ಅಮೆರಿಕದ ಶೇ. 72ರಷ್ಟು ಯಹೂದಿ ಮತದಾರರಿಂದ ಡೆಮಾಕ್ರಟಿಕ್ ಅಭ್ಯರ್ಥಿಗಳಿಗೆ ಬೆಂಬಲ: ಜೆ ಸ್ಟ್ರೀಟ್ ಸಮೀಕ್ಷೆಯಲ್ಲಿ ಬಹಿರಂಗ
"ಯಹೂದಿ ಮತದಾರರು ಡೆಮಾಕ್ರಟಿಕ್ ಪಕ್ಷದಿಂದ ದೂರ ಸರಿದಿಲ್ಲ"
Photo: x.com/TimesNow
ವಾಷಿಂಗ್ಟನ್: ಅಮೆರಿಕದ ಯಹೂದಿ ಮತದಾರರಲ್ಲಿ ಬಹುಪಾಲು ಮಂದಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಾರೆ. ನ. 3ರಂದು ನಡೆದ ಮಧ್ಯಂತರ ಚುನಾವಣೆಯಲ್ಲಿ ಶೇ. 72ರಷ್ಟು ಯಹೂದಿ ಮತದಾರರು ಡೆಮಾಕ್ರಟಿಕ್ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ ಎಂದು ಅಮೆರಿಕದ ಯಹೂದಿ ಪರ ವಕಾಲತ್ತು ಸಂಘಟನೆ 'ಜೆ ಸ್ಟ್ರೀಟ್' ನಡೆಸಿದ ಸಮೀಕ್ಷೆ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ಯಹೂದಿ ಮತದಾರರು ಡೆಮಾಕ್ರಟಿಕ್ ಪಕ್ಷದಿಂದ ದೂರ ಸರಿಯುತ್ತಿದ್ದಾರೆ ಎಂಬ ಚರ್ಚೆಗಳ ನಡುವೆಯೇ ಈ ಸಮೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಆದರೆ, ಮತದಾನದ ಅಂಕಿಅಂಶಗಳು ಅಂತಹ ಬೆಳವಣಿಗೆಯನ್ನು ತೋರಿಸುತ್ತಿಲ್ಲ. ಕಳೆದ ಎರಡು ದಶಕಗಳಿಂದ ಯಹೂದಿ ಸಮುದಾಯದಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ವ್ಯಕ್ತವಾಗುತ್ತಿರುವ ಬೆಂಬಲ ಮುಂದುವರಿದಿದೆ ಎಂದು ಜೆ ಸ್ಟ್ರೀಟ್ ಅಧ್ಯಕ್ಷ ಜೆರೆಮಿ ಬೆನ್-ಅಮಿ ಹೇಳಿದ್ದಾರೆ.
ನವೆಂಬರ್ 5ರಂದು ಅವರು ಪ್ರಕಟಿಸಿದ 'There Was No Jewish Exodus From The Democratic Party' ಎಂಬ ಲೇಖನದಲ್ಲಿ ಸಮೀಕ್ಷೆಯ ಪ್ರಮುಖ ಅಂಶಗಳನ್ನು ವಿವರಿಸಿದ್ದಾರೆ.
ಇಸ್ರೇಲ್ ವಿಚಾರದಲ್ಲಿ ಭಿನ್ನಾಭಿಪ್ರಾಯ
ಇಸ್ರೇಲ್ ಕುರಿತ ನೀತಿಯ ಬಗ್ಗೆ ಡೆಮಾಕ್ರಟಿಕ್ ಪಕ್ಷದೊಳಗೆ ಭಿನ್ನಾಭಿಪ್ರಾಯಗಳಿವೆ. ಇಸ್ರೇಲ್‌ನ ಭದ್ರತೆಗೆ ಬೆಂಬಲ ನೀಡುವುದರ ಜೊತೆಗೆ ಫೆಲೆಸ್ತೀನಿಯರ ಹಕ್ಕುಗಳನ್ನೂ ಗೌರವಿಸಬೇಕು ಎಂಬ ನಿಲುವು ಪಕ್ಷದೊಳಗೆ ವ್ಯಕ್ತವಾಗುತ್ತಿದೆ.
ಇಸ್ರೇಲ್ ಸರಕಾರದ ನೀತಿಗಳನ್ನು ಟೀಕಿಸುವುದೆಂದರೆ ಇಸ್ರೇಲ್ ನ ಭದ್ರತೆಗೆ ವಿರೋಧ ವ್ಯಕ್ತಪಡಿಸಿದಂತೆ ಅಲ್ಲ ಜೆ ಸ್ಟ್ರೀಟ್ ಹೇಳಿದೆ. ಇಸ್ರೇಲ್ ನ ಭದ್ರತೆ ಮತ್ತು ಫೆಲೆಸ್ತೀನಿಯರ ಹಕ್ಕುಗಳೆರಡಕ್ಕೂ ಮಹತ್ವ ನೀಡಬೇಕು ಎಂದು ಸಂಘಟನೆ ಪ್ರತಿಪಾದಿಸಿದೆ.
