69 ಮಂದಿ ಮೃತಪಟ್ಟ ರೈಲು ದುರಂತದ ಬೆನ್ನಲ್ಲೆ ಸ್ಪೇನ್ನ ಸಾರಿಗೆ ಸಚಿವ ರಾಜೀನಾಮೆ: ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧಾರ
ಮ್ಯಾಡ್ರಿಡ್: 69 ಮಂದಿ ಮೃತಪಟ್ಟ ಭೀಕರ ರೈಲು ಅಪಘಾತ ಸ್ಪೇನ್ ನಲ್ಲಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ದುರಂತ ಸಂಭವಿಸಿದ ಆರು ದಿನಗಳ ಬಳಿಕ ಸಾರಿಗೆ ಸಚಿವ ಆಸ್ಕರ್ ಪ್ಯುಯೆಂಟೆ (Óscar Puente) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂಬರುವ ಶಾಸಕಾಂಗ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಿಂದಲೂ ತಮ್ಮ ಹೆಸರನ್ನು ಹಿಂಪಡೆಯುವ ಮೂಲಕ ರಾಜಕೀಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಮ್ಯಾಡ್ರಿಡ್ ನ ದಕ್ಷಿಣ ಭಾಗದಲ್ಲಿರುವ ಉರ್ಡಾ ಪಟ್ಟಣದ ಸಮೀಪ ಕಳೆದ ಬುಧವಾರ ಈ ಭೀಕರ ಅಪಘಾತ ಸಂಭವಿಸಿತ್ತು. ಚಲಿಸುತ್ತಿದ್ದ ಅತಿವೇಗದ ರೈಲೊಂದು ಹಳಿಯಲ್ಲಿ ನಿಂತಿದ್ದ ಮತ್ತೊಂದು ರೈಲಿನ ಹಿಂಭಾಗಕ್ಕೆ ಬಲವಾಗಿ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಕನಿಷ್ಠ 69 ಮಂದಿ ಮೃತಪಟ್ಟಿದ್ದು, ಡಝನ್ ಗಟ್ಟಲೆ ಜನರು ಗಾಯಗೊಂಡಿದ್ದರು.
ಅಪಘಾತದ ಕುರಿತು ಮಂಗಳವಾರ ಸಂಸತ್ತಿನಲ್ಲಿ ನಡೆದ ಸುದೀರ್ಘ ಅಧಿವೇಶನದಲ್ಲಿ ಸಚಿವರು ವಿವರಣೆ ನೀಡಿದರು. ರೈಲು ಸುರಕ್ಷತೆ ಹೆಚ್ಚಿಸಲು ಸರಕಾರ ಕೈಗೊಳ್ಳಲಿರುವ ಹೊಸ ಕ್ರಮಗಳನ್ನೂ ವಿವರಿಸಿದರು. ವಿರೋಧ ಪಕ್ಷಗಳ ತೀವ್ರ ಪ್ರಶ್ನೆಗಳನ್ನು ಎದುರಿಸಿದ ಬಳಿಕ ಅಧಿವೇಶನದ ಕೊನೆಯಲ್ಲಿ ರಾಜೀನಾಮೆ ನಿರ್ಧಾರ ಪ್ರಕಟಿಸಿದರು.
'ಸ್ಪೇನ್ ನಂತಹ ದೇಶದಲ್ಲಿ ಒಂದು ವರ್ಷದೊಳಗೆ ಎರಡು ಗಂಭೀರ ರೈಲು ಅಪಘಾತಗಳು ಸಂಭವಿಸಿದ ಬಳಿಕ ಸಾರಿಗೆ ಸಚಿವರಾಗಿ ಮುಂದುವರಿಯಲು ಸಾಧ್ಯವಿಲ್ಲ' ಎಂದು ಪ್ಯುಯೆಂಟೆ ಹೇಳಿದರು. ಜನವರಿಯಲ್ಲಿ ಇದೇ ಮಾರ್ಗದಲ್ಲಿ ಸಂಭವಿಸಿದ ಮತ್ತೊಂದು ರೈಲು ಅಪಘಾತದಲ್ಲಿ 46 ಮಂದಿ ಮೃತಪಟ್ಟಿದ್ದ ಘಟನೆಯನ್ನೂ ಅವರು ಉಲ್ಲೇಖಿಸಿದರು.
