×
Ad

ಅವಲಕ್ಕಿ ಅನಾರೋಗ್ಯಕರ ಆಹಾರವೆ? ಆಹಾರ ತಜ್ಞರ ಅಭಿಪ್ರಾಯ ಇಲ್ಲಿದೆ…

Update: 2026-05-13 17:57 IST

ಸಾಂದರ್ಭಿಕ ಚಿತ್ರ | Photo Credit : magnific.com

ಪ್ರಸಿದ್ಧ ಬಾಣಸಿಗ ಸಂಜೀವ್ ಕಪೂರ್ ಇತ್ತೀಚೆಗೆ ನಾವು ದಿನನಿತ್ಯ ಸೇವಿಸುವ ಅವಲಕ್ಕಿ ಅನಾರೋಗ್ಯಕರ ಎಂದು ಹೇಳಿರುವುದು ಸುದ್ದಿಯಾಗಿದೆ. ಆಹಾರ ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ?

ಪ್ರಸಿದ್ಧ ಬಾಣಸಿಗ ಸಂಜೀವ್ ಕಪೂರ್ ಇತ್ತೀಚೆಗೆ ನಾವು ದಿನನಿತ್ಯ ಸೇವಿಸುವ ಅವಲಕ್ಕಿ ಅನಾರೋಗ್ಯಕರ ಎಂದು ಹೇಳಿರುವುದು ಸುದ್ದಿಯಾಗಿದೆ. ಪಾಡ್ಕಾಸ್ಟ್ ಒಂದರಲ್ಲಿ ಮಾತನಾಡಿದ ಅವರು “ಅವಲಕ್ಕಿ ಎನ್ನುವುದು ಆರಾಮದಾಯಕ ಆಹಾರ. ಎಲ್ಲಾ ವೀಕ್ಷಕರಿಗೆ ನಾನು ಹೇಳುವುದೇನೆಂದರೆ ಅವಲಕ್ಕಿ ಆರೋಗ್ಯಕರ ಅಲ್ಲವೇ ಅಲ್ಲ. ಅಕ್ಕಿ ಅನಾರೋಗ್ಯಕರವಾಗಿದ್ದರೆ, ಅವಲಕ್ಕಿ ಇನ್ನಷ್ಟು ಹದಗೆಡಿಸುವ ಆಹಾರ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾಮಾನ್ಯವಾಗಿ ಅವಲಕ್ಕಿಯನ್ನು ಸಾಸಿವೆ, ಕರಿಬೇವು, ಈರುಳ್ಳಿ, ಕಡಲೆಕಾಯಿ ಮತ್ತು ಕೆಲವು ಮಸಾಲೆಗಳೊಂದಿಗೆ ತಿನ್ನಲಾಗುತ್ತಿದ್ದು, ಆರೋಗ್ಯಕರ ಆಹಾರ ಎಂದು ಪರಿಗಣಿಸಲಾಗುತ್ತದೆ.

ಆಹಾರ ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ?

ಆಹಾರ ಸುರಕ್ಷಾ ತಜ್ಞೆ ಮತ್ತು ಸಲಹೆಗಾರರಾಗಿರುವ ಸವಿತಾ ಡಿ ಭರಮಗೌಡ್ರ ಅವರ ಪ್ರಕಾರ, “ಬಿಳಿ ಅನ್ನದ ಜೊತೆ ಅವಲಕ್ಕಿಯನ್ನು ಹೋಲಿಸುವುದು ಸರಿಯಿಲ್ಲ. ಅವಲಕ್ಕಿಯನ್ನು ಆರೋಗ್ಯಕರ ಮತ್ತು ಸಮತೋಲಿತವನ್ನಾಗಿಸುವುದು ನಮ್ಮ ಪ್ರಜ್ಞಾಪೂರ್ವಕ ಆಯ್ಕೆಯಾಗಿರುತ್ತದೆ. ಪ್ರಧಾನ ಪೋಷಕಾಂಶಗಳಾದ ಪ್ರೊಟೀನ್ (ಸಸಾರಜನಕ), ನಾರು, ಕೊಬ್ಬು ಮತ್ತು ಶರ್ಕರ ಪಿಷ್ಟಗಳನ್ನು ಸಮತೋಲನಗೊಳಿಸಿ ಜೊತೆಗೆ ಉತ್ತಮ ಹಾಗೂ ನೈಸರ್ಗಿಕ ಆಹಾರ ಪದಾರ್ಥಗಳನ್ನು ಬಳಸುವುದರಿಂದ ಅವಲಕ್ಕಿ ಆರೋಗ್ಯಕರವೆನಿಸುತ್ತದೆ.”

