×
Ad

ನಮ್ಮ ಶ್ವಾಸಕೋಶಗಳು ಆ್ಯಶ್ ಟ್ರೇಗಳಾಗದಿರಲಿ

Update: 2025-05-31 11:12 IST

ಲಭ್ಯವಿರುವ ಎಲ್ಲ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿದ ಧೂಮಪಾನದಿಂದಾಗುವ ಪರಿಣಾಮಗಳು, ಸರಕಾರದ ಸುತ್ತೋಲೆಗಳು, ವೈದ್ಯರುಗಳ ಬುದ್ಧಿವಾದಗಳು, ಎಚ್ಚರಿಕೆಗಳು ಅಚ್ಚರಿಯೆನ್ನುವ ರೀತಿಯಲ್ಲಿ ಮಣ್ಣು ಮುಕ್ಕಿವೆ.ವಿರೋಧ, ತೆರಿಗೆ ಹೇರಿಕೆ, ಅಡ್ಡಿ ಆತಂಕಗಳನ್ನು ಒಡ್ಡಿದರೂ ಧೂಮಪಾನದ ಜನಪ್ರಿಯತೆ ಕುಗ್ಗಲಿಲ್ಲ. ಜಗತ್ತಿನೆಲ್ಲೆಡೆ ಮದ್ಯ, ಮಾದಕ ದ್ರವ್ಯ, ಕೊಲೆ, ಅಪಘಾತ, ಆತ್ಮಹತ್ಯೆ, ಪ್ರಕೃತಿ ವಿಕೋಪ ಹಾಗೂ ಏಡ್ಸ್‌ನಿಂದ ಒಟ್ಟಾರೆಯಾಗಿ ಸಾಯುವವರ ಸಂಖ್ಯೆ ಗಿಂತಲೂ ಧೂಮಪಾನ ಒಂದರಿಂದಲೇ ಅಸುನೀಗುವವರ ಸಂಖ್ಯೆ ಅಧಿಕವಾಗಿದೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಗಮನಕ್ಕೆ ಬಂದಾಗ ಎಲ್ಲ ಸದಸ್ಯ ರಾಷ್ಟ್ರಗಳು 1987ರಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ರೋಗ ಮತ್ತು ಸಾವು ನೋವುಗಳನ್ನು ಸರ್ವರ ಗಮನಕ್ಕೆ ತರಲು ವಿಶ್ವ ಆರೋಗ್ಯ ಸಂಸ್ಥೆ ಮೊದಲ ಬಾರಿಗೆ ತಂಬಾಕು ರಹಿತ ದಿನದ ಆಚರಣೆಯ ಬಗ್ಗೆ ಅಧಿಸೂಚನೆ ಹೊರಡಿಸಿತು. ಇದನ್ನು ಪ್ರತೀ ವರ್ಷ ಮೇ 31 ರಂದು ಆಚರಿಸಲಾಗುತ್ತಿದೆ.

