Belur | ಇಬ್ಬರ ಸಾವಿಗೆ ಕಾರಣವಾಗಿದ್ದ ಕಾಡಾನೆಗಳ ಸೆರೆ; ಅರಣ್ಯ ಇಲಾಖೆಯ 3ನೇ ದಿನದ ಕಾರ್ಯಾಚರಣೆ ಯಶಸ್ವಿ
ಬೇಲೂರು : ಕೇವಲ ಮೂರು ದಿನಗಳ ಅಂತರದಲ್ಲಿ ಮಹಿಳೆ ಸೇರಿದಂತೆ ಇಬ್ಬರ ಸಾವಿಗೆ ಕಾರಣವಾಗಿದ್ದ ಎರಡು ಪುಂಡಾನೆಗಳನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾಗಿದೆ.
ಬೇಲೂರು-ಸಕಲೇಶಪುರ ಗಡಿ ಭಾಗದ ಸಕಲೇಶಪುರ ತಾಲೂಕಿನ ಉದೇವಾರ ಎಸ್ಟೇಟ್ನಲ್ಲಿ ಗುರುವಾರ ನಡೆದ ಮೂರನೇ ದಿನದ ಕಾರ್ಯಾಚರಣೆಯಲ್ಲಿ ಎರಡೂ ಪುಂಡಾನೆಗಳನ್ನು ಅರವಳಿಕೆ ಮದ್ದು ನೀಡಿ ಸೆರೆಹಿಡಿಯಲಾಗಿದೆ. ಇದರೊಂದಿಗೆ ಕಳೆದ ಮೂರು ದಿನಗಳಿಂದ ಅರಣ್ಯ ಇಲಾಖೆಗೆ ಸವಾಲಾಗಿದ್ದ ಆಪರೇಷನ್ ಗಜಕ್ಕೆ ಮೊದಲ ಹಂತದ ಯಶಸ್ಸು ಸಿಕ್ಕಿದೆ.
ಗುರುವಾರ ಬೆಳಗ್ಗೆ ಉದೇವಾರ, ಬಳಗೋಡು, ಬೈದನೆ, ಹೊಸಮನೆ, ಕಲ್ಲಹಳ್ಳಿ, ಮತ್ತಿಗಳಲೆ, ಕೆಸಗುಲಿ ಹಾಗೂ ಕಡೆಗರ್ಜೆ ಗ್ರಾಮಗಳ ವ್ಯಾಪ್ತಿಯಲ್ಲಿ ಏಳು ಕುಮ್ಮಿ ಆನೆಗಳು ಮತ್ತು ಕ್ಯಾಪ್ಟನ್ ಪ್ರಶಾಂತ್ ನೇತೃತ್ವದಲ್ಲಿ ಎರಡು ತಂಡಗಳಾಗಿ ಕಾರ್ಯಾಚರಣೆ ಆರಂಭಿಸಲಾಯಿತು.
ಮೊದಲ ಎರಡು ದಿನಗಳ ಕಾರ್ಯಾಚರಣೆಯಲ್ಲಿ ಕೈಗೆ ಸಿಗದೆ ಸತಾಯಿಸಿದ್ದ ಆನೆಗಳನ್ನು ಮೂರನೇ ದಿನ ಥರ್ಮಲ್ ಡ್ರೋನ್ ಕ್ಯಾಮೆರಾ ಮೂಲಕ ಪತ್ತೆಹಚ್ಚಲಾಯಿತು. ಎರಡೂ ಆನೆಗಳು ಒಟ್ಟಿಗೆ ಸಂಚರಿಸುತ್ತಿದ್ದುದನ್ನು ಗುರುತಿಸಿದ ವನ್ಯಜೀವಿ ವೈದ್ಯರ ತಂಡ, ಸೂಕ್ತ ಅಂತರದಲ್ಲಿ ಎರಡೂ ಆನೆಗಳಿಗೆ ಅರವಳಿಕೆ ಚುಚ್ಚುಮದ್ದು ನೀಡಿತು.
