×
Ad

Hassan | ಸೋಲಾರ್ ಬೇಲಿಗೂ ಕ್ಯಾರೇ ಎನ್ನದ ಕಾಡಾನೆಗಳು: ಅರೇಹಳ್ಳಿ ಭಾಗದಲ್ಲಿ ಮತ್ತೆ ಆನೆಗಳ ಹಾವಳಿ

Update: 2026-06-08 21:27 IST

ಬೇಲೂರು: ‍ ತಾಲೂಕಿನ ಅರೇಹಳ್ಳಿ ಹೋಬಳಿಯಲಿಂಗಾಪುರ, ಉದೇವಾರ, ಹುಲ್ಲೇಮಕ್ಕಿ, ಕಡೆಗರ್ಜೆ, ಗುಡ್‌ಪೇಟೆ ಎಸ್ಟೇಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶ ಗಳಲ್ಲಿ ಕಳೆದ ಐದಾರು ತಿಂಗಳಿಂದ ಕಾಣೆಯಾಗಿದ್ದ ಕಾಡಾನೆಗಳ ಹಿಂಡು ಮತ್ತೆ ಪ್ರತ್ಯಕ್ಷವಾಗಿದ್ದು, ರೈತರು ಹಾಗೂ ಕೂಲಿಕಾರ್ಮಿಕ ರಲ್ಲಿ ಆತಂಕ ಮೂಡಿಸಿದೆ.

ಹಿಂದೆ ಕಾಡಾನೆಗಳ ಹಾವಳಿಯಿಂದ ಬೇಸತ್ತ ರೈತರು ತಮ್ಮ ತೋಟಗಳಿಗೆ ಸೋಲಾರ್ ವಿದ್ಯುತ್ ಬೇಲಿಗಳನ್ನು ಅಳವಡಿಸಿಕೊಂಡ ಬಳಿಕ ಆನೆಗಳು ಬಿಕ್ಕೋಡು, ಚೀಕನಹಳ್ಳಿ ಹಾಗೂ ಮೂಡಿಗೆರೆ ಭಾಗಗಳತ್ತ ತೆರಳಿದ್ದವು. ಆದರೆ ಕಳೆದ ಒಂದು ವಾರದಿಂದ ಸುಮಾರು 20ಕ್ಕೂ ಹೆಚ್ಚು ಕಾಡಾನೆಗಳ ಗುಂಪು ಮತ್ತೆ ಈ ಭಾಗದಲ್ಲಿ ಕಾಣಿಸಿಕೊಂಡು ಜನರ ನಿದ್ದೆ ಕೆಡಿಸಿದೆ.

ಆರಂಭದಲ್ಲಿ ಸೋಲಾರ್ ಬೇಲಿಯನ್ನು ದಾಟಲು ಹಿಂದೇಟು ಹಾಕುತ್ತಿದ್ದ ಆನೆಗಳು ಈಗ ಹೊಸ ತಂತ್ರಗಳನ್ನು ಅನುಸರಿಸುತ್ತಿವೆ. ತಂತಿಗಳ ಮೇಲೆ ಒಣಗಿದ ಮರಗಳು ಅಥವಾ ಕಾಫಿ ಗಿಡಗಳನ್ನು ಕೆಡವಿ ವಿದ್ಯುತ್ ಬೇಲಿಯನ್ನು ದಾಟುತ್ತಿರುವ ದೃಶ್ಯಗಳು ಸ್ಥಳೀಯರ ಮೊಬೈಲ್‌ಗಳಲ್ಲಿ ಸೆರೆಯಾಗಿವೆ. ಕೆಲವು ಆನೆಗಳು ಮೊದಲು ತಂತಿಯಲ್ಲಿ ವಿದ್ಯುತ್ ಹರಿಯುತ್ತಿದೆಯೇ ಎಂದು ಪರಿಶೀಲಿಸಿ ಬಳಿಕ ಬೇಲಿಯನ್ನು ದಾಟುತ್ತಿರುವುದು ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಕಷ್ಟಪಟ್ಟು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ದಿನ ದಿಂದ ದಿನಕ್ಕೆ ಕಷ್ಟವಾಗುತ್ತಿದ್ದು, ಅರಣ್ಯ ಇಲಾಖೆ ಶೀಘ್ರ ಕ್ರಮ ಕೈಗೊಂಡು ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕೆಂದು ರೈತರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News