ತಂಬಾಕು ಸಮಸ್ಯೆಯ ಹರವು

ವಿಶ್ವದಲ್ಲಿ ತಂಬಾಕಿನ ಚಟದಿಂದಾಗಿ ಪ್ರತೀ ಆರು ಸೆಕೆಂಡಿಗೆ ಒಬ್ಬರಂತೆ ವರ್ಷಕ್ಕೆ 8.67 ಮಿಲಿಯನ್ ಜನರು ಸಾವಿಗೀಡಾಗುತ್ತಾರೆ. ಸುಮಾರು 1.2 ಬಿಲಿಯನ್ ಧೂಮಪಾನಿಗಳಲ್ಲದವರು ಪರೋಕ್ಷ ಧೂಮಪಾನಕ್ಕೆ ಗುರಿಯಾಗುತ್ತಾರೆ. ವಿಶ್ವಾದ್ಯಂತ 1.1 ಬಿಲಿಯನ್ ಧೂಮಪಾನಿಗಳಲ್ಲಿ ಸುಮಾರು ಶೇ. 80ರಷ್ಟು ಜನ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ತಂಬಾಕು ಸಂಬಂಧಿತ ಕಾಯಿಲೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿವರ್ಷ ಸುಮಾರು 1.3 ಮಿಲಿಯನ್ ಭಾರತೀಯರು ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನಂತೆ ವಿಶ್ವದಲ್ಲಿ ಜನರು ಧೂಮಪಾನಕ್ಕಾಗಿ ಪ್ರತಿವರ್ಷ 90 ಸಾವಿರ ಮಿಲಿಯನ್ ಡಾಲರ್ ಹಣ ಖರ್ಚು ಮಾಡುತ್ತಾರೆ. ತಂಬಾಕು ಕಂಪೆನಿಗಳು 2,500 ಮಿಲಿಯನ್ ಡಾಲರ್ ಹಣವನ್ನು ನೀರು ಚೆಲ್ಲಿದಂತೆ ಜಾಹೀರಾತಿಗಾಗಿ ಖರ್ಚು ಮಾಡುತ್ತಿವೆ. ಇದು ಸರಕಾರಗಳು ಆರೋಗ್ಯ ಸೇವೆಗಾಗಿ ಖರ್ಚು ಮಾಡುತ್ತಿರುವ ಹಣದ ಮೂರು ಪಟ್ಟು ಹೆಚ್ಚಾಗಿದೆ. ಇಷ್ಟೊಂದು ಹಣದಿಂದ ಜಗತ್ತಿನ ಎಲ್ಲ ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡಬಹುದು. ಅಕ್ಷರ ಕಲಿಸಬಹುದು. ರೋಗನಿರೋಧಕ ಲಸಿಕೆ ಹಾಕಬಹುದು. ಆದರೆ ಈಗ ತಂಬಾಕಿಗಾಗಿ ಸುರಿಯುತ್ತಿರುವ ಹಣದಿಂದ ಪ್ರತೀ 6 ಸೆಕೆಂಡಿಗೆ ಒಬ್ಬ ಸಾಯುವ ದುರಂತ ಕಥೆ ಮಾತ್ರ ಮುಂದುವರಿದಿದೆ.

