×
Ad

'ಬಡವರ ಮಕ್ಕಳು ಮಾತ್ರ ಹಿಂದುತ್ವದ ಹೆಸರಿನಲ್ಲಿ ಸಾಯುತ್ತಿದ್ದಾರೆ'; ಸಂಘ ಪರಿವಾರದ ಮಾಜಿ ಮುಖಂಡ 'ಟಿಕ್ಕಿ' ರವಿ ಆರೋಪ

► "ಬೆಳಗ್ಗೆ ಎದ್ದಾಗ ಮಧ್ಯಾಹ್ನ - ಸಂಜೆಗೆ ಏನು ಮಾಡಬೇಕು ಎಂದು ಯೋಚಿಸುವ ಸಂಕಷ್ಟದ ಪರಿಸ್ಥಿತಿಯಲ್ಲಿದ್ದೇನೆ" ► "ನಮ್ಮನ್ನು ಬಳಸಿಕೊಂಡು ಬಳಿಕ ಬಿಸಾಡಿದರು" ► "ಮೊದಲು ಕುಟುಂಬವನ್ನು ಭದ್ರಪಡಿಸಿಕೊಳ್ಳಿ, ಬಳಿಕ ಸನಾತನ ಧರ್ಮದ ಕೆಲಸ ಮಾಡಿ"

Update: 2026-07-10 12:12 IST

ಟಿಕ್ಕಿ ರವಿ

ಮಂಗಳೂರು: ಹಿಂದುತ್ವ ಮತ್ತು ಸನಾತನ ಧರ್ಮಕ್ಕಾಗಿ ಜೀವವನ್ನೇ ಪಣಕ್ಕಿಟ್ಟು ದುಡಿದ ಅನೇಕ ಕಾರ್ಯಕರ್ತರು ಇಂದು ಊಟ, ಮನೆ, ಉದ್ಯೋಗ ಹಾಗೂ ಜೀವನೋಪಾಯದ ಮೂಲ ಸೌಲಭ್ಯಗಳಿಲ್ಲದೆ ಸಂಕಷ್ಟದಲ್ಲಿದ್ದಾರೆ. ಹಿಂದುತ್ವಕ್ಕಾಗಿ ದುಡಿದವರು ಮೊದಲು ತಮ್ಮ ಕುಟುಂಬವನ್ನು ಭದ್ರಪಡಿಸಿಕೊಳ್ಳಬೇಕು. ಬಳಿಕ ಧರ್ಮದ ಕೆಲಸದ ಬಗ್ಗೆ ಯೋಚಿಸಬೇಕು ಎಂದು ಭಜರಂಗದಳ, ಹಿಂದೂ ಜಾಗರಣ ವೇದಿಕೆಯ ಮಾಜಿ ಮುಖಂಡ ರವಿ ಕಾವೂರು ಅಲಿಯಾಸ್ 'ಟಿಕ್ಕಿ' ರವಿ ಹೇಳಿದ್ದಾರೆ.

ಸಂದೀಪ್ ಪೂಜಾರಿ ಅವರ ಫೇಸ್ ಬುಕ್ ಪೋಸ್ಟ್ ಚರ್ಚೆ ಆಗುತ್ತಿರುವ ಬೆನ್ನಿಗೆ, ಯೂಟ್ಯೂಬ್ ಚಾನೆಲ್‌ ಒಂದಕ್ಕೆ 'ಟಿಕ್ಕಿ' ರವಿ ಅವರು ಈ ಹಿಂದೆ ನೀಡಿದ್ದ ಸಂದರ್ಶನ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ವಿಡಿಯೋದಲ್ಲಿ 'ಟಿಕ್ಕಿ ರವಿ' ಹೇಳಿದ್ದೇನು?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುತ್ವಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ದುಡಿದ ನೂರಾರು, ಸಾವಿರಾರು ಕಾರ್ಯಕರ್ತರು ಇಂದಿಗೂ ಊಟವಿಲ್ಲದೆ, ಮನೆ ಇಲ್ಲದೆ, ಮದುವೆಯಿಲ್ಲದೇ ಹಾಗೂ ತಿರುಗಾಡಲು ಕಾರು ಅಥವಾ ಬೈಕ್‌ ಕೂಡ ಇಲ್ಲದ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ರವಿ ಕಾವೂರು ಅವರು ವಾಸ್ತವವನ್ನು ತೆರೆದಿಟ್ಟಿದ್ದಾರೆ.

