ಹಾವೇರಿ ಮೆಡಿಕಲ್ ಕಾಲೇಜಿಗೆ ಕನಕದಾಸರ ಹೆಸರು : ಸಿಎಂ ಡಿ.ಕೆ.ಶಿವಕುಮಾರ್
ಹಾವೇರಿ : ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ ಶ್ರೀ ಭಕ್ತ ಕನಕದಾಸರ ಜಯಂತಿ ಅಂಗವಾಗಿ ಕಾಗಿನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಹಲವು ಮಹತ್ವದ ಘೋಷಣೆಗಳನ್ನು ಮಾಡಿದರು. ಶ್ರೀಗಳ ಮನವಿಯಂತೆ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ 5 ಕೋಟಿ ರೂ. ಮಂಜೂರು ಮಾಡುವುದಾಗಿ ತಿಳಿಸಿದ ಅವರು, ಹಾವೇರಿ ಮೆಡಿಕಲ್ ಕಾಲೇಜಿಗೆ ಕನಕದಾಸರ ಹೆಸರನ್ನು ಮರುನಾಮಕರಣ ಮಾಡುವುದಾಗಿ ಘೋಷಿಸಿದರು.
ಕನಕದಾಸರ ಜಯಂತಿ ಆಚರಣೆಗೆ ಕಾಗಿನೆಲೆಯ ಪವಿತ್ರ ಭೂಮಿಗೆ ಆಗಮಿಸಿರುವುದು ತಮ್ಮ ಭಾಗ್ಯ ಎಂದು ಹೇಳಿದ ಸಿಎಂ ಡಿ.ಕೆ. ಶಿವಕುಮಾರ್, ಕನಕದಾಸರ ಐಕ್ಯ ಸ್ಥಳದ ದರ್ಶನ ಪಡೆದು, ಅವರ ಜಯಂತಿ ಆಚರಣೆಯಲ್ಲಿ ಭಾಗಿಯಾಗಿರುವುದು ನನ್ನ ಪುಣ್ಯ” ಎಂದರು.
ಸುಮಾರು 500 ವರ್ಷಗಳ ಹಿಂದೆ ಕೃಷ್ಣನು ಕನಕದಾಸರಿಗೆ ದರ್ಶನ ನೀಡಿದ ಘಟನೆಯು ಭಕ್ತಿಯ ಶಕ್ತಿಗೆ ಸಾಕ್ಷಿಯಾಗಿದೆ. ಕನಕದಾಸರು ಕೇವಲ ದಾಸ ಸಾಹಿತ್ಯದ ಮಹನೀಯರಲ್ಲ, ಕನ್ನಡ ನಾಡಿನ ಹೆಮ್ಮೆ ಹಾಗೂ ಅಮೂಲ್ಯ ರತ್ನ. ಅವರ ಕೀರ್ತನೆಗಳು ಮತ್ತು ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಮನಸ್ಸು ನಿರ್ಮಲವಾಗಬೇಕಾದರೆ ಮಹನೀಯರ ಸಂದೇಶಗಳನ್ನು ಜೀವನದಲ್ಲಿ ಪಾಲಿಸಬೇಕು. ಬಸವಣ್ಣನವರು ಕೇವಲ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ದೇವನೊಬ್ಬ, ನಾಮ ಹಲವು ಎಂಬ ಸಂದೇಶದ ಮೂಲಕ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದ ಮಹನೀಯರು ಎಂದು ಸ್ಮರಿಸಿದರು.
ಜನರಿಗೆ ಗ್ಯಾರಂಟಿ ಯೋಜನೆಗಳ ನೆರವು
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬ ಸಂಕಲ್ಪದೊಂದಿಗೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ಬೆಲೆ ಏರಿಕೆ ಗಗನಕ್ಕೇರಿದ್ದು, ಜನರ ಆದಾಯ ಕುಸಿದಿರುವ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳು ರಾಜ್ಯದ ಜನರಿಗೆ ನೆರವಾಗಿವೆ ಎಂದು ಹೇಳಿದರು. ಕನಕದಾಸರು 500-600 ವರ್ಷಗಳ ಹಿಂದೆಯೇ ರಾಗಿ ಶ್ರೇಷ್ಠ ಧಾನ್ಯ ಎಂಬ ವಿಚಾರವನ್ನು ಸಾರಿದ್ದರು. ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಜನರು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಹಾವೇರಿ ಮೆಡಿಕಲ್ ಕಾಲೇಜಿಗೆ ಕನಕದಾಸರ ಹೆಸರು
ಹಾವೇರಿ ಮೆಡಿಕಲ್ ಕಾಲೇಜಿನ ಉದ್ಘಾಟನೆಗೆ ತಾವು ಆಗಮಿಸಿದ್ದನ್ನು ಸ್ಮರಿಸಿದ ಸಿಎಂ, ಕಾಲೇಜಿಗೆ ಕನಕದಾಸರ ಹೆಸರಿಡುವ ನಿರ್ಧಾರ ಪ್ರಕಟಿಸಿದರು. ಹಾವೇರಿ ಮೆಡಿಕಲ್ ಕಾಲೇಜಿಗೆ ಕನಕದಾಸರ ಮೆಡಿಕಲ್ ಕಾಲೇಜು ಎಂದು ಹೊಸದಾಗಿ ನಾಮಕರಣ ಮಾಡುತ್ತೇನೆ. ಅವರ ಹೆಸರು ಶಾಶ್ವತವಾಗಿ ಉಳಿಯಬೇಕು ಎಂಬ ಉದ್ದೇಶದಿಂದ ಈ ಘೋಷಣೆ ಮಾಡಿದ್ದೇನೆ. ಕನಕದಾಸರ ಹಾದಿಯಲ್ಲಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಶೇ.7.5ರಷ್ಟು ಮೀಸಲಾತಿ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
130 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಂಜೂರು
ಹಾವೇರಿ ಜಿಲ್ಲೆಯಲ್ಲಿ 130 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಂಜೂರು ನೀಡಿರುವುದಾಗಿ ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಕಾಗಿನೆಲೆಯ ಸಮಗ್ರ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲ್ಯಾನ್ ರೂಪಿಸುವ ಚಿಂತನೆಯೂ ನಡೆಯುತ್ತಿದೆ ಎಂದರು. ಜಿಲ್ಲೆಯ ಜನರು ಆರು ಶಾಸಕರನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಶಕ್ತಿ ನೀಡಿದ್ದಾರೆ. ಸಮಾಜವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.