ಅವರು ಹೇಳುವ ಪ್ರಕಾರ, “ಕಂದು ಅಥವಾ ಕೆಂಪು ಅವಲಕ್ಕಿಯು ಸಮತೋಲಿತ ಪೋಷಕಾಂಶಗಳನ್ನು ಹೊಂದಿದ್ದರೆ ಅದು ಮಧುಮೇಹಿಗಳಿಗೂ ಉತ್ತಮ. ಮುಖ್ಯವಾಗಿ ಅವಲಕ್ಕಿ ಮಾಡುವಾಗ ಬಳಸಿದ ಎಣ್ಣೆಯ ವಿಧ, ಪ್ರಮಾಣ ಮತ್ತು ಎಣ್ಣೆಯನ್ನು ಬಳಸಿದ ರೀತಿಯು ಅವಲಕ್ಕಿಯು ಆರೋಗ್ಯಕರ ಅಥವಾ ಅನಾರೋಗ್ಯಕರ ಎಂಬುದನ್ನು ಪ್ರಮುಖವಾಗಿ ನಿರ್ಧರಿಸುತ್ತದೆ. ಎರಡುವರೆ ದಶಕಗಳ ಹಿಂದೆ ಎಣ್ಣೆ ಒಂದು ಐಷಾರಾಮಿ ಆಹಾರವಸ್ತು ಆಗಿತ್ತು. ಅಡುಗೆಯಲ್ಲಿ ಎಣ್ಣೆ ಅಥವಾ ಕರಿದ ಆಹಾರಗಳ ಉಪಯೋಗ ಬಹಳ ಕಡಿಮೆ ಇತ್ತು. ಇಂದು ಹಾಗಿಲ್ಲ. ಎಣ್ಣೆಯು ಎಲ್ಲರಿಗೂ ಸುಲಭವಾಗಿ ಎಟುಕುತ್ತದೆ ಮತ್ತು ಬಳಕೆ ಕೂಡ ಹೆಚ್ಚಾಗಿದೆ. ಸಾಮಾನ್ಯವಾಗಿ ಅವಲಕ್ಕಿ ಮಾಡುವಾಗ ನಾವು ಕಡಿಮೆ ನೀರು ಮತ್ತು ಹೆಚ್ಚಿನ ಎಣ್ಣೆಯನ್ನು ಇತ್ತೀಚೆಗೆ ಬಳಸುತ್ತಿದ್ದೇವೆ. ಬಳಸುವ ಕೊಬ್ಬು ಒಂದೇ ಅವಲಕ್ಕಿಯನ್ನು ಅನಾರೋಗ್ಯಕರವಾಗಿಸಬಹುದು.”

