ಮಂಗಳೂರು : 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಅಭಿಯಾನಕ್ಕೆ ಚಾಲನೆ
ಮಂಗಳೂರು :ಯುನಿವೆಫ್ ಕರ್ನಾಟಕದ ವತಿಯಿಂದ ಹಮ್ಮಿಕೊಳ್ಳಲಾಗಿರುವ “ಅರಿಯಿರಿ ಮನುಕುಲದ ಪ್ರವಾದಿಯನ್ನು” ಅಭಿಯಾನದ ಉದ್ಘಾಟನಾ ಸಮಾರಂಭವು ಶುಕ್ರವಾರ ಸಂಜೆ ಕಂಕನಾಡಿಯ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ನಡೆಯಿತು.
“ಸರ್ವಾಧಿಕಾರ, ಮಾನವ ಸ್ವಾತಂತ್ರ್ಯ ಮತ್ತು ಪ್ರವಾದಿ ಮುಹಮ್ಮದ್ (ಸ)” ಎಂಬ ಕೇಂದ್ರೀಯ ವಿಷಯದಲ್ಲಿ ಸೆಪ್ಟೆಂಬರ್ 4ರಿಂದ ನವೆಂಬರ್ 13ರವರೆಗೆ ನಡೆಯಲಿರುವ 72 ದಿನಗಳ ಅಭಿಯಾನಕ್ಕೆ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಖಾಝಿ ಎ ಶರೀಅತ್ ಮೌಲಾನಾ ಮುಫ್ತಿ ಶೇಖ್ ಮುತಹರ್ ಹುಸೇನ್ ಖಾಸಿಮಿ ಅವರು ಮಾತನಾಡಿ, “ಇಸ್ಲಾಮಿನ ಉಜ್ವಲ ಇತಿಹಾಸವನ್ನು ನಾವು ಕೇವಲ ಅಲ್ಮಾರಿಗಳು ಮತ್ತು ಕಪಾಟುಗಳಲ್ಲಿ ಭದ್ರವಾಗಿ ಸಂಗ್ರಹಿಸಿಟ್ಟಿದ್ದೇವೆಯೇ ಹೊರತು, ಅದನ್ನು ಸಮಾಜಕ್ಕೆ ಮತ್ತು ಇತರರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಸಮರ್ಪಕವಾಗಿ ಮಾಡಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.
“ಪ್ರವಾದಿ ಮುಹಮ್ಮದ್ (ಸ) ಅವರ ಜೀವನವನ್ನು ನಮ್ಮ ಬದುಕಿನ ಆದರ್ಶವನ್ನಾಗಿ ಸ್ವೀಕರಿಸಿಕೊಂಡು, ಇಂದಿನ ಆಧುನಿಕ ಯುಗದಲ್ಲಿ ನಾವು ಕಳೆದುಕೊಂಡಿರುವ ನಮ್ಮ ಇತಿಹಾಸವನ್ನು ಪುನಃ ನೆನಪಿಸಿಕೊಳ್ಳಬೇಕಾಗಿದೆ. ನಮ್ಮ ಗತವೈಭವವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನಗಳನ್ನು ಕೈಗೊಳ್ಳಬೇಕಾಗಿದೆ” ಎಂದು ಹೇಳಿದರು.
“ನಾವು ಇಂದು ಯಾವ ರೀತಿಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆಯೋ, ಆ ಪರಿಸ್ಥಿತಿಯನ್ನು ಬದಲಾಯಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ನಮ್ಮ ಇತಿಹಾಸದ ವೈಭವವನ್ನು ಕೇವಲ ನೆನಪಿಸಿಕೊಳ್ಳುವುದಷ್ಟೇ ಅಲ್ಲದೆ, ಪ್ರವಾದಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಮುಂದಾಗಬೇಕು” ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅವರು ಮಾತನಾಡಿ, “ಇಸ್ಲಾಮೀ ಸಂಸ್ಕೃತಿಯು ಅತ್ಯಂತ ವೈಭವಯುತ, ಮೌಲ್ಯಾಧಾರಿತ ಹಾಗೂ ಮಾನವೀಯತೆಯನ್ನು ಪ್ರತಿಪಾದಿಸುವ ಶ್ರೇಷ್ಠ ಸಂಸ್ಕೃತಿಯಾಗಿದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಇಸ್ಲಾಮೀ ಸಂಸ್ಕೃತಿಗೆ ಧಕ್ಕೆ ತರುವಂತಹ ಅನ್ಯ ಸಂಸ್ಕೃತಿಯ ಆಚಾರ-ವಿಚಾರಗಳು ನಮ್ಮ ಸಮುದಾಯದೊಳಗೆ ನಿಧಾನವಾಗಿ ಪ್ರವೇಶಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಇತರರ ಸಂಸ್ಕೃತಿ ಮತ್ತು ಜೀವನಶೈಲಿಯ ಅಂಧಾನುಕರಣೆಯಿಂದ ಅವರಂತೆಯೇ ವರ್ತಿಸುವ ಪ್ರವೃತ್ತಿ ಹೆಚ್ಚಾಗುತ್ತಿರುವುದು ನಮ್ಮ ಸಂಸ್ಕೃತಿ, ಸಂಸ್ಕಾರ, ಮೌಲ್ಯಗಳು ಹಾಗೂ ವಿಶಿಷ್ಟ ಅಸ್ತಿತ್ವಕ್ಕೆ ಧಕ್ಕೆಯಾಗುವ ಅಪಾಯವನ್ನು ಸೃಷ್ಟಿಸಿದೆ” ಎಂದರು.
“ಇಸ್ಲಾಂ ನಮಗೆ ನೀಡಿರುವ ಉತ್ಕೃಷ್ಟ ಜೀವನ ಪದ್ಧತಿ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ನಾವು ಸ್ವತಃ ಅರಿತುಕೊಳ್ಳುವುದರ ಜೊತೆಗೆ ಅವುಗಳನ್ನು ಮುಂದಿನ ಪೀಳಿಗೆಗೂ ಸಮರ್ಪಕವಾಗಿ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ತನ್ನ ಧರ್ಮವನ್ನು ಅನುಸರಿಸುವ ಮತ್ತು ಆಚರಿಸುವ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಇಂದು ಸರ್ವಾಧಿಕಾರಿ ಧೋರಣೆಯನ್ನು ಬಳಸಿಕೊಂಡು ಈ ಸಂವಿಧಾನಬದ್ಧ ಹಕ್ಕುಗಳನ್ನು ಕಬಳಿಸುವ ಅಥವಾ ಮೊಟಕುಗೊಳಿಸುವ ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲಿ, ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದು ಇನ್ನಷ್ಟು ಅಗತ್ಯವಾಗಿದೆ” ಎಂದು ಅವರು ಹೇಳಿದರು.
ಅದ್ನಾನ್ ಅವರ ಕಿರಾಅತ್‌ನೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಅಭಿಯಾನದ ಸಂಚಾಲಕರಾದ ನಬೀಲ್ ಶಾಬಾನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಫೀಜ್ ಶೇಖ್ ಕಾರ್ಯಕ್ರಮವನ್ನು ನಿರೂಪಿಸಿದರು.