ಪಶ್ಚಿಮ ದಂಡೆಯಲ್ಲಿ ಪೂರ್ಣ ಪ್ರಮಾಣದ ಯುದ್ಧ: ಇಸ್ರೇಲ್ ಬೆದರಿಕೆ
ಇಸ್ರೇಲ್ ಕಾಟ್ಜ್ |Photo Credit : AP , PTI
ಟೆಲ್ ಅವೀವ್, ಸೆ. 7: ಇಸ್ರೇಲಿ ಪಡೆಗಳು ಅಥವಾ ವಸಾಹತುಗಳ ವಿರುದ್ಧ ಹಮಾಸ್ ನಡೆಸಿದ ಮಾದರಿಯಲ್ಲೇ ದಾಳಿಗೆ ಸಜ್ಜಾದರೆ, ಫೆಲೆಸ್ತೀನ್ ಅಥಾರಿಟಿ (ಪಿಎ) ವಿರುದ್ಧ ‘ಪೂರ್ಣ ಪ್ರಮಾಣದ ಯುದ್ಧ’ ನಡೆಸುವುದಾಗಿ ಇಸ್ರೇಲ್ ಸೋಮವಾರ ಬೆದರಿಕೆ ಹಾಕಿದೆ.
ಒಂದು ವೇಳೆ ಫೆಲೆಸ್ತೀನ್ ಅಥಾರಿಟಿಯ ಭದ್ರತಾ ವ್ಯವಸ್ಥೆಗಳು ಮತ್ತು ಸಂಬಂಧಿತ ಸಂಸ್ಥೆಗಳು ಇಸ್ರೇಲಿ ಪಡೆಗಳು ಹಾಗೂ ಯಹೂದಿ ವಸಾಹತುಗಳ ವಿರುದ್ಧ ಅಕ್ಟೋಬರ್ 7ರ ಶೈಲಿಯಲ್ಲೇ ಭಯೋತ್ಪಾದನಾ ದಾಳಿಯನ್ನು ಪ್ರಾರಂಭಿಸಿದರೆ, ಅಥವಾ ಅವರು ಅಂತಹ ದಾಳಿಯನ್ನು ಪ್ರಾರಂಭಿಸಲಿದ್ದಾರೆ ಎಂಬುದು ನಮಗೆ ಖಚಿತವಾಗಿ ತಿಳಿದುಬಂದರೆ–ಪೂರ್ಣ ಪ್ರಮಾಣದ ಯುದ್ಧವನ್ನು ಪ್ರಾರಂಭಿಸಲು ಸಿದ್ಧರಾಗುವಂತೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ತಾನು ಇಸ್ರೇಲ್ ಭದ್ರತಾ ಪಡೆಗೆ ಸೂಚನೆ ನೀಡಿರುವುದಾಗಿ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.
ಈ ಕಾರ್ಯಾಚರಣೆಯು ನಿರ್ದಿಷ್ಟ ವ್ಯಕ್ತಿಗಳ ಹತ್ಯೆ, ನಾಗರಿಕರ ಸ್ಥಳಾಂತರ, ಬಂಡುಕೋರರ ಮೂಲಸೌಕರ್ಯಗಳ ನಾಶ ಮತ್ತು ತೆರವುಗೊಳಿಸಿದ ಪ್ರದೇಶಗಳಲ್ಲಿ ಇಸ್ರೇಲ್ ನ ಸುದೀರ್ಘ ಮಿಲಿಟರಿ ಉಪಸ್ಥಿತಿಯನ್ನು ಒಳಗೊಂಡಿರಬಹುದು ಎಂದು ಕಾಟ್ಜ್ ಹೇಳಿದ್ದಾರೆ.