×
Ad

Hassan | ಹೇಮಾವತಿ ಹಿನ್ನೀರಿನಲ್ಲಿ ಈಜಲು ಹೋಗಿ ಬೆಂಗಳೂರಿನ ಮೂವರು ಯುವಕರು ನೀರುಪಾಲು

Update: 2026-06-14 19:51 IST

​ಹಾಸನ : ಪ್ರವಾಸಕ್ಕೆಂದು ಬಂದು, ಈಜಲು ನದಿಗೆ ಇಳಿದಿದ್ದ ಬೆಂಗಳೂರು ಮೂಲದ ಮೂವರು ಯುವಕರು ನೀರುಪಾಲಾಗಿರುವ ಘಟನೆ ಹಾಸನ ತಾಲ್ಲೂಕಿನ ಶೆಟ್ಟಿಹಳ್ಳಿ ಚರ್ಚ್ ಸಮೀಪದ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ನಡೆದಿದೆ.

​ನೀರಿನಲ್ಲಿ ಮುಳುಗಿ ಮೃತಪಟ್ಟ ಯುವಕರನ್ನು ಬೆಂಗಳೂರು ಮೂಲದ ಚರಣ್ (20), ಮಿಲನ್ (23) ಹಾಗೂ ಮಣಿಕಂಠ (20) ಎಂದು ಗುರುತಿಸಲಾಗಿದೆ.

​ಘಟನೆಯ ಹಿನ್ನೆಲೆ:

​ಬೆಂಗಳೂರು ಮೂಲದ ಒಟ್ಟು ಹತ್ತು ಜನ ಯುವಕರ ತಂಡವೊಂದು ಟಿಟಿ ವಾಹನದಲ್ಲಿ ಧರ್ಮಸ್ಥಳಕ್ಕೆ ಪ್ರವಾಸಕ್ಕೆಂದು ತೆರಳಿತ್ತು. ದೇವರ ದರ್ಶನ ಮುಗಿಸಿ ಹಿಂತಿರುಗುವ ಮಾರ್ಗಮಧ್ಯೆ, ಹಾಸನ ಜಿಲ್ಲೆಯ ಹೇಮಾವತಿ ಹಿನ್ನೀರಿನಲ್ಲಿರುವ ‘ಶೆಟ್ಟಿಹಳ್ಳಿ ಚರ್ಚ್’ ವೀಕ್ಷಿಸಲು ಬಂದಿದ್ದರು. ಈ ವೇಳೆ ಚರ್ಚ್ ಬಳಿಯ ಹೇಮಾವತಿ ನದಿಯ ಹಿನ್ನೀರಿನಲ್ಲಿ ಯುವಕರು ಈಜಲು ನೀರಿಗೆ ಇಳಿದಿದ್ದಾರೆ ಎನ್ನಲಾಗಿದೆ.

​ನೀರಿಗೆ ಇಳಿದ ಯುವಕರಲ್ಲಿ ಮೃತಪಟ್ಟ ಮೂವರಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ನೀರಿನ ಆಳದ ಅರಿವಿಲ್ಲದೆ ಇಳಿದ ಪರಿಣಾಮ ಚರಣ್, ಮಿಲನ್ ಮತ್ತು ಮಣಿಕಂಠ ನೀರಿನಲ್ಲಿ ಮುಳುಗಲಾರಂಭಿಸಿದ್ದಾರೆ. ತಮ್ಮ ಮೂವರು ಸ್ನೇಹಿತರು ಕಣ್ಣೆದುರೇ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಆಘಾತಗೊಂಡ ಉಳಿದ ಸ್ನೇಹಿತರು, ಕೂಡಲೇ ದಡಕ್ಕೆ ಬಂದು ರಕ್ಷಣೆಗಾಗಿ ಕಿರುಚಾಡಿದ್ದಾರೆ. ಆದರೆ, ಅಷ್ಟರಲ್ಲಾಲೇ ಆ ಮೂವರೂ ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಮೃತದೇಹಕ್ಕಾಗಿ ಮುಂದುವರಿದ ಶೋಧಕಾರ್ಯ:

​ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗೊರೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತ ಯುವಕರ ಮೃತದೇಹಕ್ಕಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಆರಂಭಿಸಿದ್ದು, ನದಿಯಲ್ಲಿ ತೀವ್ರ ಶೋಧಕಾರ್ಯ ನಡೆಯುತ್ತಿದೆ.

​ಈ ದುರ್ಘಟನೆಯು ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News