Iran | ಆಯತೊಲ್ಲಾ ಅಲಿ ಖಾಮಿನೈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಮುಖವಾಡಧಾರಿ ಯಾರು?
ರಹಸ್ಯ ಬಯಲು ಮಾಡಿದ ಇರಾನ್ ಮಾಧ್ಯಮಗಳು
Photo Credit : ndtv
ಟೆಹ್ರಾನ್: ಇರಾನ್ ನ ದಿವಂಗತ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ಅಂತ್ಯಕ್ರಿಯೆಯಲ್ಲಿ ಕಪ್ಪು ಮುಖವಾಡ ಧರಿಸಿ ಕಾಣಿಸಿಕೊಂಡಿದ್ದ ನಿಗೂಢ ವ್ಯಕ್ತಿಯ ಗುರುತು ಕೊನೆಗೂ ಬಹಿರಂಗವಾಗಿದೆ. ಅಂತ್ಯಕ್ರಿಯೆಯ ಪ್ರಾರ್ಥನೆ ವೇಳೆ ಮುಂಚೂಣಿ ಸಾಲಿನಲ್ಲಿ ಕಪ್ಪು ಮುಖವಾಡ ಹಾಗೂ ಕಪ್ಪು ಬೇಸ್ಬಾಲ್ ಕ್ಯಾಪ್ ಧರಿಸಿ ಕುಳಿತಿದ್ದ ವ್ಯಕ್ತಿ ಯಾರು ಎಂಬ ಕುರಿತು ಹಲವು ಊಹಾಪೋಹಗಳು ಕೇಳಿ ಬಂದಿದ್ದವು. ಈಗ ಇರಾನ್ ಇಂಟರ್ನ್ಯಾಷನಲ್ ಪ್ರಕಟಿಸಿರುವ ವರದಿಯಲ್ಲಿ, ಅವರು ಅಲಿ ಖಾಮಿನೈ ಅವರ ಹಿರಿಯ ಮೊಮ್ಮಗ ಮೊಹಮ್ಮದ್ ಜಾವದ್ ಖಾಮಿನೈ ಎಂದು ಗುರುತಿಸಲಾಗಿದೆ.
ಈ ವರ್ಷದ ಆರಂಭದಲ್ಲಿ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲಿ ಖಾಮಿನೈ ಮೃತಪಟ್ಟಿದ್ದರು. ಬಳಿಕ ನಡೆದ ಅಂತ್ಯಕ್ರಿಯೆಯ ಪ್ರಾರ್ಥನೆಯಲ್ಲಿ ಮುಂಚೂಣಿ ಸಾಲಿನಲ್ಲಿ ಕುಳಿತಿದ್ದ ಕಪ್ಪು ಮುಖವಾಡಧಾರಿಯ ಚಿತ್ರಗಳು ವ್ಯಾಪಕ ಚರ್ಚೆಗೆ ಕಾರಣವಾಗಿದ್ದವು. ಸರ್ವೋಚ್ಚ ನಾಯಕರ ಸಂಭಾವ್ಯ ಉತ್ತರಾಧಿಕಾರಿಯಾಗಿ ಪರಿಗಣಿಸಲಾಗುತ್ತಿದ್ದ ಪುತ್ರ ಮೊಜ್ತಬಾ ಖಾಮಿನೈ ಅವರೇ ಇರಬಹುದೆಂಬ ಊಹಾಪೋಹಗಳು ವ್ಯಾಪಕವಾಗಿ ಕೇಳಿ ಬಂದಿದ್ದವು.
ಆದರೆ, ಇರಾನ್ ಇಂಟರ್ನ್ಯಾಷನಲ್ ವರದಿ ಪ್ರಕಾರ, ಮುಖವಾಡ ಧರಿಸಿದ್ದವರು ಅಲಿ ಖಾಮಿನೈ ಅವರ ಹಿರಿಯ ಪುತ್ರ ಮುಸ್ತಫಾ ಖಾಮಿನೈ ಅವರ ಪುತ್ರ ಮೊಹಮ್ಮದ್ ಜಾವದ್ ಖಾಮಿನೈ. ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಅವರ ಮುಖಕ್ಕೆ ತೀವ್ರ ಸುಟ್ಟಗಾಯಗಳಾಗಿದ್ದು, ಇತರೆ ಗಂಭೀರ ಗಾಯಗಳೂ ಸಂಭವಿಸಿದ್ದವು. ಇದೇ ಕಾರಣದಿಂದ ಅವರು ಅಂತ್ಯಕ್ರಿಯೆಯಲ್ಲಿ ತಮ್ಮ ಮುಖವನ್ನು ಕಪ್ಪು ಮುಖವಾಡದಿಂದ ಮುಚ್ಚಿಕೊಂಡಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ಇನ್ನೊಂದೆಡೆ, ಮೊಜ್ತಬಾ ಖಾಮಿನೈ ಅವರ ಆರೋಗ್ಯ ಸ್ಥಿತಿಯನ್ನು ಕುರಿತ ಊಹಾಪೋಹಗಳು ಇನ್ನೂ ಮುಂದುವರಿದಿವೆ. ಅಮೆರಿಕದ ಗುಪ್ತಚರ ವರದಿಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಪೋಸ್ಟ್ ಪ್ರಕಟಿಸಿದ ವರದಿಯ ಪ್ರಕಾರ, ಮೊಜ್ತಬಾ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರ ಮುಖ ತೀವ್ರವಾಗಿ ವಿರೂಪಗೊಂಡಿದೆ ಎಂದು ಹೇಳಲಾಗಿದೆ.
