ಇಮ್ರಾನ್ ಖಾನ್ಗೆ ವೈದ್ಯಕೀಯ ನೆರವು ನೀಡುವಂತೆ ಪಾಕಿಸ್ತಾನದ ಪ್ರಧಾನಿಗೆ ಸುನಿಲ್ ಗವಾಸ್ಕರ್, ಕಪಿಲ್ ದೇವ್ ಸಹಿತ 21 ಕ್ರಿಕೆಟ್ ದಿಗ್ಗಜರಿಂದ ಪತ್ರ
Photo |timesofindia (ಕಪಿಲ್ ದೇವ್, ಇಮ್ರಾನ್ ಖಾನ್, ಸುನಿಲ್ ಗವಾಸ್ಕರ್)
ಇಸ್ಲಾಮಾಬಾದ್ : ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ನಾಯಕ ಇಮ್ರಾನ್ ಖಾನ್ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಮಾನವೀಯ ನೆರವು ಒದಗಿಸುವಂತೆ ಒತ್ತಾಯಿಸಿ, ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಸುನಿಲ್ ಗವಾಸ್ಕರ್, ಕಪಿಲ್ ದೇವ್ ಮತ್ತು ದಿಲೀಪ್ ವೆಂಗ್ಸರ್ಕಾರ್ ಸೇರಿದಂತೆ ವಿಶ್ವದ 21 ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ನಾಯಕರು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಜಂಟಿ ಪತ್ರ ಬರೆದಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕ ಗ್ರೆಗ್ ಚಾಪೆಲ್ ಅವರ ನೇತೃತ್ವದಲ್ಲಿ ಈ ಪತ್ರವನ್ನು ಕಳುಹಿಸಲಾಗಿದೆ. ಇದು , ಇಮ್ರಾನ್ ಖಾನ್ ಅವರ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಮಾಜಿ ಕ್ರಿಕೆಟಿಗರು ಬರೆದಿರುವ ಎರಡನೇ ಮನವಿ ಪತ್ರವಾಗಿದೆ.
"ನಾವು ಪಾಕಿಸ್ತಾನದ ಆಂತರಿಕ ಕಾನೂನು ಪ್ರಕ್ರಿಯೆಗಳಲ್ಲಿ ಮಧ್ಯಪ್ರವೇಶಿಸುತ್ತಿಲ್ಲ. ಆದರೆ ನ್ಯಾಯಾಲಯ ಆದೇಶಿಸಿದ ವೈದ್ಯಕೀಯ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕನಿಷ್ಠ ಮಾನವೀಯತೆಯ ಮೂಲಭೂತ ವಿಷಯವಾಗಿದೆ" ಎಂದು ನಾಯಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪತ್ರದಲ್ಲಿರುವ 3 ಪ್ರಮುಖ ಬೇಡಿಕೆಗಳು:
ಸ್ವತಂತ್ರ ವೈದ್ಯಕೀಯ ತಪಾಸಣೆಗೆ ಅವಕಾಶ: ಪಾಕಿಸ್ತಾನದ ಸುಪ್ರೀಂ ಕೋರ್ಟ್ ಆದೇಶಿಸಿದ ವೈದ್ಯಕೀಯ ಮಂಡಳಿಗೆ ಮತ್ತು ಅವರ ವೈಯಕ್ತಿಕ ವೈದ್ಯರಿಗೆ ಅವರ ಆರೋಗ್ಯದ, ವಿಶೇಷವಾಗಿ ಅವರ ಬಲಗಣ್ಣಿನ ದೃಷ್ಟಿ ದೋಷದ ಸಮಸ್ಯೆ ಕುರಿತು ಸಂಪೂರ್ಣ ಮತ್ತು ಸ್ವತಂತ್ರ ತಪಾಸಣೆ ನಡೆಸಲು ಅನುಮತಿಸಬೇಕು.