ರಾಸಾಯನಿಕಗಳ ಗಟ್ಟಿ

ಸಿಗರೇಟು ಪೆಟ್ಟು ಕೊಡುವ ಕೆಟ್ಟ ರಾಸಾಯನಿಕಗಳ ಗಟ್ಟಿ. ಉರಿಯುವ ತುದಿಯಲ್ಲಿನ ಅಪಾರ ಉಷ್ಣತೆ (700 -900 ಡಿಗ್ರಿ ಸೆಂ.ಗ್ರೇ.)ಯಲ್ಲಿ ಸಿಗರೇಟಿನ ತಂಬಾಕು ಆಮ್ಲಜನಕದ ಸಹಾಯದೊಂದಿಗೆ ದಹಿಸಿ ಅನೇಕ ರಾಸಾಯನಿಕಗಳನ್ನು ಸೃಷ್ಟಿಸುತ್ತದೆ. ಸಿಗರೇಟಿನ ಹೊಗೆಯಲ್ಲಿ 700 ರಾಸಾಯನಿಕಗಳನ್ನು ಗುರುತಿಸಲಾಗಿದೆ. ಒಂದು ಜುರಿ (ಪಫ್) ಎಳೆದಾಗ 35 ಮಿ.ಲೀ. ಸಿಗರೇಟಿನ ಹೊಗೆ ನೇರವಾಗಿ ಧೂಮಪಾನಿಯ ಶ್ವಾಸಕೋಶಕ್ಕೆ ಹೋಗುತ್ತದೆ. ಸಿಗರೇಟಿನ ಹೊಗೆಯಲ್ಲಿನ ರಾಸಾಯನಿಕಗಳಿಗೆ ದೇಹಕ್ಕೆ ಗಂಡಾಂತರ ತರುವ ಗುಣವಿದೆ. ಜೊತೆಗೆ ಚಟ ಹಿಡಿಸುವ ಸ್ವಭಾವವಿದೆ. ಒಂದು ಸಿಗರೇಟಿನಲ್ಲಿ 8 ಮಿ.ಗ್ರಾಂ ‘ಟಾರ್’ ಇದೆ. ಈ ಟಾರ್‌ನಲ್ಲಿ ಬೆಂಜೋಪೈರಿನ್, ಪಾಲನ್ಯೂಕ್ಲಿಯಲ್ ಆರೋಮೆಟಿಕ್ ಹೈಡ್ರೊಕಾರ್ಬನ್, ನೈಟ್ರಸೋಮಿನ್ ಮುಂತಾದ300 ಉಗ್ರ ಕ್ಯಾನ್ಸರ್ ಪ್ರಚೋದಕ ರಾಸಾಯನಿಕಗಳಿರುತ್ತವೆ. ಸಿಗರೇಟಿನ ಹೊಗೆಯಲ್ಲಿರುವ ಕಾರ್ಬನ್ ಡೈಆಕ್ಸೈಡ್, ಕಾರ್ಬನ್ ಮಾನೋಕ್ಸೈಡ್ ಮತ್ತು ಹೈಡ್ರೊಜನ್ ಅನಿಲಗಳು ದೇಹದ ಆಮ್ಲಜನಕ ಪೂರೈಕೆಗೆ ಅಡ್ಡಿ ಆಗುತ್ತವೆ. ಇದಲ್ಲದೆ ಸಿಗರೇಟಿನ ಹೊಗೆಯಲ್ಲಿನ ಹೈಡ್ರೊಜನ್ ಸಯನೈಡ್, ಅಮೋನಿಯ, ಆಸಿಟೋನ್, ಫೀನಾಲ್, ಹೈಡ್ರಾಜಿನ್, ಪೈರಿಡಿಸ್ ಮುಂತಾದ ಅಪಾಯಕಾರಿ ರಾಸಾಯನಿಕಗಳು ಶ್ವಾಸಕೋಶವನ್ನು ಭಗ್ನಗೊಳಿಸುತ್ತವೆ. ಫೊಲೋನಿಯಂ - 210 ಎಂಬ ರೇಡಿಯೊ ಆ್ಯಕ್ಟೀವ್ ವಿಕಿರಣವೂ ತಂಬಾಕಿನ ಹೊಗೆಯಲ್ಲಿ ಇರುತ್ತದೆ. ಇದರಿಂದಾಗಿ ದೇಶದ ಪ್ರಜೆಗಳ ಸರಾಸರಿ ಜೀವಿತಾವಧಿ ಮೊಟಕುಗೊಳ್ಳುವುದರಲ್ಲಿ ಅನುಮಾನವೇ ಇಲ್ಲ.

ಧೂಮಪಾನ ಮಾಡಿದಾಗ ದೇಹದಲ್ಲಿ ‘ಅಡ್ರಿನಾಲಿನ್’ ಎಂಬ ಹಾರ್ಮೋನು ಹೆಚ್ಚು ಬಿಡುಗಡೆಯಾಗುತ್ತದೆ. ಇದರಿಂದ ಒಂದು ಬಗೆಯ ಉಲ್ಲಾಸ ಉಂಟಾಗುತ್ತದೆ. ಬೇಸರ, ಬಿಕ್ಕಟ್ಟು, ಖಿನ್ನತೆ, ಒತ್ತಡ, ಪ್ರಕ್ಷುಬ್ಧತೆಗಳು ನಿವಾರಣೆಯಾದ ಭ್ರಾಮಕತೆ ಉಂಟಾಗುತ್ತದೆ. ಆದರೆ ಒಳಗೊಳಗೆ ಇವೆಲ್ಲ ಸಮಸ್ಯೆಗಳು ಬೂದಿ ಮುಚ್ಚಿದ ಕೆಂಡದಂತೆ ಉಳಿದುಬಿಡುತ್ತವೆ. ತಂಬಾಕಿನ ಚಟ ಅಂಟಿಸುವ ಗುಣವಂತೂ ಧೂಮಪಾನಿಯ ಮನಸ್ಸನ್ನು ಕ್ಷಿಪಣಿವೇಗದಲ್ಲಿ ತನ್ನ ವಶಮಾಡಿಕೊಳ್ಳುತ್ತದೆ. ಆನಂತರ ಸಿಗರೇಟು ಸಿಗದಾಗ ಆಗುವ ತಳಮಳ ಹೇಳಲಸದಳ. ಸಿಗರೇಟು ಕೊನೆಗೆ ಇವನ ಮೇಲೆ ಸವಾರಿ ಮಾಡುತ್ತದೆ. ಸಿಗರೇಟಿಗೆ ಹಚ್ಚುವ ಕಿಡಿ ಕಿಚ್ಚಾಗಿ ಹರಡಿ ಇಡೀ ದೇಹವನ್ನೇ ದಹಿಸುತ್ತದೆ.

