ಹಿಮೋಗ್ಲೋಬಿನ್ ಕೌಂಟ್ ಕಡಿಮೆ ಇದ್ದ ತಕ್ಷಣ ಆಹಾರದಲ್ಲಿ ಬದಲಾವಣೆ ಬೇಕೆ?
ಸಾಂದರ್ಭಿಕ ಚಿತ್ರ | Photo Credit : freepik
ರಕ್ತ ಪರೀಕ್ಷೆಯಲ್ಲಿ ಕಬ್ಬಿಣದಂಶ ಕಡಿಮೆ ಇದೆ ಅಥವಾ ಹಿಮೋಗ್ಲೋಬಿನ್ ಕಡಿಮೆ ಎಂದಾಕ್ಷಣ ಬಹಳಷ್ಟು ಮಂದಿ ಪೂರಕ ಔಷಧಿಗಳನ್ನು ಸೇವಿಸುತ್ತಾರೆ ಅಥವಾ ಕಬ್ಬಿಣದಂಶ ಹೆಚ್ಚಾಗುವಂತೆ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಆದರೆ ಇಂತಹ ಬದಲಾವಣೆ ಅಪಾಯಕಾರಿಯಾಗಿ ಪರಿಣಮಿಸಬಹುದು.
ಆಧುನಿಕ ಇಂಟರ್ನೆಟ್ ಕಾಲದಲ್ಲಿ ಬಹಳಷ್ಟು ಮಂದಿ ಸ್ವಯಂ ವೈದ್ಯರಾಗಿ ಔಷಧಿಗಳನ್ನು ಸೇವಿಸುವುದಿದೆ. ವಿಟಮಿನ್ಗಳು ಅಥವಾ ಕಬ್ಬಿಣದಂಶಗಳು ಕಡಿಮೆ ಇದೆ ಎಂದು ರಕ್ತ ಪರೀಕ್ಷೆಯಲ್ಲಿ ತಿಳಿದ ತಕ್ಷಣ ಸ್ವಯಂ ವೈದ್ಯರಾಗಿಬಿಡುತ್ತಾರೆ. ಗೂಗಲ್ ಮಾಡಿ ತಕ್ಷಣ ಆಹಾರದಲ್ಲಿ ಬದಲಾವಣೆ ಮಾಡಿಬಿಡುತ್ತಾರೆ. ಆದರೆ ವೈದ್ಯರ ಸಲಹೆಯಿಲ್ಲದೆ ಆಹಾರದಲ್ಲಿ ಇಂತಹ ಬದಲಾವಣೆ ಮಾಡುವುದು ಅಥವಾ ಪೂರಕ ಔಷಧಿಗಳನ್ನು ಸೇವಿಸುವುದು ಅಪಾಯಕಾರಿ.
ಕಬ್ಬಿಣದಂಶ ಕಡಿಮೆ ಎಂದರೇನು?
ಹಿಮೋಗ್ಲೋಬಿನ್ ಪುರುಷರಲ್ಲಿ 13 ಮತ್ತು ಮಹಿಳೆಯರಲ್ಲಿ 11ರ ಆಸುಪಾಸಿನಲ್ಲಿದ್ದರೆ, ದೇಹದಲ್ಲಿ ಸೂಕ್ತ ಪ್ರಮಾಣದಲ್ಲಿ ಕಬ್ಬಿಣದಂಶವಿದೆ ಎಂದು ಪರಿಗಣಿಸಲಾಗುತ್ತದೆ. ಬಾರ್ಡರ್ಲೈನ್ ಎಂದರೆ 13/11ರ ಆಸುಪಾಸಿನಲ್ಲಿರಬೇಕಾಗುತ್ತದೆ. ಆದರೆ ಹಿಮೋಗ್ಲೋಬಿನ್ ಕೌಂಟ್ 6-5ರ ಸಮೀಪಕ್ಕೆ ಬಂದರೆ ಕಬ್ಬಿಣದಂಶ ಕಡಿಮೆಯಾಗಲು ಬೇರೆ ಕಾರಣಗಳಿವೆಯೇ ಎಂದು ಪರಿಶೀಲಿಸುವುದು ಅಗತ್ಯವಾಗಿರುತ್ತದೆ.
ಆಹಾರಶೈಲಿಯಲ್ಲಿ ತಕ್ಷಣದ ಬದಲಾವಣೆ ಬೇಡ
ರಕ್ತ ಪರೀಕ್ಷೆಯಲ್ಲಿ ಕಬ್ಬಿಣದಂಶ ಕಡಿಮೆ ಇದೆ ಅಥವಾ ಹಿಮೋಗ್ಲೋಬಿನ್ ಕಡಿಮೆ ಎಂದಾಕ್ಷಣ ಬಹಳಷ್ಟು ಮಂದಿ ಪೂರಕ ಔಷಧಿಗಳನ್ನು ಸೇವಿಸುತ್ತಾರೆ ಅಥವಾ ಕಬ್ಬಿಣದಂಶ ಹೆಚ್ಚಾಗುವಂತೆ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಆದರೆ ಕಬ್ಬಿಣದಂಶ ಕಡಿಮೆಯಾಗಲು ಬೇಕಾದಷ್ಟು ಕಾರಣಗಳು ಇರಬಹುದು ಎನ್ನುತ್ತಾರೆ ವೈದ್ಯರು.
