ಇರಾನ್ ಯುದ್ಧಕ್ಕೆ ಮರುನಾಮಕರಣ ಮಾಡಲು ಅಮೆರಿಕ ಚಿಂತನೆ
ಸಾಂದರ್ಭಿಕ ಚಿತ್ರ | Photo Credit : PTI
ವಾಶಿಂಗ್ಟನ್, ಮೇ 13: ಇರಾನ್ ಜೊತೆಗಿನ ಪ್ರಸ್ತುತ ಕದನ ವಿರಾಮ ಮಾತುಕತೆ ವಿಫಲವಾದರೆ, ಇರಾನ್ನೊಂದಿಗೆ ನಡೆಯುತ್ತಿರುವ ಯುದ್ಧವನ್ನು ‘ಆಪರೇಷನ್ ಸ್ಲೆಡ್ಜ್ಮೇಕರ್’ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲು ಅಮೆರಿಕ ಮಿಲಿಟರಿ ಪರಿಗಣಿಸುತ್ತಿರುವುದಾಗಿ ವರದಿಯಾಗಿದೆ.
ಫೆಬ್ರುವರಿ 28ರಂದು ಇರಾನ್ ವಿರುದ್ಧ ಆರಂಭಿಸಿದ್ದ ಮಿಲಿಟರಿ ದಾಳಿಗೆ ಅಮೆರಿಕ ‘ಆಪರೇಷನ್ ಎಪಿಕ್ ಫ್ಯೂರಿ’ ಎಂದು ಹೆಸರಿಸಿತ್ತು. ಇದೀಗ ಇದನ್ನು ‘ಆಪರೇಷನ್ ಸ್ಲೆಡ್ಜ್ಮೇಕರ್’ ಎಂದು ಮರುನಾಮಕರಣಗೊಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅಮೆರಿಕದ ನಿಯಮಗಳ ಪ್ರಕಾರ, ಯುದ್ಧ ಆರಂಭಿಸಿದ 48 ಗಂಟೆಗಳೊಳಗೆ ಅಧ್ಯಕ್ಷರು ಸಂಸತ್ತಿಗೆ ಮಾಹಿತಿ ನೀಡಬೇಕು. ಸಂಸತ್ತಿನ ಅನುಮೋದನೆ ಸಿಗದಿದ್ದರೆ 60 ದಿನಗಳ ಒಳಗೆ ಮಿಲಿಟರಿ ಕಾರ್ಯಾಚರಣೆ ಸ್ಥಗಿತಗೊಳಿಸಬೇಕು. ‘ಆಪರೇಷನ್ ಎಪಿಕ್ ಫ್ಯೂರಿ’ ಮುಗಿದಿದೆ ಎಂದು ಎಪ್ರಿಲ್ ಅಂತ್ಯದಲ್ಲಿ ಟ್ರಂಪ್ ಸರ್ಕಾರ ಘೋಷಿಸಿತ್ತು.
ಇದೀಗ ಮಿಲಿಟರಿ ಕಾರ್ಯಾಚರಣೆಯ ಹೆಸರು ಬದಲಿಸಿದರೆ ಮತ್ತೆ 60 ದಿನಗಳ ಸಮಯಾವಕಾಶ ದೊರಕಲಿದೆ ಎಂಬುದು ಟ್ರಂಪ್ ಆಡಳಿತದ ಲೆಕ್ಕಾಚಾರವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.