ಚುಚ್ಚುಮದ್ದು ನೀಡಿದ ಬಳಿಕವೂ ಸುಮಾರು ಅರ್ಧ ಗಂಟೆ ಕಾಲ ಓಡಾಡಿದ ಆನೆಗಳು ಕೊನೆಗೆ ನಿತ್ರಾಣಗೊಂಡು ನೆಲಕ್ಕುರುಳಿದವು. ಈ ಮೂಲಕ ಜೊತೆಯಾಗಿ ಓಡಾಡುತ್ತಿದ್ದ ಎರಡು ಪುಂಡಾನೆಗಳು ಒಟ್ಟಿಗೆ ಸೆರೆಸಿಕ್ಕಿವೆ.
ಎರಡು ದಿನ ಸತಾಯಿಸಿದ್ದ ಆನೆಗಳು:
ಕಳೆದ ಎರಡು ದಿನಗಳಿಂದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಈ ಆನೆಗಳನ್ನು ಸೆರೆಹಿಡಿಯುವುದು ದೊಡ್ಡ ಸವಾಲಾಗಿತ್ತು. ಬುಧವಾರ ಕಾನಹಳ್ಳಿ ಬಳಿ ಬೆಳಗ್ಗೆಯಿಂದ ಸಂಜೆವರೆಗೂ ಕಾರ್ಯಾಚರಣೆ ನಡೆಸಿದರೂ ಆನೆಗಳು ಅರವಳಿಕೆ ಮದ್ದು ನೀಡುವಷ್ಟರಲ್ಲಿ ದಟ್ಟ ಕಾಡಿನೊಳಗೆ ಮರೆಯಾಗುತ್ತಿದ್ದವು. ಹೀಗಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿ ಸಿಬ್ಬಂದಿ ಬರಿಗೈಲಿ ಹಿಂದಿರುಗಿದ್ದರು.
ಬಿರುಬಿಸಿಲು, ದಟ್ಟ ಅರಣ್ಯ ಹಾಗೂ ಕಾಫಿ ತೋಟಗಳ ನಡುವೆ ಆನೆಗಳನ್ನು ಪತ್ತೆಹಚ್ಚುವುದು ಸಿಬ್ಬಂದಿಗೆ ಕಠಿಣ ಸವಾಲಾಗಿತ್ತು. ಆದರೂ ಅನುಭವಿ ಮಾವುತರು, ಅರಣ್ಯ ಸಿಬ್ಬಂದಿ ಹಾಗೂ ಪಶುವೈದ್ಯರ ತಂಡದ ಸತತ ಪ್ರಯತ್ನದಿಂದ ಮೂರನೇ ದಿನ ಕಾರ್ಯಾಚರಣೆ ಯಶಸ್ಸು ಕಂಡಿದೆ.
ಒಂದೇ ಕಾರ್ಯಾಚರಣೆಯಲ್ಲಿ ಎರಡು ಆನೆ ಸೆರೆ:
ಒಂದೇ ಕಾರ್ಯಾಚರಣೆಯಲ್ಲಿ ಎರಡು ಕಾಡಾನೆಗಳನ್ನು ಏಕಕಾಲದಲ್ಲಿ ಸೆರೆಹಿಡಿದಿರುವುದು ವಿಶೇಷವಾಗಿದ್ದು, ಈ ರೀತಿಯ ಕಾರ್ಯಾಚರಣೆ ಇದೇ ಮೊದಲನೆಯದು ಎನ್ನಲಾಗಿದೆ. ಸೆರೆಸಿಕ್ಕಿರುವ ಎರಡು ಆನೆಗಳಲ್ಲಿ ಒಂದು ದೊಡ್ಡ ಗಂಡಾನೆ ಹಾಗೂ ಮತ್ತೊಂದು ಎಳೆಯ ಪ್ರಾಯದ ಮರಿ ಸಲಗ ಎಂದು ತಿಳಿದುಬಂದಿದೆ.
ಎರಡು ಜೀವಗಳನ್ನು ಬಲಿ ಪಡೆದಿದ್ದ ಪುಂಡಾನೆಗಳು ಸೆರೆಸಿಕ್ಕಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ರೈತರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.