Photo: PTI

ಹೊಸದಿಲ್ಲಿ , ಅ.21: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ-ಸಂಯೋಜಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ವಿರುದ್ಧ ದಾಖಲಾಗಿರುವ ಎರಡೂ ಪ್ರಕರಣಗಳ ತನಿಖೆಯನ್ನು ದಿಲ್ಲಿ ಪೊಲೀಸರು ಕ್ರೈಂ ಬ್ರಾಂಚ್‌ ಗೆ ವರ್ಗಾಯಿಸಿದ್ದಾರೆ. ಜೈಲಿನಲ್ಲಿರುವ ಇಬ್ಬರು ನಾಯಕರ ವಿರುದ್ಧದ ಮತ್ತೊಂದು ಪ್ರಕರಣವನ್ನು ಕ್ರೈಂ ಬ್ರಾಂಚ್‌ ಗೆ ವಹಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ ಎಂದು ಮೂಲಗಳು ಮಂಗಳವಾರ ಪಿಟಿಐಗೆ ತಿಳಿಸಿವೆ.

ದಿಲ್ಲಿ ಪೊಲೀಸರ ಪ್ರಕಾರ, ಅಕ್ಟೋಬರ್ 13ರಂದು ದಾಸ್, ರಂಕಾ, ಅಜಿಂಕ್ಯ ಶಿಂಧೆ ಸೇರಿದಂತೆ ಸಿಜೆಪಿಯ 14 ಸದಸ್ಯರು ಖಾಸಗಿ ಆವರಣದ ಮೂಲಕ ಅತಿಕ್ರಮ ಪ್ರವೇಶ ಮಾಡಿ ಜಂತರ್ ಮಂತರ್ ತಲುಪಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ ಗುಂಪನ್ನು ತಡೆಯಲು ಯತ್ನಿಸಿದ್ದರು. ಬಳಿಕ 14 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು.

ಶಾಂತಿ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಕ್ಟೋಬರ್ 14ರಂದು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರು ದಾಸ್ ಮತ್ತು ರಂಕಾ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಸೋಮವಾರ ಅವರ ನ್ಯಾಯಾಂಗ ಬಂಧನವನ್ನು ಇನ್ನೂ ಎರಡು ದಿನಗಳ ಕಾಲ ವಿಸ್ತರಿಸಲಾಗಿದೆ.

ಜಂತರ್ ಮಂತರ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ಗುಂಪು ಪ್ರಯತ್ನಿಸಿದ ಬಳಿಕ ಇಬ್ಬರು ನಾಯಕರು ಜೈಲು ಸೇರಿದ್ದಾರೆ. ಅಕ್ಟೋಬರ್ 10ರಂದು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರೂ, ಬೀಗ ಹಾಕಿದ್ದ ಗೇಟ್ ಹತ್ತಿ ಅವರು ಪ್ರದೇಶವನ್ನು ಪ್ರವೇಶಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

ಪ್ರತಿಭಟನೆಗೆ ಅನುಮತಿಯಿಲ್ಲದ ಸ್ಥಳಕ್ಕೆ ಪ್ರವೇಶಿಸಲು ಸಿಜೆಪಿ ಸದಸ್ಯರು ಪೊಲೀಸ್ ತಡೆಗೋಡೆಗಳನ್ನು ದಾಟಿದ್ದರು ಎಂದೂ ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಸಹ-ಸಂಯೋಜಕರಿಬ್ಬರೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದ್ದರು ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor