×
Ad

ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ | ಇರಾನ್ ಮೇಲೆ ಇಂದು ರಾತ್ರಿ ಅತ್ಯಂತ ತೀವ್ರ ದಾಳಿ: ಟ್ರಂಪ್ ಎಚ್ಚರಿಕೆ

Update: 2026-06-11 19:39 IST

ಡೊನಾಲ್ಡ್ ಟ್ರಂಪ್ | Photo Credit : PTI 

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಇರಾನ್ ವಿರುದ್ಧ ಮತ್ತಷ್ಟು ಮಿಲಿಟರಿ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಅಮೆರಿಕವು ಗುರುವಾರ ರಾತ್ರಿ ಇರಾನ್ ಮೇಲೆ ಅತ್ಯಂತ ತೀವ್ರ ದಾಳಿ ನಡೆಸಲಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ಟ್ರೂತ್ ಸೋಷಿಯಲ್ ಖಾತೆಯಲ್ಲಿ ಪ್ರಕಟಿಸಿದ ಸಂದೇಶದಲ್ಲಿ, ಇರಾನ್‌ ನ ಮಿಲಿಟರಿ ಸಾಮರ್ಥ್ಯ ಈಗಾಗಲೇ ತೀವ್ರವಾಗಿ ಕುಂಠಿತಗೊಂಡಿದೆ ಎಂದು ಟ್ರಂಪ್ ಹೇಳಿದ್ದಾರೆ.

‘ಇರಾನ್‌ನ ನೌಕಾಪಡೆ, ವಾಯುಪಡೆ, ರಾಡಾರ್ ಹಾಗೂ ವಿಮಾನ ವಿರೋಧಿ ರಕ್ಷಣಾ ವ್ಯವಸ್ಥೆಗಳಿಗೆ ಭಾರೀ ಹಾನಿಯಾಗಿದೆ. ಅದರ ಬಹುತೇಕ ಆಕ್ರಮಣಕಾರಿ ಸಾಮರ್ಥ್ಯ ನಾಶವಾಗಿದೆ. ಇಂದು ರಾತ್ರಿ ಅತ್ಯಂತ ಕಠಿಣ ದಾಳಿ ನಡೆಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಇರಾನ್‌ ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪ ಸೇರಿದಂತೆ ಕೆಲವು ಪ್ರಮುಖ ತೈಲ ಮತ್ತು ಅನಿಲ ಮೂಲಸೌಕರ್ಯಗಳ ಮೇಲೆ ಹಿಡಿತ ಸಾಧಿಸುವ ಉದ್ದೇಶವನ್ನೂ ಟ್ರಂಪ್ ವ್ಯಕ್ತಪಡಿಸಿದ್ದಾರೆ.

‘ಖಾರ್ಗ್ ದ್ವೀಪ ಹಾಗೂ ಇತರ ಪ್ರಮುಖ ಇಂಧನ ಮೂಲಸೌಕರ್ಯಗಳ ಮೇಲೆ ಅಮೆರಿಕ ಹಿಡಿತ ಸಾಧಿಸಲಿದೆ. ಇದರಿಂದ ತೈಲ ಮತ್ತು ಅನಿಲ ವ್ಯಾಪಾರದ ಮೇಲೆ ಹೆಚ್ಚಿನ ಪ್ರಭಾವ ಬೀರಲು ಸಾಧ್ಯವಾಗಲಿದೆ’ ಎಂದು ಅವರು ಹೇಳಿದ್ದಾರೆ.

ಸಂಘರ್ಷ ಆರಂಭವಾದ ಬಳಿಕ ಟ್ರಂಪ್ ಹಲವು ಬಾರಿ ಖಾರ್ಗ್ ದ್ವೀಪವನ್ನು ಉಲ್ಲೇಖಿಸಿದ್ದಾರೆ. ಇರಾನ್‌ ನ ತೈಲ ರಫ್ತು ವ್ಯವಸ್ಥೆಯ ಪ್ರಮುಖ ಕೇಂದ್ರವಾಗಿರುವ ಈ ದ್ವೀಪವು ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ್ದಾಗಿದೆ.