"ಒರಿಜಿನಲ್ ಸನಾತನ ಕಾರ್ಯಕರ್ತರು ಇನ್ನೂ ಇದ್ದಾರೆ. ಯಾರಾದರೂ ಸವಾಲು ಹಾಕಿದರೆ ಅವರನ್ನು ಕರೆತಂದು ತೋರಿಸುತ್ತೇನೆ. ನನ್ನನ್ನೂ ಸೇರಿಸಿ ಹೇಳುತ್ತಿದ್ದೇನೆ. ನನ್ನ ಬಳಿ ತಿರುಗಾಡಲು ಒಂದು ವಾಹನ ಬಿಟ್ಟರೆ ಬೇರೆ ಏನೂ ಇಲ್ಲ. ಆ ಸಮಯದಲ್ಲಿ ಹಿಂದುತ್ವಕ್ಕಾಗಿ ದುಡಿಯುವ ಬದಲು ಬೇರೆ ಕೆಲಸ ಮಾಡಿದ್ದರೆ ಇಂದು ನೂರು ಮಂದಿಗೆ ಉದ್ಯೋಗ ನೀಡುವಷ್ಟು ಸ್ಥಿತಿಯಲ್ಲಿ ಇರಬಹುದಿತ್ತು" ಎಂದು ಅವರು ಹೇಳಿದ್ದಾರೆ.

"ಸನಾತನ ಧರ್ಮ ಮತ್ತು ಹಿಂದುತ್ವದ ಹೆಸರಿನಲ್ಲಿ ಕೆಲವರು ವೇಷಧಾರಿಗಳಂತೆ ವರ್ತಿಸುತ್ತಿದ್ದಾರೆ. ಅವರನ್ನು ನಂಬಿ ನಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದೇವೆ. ವಿಷ ಕುಡಿದು ಸಾಯುವಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮ ಪರಿಸ್ಥಿತಿ ಹೇಗಿದೆ ಎಂದು ಯಾರಾದರೂ ಬಂದು ಕೇಳಿದ್ದಾರೆಯೇ?" ಎಂದು ಟಿಕ್ಕಿ ರವಿ ಪ್ರಶ್ನಿಸಿದ್ದಾರೆ.

ಒಂದು ಸಂದರ್ಭದಲ್ಲಿ ತಮ್ಮ ಆರ್ಥಿಕ ಸಂಕಷ್ಟದ ಬಗ್ಗೆ ನಳಿನ್ ಕುಮಾರ್ ಕಟೀಲ್ ಅವರಿಗೆ ತಿಳಿಸಿದ್ದಾಗ ಅವರು ನೆರವು ನೀಡಿದ್ದರು ಎಂದು ರವಿ ನೆನಪಿಸಿಕೊಂಡಿದ್ದಾರೆ.

"ನಾನು ಹಿಂದೆ ಪ್ರಕಟಿಸಿದ್ದ ವೀಡಿಯೊದಲ್ಲೂ ಹೇಳಿದ್ದೇನೆ. ನನಗೆ ಊಟ ಕೊಟ್ಟವರು ಹಾಗೂ ಕಷ್ಟದ ಸಮಯದಲ್ಲಿ ನೆರವಾದವರನ್ನು ನಾನು ಎಂದಿಗೂ ಮರೆಯುವುದಿಲ್ಲ. ಒಂದು–ಎರಡು ವರ್ಷಗಳ ಹಿಂದೆ ನಳಿನ್ ಅಣ್ಣ ಸಹಾಯ ಮಾಡಿದ್ದರು. ಅವರು ನೆರವು ನೀಡಿದ್ದಾರೆ ಎನ್ನುವುದನ್ನು ಮಾತ್ರ ಹೇಳುತ್ತಿದ್ದೇನೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ" ಎಂದಿದ್ದಾರೆ.