ಸಚಿವ ಸ್ಥಾನ ತ್ಯಜಿಸುವುದರ ಜೊತೆಗೆ ಮುಂಬರುವ ಅವಧಿಗೂ ಮುನ್ನ ನಡೆಯಲಿರುವ ಶಾಸಕಾಂಗ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಿಂದಲೂ ತಮ್ಮ ಹೆಸರನ್ನು ಹಿಂಪಡೆಯುತ್ತಿರುವುದಾಗಿ ಅವರು ಘೋಷಿಸಿದರು.
ಕಳೆದ ವಾರದ ಈ ದುರಂತ ಯುರೋಪಿನ ಆಧುನಿಕ ಇತಿಹಾಸದಲ್ಲಿನ ಅತ್ಯಂತ ಭೀಕರ ರೈಲು ಅಪಘಾತಗಳ ಪೈಕಿ ಒಂದಾಗಿದೆ. 2013ರ ಬಳಿಕ ಸ್ಪೇನ್ ನಲ್ಲಿ ಸಂಭವಿಸಿದ ಅತಿ ದೊಡ್ಡ ರೈಲು ದುರಂತವೂ ಇದಾಗಿದೆ.
ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದರೇ?
ಅಪಘಾತದ ಬೆನ್ನಲ್ಲೇ ಪ್ಯುಯೆಂಟೆ ವಿರುದ್ಧ ರಾಜಕೀಯ ಒತ್ತಡ ಹೆಚ್ಚಾಗಿತ್ತು. ಪ್ರಮುಖ ವಿರೋಧ ಪಕ್ಷವಾದ ಸಂಪ್ರದಾಯವಾದಿ ಪೀಪಲ್ಸ್ ಪಾರ್ಟಿ (PP) ಮತ್ತು ಬಲಪಂಥೀಯ ವೋಕ್ಸ್ ಪಕ್ಷಗಳು ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿದ್ದವು. ಸರಕಾರದ ಕೆಲವು ಮಿತ್ರಪಕ್ಷಗಳೂ ಇದೇ ಬೇಡಿಕೆಯನ್ನು ಮುಂದಿಟ್ಟಿದ್ದವು.
ಸ್ಪೇನ್ ನ ಅತಿವೇಗದ ರೈಲು ವ್ಯವಸ್ಥೆಯ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನಗಳು ಮೂಡಿದ್ದವು. ರೈಲು ವ್ಯವಸ್ಥೆಯ ಮೇಲಿನ ಜನರ ವಿಶ್ವಾಸ ಕುಸಿದಿರುವುದನ್ನು ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಕೂಡ ಒಪ್ಪಿಕೊಂಡಿದ್ದರು. ವ್ಯವಸ್ಥೆಯ ವಿಶ್ವಾಸಾರ್ಹತೆ 'ಮುರಿದುಬಿದ್ದಿದೆ' ಎಂದು ಅವರು ಹೇಳಿದ್ದರು.
ಇಂತಹ ಪರಿಸ್ಥಿತಿಯಲ್ಲಿ ರೈಲು ವ್ಯವಸ್ಥೆಯ ಹೊಣೆ ಹೊತ್ತಿರುವ ಸಾರಿಗೆ ಸಚಿವರು ಜವಾಬ್ದಾರಿ ವಹಿಸಬೇಕು ಎಂಬುದು ವಿರೋಧ ಪಕ್ಷಗಳ ವಾದವಾಗಿತ್ತು.
