ಹೊಸದಿಲ್ಲಿ: ಅ.21: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರ ವಿಶೇಷ ಘಟಕವು ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಂಧಿಸಿದೆ. ದಾಳಿಕೋರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಮತ್ತು ಸಾಗಿಸುವಲ್ಲಿ ಬಂಧಿತರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಂಧಿತರನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಕುನಾಲ್, ಸುಮಿತ್, ರಾಧಾ ಮತ್ತು ಬಬಿತಾ ಬಂಧಿತರು. ಕುನಾಲ್ ಮತ್ತು ಸುಮಿತ್ ಶಸ್ತ್ರಾಸ್ತ್ರಗಳನ್ನು ವ್ಯವಸ್ಥೆಗೊಳಿಸಿದ್ದರು ಎನ್ನಲಾಗಿದೆ. ರಾಧಾ ಮತ್ತು ಬಬಿತಾ ಮುಂಬೈನ ದಾದರ್‌ ಗೆ ತೆರಳಿ, ಬಂದೂಕುಗಳನ್ನು ದಾಳಿಯಲ್ಲಿ ಭಾಗಿಯಾಗಿದ್ದ ಮೂವರಿಗೆ ತಲುಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡು ಹಾರಿಸಿದಾಗ ಜಾಮ್ ಆದ ಬಂದೂಕು

ನಟ ಜಾಕಿ ಶ್ರಾಫ್ ಅವರ ಪುತ್ರ ಟೈಗರ್ ಶ್ರಾಫ್ ರವಿವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಫುಟ್‌ಬಾಲ್ ಆಡಲು ತೆರಳಿದ್ದರು. ಅವರು ತಮ್ಮ ಬಿಎಂಡಬ್ಲ್ಯು (BMW) ಕಾರಿನಲ್ಲಿ ಕಾಂಪೌಂಡ್ ಗೇಟ್ ಬಳಿ ನೆರೆದಿದ್ದ ಅಭಿಮಾನಿಗಳ ಗುಂಪಿನ ನಡುವೆ ಸಾಗುತ್ತಿದ್ದಾಗ, ಇಬ್ಬರು ವ್ಯಕ್ತಿಗಳು ಕಾರಿನ ಮುಂಭಾಗದಿಂದ ಗುಂಡು ಹಾರಿಸಿದ್ದರು. ಆರರಿಂದ ಏಳು ಸುತ್ತು ಗುಂಡು ಹಾರಿಸಲಾಗಿತ್ತು.

ದಾಳಿಕೋರನೊಬ್ಬ ನಟನಿಗೆ ತೀರಾ ಹತ್ತಿರದಿಂದ ಬಂದೂಕು ಗುರಿಯಿಟ್ಟಿದ್ದ. ಆದರೆ, ಆತ ಟ್ರಿಗರ್ ಒತ್ತಿದಾಗ ಬಂದೂಕು ಜಾಮ್ ಆಗಿದ್ದರಿಂದ ಟೈಗರ್ ಶ್ರಾಫ್ ಅಪಾಯದಿಂದ ಪಾರಾಗಿದ್ದರು. ಘಟನೆಯಲ್ಲಿ ನಟನ ಚಾಲಕ ಮತ್ತು ಅಲ್ಲಿದ್ದ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದರು.

ಈಗಾಗಲೇ ಬಿಹಾರದ ಹೃತಿಕ್ ಅಲಿಯಾಸ್ ರೋಷನ್ (22) ಹಾಗೂ ಹರಿಯಾಣದ ರೆಹಾನ್ (18) ಮತ್ತು ಫೂಲ್ ಸಿಂಗ್ (18) ಎಂಬ ಆರೋಪಿಗಳನ್ನು ರಾಜಸ್ಥಾನದ ಕೋಟಾದಲ್ಲಿ ಬಂಧಿಸಲಾಗಿತ್ತು. ಇವರು ನೇಪಾಳಕ್ಕೆ ಪರಾರಿಯಾಗಲು ಯೋಜಿಸಿದ್ದರು ಎನ್ನಲಾಗಿದೆ. ಈ ಮೂವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ನಂಟಿದೆ ಎಂದು ವರದಿಯಾಗಿದೆ.

