×
Ad

ರಟ್ಟಿಹಳ್ಳಿ: ಕ್ಷುಲ್ಲಕ ಕಾರಣಕ್ಕೆ ಜಗಳ; ಹಲ್ಲೆಗೊಳಗಾದ ವ್ಯಾಪಾರಿ ಮೃತ್ಯು

Update: 2026-07-02 12:43 IST

ಹಾವೇರಿ: ಕ್ಷುಲ್ಲಕ ಕಾರಣಕ್ಕೆ ವ್ಯಾಪಾರಿಗೆ ಹಲ್ಲೆ ನಡೆಸಿದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ  ನಡೆದಿರುವ ಬಗ್ಗೆ ವರದಿಯಾಗಿದೆ.

ಮೃತರನ್ನು ರಸ್ತೆಬದಿ ಬೀಡಿ ಅಂಗಡಿ ವ್ಯಾಪಾರಿ ಶಿವಾಜಿರಾವ್ ಬೈರೋಜಿ (60) ಎಂದು ಗುರುತಿಸಲಾಗಿದೆ.

ಮೊಟ್ಟೆ ಖರೀದಿಸಲು ಅಂಗಡಿಗೆ ಬಂದ ವಾಸೀಮ್ ಎಂಬ ಯುವಕ ತಾನು 500 ರೂ. ನೋಟು ನೀಡಿದ್ದೇನೆ ಎಂದು ಹೇಳಿದ್ದು, ಇದಕ್ಕೆ ಶಿವಾಜಿರಾವ್ ಅವರ ಪುತ್ರ ಭರತ್ ಅವರು 100 ರೂ. ನೋಟು ನೀಡಿದ್ದೀರಿ ಎಂದು ಹೇಳಿದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಈ ವೇಳೆ ಜಗಳ ಬಿಡಿಸಲು ಬಂದ ಶಿವಾಜಿರಾವ್ ಅವರ ಮೇಲೆ ವಾಸೀಮ್ ಮುಲ್ಲಾ, ಸರ್ಪರಾಜ್ ಮುಲ್ಲಾ, ಸಾದಿಕ್ ಮುಲ್ಲಾ ಹಾಗೂ ಶಿರಾಜ್ ಮುಲ್ಲಾ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿಗಳು ಭರತ್ ಅವರಿಗೆ ಹಲ್ಲೆ ನಡೆಸಿದ್ದು, ಅವರನ್ನು ಬಿಡಿಸಲು ಬಂದಾಗ ತಂದೆಯ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಲ್ಲೆಯ ವೇಳೆ ಶಿವಾಜಿರಾವ್ ಅವರು ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ತಂದೆಯನ್ನು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪುತ್ರ ಭರತ್ ಅವರು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಘಟನೆಯ ಬಳಿಕ ಆರೋಪಿಗಳಾದ ವಾಸೀಮ್ ಮುಲ್ಲಾ, ಸರ್ಪರಾಜ್ ಮುಲ್ಲಾ, ಸಾದಿಕ್ ಮುಲ್ಲಾ ಹಾಗೂ ಶಿರಾಜ್ ಮುಲ್ಲಾ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಈ ಸಂಬಂಧ ರಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News