ಅಪಘಾತಕ್ಕೆ 'ಮಾನವ ದೋಷ' ಕಾರಣ ಎಂದು ಬಿಂಬಿಸುವ ಮೂಲಕ ತಮ್ಮ ಇಲಾಖೆಯ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ಯುಯೆಂಟೆ ಪ್ರಯತ್ನಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.
ಆದರೆ, ಕೆಲವೇ ದಿನಗಳ ಹಿಂದೆ ಸಚಿವ ಸ್ಥಾನದಲ್ಲಿ ಮುಂದುವರಿಯುವುದಾಗಿ ಹೇಳಿದ್ದ ಪ್ಯುಯೆಂಟೆ ದಿಢೀರನೆ ರಾಜೀನಾಮೆ ನೀಡಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಚುನಾವಣೆಯ ಹೊಸ್ತಿಲಲ್ಲಿ ಸ್ಯಾಂಚೆಜ್ ಗೆ ಸಂಕಷ್ಟ
ಸ್ಪೇನ್ ನಲ್ಲಿ ನವೆಂಬರ್ 29ರಂದು ಅವಧಿಗೂ ಮುನ್ನ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರೈಲು ದುರಂತ ಸರಕಾರಕ್ಕೆ ದೊಡ್ಡ ರಾಜಕೀಯ ಸವಾಲಾಗಿ ಪರಿಣಮಿಸಿದೆ. ಈ ಅಪಘಾತವು ಸಮಾಜವಾದಿ ನೇತೃತ್ವದ ಸರಕಾರದ ಚುನಾವಣಾ ಭವಿಷ್ಯದ ಮೇಲೂ ಪರಿಣಾಮ ಬೀರಬಹುದು ಎಂದು ರಾಜಕೀಯ ವೀಕ್ಷಕರು ವಿಶ್ಲೇಷಿಸಿದ್ದಾರೆ. ಇದರಿಂದ ಪ್ರಧಾನಿ ಸ್ಯಾಂಚೆಜ್ ಅವರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಕಷ್ಟವಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಅಪಘಾತದ ಬಳಿಕ ಪ್ಯುಯೆಂಟೆ ರಾಜೀನಾಮೆ ನೀಡಬೇಕೇ ಬೇಡವೇ ಎಂಬುದು ಪ್ರಧಾನಿ ಮತ್ತು ಸರಕಾರಕ್ಕೆ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಿಸಿತ್ತು. ರಾಜೀನಾಮೆ ನೀಡಲು ನಿರಾಕರಿಸಿದರೆ ಸಂತ್ರಸ್ತರ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲ ಎಂಬ ಟೀಕೆ ಎದುರಿಸಬೇಕಾಗುತ್ತಿತ್ತು. ರಾಜೀನಾಮೆ ನೀಡಿದರೆ ಅಪಘಾತಕ್ಕೆ ಸಚಿವರು ಮತ್ತು ಸರಕಾರವೇ ಹೊಣೆ ಎಂಬ ಭಾವನೆ ಮೂಡಬಹುದಿತ್ತು.
ಕೊನೆಗೆ ಪ್ಯುಯೆಂಟೆ ರಾಜೀನಾಮೆಯ ನಿರ್ಧಾರ ಕೈಗೊಂಡರು. ತಮ್ಮ ನಿರ್ಧಾರವು 'ರಾಜಕೀಯ ಘನತೆ'ಯಿಂದ ಪ್ರೇರಿತವಾಗಿದೆ ಎಂದು ಅವರು ಸಮರ್ಥಿಸಿಕೊಂಡರು.
ಸಚಿವರ ನಿರ್ಧಾರವನ್ನು ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಶ್ಲಾಘಿಸಿದರು. 'ಪರಿಸ್ಥಿತಿಯನ್ನು ಎದುರಿಸಿ, ಉತ್ತರಗಳು ಮತ್ತು ಪರಿಹಾರಗಳನ್ನು ಒದಗಿಸಿದ ಬಳಿಕ ಪಕ್ಕಕ್ಕೆ ಸರಿದ ತಮ್ಮ ಸಹೋದ್ಯೋಗಿಯನ್ನು ಅಭಿನಂದಿಸುತ್ತೇನೆ' ಎಂದು ಹೇಳಿದರು.
