ಹಾರ್ಮುಝ್ ನಲ್ಲಿ ಹೊಸ ನಿಯಮ ರೂಪಿಸಿದ ಇರಾನ್: ವರದಿ
ಸಾಂದರ್ಭಿಕ ಚಿತ್ರ | Photo Credit : AP , PTI
ಟೆಹರಾನ್, ಮೇ 9ಹಾರ್ಮುಝ್ ಜಲಸಂಧಿಯ ಮೂಲಕ ಸಾಗಲು ಬಯಸುವ ಹಡಗುಗಳಿಗೆ ಇರಾನ್ ಹೊಸ ನಿಯಮಗಳನ್ನು ರೂಪಿಸಿದೆ. ಹೊಸ ನಿಯಮಗಳನ್ನು ಅನುಸರಿಸದಿದ್ದರೆ ದಾಳಿಯ ಅಪಾಯ ಎದುರಿಸಲು ಸಿದ್ಧರಾಗಿರಬೇಕು ಎಂದು ಸಾಗಣೆದಾರರಿಗೆ ಎಚ್ಚರಿಕೆ ನೀಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ.
ಹೊಸ ವ್ಯವಸ್ಥೆಯಡಿ, ಹಾರ್ಮುಜ್ ಮೂಲಕ ಹಾದುಹೋಗಲು ಉದ್ದೇಶಿಸಿರುವ ಎಲ್ಲಾ ಹಡಗುಗಳೂ ಹೊಸದಾಗಿ ರೂಪುಗೊಂಡ ‘ಪರ್ಷಿಯನ್ ಗಲ್ಫ್ ಸ್ಟ್ರೈಟ್ ಅಥಾರಿಟಿ (ಪಿಜಿಎಸ್‌ಎ)’ಗೆ ಲಿಂಕ್ ಮಾಡಲಾದ ವಿಳಾಸದಿಂದ ಇ-ಮೇಲ್‌ಗಳನ್ನು ಸ್ವೀಕರಿಸಲಿದ್ದು, ಇದರಲ್ಲಿ ಹೊಸ ನಿಯಮ ಮತ್ತು ನಿಬಂಧನೆಗಳ ಮಾಹಿತಿ ಇರುತ್ತದೆ.
ಜಗತ್ತಿನ ಅತ್ಯಂತ ಪ್ರಮುಖ ತೈಲ ಸಾಗಾಟ ಜಲಮಾರ್ಗವನ್ನು ದಾಟುವ ಮೊದಲು ಸಾರಿಗೆ ಪರವಾನಗಿ (ಪರ್ಮಿಟ್) ಪಡೆಯಬೇಕು. ಪರ್ಮಿಟ್ ಪಡೆಯಲು ‘ಹಡಗಿನ ಮಾಹಿತಿ ಘೋಷಣೆ’ ಎಂಬ ಅರ್ಜಿಯನ್ನು ಭರ್ತಿ ಮಾಡಬೇಕು. ಇದರಲ್ಲಿ ಹಡಗಿನ ನೋಂದಾಯಿತ ಮಾಲಕರು, ನಿರ್ವಾಹಕರು, ಸಿಬ್ಬಂದಿ ಹಾಗೂ ಹಡಗಿನಲ್ಲಿರುವ ಸರಕುಗಳ ವಿವರ ಸೇರಿದಂತೆ ಸುಮಾರು 40 ಪ್ರಶ್ನೆಗಳಿಗೆ ಉತ್ತರಿಸಬೇಕು. ಈ ಮಾಹಿತಿಯನ್ನು ಪಿಜಿಎಸ್‌ಎಗೆ ಇ-ಮೇಲ್ ಮಾಡಬೇಕು ಎಂದು ವರದಿ ಹೇಳಿದೆ.