೆಳೆಸಿದ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿದ್ದಾರೆ.
ಮೂರು ವಷರ್ಗಳಿಂದ ಕಾರ್ಗೋ ಶಿಪ್ಪಿಂಗ್ ಕಂಪೆನಿಯಲ್ಲಿ ಇವರು ಸೇವೆ ಸಲ್ಲಿಸುತ್ತಿದ್ದು, ಶನಿವಾರ ರಚನ್ ಪ್ರಯಾಣಿ ಸುತ್ತಿದ್ದ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದ ಪರಿಣಾಮ ಇಂಜಿನ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಸಿಬ್ಬಂದಿ ಜೀವ ರಕ್ಷಕ ದೋಣಿಯ ಮೂಲಕ ಹಡಗನ್ನು ತೊರೆದು ಹೊರಬಂದಿದ್ದಾರೆ. ಬಳಿಕ ಒಮನ್ ನೌಕಾಪಡೆಯು ಎಲ್ಲಾ ಸಿಬ್ಬಂದಿ ಯನ್ನು ರಕ್ಷಿಸಿ ಸುರಕ್ಷಿತವಾಗಿ ತನ್ನ ನೆಲೆಗೆ ಕರೆದುಕೊಂಡು ಹೋಗಿದೆ.
‘‘ಹಡಗಿನ ಮೇಲೆ ದಾಳಿಯಾಗುವ ಬಗ್ಗೆ ಪೂರ್ವ ಮುನ್ನೆಚ್ಚರಿಕೆ ಮಾಹಿತಿ ನೀಡಲಾಗಿತ್ತು. ಅದರ ಹೊರತಾಗಿಯೂ ಒಮನ್ ಕರಾವಳಿ ತೀರದಲ್ಲಿ ಪ್ರಯಾಣ ಮುಂದುವರಿಸಿದ ಹಡಗಿನ ಮೇಲೆ ಮಧ್ಯ ರಾತ್ರಿ 2:05ಕ್ಕೆ ಕ್ಷಿಪಣಿ ದಾಳಿ ನಡೆದಿದೆ. ಹಡಗಿನ ಇಂಜಿನ್ ವಿಭಾಗದಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ನಿದ್ರಿಸುತ್ತಿದ್ದ ನಾವೆಲ್ಲರೂ ಎಚ್ಚೆತ್ತು ಪ್ರಾಣ ರಕ್ಷಕ ದೋಣಿಯ ಮೂಲಕ ಸಮುದ್ರಕ್ಕೆ ಧುಮುಕಿದೆವು. ಈ ವೇಳೆ ನಮ್ಮ ತಂಡದ ಪುಣೆಯ ನಿವಾಸಿ ಸಹೋದ್ಯೋಗಿ ಕಣ್ಮರೆಯಾಗಿದ್ದಾರೆ. ಸಮುದ್ರಕ್ಕೆ ಧುಮುಕಿರುವ ನಮ್ಮೆಲ್ಲರನ್ನೂ ಒಮನ್ ನೌಕಾ ಪಡೆಯು ರಕ್ಷಿಸಿ ಅಗತ್ಯ ನೆರವನ್ನು ಕಲ್ಪಿಸಿದೆ. ಮಂಗಳವಾರ ನಮ್ಮನ್ನು ದುಬೈಗೆ ಕರೆದೊಯ್ಯಲಾಗುತ್ತಿದೆ’’ ಎಂದು ರಚನ್ ತಮ್ಮ ತಂದೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ರಚನ್‌ರ ತಂದೆ ರೋಹಿತಾಕ್ಷ ಬಾಣಬೆಟ್ಟು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದರಿಂದ ನಾವು ಸಹಜವಾಗಿ ಆತಂಕದಲ್ಲಿದ್ದೆವು. ನನ್ನ ಮಗ ಕರ್ತವ್ಯದಲ್ಲಿದ್ದ ಹಡಗಿಗೆ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಬಂದಾಗ ತೀವ್ರ ಕಳವಳಕ್ಕೆ ಒಳಗಾದ್ದೆವು. ಆದರೆ ಮಗ ಸಂಪರ್ಕಕ್ಕೆ ಲಭಿಸಿ ಸುರಕ್ಷಿತವಾಗಿರುವ ಮಾಹಿತಿ ನೀಡಿದಾಗ ನಿರಾಳರಾದೆವು. ಆದರೂ ಅವನ ಸಹೋದ್ಯೋಗಿ ಕಣ್ಮರೆಯಾಗಿರುವ ವಿಚಾರ ತಿಳಿದು ದುಃಖವಾಯಿತು. ನನ್ನ ಮಗ ಸಹಿತ ಹತ್ತು ಮಂದಿ ಭಾರತೀಯರನ್ನು ರಕ್ಷಿಸಿದ ಒಮನ್ ದೇಶದ ನೌಕಾ ಪಡೆಗೆ ಕೃತಜ್ಞತೆಯನ್ನು ಸಲ್ಲಿಸಬಯಸುತ್ತೇನೆ ಎಂದರು.