2012ರಲ್ಲಿ ಒಂದು ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಶ್ರೀಕರ್ ಪ್ರಭು ಅವರು ತಮ್ಮ ಬಳಕೆಗೆ ಆಲ್ಟೊ ಕಾರು ಕೊಡಿಸಿದ್ದರು ಎಂದು ರವಿ ತಿಳಿಸಿದ್ದಾರೆ.

"ನಾನು ಈಗಲೂ ದುಡಿಯಲು ಸಿದ್ಧನಿದ್ದೇನೆ. ಕೆಲಸವೂ ಸಿಗಬಹುದು. ಆದರೆ ದುಷ್ಮನ್ ಗಳು ಇರುವುದರಿಂದ ನೆಮ್ಮದಿಯಾಗಿ ದುಡಿಯಲು ಸಾಧ್ಯವಿಲ್ಲ. ನಮ್ಮೊಂದಿಗೆ ಕೆಲಸ ಮಾಡಿದವರು ನಾವು ಎಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ ಎಂದು ಯಾರೂ ವಿಚಾರಿಸಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹಿಂದುತ್ವದ ಕಾರ್ಯಕರ್ತರಿಗೆ ಸಲಹೆ ನೀಡಿರುವ ಅವರು, "ಮೊದಲು ತಾಯಿ, ತಂದೆ, ಅಕ್ಕ–ತಂಗಿ ಹಾಗೂ ಬಂಧು–ಬಳಗವನ್ನು ನೋಡಿಕೊಳ್ಳಿ. ಮೊದಲು ನಮ್ಮ ಮನೆಯ ಕಾಂಪೌಂಡ್ ಗಟ್ಟಿಯಾಗಬೇಕು. ನಂತರ ಸನಾತನ ಧರ್ಮ. ಮನೆಯಲ್ಲೇ ಸನಾತನ ಧರ್ಮವನ್ನು ಗಟ್ಟಿಗೊಳಿಸಬೇಕು. ವೇಷಧಾರಿಗಳ ಮಾತು ಕೇಳಿ ಯಾರೂ ಬಲಿಯಾಗಬೇಡಿ. ನಾನು ಬಲಿಯಾಗಿದ್ದೇನೆ. ಇಂದು ತೀವ್ರ ಸಂಕಷ್ಟದಲ್ಲಿದ್ದೇನೆ. ನಮ್ಮನ್ನೆಲ್ಲ ಕುರಿಗಳಂತೆ ಬಳಸಿಕೊಂಡಿದ್ದಾರೆ. ಆದರೆ ನಮ್ಮ ಬಗ್ಗೆ ಯಾರೂ ಯೋಚಿಸುತ್ತಿಲ್ಲ" ಎಂದು ಹೇಳಿದ್ದಾರೆ.

"ನನ್ನ ಪರಿಸ್ಥಿತಿ ಬಗ್ಗೆ ನಳಿನ್ ಅಣ್ಣ ಮಾತ್ರ 'ರವಿ, ಹೇಗಿದ್ದೀಯ? ಏನು ಮಾಡುತ್ತಿದ್ದೀಯ?' ಎಂದು ವಿಚಾರಿಸಿದ್ದರು. ಉಳಿದ ಯಾವುದೇ ಪ್ರಮುಖ ನಾಯಕರು ನನ್ನನ್ನು ಸಂಪರ್ಕಿಸಿ ನನ್ನ ಯೋಗಕ್ಷೇಮ ಕೇಳಲಿಲ್ಲ. ಅದು ನನಗೆ ತುಂಬಾ ಬೇಸರವಾಗಿದೆ" ಎಂದಿದ್ದಾರೆ.

ಬೇರೆ ಧರ್ಮಗಳ ಸಂಘಟನೆಗಳು ತಮ್ಮ ಕಾರ್ಯಕರ್ತರನ್ನು ನೋಡಿಕೊಳ್ಳುವ ರೀತಿಯನ್ನು ಉಲ್ಲೇಖಿಸಿದ ಅವರು, "ನಮ್ಮನ್ನು ಕೇಳುವವರಿಲ್ಲ. ಹಿಂದುತ್ವಕ್ಕಾಗಿ ದುಡಿದ ನಮ್ಮಂತಹ ಕಾರ್ಯಕರ್ತರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ" ಎಂದು ಆರೋಪಿಸಿದ್ದಾರೆ.