ನಟ ಸಲ್ಮಾನ್ ಖಾನ್ ಅವರೊಂದಿಗಿನ ಟೈಗರ್ ಶ್ರಾಫ್ ಅವರ ಆಪ್ತ ಸಂಬಂಧದ ಹಿನ್ನೆಲೆಯಲ್ಲಿ ಬಿಷ್ಣೋಯ್ ಗ್ಯಾಂಗ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ ಎಂದು ವರದಿಯಾಗಿದೆ. 1998ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಅವರನ್ನು ಗುರಿಯಾಗಿಸಲು ಈ ಗ್ಯಾಂಗ್ ಪ್ರಯತ್ನಿಸುತ್ತಿದೆ.

ರೈಲು ನಿಲ್ದಾಣಗಳಿಂದ ಬಂಧನ

ರಾಧಾ ಮತ್ತು ಬಬಿತಾ ಅವರನ್ನು ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಕುನಾಲ್ ಮತ್ತು ಸುಮಿತ್ ಅವರನ್ನು ಹರಿಯಾಣದ ಸೋನಿಪತ್‌ ನಲ್ಲಿ ಬಂಧಿಸಲಾಗಿದೆ.

ಕುನಾಲ್ (21) ಮತ್ತು ಸುಮಿತ್ (19) ಸೋನಿಪತ್‌ನವರು. ಬಬಿತಾ ಉತ್ತರ ಪ್ರದೇಶದ ಸೀತಾಪುರದವರಾಗಿದ್ದರೆ, ರಾಧಾ ಅದೇ ರಾಜ್ಯದ ಅಜಂಗಢದವರು. ಕುನಾಲ್ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ. ಹರಿಯಾಣದ ಹರ್ಸಾನಾ ಗ್ರಾಮದ ತನ್ನ ಸ್ನೇಹಿತನ ಮೂಲಕ, ಟೈಗರ್ ಶ್ರಾಫ್ ಮೇಲಿನ ದಾಳಿಗೆ ಆದೇಶ ನೀಡಿದನೆನ್ನಲಾದ ಗ್ಯಾಂಗ್‌ಸ್ಟರ್ ಅನಿಲ್ ಪಂಡಿತ್‌ನನ್ನು ಆತ ಭೇಟಿಯಾಗಿದ್ದ ಎಂದು ಆರೋಪಿಸಲಾಗಿದೆ.

ಕುನಾಲ್ ಅಮೃತಸರದಿಂದ ಪಿಸ್ತೂಲ್ ಮತ್ತು 20 ಗುಂಡುಗಳನ್ನು ತರಿಸಿಕೊಂಡಿದ್ದ ಎನ್ನಲಾಗಿದೆ. ಎರಡು ತಿಂಗಳ ಹಿಂದೆ ರಾಧಾಳನ್ನು ಭೇಟಿಯಾಗಿದ್ದ ಆತ, ಬಂದೂಕನ್ನು ಮುಂಬೈಗೆ ಸಾಗಿಸುವಂತೆ ಆಕೆಯನ್ನು ಒಪ್ಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 15ರಂದು ಕುನಾಲ್, ರಾಧಾ ಮತ್ತು ಬಬಿತಾರನ್ನು ಮುಂಬೈಗೆ ಪ್ರಯಾಣಿಸಲು ಹೊಸದಿಲ್ಲಿ ರೈಲು ನಿಲ್ದಾಣಕ್ಕೆ ಕರೆದೊಯ್ದಿದ್ದ. ಈ ಮೂವರು ಗುಪ್ತ ಸಂದೇಶ ವಿನಿಮಯಕ್ಕೆ ಅವಕಾಶ ನೀಡುವ ಎನ್‌ಕ್ರಿಪ್ಟ್ ಮಾಡಲಾದ ಆ್ಯಪ್ ಮೂಲಕ ಸಂಪರ್ಕದಲ್ಲಿದ್ದರು. ಕುನಾಲ್ ಅವರಿಗೆ ಅನಿಲ್ ಪಂಡಿತ್‌ ನ ಸೂಚನೆಗಳನ್ನು ತಲುಪಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಎರಡು ದಿನಗಳ ಬಳಿಕ ರಾಧಾ ಮತ್ತು ಬಬಿತಾ ಮುಂಬೈನ ದಾದರ್ ರೈಲು ನಿಲ್ದಾಣದಲ್ಲಿ ಇಳಿದು ಹೋಟೆಲ್‌ ವೊಂದರಲ್ಲಿ ತಂಗಿದ್ದರು. ಅಪ್ರಾಪ್ತ ಬಾಲಕನೊಬ್ಬ ರಾಧಾಳಿಂದ ಶಸ್ತ್ರಾಸ್ತ್ರಗಳಿದ್ದ ಬ್ಯಾಗ್ ಪಡೆದುಕೊಂಡಿದ್ದ. ಮರುದಿನ ಮೂವರು ಆರೋಪಿಗಳು ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆಸಿದ್ದರು.

