ಆರ್ಥಿಕ ದಿಗ್ಬಂಧನ ತಪ್ಪಿಸಲು ಕ್ರಿಪ್ಟೊಕರೆನ್ಸಿ ಮೊರೆ: ನೆತನ್ಯಾಹು ಪ್ರಸ್ತಾವಕ್ಕೆ ತಜ್ಞರ ವಿರೋಧ
ಬೆಂಜಮಿನ್ ನೆತನ್ಯಾಹು | Photo Credit : AP
ಟೆಲ್ ಅವೀವ್ (ಇಸ್ರೇಲ್): ಸಂಭವನೀಯ ಅಂತರರಾಷ್ಟ್ರೀಯ ಆರ್ಥಿಕ ದಿಗ್ಬಂಧನವನ್ನು ತಪ್ಪಿಸಿಕೊಳ್ಳಲು ಕ್ರಿಪ್ಟೊಕರೆನ್ಸಿ ಬಳಸುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪ್ರಸ್ತಾವಕ್ಕೆ ಆರ್ಥಿಕ ತಜ್ಞರು ಹಾಗೂ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಅಕ್ಟೋಬರ್ 27ರಂದು ನಡೆಯಲಿರುವ ಚುನಾವಣೆಯನ್ನು ಎದುರಿಸುತ್ತಿರುವ ನೆತನ್ಯಾಹು ಅವರ ಈ ಹೇಳಿಕೆ ದೇಶದಲ್ಲಿ ಚರ್ಚೆಗೆ ಕಾರಣವಾಗಿದೆ.
ಇಸ್ರೇಲ್ ನ ಚಾನೆಲ್ 10 ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನೆತನ್ಯಾಹು, ದೇಶದ ಮೇಲೆ ವ್ಯಾಪಕ ಆರ್ಥಿಕ ದಿಗ್ಬಂಧನ ವಿಧಿಸುವ ಸಾಧ್ಯತೆ ಇರುವುದರಿಂದ ಅದನ್ನು ಎದುರಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಇಸ್ರೇಲ್ ನ ವಸಾಹತು ನೀತಿಯನ್ನು ಗುರಿಯಾಗಿಸಿಕೊಂಡು ಬ್ರಿಟನ್, ಫ್ರಾನ್ಸ್ ಹಾಗೂ ಕೆನಡಾ ಸೇರಿದಂತೆ 12 ಪಾಶ್ಚಿಮಾತ್ಯ ದೇಶಗಳು ವೆಸ್ಟ್ ಬ್ಯಾಂಕ್ನಲ್ಲಿರುವ ಇಸ್ರೇಲಿ ವಸಾಹತುಗಳಿಂದ ಬರುವ ಸರಕುಗಳ ವ್ಯಾಪಾರದ ಮೇಲೆ ನಿರ್ಬಂಧಗಳನ್ನು ವಿಧಿಸುವ ಅಥವಾ ಅಂತಹ ಕ್ರಮಗಳನ್ನು ಕೈಗೊಳ್ಳುವ ಉದ್ದೇಶವನ್ನು ಸೆಪ್ಟೆಂಬರ್ ನಲ್ಲಿ ಪ್ರಕಟಿಸಿದ್ದವು. ಇಸ್ರೇಲ್ ತನ್ನ ಕೆಲವು ಸಾಂಪ್ರದಾಯಿಕ ಮಿತ್ರರಾಷ್ಟ್ರಗಳಿಂದ ರಾಜತಾಂತ್ರಿಕವಾಗಿ ಪ್ರತ್ಯೇಕಗೊಳ್ಳುತ್ತಿರುವುದರ ಸೂಚನೆಯಾಗಿ ಈ ಕ್ರಮಗಳನ್ನು ವಿಶ್ಲೇಷಿಸಲಾಗುತ್ತಿದೆ.