ನೀವು ಧೂಮಪಾನಿಗಳಾ?

ಜಗತ್ತಿನಲ್ಲಿ ಎರಡು ರೀತಿಯ ಜನರಿದ್ದಾರೆ. ಒಂದು ಗುಂಪಿನ ಜನ ಸೇದುತ್ತಾರೆ. ಇನ್ನೊಂದು ಗುಂಪಿನ ಜನ ಧೂಮಪಾನಿಗಳು ಸೇದಿ ಬಿಟ್ಟ ಹೊಗೆಯನ್ನು ಸೇದುತ್ತಾರೆ. ಇವರನ್ನು ಪ್ಯಾಸಿವ್‌ಸ್ಮೋಕರ್ ಅಥವಾ ಸೆಕೆಂಡ್ ಹ್ಯಾಂಡ್ ಸ್ಮೋಕರ್ ಎನ್ನುತ್ತಾರೆ. ಸೇದುವವರು ಸೇದುತ್ತಾರೆ, ಸಾಯುತ್ತಾರೆ ಬಿಡಿ ಎಂದು ನಾವು ಸಮ್ಮನೆ ಕೈಕಟ್ಟಿ ಕೂಡುವ ಹಾಗಿಲ್ಲ. ಏಕೆಂದರೆ ಸೇದುವವರು ಸೇದಿ ಬಿಡುವ ಹೊಗೆಯ ಶ್ರೋತೃಗಳು ನಾವೆಲ್ಲಾ. ತಂಬಾಕಿನ ಹೊಗೆಯ ಬಿಸಿ ಧೂಮಪಾನಿಗಳಲ್ಲದವರಿಗೂ ತಟ್ಟುತ್ತಿರುವುದಕ್ಕೆ ವಿಜ್ಞಾನಿಗಳು ಸಾಕಷ್ಟು ಜ್ವಲಂತ ಪುರಾವೆಗಳನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಸಂಶೋಧಕರಂತೂ, ಧೂಮಪಾನಿಗಳಿಗಿಂತ ಪರೋಕ್ಷ ಧೂಮಪಾನಿಗಳಿಗೇ ಹೆಚ್ಚಿನ ಅಪಾಯ ತಟ್ಟುತ್ತದೆ ಎಂದು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ:

* ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್ (ಪರೋಕ್ಷ ಧೂಮಪಾನ) ಹೃದಯ ಕಾಯಿಲೆ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಉಸಿರಾಟದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಶಿಶುಗಳಲ್ಲಿ ಇದು ಹಠಾತ್ ಶಿಶು ಸಾವಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಧೂಮಪಾನಿಗಳ ಪತ್ನಿಯರಿಗೆ ಗರ್ಭಪಾತ, ಕ್ಯಾನ್ಸರ್, ಅಂಗವಿಕಲ - ಕ್ಷೀಣ ಮಗು ಜನಿಸುವುದು ಹೆಚ್ಚಾಗಿರುತ್ತದೆ.