ಇದೇ ವೇಳೆ, ಉದ್ವಿಗ್ನತೆ ಹೆಚ್ಚುತ್ತಿದ್ದರೂ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಮಾತುಕತೆಗಳು ಮುಂದುವರಿದಿವೆ ಎಂದು ಟ್ರಂಪ್ ತಿಳಿಸಿದ್ದಾರೆ. ಪ್ರಾಥಮಿಕ ಒಪ್ಪಂದದ ಸಾಧ್ಯತೆಯನ್ನು ಪರಿಶೀಲಿಸುವ ಉದ್ದೇಶದಿಂದ ಎರಡೂ ದೇಶಗಳು ಸಂದೇಶ ವಿನಿಮಯ ನಡೆಸುತ್ತಿವೆ ಎಂದು ಅವರು ಹೇಳಿದ್ದಾರೆ.

ಇರಾನಿನ ಹಾಗೂ ಯುರೋಪಿನ ಮೂಲಗಳನ್ನು ಉಲ್ಲೇಖಿಸಿರುವ ರಾಯಿಟರ್ಸ್ ವರದಿ ಪ್ರಕಾರ, ಮಾತುಕತೆಯಲ್ಲಿ ಭಾಗಿಯಾಗಿರುವ ಸಂಧಾನಕಾರರು ಒಪ್ಪಂದದ ರೂಪುರೇಷೆಗಳ ಬಗ್ಗೆ ಸಾಮಾನ್ಯ ಒಮ್ಮತಕ್ಕೆ ಬಂದಿದ್ದರೂ, ಕೆಲವು ಪ್ರಮುಖ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಮುಂದುವರಿದಿದೆ.

ವಿದೇಶಿ ಬ್ಯಾಂಕುಗಳಲ್ಲಿ ಸ್ಥಗಿತಗೊಂಡಿರುವ ಇರಾನ್‌ನ ಶತಕೋಟಿ ಡಾಲರ್ ಮೊತ್ತದ ನಿಧಿಗಳ ಬಿಡುಗಡೆ ಪ್ರಮುಖ ವಿವಾದದ ವಿಷಯವಾಗಿದೆ. ಇರಾನ್ 6 ಬಿಲಿಯನ್ ಡಾಲರ್‌ ನಿಂದ 12 ಬಿಲಿಯನ್ ಡಾಲರ್‌ ವರೆಗಿನ ಆಸ್ತಿಗಳ ಬಿಡುಗಡೆಗೆ ಒತ್ತಾಯಿಸುತ್ತಿದೆ ಎಂದು ವರದಿಯಾಗಿದೆ.

ಆದರೆ, ಯಾವುದೇ ನಿಧಿಯ ಬಿಡುಗಡೆಯು ಹಂತ ಹಂತವಾಗಿ ನಡೆಯಬೇಕು ಹಾಗೂ ಮಾನವೀಯ ಉದ್ದೇಶಗಳಿಗೆ ಮಾತ್ರ ಬಳಸಬೇಕು ಎಂಬುದು ಅಮೆರಿಕದ ನಿಲುವಾಗಿದೆ.

‘ಮಿಲಿಟರಿ ದೃಷ್ಟಿಯಿಂದ ಯುದ್ಧ ಅಂತಿಮ ಹಂತ ತಲುಪಿದೆ. ಇರಾನ್ ವಿರುದ್ಧದ ಕಾರ್ಯಾಚರಣೆಯಿಂದ ಅಮೆರಿಕ ತನ್ನ ಎಲ್ಲ ಗುರಿಗಳನ್ನು ಸಾಧಿಸಲು ಸಾಧ್ಯವಾಗಿಲ್ಲ. ಆದರೆ ಮಾತುಕತೆಯಲ್ಲಿ ಪ್ರಗತಿ ಕಂಡುಬಂದಿದೆ’ ಎಂದು ಇರಾನಿನ ಮೂಲವೊಂದು ರಾಯಿಟರ್ಸ್‌ ಗೆ ತಿಳಿಸಿದೆ.

ಸ್ಥಗಿತಗೊಂಡಿರುವ ನಿಧಿಗಳ ಬಿಡುಗಡೆ ಹಾಗೂ ಸಂಘರ್ಷಕ್ಕೆ ಅಂತ್ಯ ಹಾಡುವುದಕ್ಕೆ ಇರಾನ್ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News