×
Ad

ಬೇಸಗೆಯಲ್ಲಿ ಬಾಳೆಹಣ್ಣು ಬೇಗನೇ ಕೊಳೆಯುವುದರಿಂದ ತಪ್ಪಿಸಲು ಐದು ಸಲಹೆಗಳು

Update: 2026-05-07 17:11 IST

ಸಾಂದರ್ಭಿಕ ಚಿತ್ರ | Photo Credit : magnific

ಬಾಳೆಹಣ್ಣುಗಳನ್ನು ಸಂಗ್ರಹಿಸುವುದರಲ್ಲಿ ತರುವ ಕೆಲವು ಸಣ್ಣ ಬದಲಾವಣೆಗಳು ಬೇಸಿಗೆಯಲ್ಲಿ ಅವುಗಳನ್ನು ತಾಜಾವಾಗಿಡಲು ಸಾಧ್ಯವಾಗಿಸಲಿವೆ.

ಭಾರತೀಯ ಮನೆಗಳಲ್ಲಿ ಅತಿಹೆಚ್ಚು ಬಳಕೆಯಾಗುವ ಹಣ್ಣುಗಳಲ್ಲಿ ಬಾಳೆಹಣ್ಣೂ ಒಂದಾಗಿದೆ. ವರ್ಷಪೂರ್ತಿ ಲಭ್ಯವಿರುತ್ತದೆ. ಸುಲಭವಾಗಿ ಸೇವಿಸಬಹುದು ಮತ್ತು ಬೆಳಗಿನ ಉಪಹಾರಕ್ಕೂ ಸೇರಿಸಬಹುದು. ಹಾಗಿದ್ದರೂ ಬಹಳ ಬೇಗನೇ ಹಣ್ಣಾಗಿ ಕೊಳೆಯುತ್ತವೆ. ಮೊದಲ ದಿನ ಹಳದಿ ಬಣ್ಣದಲ್ಲಿದ್ದರೆ, ಮರುದಿನ ಕಪ್ಪು ಚುಕ್ಕೆಗಳು ಬಂದಿರುತ್ತವೆ. ವೇಗವಾಗಿ ಹಣ್ಣಾಗುವುದು ನೈಸರ್ಗಿಕ ಪ್ರಕ್ರಿಯೆಯಾಗಿದ್ದರೂ, ಬೆಚ್ಚಗಿನ ವಾತಾವರಣದಲ್ಲಿ ಬಾಳೆಹಣ್ಣುಗಳನ್ನು ಹೇಗೆ ಸಂಗ್ರಹಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಕೆಲವು ಸರಳ ಬದಲಾವಣೆ ಮಾಡುವುದರಿಂದ ಬಾಳೆ ಹಣ್ಣುಗಳನ್ನು ಹೆಚ್ಚು ಕಾಲ ತಾಜಾವಾಗಿ ಇರಿಸಬಹುದು.

► ಬೇಸಗೆಯಲ್ಲಿ ಬಾಳೆಹಣ್ಣುಗಳು ಏಕೆ ವೇಗವಾಗಿ ಹಣ್ಣಾಗುತ್ತವೆ?:

ಬಾಳೆಹಣ್ಣುಗಳು ಎಥೀಲೀನ್ ಎಂಬ ನೈಸರ್ಗಿಕ ಅನಿಲ ಬಿಡುಗಡೆ ಮಾಡುತ್ತವೆ. ಅವು ಹಣ್ಣಾಗುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಬೆಚ್ಚಗಿನ ತಾಪಮಾನದಲ್ಲಿ ಈ ಪ್ರಕ್ರಿಯೆಯು ಇನ್ನಷ್ಟು ವೇಗವಾಗುತ್ತದೆ. ಇದರಿಂದಾಗಿ ಬಾಳೆಹಣ್ಣುಗಳು ಮೃದುವಾಗುತ್ತವೆ ಮತ್ತು ಬೇಗನೇ ಹಾಳಾಗುತ್ತವೆ. ಆದರೆ ಶಾಖ, ಗಾಳಿಯ ಹರಿವು ಮತ್ತು ಈ ನೈಸರ್ಗಿಕ ಅನಿಲಕ್ಕೆ ಒಡ್ಡಿಕೊಳ್ಳುವುದನ್ನು ನಿಯಂತ್ರಿಸುವ ಮೂಲಕ ಬಾಳೆಹಣ್ಣುಗಳ ಬಾಳಿಕೆಯನ್ನು ವಿಸ್ತರಿಸಬಹುದು.

► ಬಾಳೆಹಣ್ಣುಗಳನ್ನು ತಾಜಾವಾಗಿ ಇಡುವ ಐದು ಹಾದಿಗಳು ಹೀಗಿವೆ:

1. ಇತರ ಹಣ್ಣುಗಳಿಂದ ಬಾಳೆಹಣ್ಣುಗಳನ್ನು ದೂರವಿಡಿ

ಬಾಳೆಹಣ್ಣುಗಳಲ್ಲಿ ಇಥಿಲೀನ್ ಅನಿಲವಿರುತ್ತದೆ. ಅವು ಇತರ ಹಣ್ಣುಗಳಿಗೂ ತಗಲಬಹುದು. ಬಾಳೆಹಣ್ಣುಗಳನ್ನು ಪ್ರತ್ಯೇಕವಾಗಿ ಇಡುವ ಮೂಲಕ ಅವುಗಳು ಮಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು ಮತ್ತು ದೀರ್ಘಕಾಲ ತಾಜಾವಾಗಿ ಇಡಬಹುದು.

