ಅನ್ವರ್‌ಖಾನ್ ಅಲ್ಲಾವುದ್ದೀನ್ ಪಠಾಣ

ಹುಬ್ಬಳ್ಳಿ:  ಆಸ್ತಿ ಹಂಚಿಕೆ ವಿಚಾರವಾಗಿ ಉಂಟಾದ ವಿವಾದ ವಿಕೋಪಕ್ಕೆ ತಿರುಗಿ, ಸಹೋದರನ ಪುತ್ರನೇ ಚಿಕ್ಕಪ್ಪನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಗರದ ಹಳೇ ಹುಬ್ಬಳ್ಳಿಯ ಬಾಣತಿಕಟ್ಟಿಯ ಮೆಹಬೂಬ್ ನಗರದಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.

ಅನ್ವರ್‌ಖಾನ್ ಅಲ್ಲಾವುದ್ದೀನ್ ಪಠಾಣ (46) ಕೊಲೆಯಾದವರು. ಅವರ ಸಹೋದರ ಅಜಗರ್‌ ಎಂಬವರ ಪುತ್ರ ಸಿರಾಜ್ ಕೊಲೆ ಮಾಡಿದ ಆರೋಪಿ.

ಕೆಳ ಮತ್ತು ಮೇಲ್ಮಹಡಿಯ ಮನೆ ಹಂಚಿಕೆ ವಿಚಾರವಾಗಿ ಸಹೋದರರ ಕುಟುಂಬಗಳ ನಡುವೆ ಕೆಲ ದಿನಗಳಿಂದ ವಿವಾದವಿತ್ತು. ಇದೇ ವಿಚಾರವಾಗಿ ಮಂಗಳವಾರ ಮನೆ ಎದುರು ಅನ್ವರ್‌ಖಾನ್ ಮತ್ತು ಸಿರಾಜ್ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಬಳಿಕ ಜಗಳ ವಿಕೋಪಕ್ಕೆ ತಿರುಗಿದ್ದು, ಸಿರಾಜ್ ಚಾಕುವಿನಿಂದ ಅನ್ವರ್‌ಖಾನ್ ಅವರ ಹೊಟ್ಟೆಯ ಭಾಗಕ್ಕೆ ಬಲವಾಗಿ ಇರಿದಿದ್ದಾನೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಅನ್ವರ್‌ಖಾನ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅದಾಗಲೇ ಅವರು ಮೃತಪಟ್ಟಿದ್ದರು.

ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಭೂಷಣ ಬೋರಸೆ, ವೈದ್ಯರು ಹಾಗೂ ಪೊಲೀಸರಿಂದ ಘಟನೆಯ ಕುರಿತು ಮಾಹಿತಿ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆ ಹಂಚಿಕೆ ವಿಚಾರವಾಗಿ ಸಹೋದರರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಅನ್ವರ್‌ಖಾನ್ ಅವರನ್ನು ಸಹೋದರನ ಪುತ್ರ ಚಾಕುವಿನಿಂದ ಇರಿದಿದ್ದಾನೆ. ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಆರೋಪಿ ಸಿರಾಜ್‌ನನ್ನು ಶೀಘ್ರ ಬಂಧಿಸಲಾಗುವುದು ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಹಮ್ಮದ ರಫೀಕ್ ಬೀಳಗಿ/ವಾರ್ತಾಭಾರತಿ

contributor

ಮಹಮ್ಮದ್ ರಫೀಕ್ ಬೀಳಗಿ ಅವರು ಕಳೆದ ಎರಡು ದಶಕಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳೆರಡರಲ್ಲೂ ಕಾರ್ಯನಿರ್ವಹಿಸಿದ್ದಾರೆ. ಸುದ್ದಿ ಸಂಪಾದನೆ, ವರದಿಗಾರಿಕೆ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಆಯಾಮಗಳಲ್ಲಿ ತಮ್ಮದೇ ಆದ ವೃತ್ತಿಪರ ಅನುಭವ ಹೊಂದಿರುವ ಅವರು, ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ಧಾರವಾಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.