* ಧೂಮಪಾನಿಗಳ ಮಕ್ಕಳಿಗೆ ಕಲಿಕಾ ಸಾಮರ್ಥ್ಯ, ಗ್ರಹಣ ಶಕ್ತಿ, ಬುದ್ಧಿಮತ್ತೆ ಕಡಿಮೆ ಇರುವ ಆಶ್ಚರ್ಯದ ಸಂಗತಿ ಬೆಳಕಿಗೆ ಬಂದಿದೆ. ಈ ಮಕ್ಕಳು ಇತರ ಮಕ್ಕಳಿಗಿಂತ ಪದೇ ಪದೇ ಕಾಯಿಲೆಗೆ ತುತ್ತಾಗುತ್ತಾರೆ ಎಂದು ಅಧ್ಯಯನಗಳು ದೃಢಪಡಿಸಿವೆ. * ಪರೋಕ್ಷ ಧೂಮಪಾನ ವರ್ಷಕ್ಕೆ 1.2 ದಶಲಕ್ಷಕ್ಕೂ ಹೆಚ್ಚು ಅಕಾಲಿಕ ಮರಣಗಳಿಗೆ ಕಾರಣವಾಗುತ್ತದೆ.

* ಪ್ರತಿವರ್ಷ 65,000 ಮಕ್ಕಳು ಪರೋಕ್ಷ ಧೂಮಪಾನದಿಂದ ಸಾಯುತ್ತಾರೆ.

ಈ ಭೀತಿಯನ್ನು ತಡೆಗಟ್ಟಲು ನಗರಾಭಿವೃದ್ಧಿ ಇಲಾಖೆ ಎಲ್ಲಾ ರೆಸ್ಟೋರೆಂಟ್‌ಗಳನ್ನು ಧೂಮಪಾನ ಮುಕ್ತವಾಗಿಡಲು ಘೋಷಣೆ ಹೊರಡಿಸಿದೆ. ಇದಲ್ಲದೆ ನಾನ್ ಸ್ಮೋಕರ್‌ಗಳ ಹಿತಾಸಕ್ತಿ ಕಾಪಾಡಲು 30 ಅಥವಾ ಅದಕ್ಕಿಂತ ಹೆಚ್ಚಿನ ಆಸನ ಸಾಮರ್ಥ್ಯವಿರುವ ರೆಸ್ಟೋರೆಂಟ್‌ಗಳಲ್ಲಿ ‘ಗೊತ್ತುಪಡಿಸಿದ ಧೂಮಪಾನ ಪ್ರದೇಶ’ವನ್ನು ಸ್ಥಾಪಿಸಬೇಕಾಗಿದೆ.

ಈ ವರ್ಷದ ವಿಶ್ವ ತಂಬಾಕು ರಹಿತ ದಿನದ ಅಭಿಯಾನವು ತಂಬಾಕು ಮತ್ತು ನಿಕೋಟಿನ್ ಕೈಗಾರಿಕೆಗಳು ತಮ್ಮ ಹಾನಿಕಾರಕ ಉತ್ಪನ್ನಗಳನ್ನು, ವಿಶೇಷವಾಗಿ ಯುವಜನರನ್ನು ಆಕರ್ಷಿಸುವಂತೆ ಮಾಡುವ ಗುರಿಯನ್ನು ಹೊಂದಿದೆ.

ಧೂಮಪಾನ ಕೆಟ್ಟದ್ದು. ಆದರೆ ಧೂಮಪಾನಿಗಳು ಕೆಟ್ಟವರಲ್ಲ. ಕೇವಲ ಮೇ 31ರಂದು ಮಾತ್ರ ತಂಬಾಕು ರಹಿತ ದಿನ ಆಚರಿಸಿದರೆ ಸಾಲದು. ಪ್ರತಿ ದಿನವೂ ತಂಬಾಕುರಹಿತ ದಿನವಾಗಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಕರವೀರಪ್ರಭು ಕ್ಯಾಲಕೊಂಡ

contributor

Similar News