Gurugram | ಆಕ್ಷೇಪದ ಹೊರತಾಗಿಯೂ ಸೇವಾ ಶುಲ್ಕ ವಸೂಲಿ: ದಂಡ ಸಹಿತ ಮಹಿಳೆಗೆ 31,401 ರೂ. ಪಾವತಿಸುವಂತೆ ರೆಸ್ಟೋರೆಂಟ್ ಗೆ ಆದೇಶ
4,811 ರೂ. ಬಿಲ್ ನಲ್ಲಿ 401 ರೂ. ಸೇವಾ ಶುಲ್ಕ ಸೇರಿಸಿದ್ದ ರೆಸ್ಟೋರೆಂಟ್!
ಸಾಂದರ್ಭಿಕ ಚಿತ್ರ | Photo Credit : magnific
ಗುರುಗ್ರಾಮ್: ಗ್ರಾಹಕರ ಆಕ್ಷೇಪದ ಹೊರತಾಗಿಯೂ ಬಿಲ್ ಗೆ ಶೇ. 10ರಷ್ಟು ಸೇವಾ ಶುಲ್ಕ ಸೇರಿಸಿ ವಸೂಲಿ ಮಾಡಿದ ರೆಸ್ಟೋರೆಂಟ್ ಗೆ 31,401 ರೂ. ಪಾವತಿಸುವಂತೆ ಗುರುಗ್ರಾಮ್ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಸೇವಾ ಶುಲ್ಕವಾಗಿ ವಸೂಲಿ ಮಾಡಿದ್ದ 401 ರೂ. ಮರುಪಾವತಿ ಮಾಡುವುದರ ಜತೆಗೆ, ಮಾನಸಿಕ ಕಿರುಕುಳ ಪರಿಹಾರವಾಗಿ 20 ಸಾವಿರ ರೂ. ಹಾಗೂ ಕಾನೂನು ಹೋರಾಟದ ವೆಚ್ಚವಾಗಿ 11 ಸಾವಿರ ರೂ. ಪಾವತಿಸುವಂತೆ ಆಯೋಗ ಸೂಚಿಸಿದೆ.
2026ರ ಮೇ 16ರಂದು ಮಹಿಳೆಯೊಬ್ಬರು ಸ್ನೇಹಿತರೊಂದಿಗೆ ಗುರುಗ್ರಾಮದ ರೆಸ್ಟೋರೆಂಟ್ ಗೆ ಭೋಜನಕ್ಕೆ ತೆರಳಿದ್ದರು. ಈ ವೇಳೆ ಬಿಲ್ ಗೆ ಶೇ. 10ರಷ್ಟು ಸೇವಾ ಶುಲ್ಕದ ರೂಪದಲ್ಲಿ 401 ರೂ. ಸೇರಿಸಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಹಿಳೆ, ಶುಲ್ಕವನ್ನು ತೆಗೆದುಹಾಕುವಂತೆ ರೆಸ್ಟೋರೆಂಟ್ ಗೆ ಮನವಿ ಮಾಡಿದ್ದರು. ಆದರೆ, ಶುಲ್ಕ ತೆಗೆದುಹಾಕಲು ಸಂಸ್ಥೆ ನಿರಾಕರಿಸಿತ್ತು. ಹೀಗಾಗಿ, ವಿವಾದಿತ ಸೇವಾ ಶುಲ್ಕವೂ ಸೇರಿದಂತೆ ಒಟ್ಟು 4,811 ರೂ. ಪಾವತಿಸುವುದು ಮಹಿಳೆಗೆ ಅನಿವಾರ್ಯವಾಗಿತ್ತು.
ಇದರಿಂದ ಅಸಮಾಧಾನಗೊಂಡ ಮಹಿಳೆ ಗ್ರಾಹಕ ಆಯೋಗದ ಮೊರೆ ಹೋಗಿದ್ದರು. ಸೇವಾ ಶುಲ್ಕಕ್ಕೆ ಸಂಬಂಧಿಸಿದಂತೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಹೊರಡಿಸಿರುವ ಮಾರ್ಗಸೂಚಿಗಳನ್ನು ರೆಸ್ಟೋರೆಂಟ್ ಉಲ್ಲಂಘಿಸಿದೆ ಎಂದು ದೂರಿದ್ದರು. ತನ್ನ ವಾದ ಮಂಡಿಸಲು ಅವಕಾಶ ನೀಡಿದ್ದರೂ ರೆಸ್ಟೋರೆಂಟ್ ಆಯೋಗದ ಮುಂದೆ ಹಾಜರಾಗಿರಲಿಲ್ಲ. ಹೀಗಾಗಿ, ಆಯೋಗ ಏಕಪಕ್ಷೀಯವಾಗಿ ವಿಚಾರಣೆ ನಡೆಸಿತು.
