ಪರಮಾಣು ತಪಾಸಣೆಗೆ ಇರಾನ್ ಒಪ್ಪಿಗೆ: ಟ್ರಂಪ್
ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಜೂ.23: ‘ಇರಾನ್ ಭವಿಷ್ಯದಲ್ಲಿ ದೀರ್ಘಕಾಲದವರೆಗೆ ಅತ್ಯುನ್ನತ ಮಟ್ಟದ ಪರಮಾಣು ತಪಾಸಣೆಗಳಿಗೆ ಸಂಪೂರ್ಣವಾಗಿ ಒಪ್ಪಿಕೊಂಡಿದೆ. ಇದು ಪರಮಾಣು ಪ್ರಾಮಾಣಿಕತೆಯನ್ನು ಖಚಿತಪಡಿಸುತ್ತದೆ. ಒಂದು ವೇಳೆ ಅವರು ಇದಕ್ಕೆ ಒಪ್ಪದಿದ್ದರೆ ಮುಂದೆ ಯಾವುದೇ ಮಾತುಕತೆಗಳು ನಡೆಯುತ್ತಿರಲಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ.
ಆದರೆ, ಇದನ್ನು ಇರಾನ್ ನಿರಾಕರಿಸಿದೆ.
‘ಇರಾನ್ ಬಂದರುಗಳ ಮೇಲಿನ ದಿಗ್ಬಂಧನವನ್ನು ಮರುಜಾರಿಗೊಳಿಸುವುದು ಅಗತ್ಯವೆನಿಸಿದರೆ ಬಳಸಲು ಅಮೆರಿಕ ತನ್ನ ಹಡಗುಗಳನ್ನು ಹಾರ್ಮುಝ್ ಜಲಸಂಧಿಯಲ್ಲಿಯೇ ಉಳಿಸಲಿದೆ. ಆದರೆ ಈ ಹಂತದಲ್ಲಿ ಇದು ನಡೆಯುವುದು ತೀರಾ ಅಸಂಭವ’ ಎಂದು ಟ್ರಂಪ್ ಹೇಳಿದ್ದಾರೆ. ಸೋಮವಾರ ಹಾರ್ಮುಝ್ ಜಲಸಂಧಿಯ ಮೂಲಕ 1.9 ಕೋಟಿ ಬ್ಯಾರೆಲ್ ತೈಲ ಹೊರಹೋಗಿದೆ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಅಮೆರಿಕವು ಸೋಮವಾರದಿಂದ 60 ದಿನಗಳ ಕಾಲ ಇರಾನ್ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ‘ಅಮೆರಿಕದ ಖಜಾನೆಯು ಬಿಡುಗಡೆ ಮಾಡುತ್ತಿರುವ ಹಣವನ್ನು ಅಮೆರಿಕದ ನಿಯಂತ್ರಣದಲ್ಲಿರುವ ‘ಎಸ್ಕ್ರೊ ಖಾತೆ’ಯಲ್ಲಿ ಇಡಲಾಗುವುದು ಮತ್ತು ಅದನ್ನು ಇರಾನ್‌ಗೆ ಅತ್ಯಂತ ತುರ್ತು ಅಗತ್ಯವಿರುವ ಜೋಳ, ಗೋಧಿ ಹಾಗೂ ಸೋಯಾಬೀನ್ ಸೇರಿದಂತೆ ಕೇವಲ ಅಮೆರಿಕದಿಂದಲೇ ಆಹಾರ ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಖರೀದಿಸಲು ಬಳಸಲಾಗುವುದು’ ಎಂದು ಟ್ರಂಪ್ ಹೇಳಿದ್ದಾರೆ.
ಎಸ್ಕ್ರೊ ಖಾತೆಯು ತಾತ್ಕಾಲಿಕ ಹಣಕಾಸಿನ ವ್ಯವಸ್ಥೆಯಾಗಿದ್ದು, ಇದರಲ್ಲಿ ವಹಿವಾಟು ನಡೆಸುವ ಎರಡು ಪಕ್ಷಗಳ ಪರವಾಗಿ ನಿಧಿಗಳು ಅಥವಾ ಆಸ್ತಿಗಳನ್ನು ತಟಸ್ಥ ಮೂರನೇ ವ್ಯಕ್ತಿಯ ಖಾತೆಯಲ್ಲಿ ಇರಿಸಲಾಗುತ್ತದೆ.