2. ಕಾಂಡವನ್ನು ಮುಚ್ಚಿ

ಬಾಳೆಗೊನೆಯ ಕಾಂಡವನ್ನು ಪ್ಲಾಸ್ಟಿಕ್ ಕವರ್ ನಿಂದ ಬಿಗಿಯಾಗಿ ಕಟ್ಟಿಬಿಡುವುದರಿಂದ ಇಥಿಲೀನ್ ಅನಿಲವನ್ನು ಅದರ ಬುಡದಲ್ಲೇ ತಡೆಯಬಹುದು. ಹೀಗಾಗಿ ನಿಧಾನವಾಗಿ ಹಣ್ಣಾಗುತ್ತದೆ.

3. ಬಾಳೆ ಗೊನೆಯನ್ನು ನೇತಾಡಿಸಿಡಿ

ಬಾಳೆ ಗೊನೆಯನ್ನು ನೆಲದ ಮೇಲೆ ಇಡುವ ಬದಲಾಗಿ ನೇತಾಡಿಸಿಡಿ. ಬಾಳೆಹಣ್ಣುಗಳನ್ನು ನೇತಾಡಿಸಿ ಇಡುವುದರಿಂದ ಗಾಳಿ ಚೆನ್ನಾಗಿ ಹರಡುತ್ತದೆ ಮತ್ತು ಗಾಯವಾಗುವುದನ್ನು ತಪ್ಪಿಸಬಹುದು. ಹಣ್ಣಿನ ಮೇಲೆ ಕಡಿಮೆ ಒತ್ತಡ ಬಿದ್ದಾಗ ಹೆಚ್ಚು ಕಪ್ಪು ಕಲೆಗಳು ಇರುವುದಿಲ್ಲ ಮತ್ತು ನಷ್ಟ ಕಡಿಮೆಯಾಗುತ್ತದೆ.

4. ತಂಪಾದ ಮತ್ತು ನೆರಳಿನ ಸ್ಥಳದಲ್ಲಿ ಸಂಗ್ರಹಿಸಿಡಿ

ಬಾಳೆಹಣ್ಣುಗಳನ್ನು ನೇರವಾಗಿ ಬಿಸಿಲು ಬೀಳುವ ಆಥವಾ ಶಾಖದ ಸ್ಥಳಗಳಿಂದ ದೂರವಿಡಿ. ತಂಪಾದ ಮತ್ತು ಅಡುಗೆ ಕೋಣೆಯಲ್ಲಿ ಒಣಗಿದ ಸ್ಥಳದಲ್ಲಿ ಇಟ್ಟಲ್ಲಿ ಚೆನ್ನಾಗಿ ಬಲಿಯುತ್ತವೆ.

5. ಹಣ್ಣಾದ ಮೇಲೆ ಫ್ರಿಜ್ ನಲ್ಲಿಡಿ

ಬಾಳೆಹಣ್ಣುಗಳು ಚೆನ್ನಾಗಿ ಬಲಿತಿವೆ ಮತ್ತು ಅದನ್ನು ಆ ಕ್ಷಣದಲ್ಲಿ ಸೇವಿಸದೆ ಇದ್ದರೆ ಫ್ರಿಜ್ನಲ್ಲಿ ಇರಿಸುವುದು ಉತ್ತಮ. ಬಾಳೆಹಣ್ಣಿನ ಸಿಪ್ಪೆ ಕಪ್ಪಾದರೂ ಒಳಗಿನ ಹಣ್ಣು ತಾಜಾವಾಗಿರುತ್ತದೆ.

ನಿಮ್ಮ ಬಾಳೆಹಣ್ಣು ಈಗಾಗಲೇ ಅತಿಯಾಗಿ ಹಣ್ಣಾಗಿದ್ದರೆ ಎಸೆದು ಬಿಡಬೇಡಿ. ಅವುಗಳ ಸ್ಮೂತಿ ತಯಾರಿಸಬಹುದು, ಪ್ಯಾನ್ಕೇಕ್ ಅಥವಾ ಬೇಕಿಂಗ್ ರೆಸಿಪಿಗಳಲ್ಲಿ ಬಳಸಬಹುದು.

ಬಾಳೆಹಣ್ಣುಗಳನ್ನು ಸಂಗ್ರಹಿಸುವುದರಲ್ಲಿ ತರುವ ಕೆಲವು ಸಣ್ಣ ಬದಲಾವಣೆಗಳು ಬೇಸಿಗೆಯಲ್ಲಿ ಅವುಗಳನ್ನು ತಾಜಾವಾಗಿಡಲು ಸಾಧ್ಯವಾಗಿಸಲಿವೆ. ಈ ಸರಳ ಸಲಹೆ ಅನುಸರಿಸಿದರೆ ಬಾಳೆ ಹಣ್ಣು ಬೇಗನೇ ಹಣ್ಣಾಗುವ ಆತಂಕವಿಲ್ಲದೆ ಅವುಗಳನ್ನು ಸವಿಯಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News