×
Ad

Hassan | ಸ್ಮಶಾನದಲ್ಲಿ ಹೂತು ಹಾಕಿದ್ದ ವ್ಯಕ್ತಿಯ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ; ಆಗಿದ್ದೇನು?

Update: 2026-06-02 20:10 IST

​ಹಾಸನ : ನಗರದ ಬಿಟ್ಟಗೋಡನಹಳ್ಳಿ ಸ್ಮಶಾನದಲ್ಲಿ ಈಗಾಗಲೇ ಹೋಳಲಾಗಿದ್ದ ವ್ಯಕ್ತಿಯೊಬ್ಬರ ಮೃತದೇಹವನ್ನು ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಮರಳಿ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹಾಸನದ ತಣ್ಣೀರುಹಳ್ಳದಲ್ಲಿ ಕೇರಳಾಪುರ ಹೋಟೆಲ್ ನಡೆಸುತ್ತಿದ್ದ ಗುರುಮೂರ್ತಿ (44) ಎಂಬುವವರ ಸಾವಿನ ಸುತ್ತ ಈ  ನಿಗೂಢತೆ ಮತ್ತು ಕೊಲೆ ಆರೋಪ ಕೇಳಿಬಂದಿದೆ.

​ಘಟನೆಯ ಹಿನ್ನೆಲೆ:

​ಮೃತ ಗುರುಮೂರ್ತಿ ಅವರು ವ್ಯವಹಾರದಲ್ಲಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಅವರ ಪತ್ನಿ ಹಾಗೂ ಅಪ್ರಾಪ್ತ ಪುತ್ರನೊಂದಿಗೆ ಮನೆಯಲ್ಲಿ ನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಜಗಳ ವಿಕೋಪಕ್ಕೆ ಹೋಗಿ ಪತ್ನಿ ಮತ್ತು ಮಗ ಸೇರಿ ಗುರುಮೂರ್ತಿ ಅವರ ಮೇಲೆ ದೈಹಿಕ ಹಲ್ಲೆ ಕೂಡ ನಡೆಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

​ಸಾಯುವ ನಾಲ್ಕು ದಿನಗಳ ಮುಂಚೆ, ಅಂದರೆ ಮೇ 14 ರಂದು ಗುರುಮೂರ್ತಿ ಮೈಸೂರಿನಲ್ಲಿರುವ ತಮ್ಮ ತಾಯಿ ರೇಣುಕಾ ಅವರ ಮನೆಗೆ ಹೋಗಿದ್ದರು. ಆ ವೇಳೆ ಅವರ ಹೊಟ್ಟೆಗೆ ನೋವು ನಿವಾರಕ ಬ್ಯಾಂಡೇಜ್ ಹಾಕಿಕೊಂಡಿರುವುದನ್ನು ಗಮನಿಸಿದ ತಾಯಿ, ಮಗನನ್ನು ವಿಚಾರಿಸಿದ್ದಾರೆ. ಆಗ ಗುರುಮೂರ್ತಿ, ಹಾಸನದ ಮನೆಯಲ್ಲಿ ಪತ್ನಿ ಹಾಗೂ ಅಪ್ರಾಪ್ತ ಪುತ್ರ ತನ್ನ ಮೇಲೆ ಭೀಕರವಾಗಿ ಹಲ್ಲೆ ನಡೆಸಿರುವ ಸಂಗತಿಯನ್ನು ಬಿಚ್ಚಿಟ್ಟಿದ್ದರು ಎನ್ನಲಾಗಿದೆ.

​ಮೇ 15 ರಂದು ಮೈಸೂರಿನಿಂದ ಮರಳಿ ಹಾಸನದ ಮನೆಗೆ ಬಂದಿದ್ದ ಗುರುಮೂರ್ತಿ, ಮೇ 18 ರಂದು ತಮ್ಮ ಮನೆಯಲ್ಲೇ ನಿಗೂಢವಾಗಿ ಸಾವನ್ನಪ್ಪಿದ್ದರು. ಯಾವುದೇ ಅನುಮಾನ ಬರದ ರೀತಿಯಲ್ಲಿ ಮೇ 18 ರಂದೇ ಬಿಟ್ಟಗೋಡನಹಳ್ಳಿ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿತ್ತು.

​ಸಿಸಿಟಿವಿ (CCTV) ದೃಶ್ಯದಲ್ಲಿ ಸತ್ಯ:

ಸಾವಿನ ಹಿಂದಿನ ದಿನ (ಮೇ 17) ಪತ್ನಿ ಹಾಗೂ ಅಪ್ರಾಪ್ತ ಪುತ್ರ ಸೇರಿ ಗುರುಮೂರ್ತಿ ಮೇಲೆ ತೀವ್ರವಾಗಿ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ​ಹಲ್ಲೆಯ ತೀವ್ರತೆಗೆ ಮನೆಯಲ್ಲೇ ಕುಸಿದು ಬಿದ್ದ ಗುರುಮೂರ್ತಿ ಅವರನ್ನು ಎಬ್ಬಿಸಿ ಮಂಚದ ಮೇಲೆ ಮಲಗಿಸಲಾಗಿತ್ತು. ಅವರು ಮಲಗಿದ ಭಂಗಿಯಲ್ಲೇ ಪ್ರಾಣ ಬಿಟ್ಟಿರುವುದು ಸಿಸಿಟಿವಿ ದೃಶ್ಯಗಳಿಂದ ದೃಢಪಟ್ಟಿದೆ ಎನ್ನಲಾಗಿದೆ.

​​ಸಿಸಿಟಿವಿ ಸಾಕ್ಷ್ಯಗಳು ಕೈಸೇರುತ್ತಿದ್ದಂತೆ ಆಘಾತಕ್ಕೊಳಗಾದ ತಾಯಿ ರೇಣುಕಾ, ಮೇ 25 ರಂದು ಹಾಸನ ನಗರ ಪೊಲೀಸ್ ಠಾಣೆಗೆ ಧಾವಿಸಿ ಸೊಸೆ ಹಾಗೂ ಮೊಮ್ಮಗನ ವಿರುದ್ಧ ಗಂಭೀರ ಕೊಲೆ ದೂರು ದಾಖಲಿಸಿದ್ದರು.

​ತಾಯಿಯ ದೂರಿನನ್ವಯ ಕಾರ್ಯಪ್ರವೃತ್ತರಾದ ಹಾಸನ ನಗರ ಠಾಣೆ ಪೊಲೀಸರು, ಜಿಲ್ಲಾಡಳಿತದ ಅನುಮತಿ ಪಡೆದು ತಹಶೀಲ್ದಾರ್ ಸಮ್ಮುಖದಲ್ಲಿ ಬಿಟ್ಟಗೋಡನಹಳ್ಳಿ ಸ್ಮಶಾನದಲ್ಲಿದ್ದ ಮೃತದೇಹವನ್ನು ಹೊರತೆಗೆದಿದ್ದಾರೆ.

ಸ್ಥಳದಲ್ಲೇ ಪರಿಣಿತ ವೈದ್ಯರಿಂದ ಮರಣೋತ್ತರ ಪರೀಕ್ಷೆ (Post-Mortem) ಪ್ರಕ್ರಿಯೆ ಮುಗಿಸಿದ ಬಳಿಕ, ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿ ಮರು ಅಂತ್ಯಕ್ರಿಯೆ ನೆರವೇರಿಸಲಾಗಿದೆ.

​ಸದ್ಯಕ್ಕೆ ಹಾಸನ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News