×
Ad

ಪರಮಾಣು ತಾಣಗಳ ಪರಿಶೀಲನೆಗೆ ‘ಐಎಇಎ’ಗೆ ಅನುಮತಿ ಇಲ್ಲ: ಇರಾನ್

Update: 2026-06-23 22:06 IST

Photo Credit : IAEA

ಟೆಹರಾನ್, ಜೂ.23: ಕಳೆದ ವರ್ಷ ಇಸ್ರೇಲ್ ಮತ್ತು ಅಮೆರಿಕದೊಂದಿಗಿನ ಯುದ್ಧದ ಸಮಯದಲ್ಲಿ ಬಾಂಬ್ ದಾಳಿಗೊಳಗಾಗಿದ್ದ ದೇಶದ ಪ್ರಮುಖ ಪರಮಾಣು ತಾಣಗಳನ್ನು ವೀಕ್ಷಿಸಲು ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆಯ (ಐಎಇಎ) ಇನ್‌ಸ್ಪೆಕ್ಟರ್‌ಗಳಿಗೆ ಪ್ರವೇಶ ನೀಡುವುದಿಲ್ಲ ಎಂದು ಇರಾನ್ ಮಂಗಳವಾರ ತಿಳಿಸಿದೆ.

‘ನಾವು ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ ಮಹಾನಿರ್ದೇಶಕರೊಂದಿಗೆ ಯಾವುದೇ ಸಭೆ ನಡೆಸಿಲ್ಲ ಅಥವಾ ಅಮೆರಿಕ ಮತ್ತು ಇಸ್ರೇಲ್‌ನ ಮಿಲಿಟರಿ ಆಕ್ರಮಣದಿಂದ ಹಾನಿಗೊಳಗಾದ ಇರಾನ್‌ನ ಪರಮಾಣು ಸೌಲಭ್ಯಗಳನ್ನು ಐಎಇಎ ಪರಿಶೀಲಿಸಲು ಯಾವುದೇ ಯೋಜನೆಗಳನ್ನು ಹೊಂದಿಲ್ಲ.

ವಿಶ್ವಸಂಸ್ಥೆಯ ತನಿಖಾಧಿಕಾರಿಗಳೊಂದಿಗಿನ ಯಾವುದೇ ಮಾತುಕತೆಗಳು ಸಂಸತ್ತು ಮತ್ತು ಉನ್ನತ ರಾಷ್ಟ್ರೀಯ ಭದ್ರತಾ ಮಂಡಳಿ ನಿಗದಿಪಡಿಸಿದ ಪ್ರಸ್ತುತ ಕಾರ್ಯವಿಧಾನಗಳ ಅಡಿಯಲ್ಲಿಯೇ ನಡೆಯುತ್ತವೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೈ ಹೇಳಿದ್ದಾರೆ.

ಸೋಮವಾರ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು, ಇರಾನ್ ವಿಶ್ವಸಂಸ್ಥೆಯ ಪರಮಾಣು ಇನ್‌ಸ್ಪೆಕ್ಟರ್‌ಗಳಿಗೆ ಮರಳಲು ಅನುಮತಿ ನೀಡಲಿದೆ. ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (ಐಎಇಎ)ಯೊಂದಿಗಿನ ಚರ್ಚೆಗಳು ತಕ್ಷಣದಿಂದಲೇ ಪ್ರಾರಂಭವಾಗಬಹುದು ಎಂದು ಹೇಳಿದ್ದರು ಮತ್ತು ಇದನ್ನು ಒಂದು ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಿದ್ದರು. ಕಳೆದ ವರ್ಷದ ಇಸ್ರೇಲ್–ಇರಾನ್ 12 ದಿನಗಳ ಯುದ್ಧದ ಸಂದರ್ಭ ಅಮೆರಿಕದ ಬಾಂಬ್ ದಾಳಿಗೊಳಗಾದ ಪರಮಾಣು ತಾಣಗಳಿಗೆ ಪ್ರವೇಶಿಸಲು ಅದಕ್ಕೆ ಅನುಮತಿ ಸಿಕ್ಕಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News