×
Ad

ಯುಎಇಯ ಮೊದಲ ಖಾಸಗಿ ಪಶುವೈದ್ಯಕೀಯ ಕಾಲೇಜು, ಆಸ್ಪತ್ರೆಗೆ ತುಂಬೆ ಗ್ರೂಪ್ ನಿಂದ ಶಿಲಾನ್ಯಾಸ

ಅಜ್ಮಾನ್‌ನಲ್ಲಿ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ

Update: 2026-05-19 21:29 IST

ಅಜ್ಮಾನ್ (ಯುಎಇ), ಮೇ 19: ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ಮೊದಲ ಖಾಸಗಿ ಪಶುವೈದ್ಯಕೀಯ ಕಾಲೇಜು, ಆಸ್ಪತ್ರೆಗೆ ತುಂಬೆ ಗ್ರೂಪ್ ಮಂಗಳವಾರ ಶಿಲಾನ್ಯಾಸ ನೆರವೇರಿಸಿತು.

ಅಜ್ಮಾನ್ ನ ತುಂಬೆ ಮೆಡಿಸಿಟಿಯಲ್ಲಿ ನಡೆದ ಸಮಾರಂಭದಲ್ಲಿ ಅಜ್ಮಾನ್ ಎಮಿರೇಟ್ನ ಕ್ರೌನ್ ಪ್ರಿನ್ಸ್ ಮತ್ತು ಅಜ್ಮಾನ್ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾದ ಶೇಖ್ ಅಮ್ಮರ್ ಬಿನ್ ಹುಮೈದ್ ಅಲ್ ನುಐಮಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಯೋಜನೆಗೆ ಅಡಿಪಾಯ ಹಾಕಿದರು. ತುಂಬೆ ಗ್ರೂಪ್ನ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯಿದೀನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ತುಂಬೆ ಪಶುವೈದ್ಯಕೀಯ ಕಾಲೇಜು, ಆಸ್ಪತ್ರೆ ಯೋಜನೆಯಡಿ ಸಣ್ಣ ಹಾಗೂ ದೊಡ್ಡ ಪ್ರಾಣಿಗಳಿಗೆ ಒಂದೇ ಸೂರಿನಡಿ ಚಿಕಿತ್ಸೆ ಮತ್ತು ತರಬೇತಿ ಸೌಲಭ್ಯ ಕಲ್ಪಿಸಲಾಗುತ್ತದೆ. ನಾಯಿ, ಬೆಕ್ಕು ಮತ್ತು ಅಪರೂಪದ ಸಾಕುಪ್ರಾಣಿಗಳ ಜೊತೆಗೆ ಕುದುರೆಗಳು, ಒಂಟೆ ಹಾಗೂ ಜಾನುವಾರುಗಳಿಗೆ ವಿಶೇಷ ಆರೈಕೆ ಒದಗಿಸುವ ವ್ಯವಸ್ಥೆ ಇರಲಿದೆ.

ಇದುವರೆಗೆ ಯುಎಇಯಲ್ಲಿ ಉನ್ನತ ಮಟ್ಟದ ಪಶುವೈದ್ಯಕೀಯ ಆರೈಕೆ ಮತ್ತು ಔಪಚಾರಿಕ ಪಶುವೈದ್ಯಕೀಯ ಶಿಕ್ಷಣಕ್ಕಾಗಿ ಸಾರ್ವಜನಿಕ ಸಂಸ್ಥೆಗಳು ಅಥವಾ ವಿದೇಶಿ ಅಧ್ಯಯನದ ಮೇಲೆ ಹೆಚ್ಚಿನ ಅವಲಂಬನೆ ಇತ್ತು. ಈ ಕೊರತೆ ಯನ್ನು ನೀಗಿಸುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಪಶು ವೈದ್ಯಕೀಯ ಮತ್ತು ಕೃಷಿ ನಿರ್ವಹಣೆಯಲ್ಲಿ ಪ್ರಾಯೋಗಿಕ ತರಬೇತಿ ನೀಡಲು ಮುಂದಿನ ಹಂತದಲ್ಲಿ ವಿಶೇಷ ಫಾರ್ಮ್ ಆರಂಭಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ.

ಗಲ್ಫ್ ಮೆಡಿಕಲ್ ಯುನಿವರ್ಸಿಟಿ (GMU) ಅಧೀನದಲ್ಲಿ ಕಾಲೇಜು ಕಾರ್ಯನಿರ್ವಹಿಸಲಿದೆ. ‘ಡಾಕ್ಟರ್ ಆಫ್ ವೆಟರ್ನರಿ ಮೆಡಿಸಿನ್’ (DVM) ಮುಖ್ಯ ಪದವಿ ಕೋರ್ಸ್ ಆಗಿರಲಿದೆ. ವಿದ್ಯಾರ್ಥಿಗಳಿಗೆ ಆರಂಭದಿಂದಲೇ ಪ್ರಾಯೋಗಿಕ ತರಬೇತಿ ನೀಡುವ ಜೊತೆಗೆ, ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಪಠ್ಯಕ್ರಮ ರೂಪಿಸಲಾಗಿದೆ.

