×
Ad

Hassan | ಬಾನು ಮುಸ್ತಾಕ್ ನಿವಾಸದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆಗೆ ಚಾಲನೆ

Update: 2026-06-30 23:58 IST

ಹಾಸನ : ಭಾರತ ಚುನಾವಣಾ ಆಯೋಗ, ಹಾಸನ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿಯವರು ಅಂತರ್‌ರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ತಾಕ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರಿಂದ ಅರ್ಜಿ ಭರ್ತಿ ಮಾಡಿಸುವ ಮೂಲಕ ಎಸ್‌ಐಆರ್‌ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಬಾನು ಮುಷ್ತಾಕ್, ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಪರ-ವಿರೋಧ ಚರ್ಚೆಗಳು ನಡೆದಿದ್ದರಿಂದ ಆರಂಭದಲ್ಲಿ ದಾಖಲೆಗಳ ಸಂಗ್ರಹ ಹಾಗೂ ಅರ್ಜಿ ಭರ್ತಿಯ ಬಗ್ಗೆ ಗೊಂದಲ ಉಂಟಾಗಿತ್ತು. ಆದರೆ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ತಂಡ ಮನೆಗೆ ಬಂದು ಸಂಪೂರ್ಣ ಮಾರ್ಗದರ್ಶನ ನೀಡಿದ ನಂತರ ಪ್ರಕ್ರಿಯೆ ತುಂಬಾ ಸರಳವಾಗಿದೆ ಎಂಬುದು ಮನವರಿಕೆಯಾಯಿತು ಎಂದು ಹೇಳಿದರು.

ಅರ್ಜಿಯಲ್ಲಿ ಹೆಚ್ಚಿನ ಕಠಿಣತೆ ಇಲ್ಲ. ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಪೂರ್ವಜರ ಮತದಾರರ ದಾಖಲೆಯಂತಹ ಮೂಲ ದಾಖಲೆಗಳಿದ್ದರೆ ಸಾಕು. ಅಧಿಕಾರಿಗಳು ಸ್ಪಷ್ಟವಾಗಿ ಮಾರ್ಗದರ್ಶನ ನೀಡಿರುವುದು ಸಂತೋಷ ತಂದಿದೆ. ಮತದಾರರಲ್ಲಿ ಯಾವುದೇ ಆತಂಕ ಬೇಡ, ಎಲ್ಲರೂ ಸಹಕರಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ತಹಶೀಲ್ದಾರ್ ಗೀತಾ, ಹಾಸನ ಮಹಾನಗರ ಪಾಲಿಕೆ ಆಯುಕ್ತ ಕೃಷ್ಣಮೂರ್ತಿ, ಚುನಾವಣಾ ಶಾಖೆಯ ಅಧಿಕಾರಿಗಳು, ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಗೂ ಸ್ವೀಪ್ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿ ಸರಳವಾಗಿದ್ದು, ಮನೆಯಲ್ಲಿರುವ ಒಬ್ಬ ಸದಸ್ಯರೇ ಇತರ ಸದಸ್ಯರ ವಿವರಗಳನ್ನು ಅಧಿಕಾರಿಗಳಿಗೆ ನೀಡಬಹುದಾಗಿದೆ. ಸಂಬಂಧಿಕರ ಮಾಹಿತಿಯನ್ನೂ ದಾಖಲಿಸುವ ಅವಕಾಶವಿರುವುದರಿಂದ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಅಧಿಕಾರಿಗಳಿಗೆ ಅಗತ್ಯ ಸಹಕಾರ ನೀಡಬೇಕು. ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆಯಿಂದಲೇ ಪರಿಷ್ಕರಣೆ ಕಾರ್ಯ ಆರಂಭವಾಗಿದ್ದು, ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಅರ್ಜಿ ಭರ್ತಿ ಮಾಡಿಸುತ್ತಿದ್ದಾರೆ. ಈ ಅಭಿಯಾನವನ್ನು ಜನಸಾಮಾನ್ಯರ ನಡುವೆ ವಿಶ್ವಾಸ ಮೂಡಿಸುವ ಉದ್ದೇಶದಿಂದ ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ತಾಕ್ ಅವರ ನಿವಾಸದಿಂದಲೇ ಆರಂಭಿಸಲಾಗಿದೆ.

-ಕೆ.ಎಸ್.ಲತಾಕುಮಾರಿ, ಜಿಲ್ಲಾಧಿಕಾರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News