2022ರ ಜುಲೈ 4ರಂದು CCPA ಹೊರಡಿಸಿರುವ ಮಾರ್ಗಸೂಚಿಗಳನ್ನು ಆದೇಶದಲ್ಲಿ ಉಲ್ಲೇಖಿಸಿರುವ ಆಯೋಗ, ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳು ಗ್ರಾಹಕರ ಬಿಲ್ ಗೆ ಅದಾಗಿಯೇ ಸೇವಾ ಶುಲ್ಕ ಸೇರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಪೂರ್ವನಿಯೋಜಿತವಾಗಿ ಅಥವಾ ಬೇರೆ ಯಾವುದೇ ಹೆಸರಿನಲ್ಲಿ ಇಂತಹ ಶುಲ್ಕವನ್ನು ವಸೂಲಿ ಮಾಡುವಂತಿಲ್ಲ. ಸೇವಾ ಶುಲ್ಕ ಪಾವತಿಸುವುದು ಗ್ರಾಹಕರ ಸ್ವಯಂ ನಿರ್ಧಾರಕ್ಕೆ ಬಿಟ್ಟ ವಿಚಾರ. ಅದನ್ನು ಪಾವತಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಸಂಪೂರ್ಣ ಸ್ವಾತಂತ್ರ್ಯ ಗ್ರಾಹಕರಿಗಿದೆ ಎಂದು ಮಾರ್ಗಸೂಚಿಗಳು ತಿಳಿಸುತ್ತವೆ.
ಮಹಿಳೆ ಆಕ್ಷೇಪ ವ್ಯಕ್ತಪಡಿಸಿದರೂ ಸೇವಾ ಶುಲ್ಕ ತೆಗೆದುಹಾಕಲು ನಿರಾಕರಿಸುವ ಮೂಲಕ ರೆಸ್ಟೋರೆಂಟ್ ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ಆಯೋಗ ಹೇಳಿದೆ. ಸಂಸ್ಥೆಯು ಸೇವೆಯಲ್ಲಿ ಕೊರತೆ ಎಸಗಿರುವುದರ ಜತೆಗೆ ಕಾನೂನು ಬಾಹಿರ ವ್ಯಾಪಾರ ಪದ್ಧತಿಯನ್ನೂ ಅನುಸರಿಸಿದೆ ಎಂದು ಅಭಿಪ್ರಾಯಪಟ್ಟಿದೆ. ರೆಸ್ಟೋರೆಂಟ್ ನ ಕ್ರಮವು CCPA ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಸೇವಾ ಶುಲ್ಕದ ಹೆಸರಿನಲ್ಲಿ ವಸೂಲಿ ಮಾಡಿದ್ದ 401 ರೂ.ಗಳನ್ನು ಮಹಿಳೆಗೆ ಹಿಂದಿರುಗಿಸುವಂತೆ ಆದೇಶಿಸಿರುವ ಆಯೋಗ, ಮಾನಸಿಕ ಕಿರುಕುಳ ಮತ್ತು ಆರ್ಥಿಕ ನಷ್ಟಕ್ಕೆ ಪರಿಹಾರವಾಗಿ 20 ಸಾವಿರ ರೂ. ಹಾಗೂ ಕಾನೂನು ಹೋರಾಟದ ವೆಚ್ಚಕ್ಕಾಗಿ 11 ಸಾವಿರ ರೂ. ಪಾವತಿಸುವಂತೆ ಸೂಚಿಸಿದೆ. ಹೀಗಾಗಿ, ಮರುಪಾವತಿ ಮೊತ್ತವನ್ನೂ ಸೇರಿಸಿ ರೆಸ್ಟೋರೆಂಟ್ ಒಟ್ಟು 31,401 ರೂ. ಪಾವತಿಸಬೇಕಾಗಿದೆ.