‘ಯುಎಇಗೆ ವಿಶ್ವದರ್ಜೆಯ ಆರೋಗ್ಯ ಸೇವೆ ಮತ್ತು ಶಿಕ್ಷಣ ಒದಗಿಸುವ ಉದ್ದೇಶದಿಂದ ತುಂಬೆ ಗ್ರೂಪ್ ಆರಂಭಿಸಲಾ ಗಿತ್ತು. ಈಗ ಅದೇ ಗುಣಮಟ್ಟದ ಸೇವೆಯನ್ನು ಪಶುವೈದ್ಯಕೀಯ ಕ್ಷೇತ್ರಕ್ಕೂ ವಿಸ್ತರಿಸುತ್ತಿದ್ದೇವೆ’ ಎಂದು ತುಂಬೆ ಗ್ರೂಪ್ನ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯಿದೀನ್ ಹೇಳಿದರು.

‘ಆಸ್ಪತ್ರೆ, ಕಾಲೇಜು ಮತ್ತು ತರಬೇತಿ ಫಾರ್ಮ್ಗಳನ್ನು ಒಂದೇ ವ್ಯವಸ್ಥೆಯಡಿ ತರಲಾಗುತ್ತಿದೆ. ಇದರಿಂದ ವಿದ್ಯಾರ್ಥಿ ಗಳಿಗೆ ಉತ್ತಮ ಪ್ರಾಯೋಗಿಕ ಕಲಿಕಾ ವಾತಾವರಣ ಸಿಗಲಿದೆ. ಒಂಟೆ, ಕುದುರೆ, ಜಾನುವಾರು ಮತ್ತು ಸಾಕುಪ್ರಾಣಿ ಗಳ ಆರೈಕೆಗೆ ಸಂಬಂಧಿಸಿದ ತರಬೇತಿ ಹಾಗೂ ಸಂಶೋಧನೆಗೆ ಆದ್ಯತೆ ನೀಡಲಾಗುತ್ತದೆ’ ಎಂದು ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಕುಲಪತಿ ಪ್ರೊ. ಮಂದಾ ವೆಂಕಟರಮಣ ಹೇಳಿದರು.

ಕಾಲೇಜು ಮತ್ತು ಆಸ್ಪತ್ರೆ ಹಲವು ದೇಶೀಯ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯನಿರ್ವ ಹಿಸಲಿವೆ. ರಾಜೀವ್‌ ಗಾಂಧಿ ಇನ್ಸ್ಟಿಟ್ಯೂಟ್‌ ಆಫ್‌ ವೆಟರ್ನರಿ ಎಜುಕೇಷನ್‌ ಆಂಡ್‌ ರಿಸರ್ಚ್, ಲಂಡನ್ ನ ರೋಯಲ್ ವೆಟರ್ನರಿ ಕಾಲೇಜು, ಶಾರ್ಜಾದ ಎಕ್ವೈನ್ ಮತ್ತು ಫಾಲ್ಕನ್ ಆಸ್ಪತ್ರೆಗಳು, ಯುಎಕ್ಯೂ ಕ್ಯಾಮೆಲ್‌ ಬ್ರೀಡಿಂಗ್‌ ಸೆಂಟರ್ ಹಾಗೂ ರಷ್ಯಾದ ಡಾನ್ ಸ್ಟೇಟ್ ಯುನಿವರ್ಸಿಟಿ ಸೇರಿದಂತೆ ಹಲವು ಸಂಸ್ಥೆಗಳೊಂದಿಗೆ ಶೈಕ್ಷಣಿಕ ಮತ್ತು ಸಂಶೋಧನಾ ಸಹಭಾಗಿತ್ವ ಮಾಡಲಾಗಿದೆ.

ಆಸ್ಪತ್ರೆಯಲ್ಲಿ ಸಣ್ಣ ಮತ್ತು ದೊಡ್ಡ ಪ್ರಾಣಿಗಳ ಚಿಕಿತ್ಸೆಗೆ ಪ್ರತ್ಯೇಕ ವಿಭಾಗಗಳು, ಶಸ್ತ್ರಚಿಕಿತ್ಸೆ, ತೀವ್ರ ನಿಗಾ, ಪರೀಕ್ಷಾ ಪ್ರಯೋಗಾಲಯ ಹಾಗೂ ರೋಗ ಪತ್ತೆ ಸೌಲಭ್ಯಗಳನ್ನು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಲಾಗುತ್ತಿದೆ. ಮುಂದಿನ ಹಂತಗಳಲ್ಲಿ ಜಾನುವಾರುಗಳ ತರಬೇತಿ ಮತ್ತು ಆರೈಕೆಗೆ ಅಗತ್ಯವಾದ ಫಾರ್ಮ್ ಸೌಲಭ್ಯಗಳಿಗೆ ವಿಸ್ತರಣೆ ಮಾಡಲಾಗುತ್ತದೆ.

ಪ್ರವೇಶ ಮತ್ತು ಕೋರ್ಸ್ಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ವೆಬ್ಸೈಟ್ gmu.ac.ae ನಲ್ಲಿ ಲಭ್ಯವಿದೆ.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News