ಪುತ್ತೂರಿನಲ್ಲಿ ನಡೆದ ಘಟನೆಯೊಂದನ್ನು ಉಲ್ಲೇಖಿಸಿದ ಅವರು, "ಆ ಸಂದರ್ಭದಲ್ಲಿ ಕೆಲವು ಅಂಡರ್‌ವರ್ಲ್ಡ್ ಡಾನ್‌ಗಳು ಕರೆ ಮಾಡಿದ್ದರು. ಆದರೆ ಆ ವಿಷಯವನ್ನು ನಾಲ್ಕು ಗೋಡೆಗಳ ಮಧ್ಯೆಯೇ ಬಗೆಹರಿಸಬಹುದಿತ್ತು. ಎರಡೂ ಕಡೆಯವರೂ ಸನಾತನ ಧರ್ಮದವರೇ ಆಗಿದ್ದರು. ಆ ಯುವಕನೂ ಸನಾತನ ಧರ್ಮದ ಮನೆತನದವನು, ಆ ಯುವತಿಯೂ ಸನಾತನ ಧರ್ಮದವಳೇ. ಹಾಗಿದ್ದಾಗ ಅದನ್ನು ಇಷ್ಟು ದೊಡ್ಡ ವಿವಾದವಾಗುವಂತೆ ಮಾಡಬೇಕಿರಲಿಲ್ಲ. ಈ ಬಗ್ಗೆ ಕಾರ್ಯಕರ್ತರು ನನ್ನಲ್ಲಿ ಬೇಸರ ವ್ಯಕ್ತಪಡಿಸಿದ್ದರು. 'ಏನು ರವಿ ಅಣ್ಣ ಇದು? ಏನು ಹಿಂದುತ್ವ? ಅಲ್ಲಿಯೇ ಮುಗಿಸಬಹುದಿತ್ತಲ್ಲವೇ?' ಎಂದು ಪ್ರಶ್ನಿಸಿದ್ದರು. ಸಂಘಟನೆಯ ಹಿರಿಯ ನಾಯಕರಿಗೆ ಅದಕ್ಕೆ ಮನಸ್ಸಿರಲಿಲ್ಲ" ಎಂದು ಹೇಳಿದ್ದಾರೆ.

"ಬೇರೆ ಧರ್ಮದವರ ವಿಚಾರಗಳು ಹೊರಗೆ ಬಂದರೂ ಹತ್ತು ನಿಮಿಷ ಅಥವಾ ಅರ್ಧ ಗಂಟೆಯೊಳಗೆ ಅಳಿಸಿ ಒಳಗಡೆಯೇ ಬಗೆಹರಿಸಿಕೊಳ್ಳುತ್ತಾರೆ. ನಮಗೆ ಆ ಯೋಗ್ಯತೆ ಇರಲಿಲ್ಲವೇ? ಯಾಕೆ ಇರಲಿಲ್ಲ ಎಂಬುದು ನಮಗೆ ಗೊತ್ತಿದೆ" ಎಂದಿದ್ದಾರೆ.

ಹಿಂದಿನ ನಾಯಕರಾದ ಸತ್ಯಜಿತ್ ಸುರತ್ಕಲ್, ಪ್ರವೀಣ್ ವಾಲ್ಕೆ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ಅವರ ಹೆಸರನ್ನು ಉಲ್ಲೇಖಿಸಿದ ಅವರು, "ಅವರು ಇದ್ದಾಗ ಕಾರ್ಯಕರ್ತರ ಬಗ್ಗೆ ಕಾಳಜಿ ಇತ್ತು. ಕರೆದು 'ಹೇಗಿದ್ದೀಯ? ಏನಾದರೂ ಸಮಸ್ಯೆಯಿದೆಯೇ? ವ್ಯವಸ್ಥೆ ಇದೆಯೇ?' ಎಂದು ವಿಚಾರಿಸುತ್ತಿದ್ದರು. ಈಗಿನ ನಾಯಕರು ನಾವು ಸಂಘಟನೆ ಬಿಟ್ಟ ಬಳಿಕ ಬಂದವರು. ಈಗ ಯಾರೂ ಕಾರ್ಯಕರ್ತರ ಯೋಗಕ್ಷೇಮ ಕೇಳುವುದೇ ಇಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಬಿಜೆಪಿಯ ಬ್ಯಾನರ್‌ಗಳನ್ನು ಮಾರ್ಕೆಟ್ ನಲ್ಲಿ, ನೆಹರೂ ಮೈದಾನ ಸೇರಿದಂತೆ ಹಲವು ಕಡೆಗಳಲ್ಲಿ ಹಗಲು–ರಾತ್ರಿ ಶ್ರಮಪಟ್ಟು ಕಟ್ಟಿದವರು ನಾವು. ಊಟ, ನಿದ್ದೆ ಬಿಟ್ಟು ಪಕ್ಷ ಹಾಗೂ ಹಿಂದುತ್ವಕ್ಕಾಗಿ ದುಡಿದ ಕಾರ್ಯಕರ್ತರು ಇಂದು ಇಂತಹ ಪರಿಸ್ಥಿತಿಗೆ ತಲುಪಿದ್ದಾರೆ. ಇದೇ ನನ್ನ ಬೇಸರ" ಎಂದು ರವಿ ಅವರು ವಿಡಿಯೋ ಸಂದರ್ಶನದಲ್ಲಿ ಹೇಳಿದ್ದಾರೆ.