‘ಆರ್ಥಿಕ ದಿಗ್ಬಂಧನದ ಸಾಧ್ಯತೆ ಇದೆ. ಬ್ಯಾಂಕ್ ಗಳ ಮೇಲೆಯೂ ನಿರ್ಬಂಧ ಹೇರಬಹುದು. ಇಂತಹ ಸಂದರ್ಭದಲ್ಲಿ ಪರ್ಯಾಯ ಆರ್ಥಿಕ ವ್ಯವಸ್ಥೆಯನ್ನು ಸ್ಥಾಪಿಸುವುದು ಅಗತ್ಯ’ ಎಂದು ನೆತನ್ಯಾಹು ಹೇಳಿದ್ದಾರೆ.
‘ಆರ್ಥಿಕ ದಿಗ್ಬಂಧನಗಳನ್ನು ತಪ್ಪಿಸಿಕೊಳ್ಳಲು ನೆರವಾಗುವ ಕೆಲವು ಕರೆನ್ಸಿಗಳಿವೆ ಎಂಬುದು ನಿಮಗೆ ತಿಳಿದಿದೆ. ನಾವು ಆ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದೂ ಅವರು ತಿಳಿಸಿದ್ದಾರೆ.
‘ನೀವು ಕ್ರಿಪ್ಟೊಕರೆನ್ಸಿ ಕುರಿತು ಮಾತನಾಡುತ್ತಿದ್ದೀರಾ?’ ಎಂಬ ಪ್ರಶ್ನೆಗೆ ‘ತುಂಬಾ ಸತ್ಯ’ ಎಂದು ಉತ್ತರಿಸಿದ ನೆತನ್ಯಾಹು, ಬ್ಲಾಕ್ ಚೈನ್ ತಂತ್ರಜ್ಞಾನವೂ ಮತ್ತೊಂದು ಸಾಧ್ಯತೆಯಾಗಿದೆ ಎಂದು ಹೇಳಿದ್ದಾರೆ. ಈ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಯೋಜನೆ ರೂಪಿಸುವಂತೆ ತಮ್ಮ ಸಲಹೆಗಾರರಿಗೆ ಸೂಚಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.
*ಕ್ರಿಪ್ಟೊಕರೆನ್ಸಿ ಪರ್ಯಾಯ ಮಾರ್ಗವಲ್ಲ: ಬ್ಯಾಂಕ್ ಆಫ್ ಇಸ್ರೇಲ್
ನೆತನ್ಯಾಹು ಅವರ ಪ್ರಸ್ತಾವಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬ್ಯಾಂಕ್ ಆಫ್ ಇಸ್ರೇಲ್, ಆರ್ಥಿಕ ದಿಗ್ಬಂಧನಗಳನ್ನು ತಪ್ಪಿಸಿಕೊಳ್ಳಲು ಕ್ರಿಪ್ಟೊಕರೆನ್ಸಿ ಪರ್ಯಾಯ ಮಾರ್ಗವಲ್ಲ ಎಂದು ಹೇಳಿದೆ. ಇಂತಹ ಕ್ರಮಗಳ ಅಗತ್ಯವೇ ಎದುರಾಗದಂತೆ ಮಾಡುವ ನೀತಿಗಳತ್ತ ರಾಜಕೀಯ ನಾಯಕರು ಗಮನ ಹರಿಸಬೇಕು ಎಂದು ಸಲಹೆ ನೀಡಿದೆ.
‘ಇಸ್ರೇಲ್ ನ ಆರ್ಥಿಕತೆಯನ್ನು ರಕ್ಷಿಸಿಕೊಳ್ಳಲು ಪ್ರಮುಖ ವ್ಯಾಪಾರ ಪಾಲುದಾರರೊಂದಿಗಿನ ಆರ್ಥಿಕ ಸಂಬಂಧಗಳನ್ನು ಸಂರಕ್ಷಿಸಿಕೊಳ್ಳಬೇಕು. ಆರ್ಥಿಕ ದಿಗ್ಬಂಧನ ಹಾಗೂ ಅದರಿಂದ ಉಂಟಾಗಬಹುದಾದ ದುಷ್ಪರಿಣಾಮಗಳು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರದಂತೆ ತಡೆಯಬೇಕು’ ಎಂದು ಬ್ಯಾಂಕ್ ಹೇಳಿದೆ.
