ಕ್ಷಿಪಣಿ ಕಾರ್ಯಕ್ರಮ ಮಾತುಕತೆಯ ಭಾಗವಾಗಿಲ್ಲ: ಇರಾನ್ ಸ್ಪಷ್ಟನೆ
ಟೆಹರಾನ್, ಜೂ.18: ಯುದ್ಧವನ್ನು ಕೊನೆಗೊಳಿಸಲು ಉಭಯ ದೇಶಗಳು ಚೌಕಟ್ಟಿನ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಮುಂಬರುವ ಅಮೆರಿಕದೊಂದಿಗಿನ ಯಾವುದೇ ಮಾತುಕತೆಗಳಲ್ಲಿ ತನ್ನ ಕ್ಷಿಪಣಿ ಕಾರ್ಯಕ್ರಮವು ಭಾಗವಾಗುವುದಿಲ್ಲ ಎಂದು ಇರಾನ್ ಗುರುವಾರ ತಿಳಿಸಿದೆ.
ಯುದ್ಧವನ್ನು ಕೊನೆಗೊಳಿಸುವ ತಿಳುವಳಿಕಾ ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಸಹಿ ಹಾಕಿದ್ದಾರೆ. ಇರಾನ್‍ನ ಕ್ಷಿಪಣಿ ಕಾರ್ಯಕ್ರಮದ ಬಗ್ಗೆ ಈ ಒಪ್ಪಂದದಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ. `ನಮ್ಮ ಕ್ಷಿಪಣಿಗಳ ಬಗ್ಗೆ ಬೇರೆ ಯಾರಾದರೂ ಮಾತನಾಡುವುದು ಅವುಗಳಿಗೆ (ಕ್ಷಿಪಣಿಗಳಿಗೆ) ಸ್ವಲ್ಪವೂ ಇಷ್ಟವಿಲ್ಲ. ಇರಾನ್‍ನ ಕ್ಷಿಪಣಿಗಳು ಕೇವಲ ಉಡಾವಣೆಗಾಗಿಯೇ ಹೊರತು, ಮಾತುಕತೆಗಳಿಗಾಗಿ ಅಲ್ಲ. ಇರಾನ್‍ನ ರಕ್ಷಣಾ ಸಾಮರ್ಥ್ಯದ ಕುರಿತು ಯಾವುದೇ ರೀತಿಯಲ್ಲಿ, ಯಾವುದೇ ಪ್ರಕ್ರಿಯೆಯಲ್ಲಿ ಅಥವಾ ಯಾವುದೇ ದೇಶದೊಂದಿಗೆ ಚರ್ಚೆ ನಡೆಸಲಾಗುವುದಿಲ್ಲ' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಖೇಯ್‍ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಇರಾನ್‍ನ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಕುರಿತು ಟ್ರಂಪ್ `ಯು ಟರ್ನ್'
ಐತಿಹಾಸಿಕ ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಪ್ರಾಂತ್ಯದ ಇತರ ರಾಷ್ಟ್ರಗಳು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಂದಿರುವಾಗ ಇರಾನ್‍ಗೆ ಮಾತ್ರ ಅವುಗಳನ್ನು ನಿರಾಕರಿಸುವುದು ಅನ್ಯಾಯವಾಗುತ್ತದೆ ಎಂದು ಹೇಳಿದ್ದಾರೆ.
ಇತರ ದೇಶಗಳು ಅವುಗಳನ್ನು ಹೊಂದಿರುವಾಗ, ಇರಾನ್ ಮಾತ್ರ ಹೊಂದಿರಬಾರದು ಎನ್ನುವುದು ಸ್ವಲ್ಪ ಅನ್ಯಾಯವಾಗುತ್ತದೆ.
ಈ ಮೌಲ್ಯಮಾಪನವನ್ನು ಪ್ರಾದೇಶಿಕ ಸಂದರ್ಭಕ್ಕೆ ಅನುಗುಣವಾಗಿ ಅನ್ವಯಿಸಬೇಕು. ಸೌದಿ ಅರೇಬಿಯಾ, ಖತರ್ ಇವೆಲ್ಲವೂ ಅವುಗಳನ್ನು ಹೊಂದಿದ್ದರೆ ಅದಕ್ಕೆ ತಕ್ಕ ಅನುಪಾತದಲ್ಲಿ ಇರಾನ್ ಕೂಡ ಹೊಂದುವುದು ಸರಿಯಾಗಿದೆ ಎಂದು ನಾನು ಹೇಳುತ್ತೇನೆ' ಎಂದು ಟ್ರಂಪ್ ಹೇಳಿದ್ದು ಒಪ್ಪಂದದ ನಂತರವೂ ಅಮೆರಿಕದ ಸೇನೆಯು ಗಲ್ಫ್ ಪ್ರದೇಶದಲ್ಲಿ ಇನ್ನೊಂದಿಷ್ಟು ದಿನಗಳ ಕಾಲ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.