“ಪಾಲಿಷ್ ಮಾಡದ ಅಕ್ಕಿಯ ಅವಲಕ್ಕಿ, ಸಾವಯವ ಆಹಾರ ಪದಾರ್ಥಗಳು, ಸೊಪ್ಪು, ತರಕಾರಿಗಳು, ಆರೋಗ್ಯಕಾರಿ ಕೊಬ್ಬುಗಳು, ಗಾಣದ ಅಡುಗೆ ಎಣ್ಣೆ ಅಥವಾ ದೇಸಿ ತುಪ್ಪವನ್ನೇ ಬಳಸಿದಾಗ ಕೂಡ ಕೊಬ್ಬು ಹೆಚ್ಚಾಗಿದ್ದರೆ ಅದು ಅನಾರೋಗ್ಯಕರವಾಗಿ ಬದಲಾಗಿಬಿಡುತ್ತದೆ. ಯಾಕೆಂದರೆ ಒಂದೇ ಒಂದು ಚಮಚ ಎಣ್ಣೆ ಅಥವಾ ತುಪ್ಪವು ಸುಮಾರು 120 ಕ್ಯಾಲೋರಿ. ಹೆಚ್ಚಿನ ಪ್ರಮಾಣದಲ್ಲಿ ಅವುಗಳ ಬಳಕೆ ಮಾಡಿದಾಗ ಉತ್ತಮ ಕೊಬ್ಬುಗಳು ಕೂಡ ಆರೋಗ್ಯಕ್ಕೆ ತೊಂದರೆ ನೀಡುತ್ತವೆ. ಶೇಂಗಾ ಕಾಳು, ತುರಿದ ಹಸಿ ಕೊಬ್ಬರಿ, ಸೌತೆಕಾಯಿ, ಗಜ್ಜರಿ, ಎಳ್ಳಿನ ಒಗ್ಗರಣೆ, ನೆನೆಸಿದ ಬಟಾಣಿ ಕಾಳುಗಳು, ಕುದಿಸಿದ ಅವರೆಕಾಯಿ, ಕತ್ತರಿಸಿದ ಟೊಮ್ಯಾಟೋ, ಹೆಚ್ಚಿನ ಪ್ರಮಾಣದಲ್ಲಿ ಬಳಸಿದ ಈರುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು, ಇತರೆ ಸೊಪ್ಪುಗಳ ಬಳಕೆ ಅವಲಕ್ಕಿಯನ್ನು ಆರೋಗ್ಯಕರ ಮತ್ತು ಸಮತೋಲನಗೊಳಿಸಲು ಸಹಾಯಕಾರಿ. ಜೊತೆಗೆ ಒಂದು ಬಟ್ಟಲು ಮೊಸರು ಇನ್ನೂ ಉತ್ತಮ” ಎನ್ನುತ್ತಾರೆ ಸವಿತಾ.

ಸೂರತ್ನ ಬ್ಯಾಲೆನ್ಸ್ ಡಯಟ್ ಆ್ಯಂಡ್ ಲೈಫ್ಸ್ಟೈಲ್ ಮೋಡಿಫಿಕೇಶನ್ ಕ್ಲಿನಿಕ್ನ ಸಂಸ್ಥಾಪಕ ನಿರ್ದೇಶಕರು, ರಿವರ್ಸ್ ಡಿಸೀಸ್ನಲ್ಲಿ ಹಿರಿಯ ಆಹಾರ ತಜ್ಞೆಯಾಗಿರುವ ಡಾ ದಿವ್ಯಾ ಪಟೇಲ್ ಅವರ ಪ್ರಕಾರ, “ನೇರವಾಗಿ ಅವಲಕ್ಕಿ ದೇಹಕ್ಕೆ ಅನಾರೋಗ್ಯಕರ ಎಂದು ಹೇಳಲು ಸಾಧ್ಯವಿಲ್ಲ. ಹೌದು ಅವಲಕ್ಕಿಯಲ್ಲಿ ಕಾರ್ಬೋಹೈಡ್ರೇಟ್ಸ್ ಇದೆ. ಆದರೆ ಅದನ್ನು ನೀರಲ್ಲಿ ಮುಳುಗಿಸಿಟ್ಟು ಶೋಧಿಸಿ ಬಳಸಿದರೆ ಕಾರ್ಬೋ ಮತ್ತು ಸ್ಟಾರ್ಚ್ ಹೊರಟು ಹೋಗುತ್ತದೆ. 3-4 ಬಾರಿ ಅವಲಕ್ಕಿಯನ್ನು ತೊಳೆದು ಶೋಧಿಸಿದರೆ ಅದರ ಸ್ಟಾರ್ಚ್ ಹೊರಟು ಹೋಗುತ್ತದೆ. ನನ್ನ ವೃತ್ತಿಯಲ್ಲಿ ನಾನು ಈ ರೀತಿ ಅವಲಕ್ಕಿಯನ್ನು ತರಕಾರಿ ಜೊತೆಗೆ ಬೆಳಗಿನ ಉಪಹಾರ ಮತ್ತು ರಾತ್ರಿಯ ಭೋಜನಕ್ಕೂ ತೂಕ ಇಳಿಸಲು ಬಳಸುವಂತೆ ಸೂಚಿಸುತ್ತೇನೆ. ರಾತ್ರಿ ಭೋಜನದಲ್ಲಿ ಅವಲಕ್ಕಿಯನ್ನು ತರಕಾರಿಗಳ ಜೊತೆಗೆ ಸೇವಿಸುವಂತೆ ಹೇಳಿದಾಗ ತೂಕ ಇಳಿಸುವಲ್ಲಿ ಉತ್ತಮ ಪ್ರಗತಿ ದೊರೆತಿದೆ. ಅದರಲ್ಲಿ ನಾನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂದು ಹೇಳದೆ ಇದ್ದರೂ ಪರಿಣಾಮ ಉತ್ತಮವಾಗೇ ಇತ್ತು. ಆದರೆ ತರಕಾರಿ ಹೆಚ್ಚು ಬಳಸಬೇಕು ಎಂದು ಹೇಳುತ್ತೇನೆ.”