ಶನಿವಾರ ಬ್ಯಾಂಕ್ ನ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ನೆತನ್ಯಾಹು, ಅದರ ಸಲಹೆಯನ್ನು ಪರಿಗಣಿಸುವುದಾಗಿ ಹೇಳಿದ್ದಾರೆ. ಆದರೆ ತಮ್ಮ ನಿಲುವಿನಂತೆ ಮುಂದುವರಿಯುವುದಾಗಿಯೂ ತಿಳಿಸಿದ್ದಾರೆ.
ರವಿವಾರವೂ ತಮ್ಮ ನಿಲುವನ್ನು ಸಮರ್ಥಿಸಿಕೊಂಡ ನೆತನ್ಯಾಹು, ತಮಗೆ ಬೆಂಬಲ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ. ಇರಾನ್ ನ ಆಡಳಿತಗಾರರನ್ನು ತಾವು ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಟ್ಟಾಗಿ ಪದಚ್ಯುತಗೊಳಿಸಲು ಇನ್ನೂ ಎರಡು ವರ್ಷಗಳು ಬಾಕಿ ಇವೆ ಎಂದೂ ಅವರು ಹೇಳಿದ್ದಾರೆ.
*ನಿರುದ್ಯೋಗ, ವಿದೇಶಿ ಹೂಡಿಕೆ ಕುಸಿತದ ಆತಂಕ
ನೆತನ್ಯಾಹು ಅವರ ಪ್ರಸ್ತಾವದ ಕುರಿತು ಕಳವಳ ವ್ಯಕ್ತಪಡಿಸಿರುವ ಬ್ಯಾಂಕ್ ಆಫ್ ಇಸ್ರೇಲ್ ನ ಮಾಜಿ ಅಧಿಕಾರಿಗಳು ಸೇರಿದಂತೆ 109 ಆರ್ಥಿಕ ತಜ್ಞರು, ಉದ್ಯಮಿಗಳು ಹಾಗೂ ಮಾಜಿ ಸರ್ಕಾರಿ ಅಧಿಕಾರಿಗಳು ಜಂಟಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಕೇಂದ್ರೀಯ ಬ್ಯಾಂಕ್ ನ ಮಾಜಿ ಗವರ್ನರ್ ಜಾಕೋಬ್ ಫ್ರೆಂಕೆಲ್ ಹಾಗೂ ಹಲವು ನೊಬೆಲ್ ಪ್ರಶಸ್ತಿ ವಿಜೇತರೂ ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
ಈ ಪ್ರಸ್ತಾವ ಜಾರಿಯಾದರೆ ನಿರುದ್ಯೋಗ ಹೆಚ್ಚಾಗಬಹುದು, ವಿದೇಶಿ ಹೂಡಿಕೆ ಕುಸಿಯಬಹುದು ಹಾಗೂ ಜಾಗತಿಕ ಮಟ್ಟದಲ್ಲಿ ಇಸ್ರೇಲ್ ನ ಆರ್ಥಿಕ ಸ್ಥಾನಮಾನಕ್ಕೆ ಗಂಭೀರ ಹಾನಿಯಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಆರ್ಥಿಕ ದಿಗ್ಬಂಧನಗಳಿಂದ ಜನರ ಜೀವನಮಟ್ಟ ಕುಸಿಯುವ ಮತ್ತು ದೇಶದ ಭದ್ರತಾ ವೆಚ್ಚವನ್ನು ಭರಿಸುವ ಸಾಮರ್ಥ್ಯಕ್ಕೆ ಧಕ್ಕೆಯಾಗುವ ಸಾಧ್ಯತೆಯನ್ನೂ ಅವರು ಪ್ರಸ್ತಾಪಿಸಿದ್ದಾರೆ.
ಮಂಗಳವಾರ ನಡೆಯಲಿರುವ ಚುನಾವಣೆಯಲ್ಲಿ ನೆತನ್ಯಾಹು ಅವರ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಗಾಡಿ ಐಸೆಂಕೋಟ್ ಕೂಡ ಈ ಪ್ರಸ್ತಾವವನ್ನು ಟೀಕಿಸಿದ್ದಾರೆ.