'ಹಿಂದುತ್ವಕ್ಕಾಗಿ ದುಡಿದವರು ಸಂಕಷ್ಟದಲ್ಲಿದ್ದಾರೆ'

ಈ ಕುರಿತು ʼವಾರ್ತಾಭಾರತಿʼಯೊಂದಿಗೆ ಮಾತನಾಡಿದ ಟಿಕ್ಕಿ ರವಿ ಅವರು, "ನಾವು ಇವರಿಂದ ಅಲ್ಲ. ಇವರು ನಮ್ಮಿಂದ. ಮುಂದಿನ ಯುವಜನತೆಗೆ ಬುದ್ಧಿ ಬರಬೇಕು. ಮುಂದಿನ ಮಕ್ಕಳು ಹಾಳಾಗಬಾರದು" ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಅವಧಿಯ ಅನುಭವಗಳು, ವೈಯಕ್ತಿಕ ಸಂಕಷ್ಟಗಳು ಹಾಗೂ ಸಂಘಟನೆಗಳ ಕಾರ್ಯವೈಖರಿ ಕುರಿತು ಅಸಮಾಧಾನ ಹೊರಹಾಕಿದರು.

"ನಾನು 2000ರಿಂದ 2007ರವರೆಗೆ ಬಜರಂಗದಳದಲ್ಲಿ ಸಕ್ರಿಯನಾಗಿದ್ದೆ. 2007ರಿಂದ 2016ರವರೆಗೆ ಹಿಂದೂ ಜಾಗರಣ ವೇದಿಕೆಯಲ್ಲಿ ಕಾರ್ಯನಿರ್ವಹಿಸಿದೆ. ಬಜರಂಗದಳದಲ್ಲಿದ್ದಾಗ ನನ್ನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ಬಳಿಕ ಹಿಂದೂ ಜಾಗರಣ ವೇದಿಕೆಗೆ ಬಂದೆ. ಸತ್ಯಜಿತ್ ಸುರತ್ಕಲ್ ತಟಸ್ಥರಾದ ಬಳಿಕ ನಾನೂ ತಟಸ್ಥನಾದೆ" ಎಂದು ಹೇಳಿದರು.