“ಎರಡನೆಯದಾಗಿ ನಾನು ಮಧುಮೇಹಿಗಳಿಗೂ ಈ ಆಹಾರವನ್ನು ಶಿಫಾರಸು ಮಾಡುತ್ತೇನೆ. ಆದರೆ ಇದೀಗ ನಾನೊಬ್ಬ ಮಧುಮೇಹಿ ತಜ್ಞರ ಬಳಿ ಚರ್ಚಿಸಿದಾಗ ಅವರ ಪ್ರಕಾರ ಮಧುಮೇಹಿಗಳಲ್ಲಿ ಸಕ್ಕರೆ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ನನ್ನ ಪ್ರ್ಯಾಕ್ಟೀಸ್ನಲ್ಲಿ ಈವರೆಗೂ ನಾನು ಅಂತಹುದನ್ನು ಗಮನಿಸಿಲ್ಲ. ಈ ಬಗ್ಗೆ ಇನ್ನೂ ಹೆಚ್ಚು ಮಧುಮೇಹಿ ರೋಗಿಗಳನ್ನು ಪರೀಕ್ಷಿಸಬೇಕಿದೆ. ನಾನು ಸಾಮಾನ್ಯವಾಗಿ ರಾತ್ರಿ ಭೋಜನಕ್ಕೆ ಮಧುಮೇಹಿಗಳಿಗೆ ಅವಲಕ್ಕಿಯನ್ನು ಸೂಚಿಸಿದ್ದೇನೆ. ಮೂರ್ನಾಲ್ಕು ದಿನದೊಳಗೆ ನಾನು ಅವರನ್ನು ಪರೀಕ್ಷಿಸುತ್ತೇನೆ. ಈವರೆಗೆ ಸಕ್ಕರೆ ಪ್ರಮಾಣದಲ್ಲಿ ಏರಿಕೆಯನ್ನು ನಾನು ಕಂಡಿಲ್ಲ. ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕಿದೆ. ಹೀಗಾಗಿ ಮಧುಮೇಹಿಗಳಲ್ಲಿ ಇನ್ನೂ ಖಚಿತವಾಗಿ ಹೇಳುವುದಿಲ್ಲ. ಆದರೆ ತೂಕ ಇಳಿಸಲು ಮತ್ತು ಪೋಷಕಾಂಶದ ಆಹಾರದ ವಿಚಾರದಲ್ಲಿ ಅವಲಕ್ಕಿಯನ್ನು ಖಂಡಿತಾ ಶಿಫಾರಸು ಮಾಡುತ್ತೇನೆ ಮತ್ತು ಉತ್ತಮ ಪರಿಣಾಮ ಸಿಗುತ್ತಿದೆ” ಎನ್ನುತ್ತಾರೆ ಡಾ ದಿವ್ಯಾ ಪಟೇಲ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News