×
Ad

ಪೋಕ್ಸೋ ಪ್ರಕರಣ: ವೈದ್ಯಕೀಯ ಪರೀಕ್ಷೆಗೆ ಹಾಜರಾದ ವಚನಾನಂದಶ್ರೀ

Update: 2026-05-14 23:40 IST

ಹರಿಹರ, ಮೇ 14: ಪಂಚಮಸಾಲಿ ಪೀಠದ ವಚನಾನಂದ ಶ್ರೀ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಸ್ವಾಮೀಜಿ ಗುರುವಾರ ಹರಿಹರ ಗ್ರಾಮೀಣ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದರು.

ಬಳಿಕ ಅವರನ್ನು ನಗರದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿ ಮರಳಿ ಮಠಕ್ಕೆ ಕಳುಹಿಸಿದರು. 2024ರ ಮಾ.20ರಂದು ಮಠದ ವಿದ್ಯಾರ್ಥಿ ನಿಲಯದಲ್ಲಿನ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲೂಕಿನ ಶ್ಯಾಬಳ ಗ್ರಾಮದ ರೇಖಾ ನಾಗನಗೌಡ ಮರಿಗೌಡ್ರ ಎಂಬವರು ಲಕ್ಷ್ಮೀಶ್ವರ ಪೊಲೀಸ್ ಠಾಣೆಯಲ್ಲಿ ಮೇ 8ರಂದು ನೀಡಿದ್ದ ದೂರಿನನ್ವಯ ಗುರುವಾರ ವಚನಾನಂದ ಸ್ವಾಮೀಜಿ ಅವರನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು.

ದಾವಣಗೆರೆ ಗ್ರಾಮೀಣ ಡಿವೈಎಸ್ಪಿ ಜಿ.ಎಸ್ ಬಸವರಾಜ್, ಗ್ರಾಮೀಣ ವೃತ್ತ ನಿರೀಕ್ಷಕ ಸುರೇಶ್ ಸಗರಿ, ಮಹಿಳಾ ಪಿಎಸ್ಸೈ ಮಂಜುಳಾ ಅವರು ಕೇಳಿದ ಸುಮಾರು 50ಕ್ಕೂ ಅಧಿಕ ಪ್ರಶ್ನೆಗಳಿಗೆ ಶ್ರೀಗಳು ಉತ್ತರಿಸಿದ್ದಾರೆಂದು ತಿಳಿದುಬಂದಿದೆ.

ಸತತ ಐದು ತಾಸು ವಿಚಾರಣೆ: ಗುರುವಾರ ಬೆಳಗ್ಗೆ 9 ಗಂಟೆಗೆ ಠಾಣೆಗೆ ಶ್ರೀಗಳನ್ನು ಕರೆತಂದಿದ್ದ ಪೊಲೀಸರು ಮಧ್ಯಾಹ್ನ 2:30 ರವರೆಗೆ ಸುದೀರ್ಘವಾಗಿ ಶ್ರೀಗಳ ವಿಚಾರಣೆ ನಡೆಸಿದರು.

ಗುತ್ತೂರು ಗ್ರಾಮೀಣ ಠಾಣೆಗೆ ವಿಚಾರಣೆಗಾಗಿ ಶ್ರೀಗಳನ್ನು ಕರೆತಂದಿರುವ ಸುದ್ದಿ ಹರಡುತ್ತಿದ್ದಂತೆ ಠಾಣೆಯ ಎದುರು ಭಕ್ತರು ಶ್ರೀಗಳ ಪರವಾಗಿ ಜಯಘೋಷ ಹಾಕಿ, ಟ್ರಸ್ಟ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಲೈಂಗಿಕ ಕಿರುಕುಳ ನಡೆಸಿದ್ದೇನೆ ಎಂದು ನನ್ನ ವಿರುದ್ಧ ದಾಖಲಾಗಿರುವ ದೂರಿನ ಕುರಿತು ಬುಧವಾರ ಸಂಜೆ ಪೊಲೀಸರು ಪೀಠಕ್ಕೆ ಆಗಮಿಸಿ ಮಾಹಿತಿ ನೀಡಿ ಗುರುವಾರ ವಿಚಾರಣೆಗಾಗಿ ಠಾಣೆಗೆ ಹಾಜರಾಗಬೇಕೆಂದು ತಿಳಿಸಿದ್ದರು. ನಾನು ಕಾನೂನನ್ನು ಗೌರವಿಸಿ ಗುರುವಾರ ವಿಚಾರಣೆಗೆ ಹಾಜರಾಗಿ ವಿಚಾರಣೆಗೆ ಸಹಕರಿಸಿದ್ದೇನೆ. ಸತ್ಯಕ್ಕೆ ಯಾವಾಗಲೂ ಜಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ವಚನಾನಂದಶ್ರೀ ಮಾದ್ಯಮಕ್ಕೆ ಮಾಹಿತಿ ನೀಡಿದರು.

ಪೊಲೀಸ್ ಠಾಣೆಯಲ್ಲಿ ನಡೆದ ಸತತ 5 ತಾಸುಗಳ ಕಾಲ ವಿಚಾರಣೆ ಮುಗಿದ ನಂತರ, ಪೊಲೀಸರು ನೀಡಿದ ಸೂಚನೆ ಮೇರೆಗೆ ನಗರದ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ ವಚನಾನಂದ ಸ್ವಾಮೀಜಿ ಯನ್ನು ಡಾ. ರಾಘವೇಂದ್ರ ದುರುಗೋಜಿ ಅವರು ವೈದ್ಯಕೀಯ ತಪಾಸಣೆ ನಡೆಸಿದರು. ನಂತರ ವೈದ್ಯರು ಮಾತನಾಡಿ, ಶ್ರೀಗಳು ದೈಹಿಕವಾಗಿ ಸದೃಢರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಅವರ ಉಗುರು, ಕೂದಲು ಸೇರಿದಂತೆ ಬೇಕಾದ ಮಾದರಿ ಸಂಗ್ರಹಿಸಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಗುವುದು ಎಂದು ಆಸ್ಪತ್ರೆಯ ವೈದ್ಯ ಡಾ.ರಾಘವೇಂದ್ರ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದರು.

‘ಟ್ರಸ್ಟಿಗಳು ನಡೆಸಿರುವ ಷಡ್ಯಂತ್ರಕ್ಕೆ ಇದು ಸಾಕ್ಷಿ’

ಹಣಬಲದಿಂದ ಟ್ರಸ್ಟಿಗಳು ಹೀಗೆ ಮಾಡುತ್ತಿದ್ದಾರೆ. ನಮಗೆ ಭಕ್ತರ ಬೆಂಬಲವಿದ್ದು, ಸತ್ಯಕ್ಕೆ ಯಾವಾಗಲೂ ಜಯ ಸಿಕ್ಕೇ ಸಿಗುತ್ತದೆ. ಸ್ವಾಮೀಜಿಯವರು ನಿರ್ದೋಷಿಯಾಗುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಲೆಕ್ಕ ಕೊಡಿ ಚಳವಳಿ ಅಧ್ಯಕ್ಷ ಎಂ.ಜಿ.ಪರಮೇಶ್ವರಗೌಡ್ರು ‘ವಾರ್ತಾಭಾರತಿ’ ಜೊತೆ ಮಾತನಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News