ಜೆ ಸ್ಟ್ರೀಟ್ ಬೆಂಬಲಿತ ಅಭ್ಯರ್ಥಿಗಳಿಗೂ ಜಯ
ಮಧ್ಯಂತರ ಚುನಾವಣೆಯಲ್ಲಿ ಜೆ ಸ್ಟ್ರೀಟ್ ಬೆಂಬಲಿಸಿದ್ದ 200ಕ್ಕೂ ಹೆಚ್ಚು ಅಭ್ಯರ್ಥಿಗಳ ಪೈಕಿ ಶೇ. 98ರಷ್ಟು ಮಂದಿ ಗೆಲುವು ಸಾಧಿಸಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷರು ತಿಳಿಸಿದ್ದಾರೆ. ಅಭ್ಯರ್ಥಿಗಳ ಪ್ರಚಾರಕ್ಕಾಗಿ ಸಂಘಟನೆ 1.3 ಕೋಟಿ ಡಾಲರ್ ಗೂ ಹೆಚ್ಚು ಹಣ ಖರ್ಚು ಮಾಡಿತ್ತು ಎನ್ನಲಾಗಿದೆ.
ಹೊಸ ಕಾಂಗ್ರೆಸ್ ನಲ್ಲಿ ಇಸ್ರೇಲ್‌ನ ಭದ್ರತೆ, ಫೆಲೆಸ್ತೀನಿಯರ ಹಕ್ಕುಗಳು ಮತ್ತು ರಾಜತಾಂತ್ರಿಕ ಪರಿಹಾರಕ್ಕೆ ಬೆಂಬಲ ನೀಡುವ ಅಭ್ಯರ್ಥಿಗಳ ಪ್ರಾತಿನಿಧ್ಯ ಹೆಚ್ಚಲಿದೆ ಎಂಬ ನಿರೀಕ್ಷೆಯನ್ನು ಜೆ ಸ್ಟ್ರೀಟ್ ವ್ಯಕ್ತಪಡಿಸಿದೆ.
ಇಸ್ರೇಲ್ ಪರ ವಕಾಲತ್ತು ನಡೆಸುವ ಮತ್ತೊಂದು ಪ್ರಮುಖ ಸಂಘಟನೆಯಾದ ಎಐಪಿಎಸಿ (AIPAC) ಬೆಂಬಲಿಸಿದ್ದ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಹಿನ್ನಡೆಯಾಗಿದೆ ಎಂದೂ ಜೆ ಸ್ಟ್ರೀಟ್ ತನ್ನ ವಿಶ್ಲೇಷಣೆಯಲ್ಲಿ ಹೇಳಿದೆ. ಡೆಮಾಕ್ರಟಿಕ್ ಪಕ್ಷದೊಳಗೆ ಇಸ್ರೇಲ್ ಕುರಿತ ಚರ್ಚೆಯ ಸ್ವರೂಪ ಬದಲಾಗುತ್ತಿದೆ ಎಂಬುದಕ್ಕೆ ಇದನ್ನು ಉದಾಹರಣೆಯಾಗಿ ಸಂಘಟನೆ ಮುಂದಿಟ್ಟಿದೆ.
ಇರಾನ್ ಯುದ್ಧದ ಬಗ್ಗೆಯೂ ಅಸಮಾಧಾನ
ಇರಾನ್ ವಿರುದ್ಧ ಅಮೆರಿಕ ನಡೆಸಿದ ಯುದ್ಧ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನೀತಿಗಳ ಬಗ್ಗೆ ಮತದಾರರಲ್ಲಿ ಅಸಮಾಧಾನವಿತ್ತು ಎಂದು ಜೆ ಸ್ಟ್ರೀಟ್‌ನ ಚುನಾವಣೋತ್ತರ ವಿಶ್ಲೇಷಣೆ ತಿಳಿಸಿದೆ.
ಪ್ರಜಾಪ್ರಭುತ್ವದ ರಕ್ಷಣೆ, ಯುದ್ಧದ ಬದಲಿಗೆ ರಾಜತಾಂತ್ರಿಕ ಮಾತುಕತೆಗಳಿಗೆ ಆದ್ಯತೆ ಮತ್ತು ಜನರ ಆರ್ಥಿಕ ಪರಿಸ್ಥಿತಿಯ ಸುಧಾರಣೆ ಚುನಾವಣೆಯ ಪ್ರಮುಖ ಚರ್ಚೆಯ ವಿಷಯಗಳಾಗಿದ್ದವು ಎಂದು ಸಂಘಟನೆ ಉಲ್ಲೇಖಿಸಿದೆ.
According to our 2026 Election Survey of Jewish voters, 72% of American Jews voted Democrat last night. There was no exodus.
We'll have deeper results at our briefing tomorrow at 1 PM ET - RSVP here: https://t.co/FpZZe4mAOm https://t.co/8Qy8e4jk3K
— J Street (@jstreetdotorg) November 4, 2026