ಮಾರಕ ಸೋಂಕುಗಳು, ಆಂತರಿಕ ರಕ್ರಸ್ರಾವ, ಋತುಚಕ್ರದಲ್ಲಿ ಅತಿಯಾದ ಸ್ರಾವ, ಗರ್ಭಧಾರಣೆ, ಸಿಲಿಯಾಕ್ ರೋಗ (ಹೊಟ್ಟೆ ಪೊಳ್ಳಿನ ರೋಗ), ಉರಿಯೂತದ ಕರುಳಿನ ರೋಗ ಅಥವಾ ಚಹಾ/ಕಾಫಿ ಅತಿಯಾಗಿ ಸೇವನೆಯಿಂದ (ಕಬ್ಬಿಣದಂಶ ಹೀರುವಿಕೆಯನ್ನು ತಡೆಯುತ್ತದೆ) ಕಬ್ಬಿಣದಂಶ ಕಡಿಮೆ ಇರುವ ಸಾಧ್ಯತೆಯೂ ಇರುತ್ತದೆ.
ಬೆಂಗಳೂರಿನಲ್ಲಿ ವೈದ್ಯರಾಗಿರುವ ಚೈತನ್ಯ ಹೇಳುವ ಪ್ರಕಾರ, “ಹಿಮೋಗ್ಲೋಬಿನ್ ಬಾರ್ಡರ್ ಲೈನ್ಗಿಂತ ಕಡಿಮೆ ಇದ್ದರೆ ಆಹಾರದಲ್ಲಿ ಬದಲಾವಣೆಗೆ ಸೂಚಿಸುತ್ತೇವೆ. ಬಹಳ ಸುಸ್ತು, ತಲೆಸುತ್ತು ಅಥವಾ ತೀವ್ರ ಋತುಸ್ರಾವದ ಸಮಸ್ಯೆ ಇದ್ದಾಗ ಮಾತ್ರ ಚಿಹ್ನೆಗಳನ್ನು ಗಮನಿಸಿ ಕಬ್ಬಿಣದಂಶಕ್ಕೆ ಸಂಬಂಧಿಸಿದ ಔಷಧಿ ನೀಡಲಾಗುತ್ತದೆ.”
ಕಬ್ಬಿಣದಂಶ ಅತಿಯಾದರೂ ಅಪಾಯ
ಕೆಲವು ಪ್ರಕರಣಗಳಲ್ಲಿ ಕಬ್ಬಿಣದಂಶ ಅತಿಯಾದರೂ ಅಪಾಯ. ಹೊಟ್ಟೆಯುರಿ, ಮಲಬದ್ಧತೆ ಮತ್ತು ಕಬ್ಬಿಣದಂಶ ಅತಿಯಾಗಿ ಇರುವ ಹೀಮೋಕ್ರೊಮಟೊಸಿಸ್ನಂತಹ ರೋಗವೂ ಬರುವ ಸಾಧ್ಯತೆ ಇರುತ್ತದೆ.
ಕಬ್ಬಿಣದಂಶ ಹೆಚ್ಚಿಸಬಹುದಾದ ಆಹಾರ
ಹಿಮೋಗ್ಲೋಬಿನ್ ಕೊರತೆ ಇರುವ ಬಹಳಷ್ಟು ಮಂದಿಗೆ ಪಾಲಾಕ್, ಬೀಟ್ರೂಟ್, ಧಾನ್ಯಗಳು, ಬೀನ್ಸ್, ಕಡಲೆಗಳು, ಇಡೀಧಾನ್ಯಗಳು, ಮೊಟ್ಟೆಗಳು ಮತ್ತು ಲೀನ್ ಮೀಟ್ಗಳನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ವಿಟಮಿನ್ ಸಿ ಇರುವ ಲಿಂಬೆ, ಕಿತ್ತಳೆ ಅಥವಾ ಟೊಮೆಟೊಗಳ ಜೊತೆಗೆ ಸೇವಿಸಿದರೆ ಹೀರಿಕೊಳ್ಳುವಿಕೆಗೆ ಅನುಕೂಲವಾಗಿಬಿಡುತ್ತದೆ. ಹೀಗಾಗಿ ಸ್ವಯಂ ವೈದ್ಯರಾಗುವ ಅಪಾಯ ತಂದುಕೊಳ್ಳದೆ ವೈದ್ಯರ ಸಲಹೆಯ ನಂತರ ಆಹಾರದಲ್ಲಿ ಬದಲಾವಣೆ ತಂದುಕೊಳ್ಳುವುದು ಒಳಿತು.
ಕೃಪೆ: indianexpress.com