ಲಾರೆನ್ಸ್ ವಾಂಗ್ (AP) ,   ಕೆ. ಷಣ್ಮುಗಂ (facebook \ k.shanmugam)

ಸಿಂಗಾಪುರ: ನೇಪಾಳ-ಟಿಬೆಟ್ ಪ್ರವಾಹ ಮತ್ತು ಏರ್ ಇಂಡಿಯಾದಲ್ಲಿ ಸಿಂಗಾಪುರ ಏರ್‌ಲೈನ್ಸ್‌ನ (ಎಸ್‌ಐಎ) ಹೂಡಿಕೆ ವಿಷಯದಲ್ಲಿ ಆನ್‌ಲೈನ್‌ನಲ್ಲಿ ಭಾರತೀಯರನ್ನು ಗುರಿಯಾಗಿಸಿಕೊಂಡು ಜನಾಂಗೀಯ ಮತ್ತು ವಿದೇಶಿ ದ್ವೇಷದ ಅಲೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಂಗಾಪುರ ಸರ್ಕಾರ ಪ್ರತಿಜ್ಞೆ ಮಾಡಿದೆ. ಇಂತಹ ಮಾತುಗಳನ್ನು ನಿರ್ಲಕ್ಷಿಸುವುದರಿಂದ ಜನಾಂಗೀಯ ಪೂರ್ವಾಗ್ರಹಗಳು ಸಹಜಗೊಳ್ಳಬಹುದು ಮತ್ತು ಸಿಂಗಾಪುರವು ಎಚ್ಚರಿಕೆಯಿಂದ ಕಾಪಾಡಿಕೊಂಡು ಬಂದಿರುವ ಬಹುಜನಾಂಗೀಯ ಸಾಮರಸ್ಯಕ್ಕೆ ಅಪಾಯ ಉಂಟಾಗಬಹುದು ಎಂದು ಸಿಂಗಾಪುರ ಪ್ರಧಾನಿ ಲಾರೆನ್ಸ್ ವಾಂಗ್ ಹಾಗೂ ಗೃಹಸಚಿವ ಕೆ. ಷಣ್ಮುಗಂ ಎಚ್ಚರಿಕೆ ನೀಡಿದ್ದಾರೆ.

ಸಿಂಗಾಪುರದಲ್ಲಿ ಯಾವುದೇ ಸಮುದಾಯದ ವಿರುದ್ಧದ ಪೂರ್ವಾಗ್ರಹವನ್ನು ಎಂದಿಗೂ ಒಪ್ಪಿಕೊಳ್ಳಲು ಅಥವಾ ಸಹಜವೆಂದು ಪರಿಗಣಿಸಲು ಬಿಡಬಾರದು ಎಂದು ವಾಂಗ್ ರವಿವಾರ ಹೇಳಿದ್ದಾರೆ. ಆನ್‌ಲೈನ್ ಚರ್ಚೆಗಳು ಅತ್ಯಂತ ಕಳಪೆ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಅವರು ಈ ಎಚ್ಚರಿಕೆ ನೀಡಿದ್ದಾರೆ ಎಂದು India Today ವರದಿ ಮಾಡಿದೆ.

ಜನಾಂಗೀಯ ಮತ್ತು ವಿದೇಶಿ ದ್ವೇಷದ ಕಮೆಂಟ್‌ಗಳು ನಾಚಿಕೆಗೇಡಿನವು, ಅವುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಷಣ್ಮುಗಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ತನಿಖೆ ನಡೆಸುವಂತೆ ಅವರು ಪೊಲೀಸರಿಗೆ ಆದೇಶಿಸಿದ್ದು, ಇದರ ಹಿಂದಿರುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಆಗಸ್ಟ್ 26ರಂದು ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಒಂಬತ್ತು ಸಿಂಗಾಪುರ ಪ್ರಜೆಗಳು ನಾಪತ್ತೆಯಾಗಿದ್ದಾರೆ. ಈ ದುರಂತದ ಕುರಿತು ನಡೆದ ಚರ್ಚೆಗಳ ಸಂದರ್ಭದಲ್ಲಿ ಸಿಂಗಾಪುರದ ಕೆಲವು ನಾಗರಿಕರು ಭಾರತೀಯ ಮೂಲದವರಾಗಿದ್ದಾರೆಂಬ ಕಾರಣಕ್ಕೆ ಆನ್‌ಲೈನ್‌ಲ್ಲಿ ತೀವ್ರ ಸ್ವರೂಪದ ಜನಾಂಗೀಯ ನಿಂದನೆಗಳು ಮತ್ತು ದ್ವೇಷದ ಮಾತುಗಳು ಹರಿದಾಡಿವೆ.

ಏರ್ ಇಂಡಿಯಾದಲ್ಲಿ ಎಸ್‌ಐಎ ಹೂಡಿಕೆ ಮತ್ತು ನಿಧಿ ಸಂಗ್ರಹಣೆಯ ಕುರಿತು ಆನ್‌ಲೈನ್‌ನಲ್ಲಿ ತೀವ್ರ ಚರ್ಚೆ ನಡೆದಿತ್ತು. ಈ ಸಂದರ್ಭದಲ್ಲಿ ಎಸ್‌ಐಎದಲ್ಲಿ ಹೆಚ್ಚಿನ ಪಾಲು ಬಂಡವಾಳವನ್ನು ಹೊಂದಿರುವ ಟೆಮಾಸೆಕ್‌ನ ಸಿಇಒ ದಿಲ್ಹಾನ್ ಪಿಳ್ಳೈ ಅವರ ಜನಾಂಗೀಯ ಹಿನ್ನೆಲೆಯನ್ನು ಗುರಿಯಾಗಿಸಿ ಕೆಲವರು ನಿಂದನೆ ಮಾಡಿದ್ದು, ಇದು ಸುಳ್ಳು ಮತ್ತು ಜನಾಂಗೀಯ ನಿಂದನೆಯಾಗಿದೆ ಎಂದು ಸಚಿವರು ಖಂಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಕಮೆಂಟ್‌ಗಳನ್ನು ಪ್ರಸಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಡಿಜಿಟಲ್ ಅಭಿವೃದ್ಧಿ ಮತ್ತು ಮಾಹಿತಿ ಸಚಿವಾಲಯವು ಆಯಾ ಪ್ಲ್ಯಾಟ್‌ಫಾರ್ಮಗಳಿಗೆ ಸೂಚನೆ ನೀಡಿದೆ ಹಾಗೂ ಸಿಎನ್‌ಎ ಮಾಧ್ಯಮವು ಆಕ್ರಮಣಕಾರಿ ಕಮೆಂಟ್‌ಗಳನ್ನು ನಿರ್ಬಂಧಿಸಿದೆ.

60 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಸಿಂಗಾಪುರದಲ್ಲಿ ಚೀನಿಯರು ಸುಮಾರು ಶೇ.75ರಷ್ಟಿದ್ದು, ಮಲಯಗಳು ಸುಮಾರು ಶೇ.15ರಷ್ಟು ಮತ್ತು ಭಾರತೀಯರು ಸುಮಾರು ಶೇ.9ರಷ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor