ಶಿಗ್ಗಾಂವಿ: ಹಾವೇರಿ ಜಿಲ್ಲೆಯ ಶಿಗ್ಗಾಂವಿ ನಗರದ ಬಿ.ಬಿ. ಮಾಮ್ಮೆದೇಸಾಯಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅ.4ರಂದು ನಡೆದ ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಪ್ರಾಂಶುಪಾಲ ಹಾಗೂ ಕೊಠಡಿ ಮೇಲ್ವಿಚಾರಕರನ್ನು ಅಮಾನತುಗೊಳಿಸಲಾಗಿದೆ.

ಪರೀಕ್ಷಾರ್ಥಿ ಶಂಕರ್ ಬನ್ನೂರು ಮೊಬೈಲ್ ಬಳಸಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಶಂಕರ್ ಬನ್ನೂರನ್ನು ಬಂಧಿಸಿದ್ದರು. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಪರೀಕ್ಷಾ ಕೇಂದ್ರದ ನಿರ್ಲಕ್ಷ್ಯ ಹಾಗೂ ಮೇಲ್ವಿಚಾರಣೆಯಲ್ಲಿನ ಲೋಪವೂ ಅಕ್ರಮಕ್ಕೆ ಕಾರಣವಾಗಿರುವುದು ವಿಚಾರಣೆಯಲ್ಲಿ ಬಹಿರಂಗವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರಾಗಿದ್ದ ಪ್ರಾಂಶುಪಾಲ ರಮಾಕಾಂತ್ ಭಟ್ ಹಾಗೂ ಕೊಠಡಿ ಮೇಲ್ವಿಚಾರಕ ಬಸವರಾಜ ಸವಡಿ ಅವರಿಗೆ ನೋಟಿಸ್ ನೀಡಲಾಗಿತ್ತು. ಅವರಿಂದ ಲಿಖಿತ ಉತ್ತರ ಪಡೆದು ಪರಿಶೀಲಿಸಿದ ಬಳಿಕ, ಇಬ್ಬರನ್ನೂ ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಕಾಲೇಜು ಆಡಳಿತ ಮಂಡಳಿಗೆ ಸೂಚನೆ ನೀಡಿದ್ದರು. ಜಿಲ್ಲಾಧಿಕಾರಿಗಳ ಸೂಚನೆಯಂತೆ ಇದೀಗ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಗ್ಗಾಂವಿ ಠಾಣೆಯ ಪಿ.ಸಿ. ಹೊನ್ನಾಳಿ, ಸವಣೂರು ಠಾಣೆಯ ಆರ್.ಎಂ. ಮಣಕವಾಡ ಹಾಗೂ ಆಡೂರು ಠಾಣೆಯ ಎಸ್.ಆರ್. ನಾಗನೂರ ಎಂಬ ಮೂವರು ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಈ ಹಿಂದೆಯೇ ಅಮಾನತುಗೊಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮದರಸಾಬ್‌ ಹಾವೇರಿ/ವಾರ್ತಾಭಾರತಿ

contributor