"ಸಂಘಟನೆಯಲ್ಲಿರುವ ಮುಂಚೆ ನಾನು ಬಸ್ ಕಂಡೆಕ್ಟರ್ ಆಗಿದ್ದೆ. ರಿಯಲ್ ಎಸ್ಟೇಟ್ ವ್ಯವಹಾರವೂ ಕೈಹಿಡಿದಿತ್ತು. ಆದರೆ ಸಂಘಟನೆಯ ಕಾರಣದಿಂದ ನನಗೆ ದುಶ್ಮನ್ ಗಳ ಸಂಖ್ಯೆ ಹೆಚ್ಚಾಯಿತು. ಈಗಲೂ ದುಡಿಯುವ ಸಾಮರ್ಥ್ಯ ಇದೆ. ಆದರೆ ಶತ್ರುಗಳ ಸಂಖ್ಯೆ ಹೆಚ್ಚಿರುವುದರಿಂದ ಬದುಕು ದುಸ್ತರವಾಗಿದೆ. ಹೊರಗಡೆ ದುಡಿಯಲು ಸಾಧ್ಯವಿಲ್ಲ. ನನ್ನ ಪರಿಸ್ಥಿತಿ ಹೇಳಿ ಪ್ರಯೋಜನವಿಲ್ಲ. ಅದು ಕಷ್ಟವಲ್ಲ, ಸಂಕಷ್ಟ. ಬೆಳಿಗ್ಗೆ ಎದ್ದಾಗ ಮಧ್ಯಾಹ್ನ ಏನು ಮಾಡಬೇಕು, ಸಂಜೆ ಏನು ಮಾಡಬೇಕು ಎಂದು ಯೋಚಿಸುವ ಸ್ಥಿತಿಯಲ್ಲಿದ್ದೇನೆ" ಎಂದರು.

ಸಂಘಟನೆಯ ಇಂದಿನ ನಾಯಕರ ಕುರಿತು ಪ್ರಸ್ತಾಪಿಸಿದ ಅವರು, "ನಮ್ಮ ನಂತರ ಬಂದ ಕಾರ್ಯಕರ್ತರು ಇಂದು ಛತ್ರಿ ಹಿಡಿಯುವವರಾಗಿದ್ದಾರೆ. ಈಗ ನಾಮ ವೇಷ ಹಾಕಿಕೊಂಡು ದುಡಿಯುತ್ತಿರುವ, ಸಂಘಟನೆಯ ಹೆಸರಿನಲ್ಲಿ ಕೋಟಿಗಟ್ಟಲೆ ಆಸ್ತಿ ಮಾಡಿಕೊಂಡಿರುವ ಕಳ್ಳ ಮುಖಂಡರುಗಳು ನಮ್ಮ ನಂತರ ಬಂದ ಬಚ್ಚಾಗಳು. ನಾನು ಸಂಘಟನೆಯಲ್ಲಿ ದುಡಿಯುತ್ತಿದ್ದಾಗ ಇವರೆಲ್ಲ ಕಾರ್ಕಳ ಸಮೀಪದ ವಿದ್ಯಾಸಂಸ್ಥೆಯಲ್ಲಿ ತಿಂಗಳಿಗೆ 3,000 ರೂ. ಸಂಬಳಕ್ಕೆ ಅಟೆಂಡರ್ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಈಗ ಬಿಜೆಪಿಯಲ್ಲಿ ಸಂಘಟನೆಯಲ್ಲಿ ವೇಷ ಹಾಕುವ ಮುಖಂಡರು ನಮ್ಮ ನಂತರ ಬಂದವರು. ಸುದರ್ಶನ್ ಮೂಡುಬಿದಿರೆಯವರೂ ನಮ್ಮೊಂದಿಗೆ ಬಂಟಿಂಗ್ಸ್ ಕಟ್ಟಲು ಬರುತ್ತಿದ್ದರು" ಎಂದು ಹೇಳಿದರು.

"ನಾನು ಈಗ ಜೀವಂತವಾಗಿದ್ದರೂ ಮೃತಪಟ್ಟವನ ಸ್ಥಿತಿಯಲ್ಲಿದ್ದೇನೆ. ಸಂಘಟನೆಯೇ ನಮ್ಮ ಬದುಕನ್ನು ಕಸಿದುಕೊಂಡಿದೆ" ಎಂದು ಆರೋಪಿಸಿದರು.

ಕಾರ್ಯಕರ್ತರಿಗೆ ಕಿವಿಮಾತು ಹೇಳಿದ ಅವರು, "ಮೊದಲು ನಿಮ್ಮ ಮನೆ-ಮಠ ನೋಡಿಕೊಳ್ಳಿ. ನಮ್ಮ ಕಾಂಪೌಂಡ್ ಗಟ್ಟಿ ಮಾಡಿಕೊಳ್ಳಿ. ಕುಟುಂಬವನ್ನು ಭದ್ರಪಡಿಸಿಕೊಂಡ ಬಳಿಕ ಸಮಾಜದ ಕೆಲಸದ ಬಗ್ಗೆ ಯೋಚಿಸಿ" ಎಂದು ಸಲಹೆ ನೀಡಿದರು.

