ಮಂಗಳೂರು : ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದು ಚಿತ್ರದುರ್ಗದ ಶ್ರೀ ಆದಿಜಾಂಬವ ಮಹಾಸಂಸ್ಥಾನ ಮಠದ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದಾರೆ.

ಅವರು ಮುಂಡಾಲ ಮಹಾಸಭಾ ದ.ಕ ಜಿಲ್ಲೆ ವತಿಯಿಂದ ರವಿವಾರದಂದು ಲಾಲ್ ಬಾಗ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಭಾಂಗಣದಲ್ಲಿ ನಡೆದ ಮುಂಡಾಲ ಮಹಾಸಭಾ ದ.ಕ ಜಿಲ್ಲಾ ಸಮಿತಿಯ ಪದಗ್ರಹಣ ಸಮಾರಂಭ ಹಾಗೂ ಮುಂಡಾಲ ಸಮುದಾಯದ ಸ್ನೇಹ ಸಂಗಮ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಅಸೂಯೆ, ದ್ವೇಷದ ವಿಚಾರಗಳು ನಮ್ಮನ್ನು ಸಣ್ಣವರನ್ನಾಗಿ ಮಾಡುತ್ತವೆ. ಎಲ್ಲ ಧರ್ಮಗಳ ಸಾರ ಕೂಡ ಮನುಷ್ಯನಿಗೆ ಒಳಿತು ಮಾಡುವುದಾಗಿದೆ. ಯಾರನ್ನೂ ದ್ವೇಷಿಸಬಾರದು. ಮುಂಡಾಲ ಸಮಾಜದ ಎಲ್ಲರನ್ನೂ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಬೇಕು ಎಂದರು.

ದ್ವೇಷಕ್ಕಿಂತ ಪ್ರೀತಿ ಮುಖ್ಯ. ಸ್ವಾರ್ಥದಿಂದ ತುಂಬಿರುವ ಈ ಜಗತ್ತಿನಲ್ಲಿ ಉಳಿದವರ ಒಳ್ಳೆಯದನ್ನು ಬಯಸಬೇಕಾಗಿದೆ. ಇತರ ಸಮುದಾಯದವರೊಂದಿಗೂ ಪ್ರಿತಿ ವಿಶ್ವಾಸದಿಂದ ಇರಬೇಕು. ಆ ಸಮುದಾಯದ ಸಾಧಕರು ಪ್ರೇರಣೆಯಾಗಬೇಕು. ಕಾಲೆಳೆಯುವ ಬದಲು ಕೈ ಹಿಡಿದು ಮೇಲೆತ್ತುವ ಕೆಲಸವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನದ ಧರ್ಮದರ್ಶಿ ಹಾಗೂ ಶ್ರೀ ಮಾಲ್ತಿದೇವಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಗೋಕುಲ್‌ದಾಸ್ ಬಾರ್ಕೂರು ಶುಭ ಹಾರೈಸಿದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor