ಅಮೆರಿಕದ ‘ಅಕ್ಕ’ ರಜತಮಹೋತ್ಸವಕ್ಕೆ ಭರದ ಸಿದ್ಧತೆ; ಅತಿಥಿಗಳ ಆಗಮನ
ಹ್ಯಾರಿಸ್‌ಬರ್ಗ್ : ಪೆನ್ಸಿಲ್ವೇನಿಯ ರಾಜ್ಯದ ಫಿಲಡೆಲ್ಫಿಯ ನಗರದಲ್ಲಿ ಸೆಪ್ಟೆಂಬರ್ 4 ರಿಂದ 6 ರವರೆಗೆ ಆಯೋಜಿಸಿರುವ ‘ಅಕ್ಕ’ ರಜತಮಹೋತ್ಸವದ ಅಧಿಕೃತ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದ್ದು, ಅಮೆರಿಕನ್ನಡಿಗರ ಉತ್ಸಾಹ ಹಾಗೂ ಸಡಗರದ ಆಗಮನ ಮತ್ತು ಸಿದ್ಧತೆ ಭರದಿಂದ ಸಾಗಿದೆ.
ಭಾರತದಿಂದ ಕಲಾವಿದರು, ಗಣ್ಯರು ಆಗಮಿಸುತ್ತಿದ್ದು ಅಕ್ಕ ಸ್ವಾಗತ ಸಮಿತಿಯ ಪರವಾಗಿ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ ಸಮ್ಮೇಳನದ ಸಭಾಂಗಣಕ್ಕೆ ಕರೆದೊಯ್ಯಲಾಗುತ್ತಿದೆ.
ಸಭಾಂಗಣದ ಅಲಂಕಾರ, ಭೋಜನದ ವ್ಯವಸ್ಥೆ, ನೋಂದಣಿ, ಅತಿಥಿಗಳ ವಸತಿ ಎಲ್ಲವೂ ಸಾಂಗವಾಗಿ ನಡೆಯುತ್ತಿದೆ.
ಈಗಾಗಲೇ ಭಾರತದಿಂದ ಆದಿಚುಂಚನಗಿರಿ ಮಠಾಧಿಪತಿ ಶ್ರೀ ಶ್ರೀ ನಿರ್ಮಲನಾಂದ ಸ್ವಾಮಿ, ಮೈಸೂರು ರಾಜ ವಂಶಸ್ಥರು ಮತ್ತು ಮೈಸೂರಿನ ಲೋಕಸಭಾ ಸದಸ್ಯರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ಬೃಹತ್ ಕೈಗಾರಿಕಾ ಮಂತ್ರಿ ಹೆಚ್. ಡಿ. ಕುಮಾರಸ್ವಾಮಿ, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ಚಲನಚಿತ್ರ ನಟ, ನಿರ್ಮಾಪಕ ಮತ್ತು ನಿರ್ದೇಶಕ ಬಿ. ಸುರೇಶ, ಇತಿಹಾಸ ಆಸಕ್ತಿಕಾರ ಧರ್ಮೇಂದ್ರ ಕುಮಾರ್, ವಚನ ಸಾಹಿತ್ಯಕಾರ ಜಿ.ಬಿ ಪಾಟೀಲ್, ಪ್ರಸಿದ್ಧ ಪತ್ರಕರ್ತ ಮುರಳೀಧರ ಖಜಾನೆ, ಗಾಯಕ ರಾಜೇಶ್ ಕೃಷ್ಣನ್ ಮತ್ತು ನವೀನ್ ಸಜ್ಜು ಹಾಗೂ ಇನ್ನಿತರ ಗಣ್ಯರು ಸಮ್ಮೇಳನಕ್ಕೆ ಆಗಮಿಸಿದ್ದಾರೆ.
ಹಲವು ಕನ್ನಡಿಗರು ಸಮ್ಮೇಳನದಲ್ಲಿ ಭಾಗವಹಿಸಲು ನೊಂದಾಯಿಸಿಕೊಂಡು ಆಗಮಿಸುತ್ತಿದ್ದಾರೆ. ಉತ್ತಮ ಹವಾಮಾನವು ಅತಿಥಿಗಳಿಗೆ ಆಹ್ಲಾದವನ್ನು ನೀಡುತ್ತಿದೆ. ಅಧಿಕೃತವಾಗಿ ಶುಕ್ರವಾರ ಸಂಜೆ 4 ಗಂಟೆಗೆ ಸಮ್ಮೇಳನ ಪ್ರಾರಂಭವಾಗಲಿದ್ದು, ಶನಿವಾರ ಬೆಳಿಗ್ಗೆ 7.30ಕ್ಕೆ ಅಮೆರಿಕದ ವಿವಿಧ ಕನ್ನಡ ಕೂಟಗಳು ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.
ವೀರಗಾಸೆ, ಡೊಳ್ಳುಗಳೊಂದಿಗೆ ಕನ್ನಡಿಗರು ಕರ್ನಾಟಕದ ಸಾಂಪ್ರಾದಾಯಿಕ ಉಡುಪು ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಮೆರಿಕದಲ್ಲಿ ಲೇಬರ್ ಡೇ ರಜೆಯ ವಾರಾಂತ್ಯವಾಗಿದ್ದು, ವಿವಿಧ ನಗರಗಳಿಂದ ಕನ್ನಡಿಗರು ಸಂತೋಷ, ಸಂಭ್ರಮದಿಂದ ಮೂರು ದಿನಗಳ ಅಕ್ಕ ಸಮ್ಮೇಳನವನ್ನು ಆಚರಿಸಲು ಸಿದ್ಧರಾಗುತ್ತಿದ್ದಾರೆ.