ಸೌಜನ್ಯ ಪ್ರಕರಣದ ಹೋರಾಟವನ್ನು ಉಲ್ಲೇಖಿಸಿದ ಅವರು, "ಹಿಂದೂ ಕಾರ್ಯಕರ್ತರು ಸೌಜನ್ಯ ಹೋರಾಟದಲ್ಲಿ ಸಕ್ರಿಯರಾದಾಗ ಸಂಘಟನೆ ತಟಸ್ಥ ನಿಲುವು ತಾಳಿತು. ಅದು ಎಲ್ಲ ಕಾರ್ಯಕರ್ತರಿಗೂ ನೋವುಂಟು ಮಾಡಿತು. ಆ ಕಾರಣದಿಂದ ಹಲವರು ಸಂಘಟನೆಯಿಂದ ದೂರ ಸರಿದರು. ಆಗ ಇವರ ಹಿಂದುತ್ವ ಏನು ಎಂಬುದು ಎಲ್ಲರಿಗೂ ಅರ್ಥವಾಯಿತು" ಎಂದರು.

"ಮಂಗಳೂರು ನಗರದ ಪೊಲೀಸ್ ಕಮಿಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ ಬಂದ ಬಳಿಕ ಈ ಡೊಂಬರಾಟಗಳಿಗೆ ತೆರೆ ಬಿದ್ದಿದೆ. ಅಧಿಕಾರಿಗಳು ಖಡಕ್ ಆಗಿದ್ದರೆ ಇವರ ಬೇಳೆ ಬೇಯುವುದಿಲ್ಲವೇ? ವ್ಯವಸ್ಥೆ ಹಾಳಾಗಿದ್ದು ನಮ್ಮಿಂದಲೇ ಅಲ್ಲವೇ? ಈಗ ಸುಧೀರ್ ಕುಮಾರ್ ರೆಡ್ಡಿ ಅವರನ್ನು ವರ್ಗಾವಣೆ ಮಾಡಲು 'ರಾಜಕೀಯ' ನಡೆಯುತ್ತಿದೆ. ಸಂಘಟನೆಗಳು ಅಕ್ಷರಸ್ಥ ಯುವಕರನ್ನು ಗುರಿಯಾಗಿಸಿಕೊಂಡು ಅವರನ್ನು ಎತ್ತಿಕಟ್ಟಿ ಕೊನೆಗೆ ಹಾಳು ಮಾಡಿದವು. ವಿದ್ಯಾವಂತ ಯುವಕರು ವಿದೇಶಗಳಿಗೆ ಹೋಗಿದ್ದಾರೆ. ಶ್ರೀಮಂತರ ಮಕ್ಕಳು ಹೊರಗಿದ್ದಾರೆ. ಬಡವರ ಮಕ್ಕಳು ಮಾತ್ರ ಹಿಂದುತ್ವದ ಹೆಸರಿನಲ್ಲಿ ಇಲ್ಲಿ ಸಾಯುತ್ತಿದ್ದಾರೆ. ಯುವಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ನಾಮ ಹಾಕಿಕೊಂಡು, ದ್ವೇಷ ಕಟ್ಟಿಕೊಂಡು ತಿರುಗಾಡುತ್ತಿರುವ ಯುವಕರಿಗೆ ನಾವು ಕಿವಿಮಾತು ಹೇಳುತ್ತಿದ್ದೇವೆ" ಎಂದು ಹೇಳಿದರು.

"ನಾನು ಈ ಮಾಹಿತಿಯನ್ನು ಹಂಚಿಕೊಂಡ ಬಳಿಕ 'ಅವನು ನಮ್ಮ ಸಂಘಟನೆಯ ಕಾರ್ಯಕರ್ತನಲ್ಲ' ಎಂಬ ಮಾತು ಬರಬಹುದು. ಆದರೆ ಅಕ್ಷರಶಃ ನಮ್ಮನ್ನು ಬಳಸಿಕೊಂಡು ಬಳಿಕ ಬಿಸಾಡಿದ್ದಾರೆ" ಎಂದು ರವಿ ಕಾವೂರು ಆರೋಪಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News