ಇಂಡಿಯನ್ ಓವರ್ಸೀಸ್ ಕಾಂಗ್ರೆಸ್, ಅಟ್ಲಾಂಟ ಚಾಪ್ಟರ್ ಉದ್ಘಾಟನೆ
ಅಟ್ಲಾಂಟ: ಇಂಡಿಯನ್ ಓವರ್ಸೀಸ್ ಕಾಂಗ್ರೆಸ್, ಅಮೆರಿಕದ ಅಟ್ಲಾಂಟ ನಗರದ ಶಾಖೆಯನ್ನು ಆ.29ರಂದು ಪ್ರಾರಂಭಿಸಿತು.
ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಅಮೆರಿಕದ ಅಧ್ಯಕ್ಷರಾದ ಮೊಹಿಂದರ್ ಸಿಂಗ್ ಗಿಲ್ಜಿಯನ್ ಅವರು ಅಟ್ಲಾಂಟ ಚಾಪ್ಟರನ್ನು ಉದ್ಘಾಟಿಸಿ, ಮಾತನಾಡಿ ಅನಿವಾಸಿಗಳು ನಮ್ಮ ಮಾತೃಭೂಮಿ ಭಾರತಕ್ಕೆ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯಗಳ ಕ್ಷೇತ್ರಗಳಲ್ಲಿ ಕೊಡುಗೆ ನೀಡುವುದರ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಪೂರೈಸಬೇಕೆಂದು ತಿಳಿಸಿದರು.
ಭಾರತದಲ್ಲಿ ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತ ಮನೋಭಾವನೆಗಳು ಶಕ್ತಿಯುತವಾಗಿ ಬೇರೂರಿಸಲು ಕಾಂಗ್ರೆಸ್ ಪಕ್ಷ ತೆಗೆದುಕೊಂಡ ನಿರ್ಧಾರಗಳನ್ನು ಅವರು ವಿವರಿಸಿದರು.
ಅಂತರ್ಜಾಲದ ಝೂಮ್ ಮುಖೇನ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಚೇರ್ಮನ್ ಸ್ಯಾಮ್ ಪಿತ್ರೋಡ ಅವರು, ಭಾರತದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ಮತ್ತು ಈ ಹೋರಾಟದಲ್ಲಿ ಅನಿವಾಸಿಗಳಾಗಿ ನಂತರ ಭಾರತಕ್ಕೆ ಮರಳಿದವರ ಪಾತ್ರವನ್ನು ಸ್ಮರಿಸಿದರು.
ದಕ್ಷಿಣ ಅಮೆರಿಕದಿಂದ ಮರಳಿ ಬಂದ ಮಹಾತ್ಮ ಗಾಂಧಿ, ಇಂಗ್ಲೆಂಡ್ ದೇಶದ ವಿದ್ಯಾಭ್ಯಾಸದಿಂದ ಮರಳಿ ಬಂದ ಪಂಡಿತ್ ನೆಹರೂ, ಸುಭಾಷ್ ಚಂದ್ರ ಬೋಸ್, ವಲ್ಲಭಾಯಿ ಪಟೇಲ್, ಬಿ. ಆರ್. ಅಂಬೇಡ್ಕರ್ ಇವರೆಲ್ಲರ ಪ್ರಮುಖ ಹೋರಾಟ ಹಾಗೂ ತ್ಯಾಗದಿಂದ ಭಾರತವು ಸ್ವಾತಂತ್ರ್ಯ ಪಡೆಯಲು ಸಾಧ್ಯವಾಯಿತೆಂದು ತಿಳಿಸಿದರು.
ಭಾರತದ ಪ್ರಜಾಪ್ರಭುತ್ವ, ಭ್ರಾತೃತ್ವ ಮತ್ತು ಜಾತ್ಯಾತೀತಗೆ ಧಕ್ಕೆ ಕಂಡಾಗಲೆಲ್ಲ ಅನಿವಾಸಿ ಭಾರತೀಯರು ಒಕ್ಕೊರಲಿನಿಂದ ವಿರೋಧಿಸಬೇಕೆಂದು ಕರೆ ನೀಡಿದರು.
ಇಂದು ಭಾರತದಲ್ಲಿ Gen Zಗಳು ವಿಧ್ಯಾಭ್ಯಾಸ ಮತ್ತು ನಿರುದ್ಯೋಗ ಸಮಸ್ಯೆಯ ಬಗ್ಗೆ ಹೋರಾಟ ಮಾಡುತ್ತಿರುವಾಗ ಕಾಂಗ್ರೆಸ್ ಪಕ್ಷ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಬೃಹತ್ ಆಂದೋಲನವನ್ನು ಕೈಗೆತ್ತಿಕೊಂಡಿದೆಯೆಂದು ವಿವರಿಸಿದರು.
ಭಾರತದ ಯುವಜನಾಂಗದ ಈ ನ್ಯಾಯಯುತ ಹೋರಾಟಕ್ಕೆ ಅನಿವಾಸಿ ಭಾರತೀಯರು ಬೆಂಬಲಿಸಬೇಕೆಂದು ಕರೆಕೊಟ್ಟರು.
ಅಟ್ಲಾಂಟ ಚಾಪ್ಟರ್ ಅಧ್ಯಕ್ಷರಾಗಿ ಅನಿಲ್ ಬೊಡ್ಡಿರೆಡ್ಡಿ ಅವರನ್ನು ಆಯ್ಕೆ ಮಾಡಲಾಯಿತು. ಅಮೆರಿಕದ ದಕ್ಷಿಣ ಭಾಗದಲ್ಲಿರುವ ಅಟ್ಲಾಂಟ ನಗರವು ಉದ್ಯಮ ಹಾಗೂ ಪ್ರವಾಸಿ ಕ್ಷೇತ್ರವಾಗಿ ಬೆಳೆಯುತ್ತಿದ್ದು ಹೆಚ್ಚಿನ ಸಂಖ್ಯೆಯ ಅನಿವಾಸಿ ಭಾರತೀಯರು ಇಲ್ಲಿ ನೆಲೆಸಿದ್ದಾರೆ. ಸ್ವಾತಂತ್ರ್ಯ ಹೋರಾಟದಿಂದ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷವು ಭಾರತಕ್ಕೆ ನೀಡಿರುವ ಕೊಡುಗೆಯನ್ನು ಅನಿವಾಸಿ ಭಾರತೀಯರಿಗೆ ಮನದಟ್ಟುಪಡಿಸಿ ಅಟ್ಲಾಂಟದಲ್ಲಿ ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಬಲಪಡಿಸುವುದಾಗಿ ಅನಿಲ್ ಬೊಡ್ಡಿರೆಡ್ಡಿ ತಿಳಿಸಿದರು.