ಕುಟುಂಬ ಭೇಟಿಗೆ ನಿರಂತರ ಅವಕಾಶ: ಯಾವುದೇ ಅಡೆತಡೆ ಅಥವಾ ಆಡಳಿತಾತ್ಮಕ ವಿಳಂಬವಿಲ್ಲದೆ ಪ್ರತಿ ವಾರ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಲು ಕುಟುಂಬಸ್ಥರಿಗೆ ಅನುಮತಿ ನೀಡಿರುವ ಸುಪ್ರೀಂ ಕೋರ್ಟ್ ಆದೇಶವನ್ನು ಸರಕಾರ ಗೌರವಿಸಬೇಕು.
ವಿಳಂಬವಿಲ್ಲದೆ ಚಿಕಿತ್ಸೆ ಒದಗಿಸುವುದು: ವೈದ್ಯಕೀಯ ತಪಾಸಣೆಯ ಬಳಿಕ ತಜ್ಞರು ಶಿಫಾರಸು ಮಾಡುವ ಯಾವುದೇ ವೈದ್ಯಕೀಯ ಚಿಕಿತ್ಸೆಯನ್ನು ತಕ್ಷಣವೇ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.
ಪತ್ರಕ್ಕೆ ಸಹಿ ಹಾಕಿದ ಪ್ರಮುಖ ನಾಯಕರು:
ಪತ್ರದಲ್ಲಿ ಭಾರತದ ಮೂವರು ಮಾಜಿ ನಾಯಕರ ಜೊತೆಗೆ ಇಂಗ್ಲೆಂಡ್‌ನ ಮೈಕಲ್ ಅಥರ್ಟನ್, ಮೈಕಲ್ ಬ್ರಿಯರ್ಲಿ, ನಾಸಿರ್ ಹುಸೇನ್, ಆಂಡ್ರ್ಯೂ ಸ್ಟ್ರಾಸ್, ಡೇವಿಡ್ ಗೋವರ್, ಆಸ್ಟ್ರೇಲಿಯಾದ ಅಲನ್ ಬಾರ್ಡರ್, ಇಯಾನ್ ಚಾಪೆಲ್, ಬೆಲಿಂಡಾ ಕ್ಲಾರ್ಕ್, ಆಡಮ್ ಗಿಲ್ಕ್ರಿಸ್ಟ್, ಸ್ಟೀವ್ ವಾ, ಕಿಮ್ ಹ್ಯೂಸ್ , ವೆಸ್ಟ್ ಇಂಡೀಸ್‌ನ ಕ್ಲೈವ್ ಲಾಯ್ಡ್, ನ್ಯೂಜಿಲೆಂಡ್‌ನ ಜಾನ್ ರೈಟ್ , ಇಂಗ್ಲೆಂಡ್ ನ ಅಲಸ್ಟರ್ ಕುಕ್ ಹಾಗೂ ಶ್ರೀಲಂಕಾದ ಅರ್ಜುನಾ ರಣತುಂಗ ಸೇರಿ ಹಲವರು ಸಹಿ ಮಾಡಿದ್ದಾರೆ.
ಇಮ್ರಾನ್ ಖಾನ್ 2023 ರಿಂದ ಜೈಲಿನಲ್ಲಿದ್ದು, ಭ್ರಷ್ಟಾಚಾರ ಸೇರಿದಂತೆ ಹಲವು ಆರೋಪಗಳಡಿ ಶಿಕ್ಷೆ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶದಂತೆ ಇಸ್ಲಾಮಾಬಾದ್‌ಗೆ ಖಾಸಗಿ ಆಸ್ಪತ್ರೆಗೆ ತಪಾಸಣೆಗಾಗಿ ಕರೆದೊಯ್ದ ಕೆಲವೇ ಗಂಟೆಗಳಲ್ಲಿ ಅವರನ್ನು ಮತ್ತೆ ಜೈಲಿಗೆ ಕಳುಹಿಸಲಾಗಿತ್ತು.