ದಾಳಿ ನಡೆದ ವೇಳೆ ಮೊಜ್ತಬಾ ತಮ್ಮ ತಂದೆಯ ನಿವಾಸದಲ್ಲೇ ಇದ್ದರೂ, ಬೇರೆ ಕೋಣೆಯಲ್ಲಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದರು ಎಂದು ವರದಿಯಾಗಿದೆ. ಸೈಪ್ರಸ್ ನಲ್ಲಿರುವ ಇರಾನ್ ರಾಯಭಾರಿ ಅಲಿರೆಜಾ ಸಲಾರಿಯನ್ ಅವರ ಪ್ರಕಾರ, ಮೊಜ್ತಬಾ ಅವರ ಕಾಲು, ಕೈ ಹಾಗೂ ತೋಳಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ದಾಳಿಯ ಬಳಿಕ ಮೊಜ್ತಬಾ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಯಾವುದೇ ಸಾರ್ವಜನಿಕ ಭಾಷಣವನ್ನೂ ಮಾಡಿಲ್ಲ. ಆಸ್ಟ್ರೇಲಿಯಾದ ಮಾಧ್ಯಮ ವರದಿಗಳ ಪ್ರಕಾರ, ಅವರು ಇರಾನ್ ನ ಸೇನಾ ಕಮಾಂಡರ್ ಗಳು ಮತ್ತು ಹಿರಿಯ ಧರ್ಮಗುರುಗಳೊಂದಿಗೆ ಕೈಬರಹದ ಸಂದೇಶಗಳ ಮೂಲಕ ಸಂವಹನ ನಡೆಸುತ್ತಿದ್ದಾರೆ.
ಅಲಿ ಖಾಮಿನೈ ಅವರ ಅಂತ್ಯಸಂಸ್ಕಾರವನ್ನು ಇರಾನ್ ನಾದ್ಯಂತ ಆರು ದಿನಗಳ ಶೋಕಾಚರಣೆ ಬಳಿಕ ಗುರುವಾರ ನೆರವೇರಿಸಲಾಯಿತು. ಅಮೆರಿಕ ಮತ್ತು ಇಸ್ರೇಲ್ನೊಂದಿಗಿನ ಸಂಘರ್ಷದ ಹಿನ್ನೆಲೆಯಲ್ಲಿ ಭಾರಿ ಸಾರ್ವಜನಿಕ ಅಂತ್ಯಕ್ರಿಯೆ ನಡೆಸುವುದು ಅಪಾಯಕಾರಿಯಾಗಿದ್ದ ಕಾರಣ, ಅವರ ಮರಣದ ನಾಲ್ಕು ತಿಂಗಳಿಗೂ ಹೆಚ್ಚು ಸಮಯದ ಬಳಿಕ ಸಮಾಧಿ ಮಾಡಲಾಯಿತು ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಪಾರ್ಥಿವ ಶರೀರವನ್ನು ಕೋಲ್ಡ್ ಸ್ಟೋರೇಜ್ ನಲ್ಲಿ ಇರಿಸಲಾಗಿತ್ತು.
ರಾಷ್ಟ್ರೀಯ ಧ್ವಜದಿಂದ ಹೊದಿಸಲಾದ ಮೃತದೇಹವಿರುವ ಪೆಟ್ಟಿಗೆಯನ್ನು ಅವರ ತವರೂರು ಮಷಾದ್ ನಲ್ಲಿರುವ ಇಮಾಮ್ ರೆಜಾಗೆ ಕೊಂಡೊಯ್ಯಲಾಯಿತು. ಇರಾನ್ ನ ಸರ್ಕಾರಿ ಮಾಧ್ಯಮಗಳ ಪ್ರಕಾರ, ದೇಶದ ವಿವಿಧ ಭಾಗಗಳಲ್ಲಿ ನಡೆದ ಶೋಕಾಚರಣೆಗಳಲ್ಲಿ ಸುಮಾರು 4.3 ಕೋಟಿ ಜನರು ಭಾಗವಹಿಸಿದ್ದರು.