'ಘನತೆಯಿಂದ, ಸ್ವಂತ ಇಚ್ಛೆಯಿಂದ ಮತ್ತು ಸಂತ್ರಸ್ತರ ಮೇಲಿನ ಗೌರವದಿಂದ' ಎಂದು ಸ್ಯಾಂಚೆಜ್ ಪ್ರತಿಕ್ರಿಯಿಸಿದರು
ಪ್ಯುಯೆಂಟೆ ಅವರ ಉತ್ತರಾಧಿಕಾರಿಗಳು ದೇಶದ ರೈಲ್ವೆ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಮರಳಿ ಗಳಿಸಲು ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆ ಈಗ ಎದುರಾಗಿದೆ.
ಸಿಗ್ನಲಿಂಗ್ ವ್ಯವಸ್ಥೆಯ ವೈಫಲ್ಯದ ಶಂಕೆ
ಕಳೆದ ಬುಧವಾರದ ಎರಡು ರೈಲುಗಳ ನಡುವೆ ಅಪಘಾತ ಸಂಭವಿಸಿತ್ತು. ಸರಕಾರಿ ಸ್ವಾಮ್ಯದ ರೆನ್ಫೆ (Renfe) ನಿರ್ವಹಿಸುತ್ತಿದ್ದ ರೈಲಿನಲ್ಲಿ 397 ಪ್ರಯಾಣಿಕರಿದ್ದರು. ಖಾಸಗಿ ಆಪರೇಟರ್ ಇರಿಯೊ (Iryo) ನಿರ್ವಹಿಸುತ್ತಿದ್ದ ಮತ್ತೊಂದು ರೈಲಿನಲ್ಲಿ 147 ಪ್ರಯಾಣಿಕರಿದ್ದರು.
ಅಪಘಾತ ಸಂಭವಿಸಿದ ಪ್ರದೇಶದಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಕಂಪ್ಯೂಟರ್ ವೈಫಲ್ಯದಿಂದಾಗಿ ಆ ಪ್ರದೇಶದಲ್ಲಿದ್ದ ಎಲ್ಲ ರೈಲುಗಳನ್ನೂ ನಿಲ್ಲಿಸುವಂತೆ ಮಾಡಲಾಗಿತ್ತು ಎಂದು ವರದಿಯಾಗಿದೆ.
ದುರಂತದ ಬಳಿಕ ಸ್ಪೇನ್ ನ ಮಾಧ್ಯಮಗಳಲ್ಲಿ ಸೋರಿಕೆಯಾದ ಆಡಿಯೊ ರೆಕಾರ್ಡಿಂಗ್ ಗಳು ಮತ್ತಷ್ಟು ಕುತೂಹಲ ಮೂಡಿಸಿವೆ. ಅಪಘಾತ ಸಂಭವಿಸುವ ಕೆಲವೇ ನಿಮಿಷಗಳ ಮೊದಲು ರೈಲು ಚಾಲಕರು ಮತ್ತು ಸಂಚಾರ ನಿಯಂತ್ರಣ ಕೇಂದ್ರದ ಸಿಬ್ಬಂದಿ ನಡುವೆ ನಡೆದ ಸಂಭಾಷಣೆಗಳು ಈ ಧ್ವನಿಮುದ್ರಿಕೆಗಳಲ್ಲಿವೆ. ಅಪಘಾತಕ್ಕೂ ಮುನ್ನ ನಡೆದ ಘಟನೆಗಳ ಕುರಿತು ಈ ಸಂಭಾಷಣೆಗಳು ಮಹತ್ವದ ಮಾಹಿತಿ ಒದಗಿಸಿವೆ.