ರಟ್ಟಿಹಳ್ಳಿ ವ್ಯಾಪಾರಿ ಸಾವು ಪ್ರಕರಣ: ಹಾವೇರಿ ಜಿಲ್ಲಾ ಎಸ್‌ಪಿ ಹೇಳಿದ್ದೇನು?
ಹಾವೇರಿ: ರಟ್ಟಿಹಳ್ಳಿಯಲ್ಲಿ ಬೀಡಿ ಅಂಗಡಿ ವ್ಯಾಪಾರಿ ಶಿವಾಜಿರಾವ್ ಬೈರೋಜಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊಟ್ಟೆ ಖರೀದಿಸಿದ ಹಣದ ವಿಚಾರವಾಗಿ ಜಗಳ ನಡೆದಿದ್ದು, ಈ ವೇಳೆ ತಳ್ಳಾಟ ಉಂಟಾಗಿದೆ. ತಳ್ಳಾಟದ ವೇಳೆ ಶಿವಾಜಿರಾವ್ ಅವರು ಕುಸಿದು ಬಿದ್ದಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ ಎಂದು ಹೇಳಿದರು.
ಶಿವಾಜಿರಾವ್ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳ ವಿರುದ್ಧ ದೂರು ದಾಖಲಾಗಿದ್ದು, ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.
ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಮೇಲ್ನೋಟಕ್ಕೆ ತಳ್ಳಿದ ಪರಿಣಾಮ ಅವರು ಬಿದ್ದು ಮೃತಪಟ್ಟಿರುವುದು ಗೊತ್ತಾಗಿದೆ ಎಂದು ಎಸ್‌ಪಿ ಹೇಳಿದರು.
ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗುವುದು. ಕಾನೂನು ಪ್ರಕಾರ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ತಿಳಿಸಿದ್ದಾರೆ.