ಹುಬ್ಬಳ್ಳಿ : ಜೈನ ನಿಗಮ ಮಂಡಳಿ ಸ್ಥಾಪನೆಗೆ ಒತ್ತಾಯ; 10 ದಿನಗಳಲ್ಲಿ ಸರ್ಕಾರದ ಅಧಿಕೃತ ಆದೇಶಕ್ಕೆ ಆಗ್ರಹ
ಬೇಡಿಕೆ ಈಡೇರದಿದ್ದರೆ ಡಿಸೆಂಬರ್‌ನಲ್ಲಿ ಸುವರ್ಣಸೌಧದ ಎದುರು ಹೋರಾಟಕ್ಕೆ ಸಿದ್ಧತೆ: ಗುಣಧರನಂದಿ ಮಹಾರಾಜರು
ಹುಬ್ಬಳ್ಳಿ: ಜೈನ ನಿಗಮ ಮಂಡಳಿ ಸ್ಥಾಪನೆ ಸೇರಿದಂತೆ ಸಮುದಾಯದ ಪ್ರಮುಖ ಬೇಡಿಕೆಗಳನ್ನು 10 ದಿನದೊಳಗೆ ಈಡೇರಿಸದಿದ್ದರೆ, ಸುವರ್ಣಸೌಧದ ಎದುರು ದೇಹತ್ಯಾಗದ ಹೋರಾಟ ಆರಂಭಿಸಲಾಗುವುದು ಎಂದು ರಾಷ್ಟ್ರಸಂತ ಆಚಾರ್ಯ ಶ್ರೀ 108 ಗುಣಧರನಂದಿ ಮಹಾರಾಜರು ಹೇಳಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಜೈನ ನಿಗಮ ಮಂಡಳಿ ಸ್ಥಾಪನೆ, ಜೈನ ಸನ್ಯಾಸಿಗಳಿಗೆ ರಕ್ಷಣೆ ಹಾಗೂ ಜೈನ ತೀರ್ಥಕ್ಷೇತ್ರಗಳ ಸಂರಕ್ಷಣೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದೇವೆ. ಮುಖ್ಯಮಂತ್ರಿಗಳು ಸೇರಿದಂತೆ ಹಲವು ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರೂ ಕೂಡಾ ಈವರೆಗೆ ಭರವಸೆಗಳಷ್ಟೇ ಸಿಕ್ಕಿವೆ. ಆದರೂ ಬೇಡಿಕೆಗಳು ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೈನ್ ಸಮುದಾಯ ರಾಜಕೀಯ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು, ಸರ್ಕಾರ ಸಮಾನ ನ್ಯಾಯ ನೀಡಬೇಕು. ಕ್ರೈಸ್ತ ಸಮುದಾಯಕ್ಕೆ ನಿಗಮ ಸ್ಥಾಪನೆಯಾಗಿದ್ದರೂ ಜೈನ ಸಮುದಾಯದ ಬೇಡಿಕೆ ಕಡೆಗಣಿಸಲಾಗಿದೆ. ಸರ್ಕಾರದ ಅಧಿಕೃತ ಆದೇಶದ ಮೂಲಕ ನ್ಯಾಯ ಒದಗಿಸದಿದ್ದರೆ ಹೋರಾಟ ತೀವ್ರಗೊಳಿಸುವುದು ಅನಿವಾರ್ಯವಾಗಲಿದೆ ಎಂದರು.
ನವೆಂಬರ್‌ನಿಂದ ಜಮಖಂಡಿಯಲ್ಲಿ ಹೋರಾಟ ಆರಂಭಿಸಿ, ತೇರದಾಳ, ಚಿಕ್ಕೋಡಿ, ಬೆಳಗಾವಿ ಸೇರಿದಂತೆ ವಿವಿಧ ಕ್ಷೇತ್ರಗಳ ಶಾಸಕರ ಮನೆಗಳಿಗೆ ಪಾದಯಾತ್ರೆ ಮೂಲಕ ತೆರಳಿ ಬೆಂಬಲ ಕೋರಲಾಗುವುದು. ಚಿಕ್ಕೋಡಿಯಿಂದ ಬೆಳಗಾವಿಯ ಸುವರ್ಣಸೌಧದವರೆಗೆ ಪಾದಯಾತ್ರೆ ನಡೆಸಿ, 15 ಸ್ಥಳಗಳಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುವುದು. ಬಳಿಕ ಡಿಸೆಂಬರ್‌ನಲ್ಲಿ ಸಲ್ಲೇಖನ ವ್ರತ ಸ್ವೀಕರಿಸುವ ನಿರ್ಧಾರವಿದೆ ಎಂದು ತಿಳಿಸಿದರು.
ಜೈನ ನಿಗಮ ಮಂಡಳಿ ಸ್ಥಾಪನೆ, ಸಮ್ಮೇದ ಶಿಖರ್ಜಿಗೆ ಬಡ ಭಕ್ತರು ಯಾತ್ರೆ ಕೈಗೊಳ್ಳಲು ಸೂಕ್ತ ವ್ಯವಸ್ಥೆ, ಜೈನ ಸನ್ಯಾಸಿಗಳಿಗೆ ರಕ್ಷಣೆ, ತೀರ್ಥಕ್ಷೇತ್ರಗಳ ಮೇಲಿನ ಅತಿಕ್ರಮಣ ತಡೆ ಹಾಗೂ ಅಲ್ಪಸಂಖ್ಯಾತರ ಮಂಡಳಿಗಳಲ್ಲಿ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವುದು ಪ್ರಮುಖ ಬೇಡಿಕೆಗಳಾಗಿವೆ ಎಂದರು.
“ಇದು ಮುಖ್ಯಮಂತ್ರಿಗಳಿಗೆ ನಮ್ಮ ಕೊನೆಯ ಮನವಿ. 10 ದಿನಗಳೊಳಗೆ ನ್ಯಾಯ ಸಿಗದಿದ್ದರೆ ಅಹಿಂಸಾತ್ಮಕ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯುತ್ತೇವೆ. ನಮ್ಮ ಸಮುದಾಯಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ” ಎಂದು ಗುಣಧರನಂದಿ ಮಹಾರಾಜರು ಹೇಳಿದರು.