ದಾಳಿ ನಡೆದ ದಿನವೇ ರಾಧಾ ಮತ್ತು ಬಬಿತಾ ದಾದರ್‌ನಿಂದ ಹರಿದ್ವಾರ ಎಕ್ಸ್‌ಪ್ರೆಸ್ ರೈಲು ಹತ್ತಿ ಮುಂಬೈನಿಂದ ದಿಲ್ಲಿಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲ ಗುರಿ ಬೇರೊಬ್ಬ ಪ್ರಭಾವಿ ವ್ಯಕ್ತಿ?

ಟೈಗರ್ ಶ್ರಾಫ್ ದುಷ್ಕರ್ಮಿಗಳ ಮೂಲ ಗುರಿಯಾಗಿರಲಿಲ್ಲ ಎಂದು ಮೂಲಗಳು ಎನ್‌ಡಿಟಿವಿಗೆ (NDTV) ತಿಳಿಸಿವೆ. ಹೃತಿಕ್, ರೆಹಾನ್ ಮತ್ತು ಫೂಲ್ ಸಿಂಗ್ ಮತ್ತೊಬ್ಬ ಪ್ರಭಾವಿ ವ್ಯಕ್ತಿಯನ್ನು ಹತ್ಯೆ ಮಾಡುವ ಉದ್ದೇಶದಿಂದ ಮುಂಬೈಗೆ ಬಂದಿದ್ದರು ಎಂದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿರುವುದಾಗಿ ವರದಿಯಾಗಿದೆ.

ಆ ಪ್ರಭಾವಿ ವ್ಯಕ್ತಿ ಹೆಚ್ಚಾಗಿ ಭೇಟಿ ನೀಡುವ ಸ್ಥಳಗಳ ಮೇಲೆ ನಿಗಾ ಇರಿಸಿದ ಬಳಿಕ, ಆತನನ್ನು ಸಮೀಪಿಸುವುದು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಆರೋಪಿಗಳು ಬಂದಿದ್ದರು. ಬಳಿಕ ಅವರು ಗುರಿ ಬದಲಿಸಿಕೊಂಡಿದ್ದರು. ಟೈಗರ್ ಶ್ರಾಫ್‌ ಗೆ ಪೊಲೀಸ್ ರಕ್ಷಣೆ ಇಲ್ಲ ಎಂಬುದನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ರೀಲ್ಸ್‌ ಗಳ ಮೂಲಕ ತಿಳಿದುಕೊಂಡು, ನಟನನ್ನು ಗುರಿಯಾಗಿಸಿಕೊಂಡಿದ್ದರು ಎಂದು ಮೂಲವೊಂದು ತಿಳಿಸಿದೆ.

ಟೈಗರ್ ಶ್ರಾಫ್ ಅವರನ್ನು ಕೊಲ್ಲುವ ಮೂಲಕ ಬಾಲಿವುಡ್‌ ನಲ್ಲಿ ಭಯದ ವಾತಾವರಣ ಸೃಷ್ಟಿಸುವುದು ತಮ್ಮ ಉದ್ದೇಶವಾಗಿತ್ತು ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ದಾಳಿಗೆ ಮುಂಗಡವಾಗಿ ಆರೋಪಿಗಳಿಗೆ 50,000 ರೂ. ನೀಡಲಾಗಿತ್ತು. ದಾಳಿ ನಡೆಸಿದ ಬಳಿಕ ಇನ್ನಷ್ಟು ಹಣ ಮತ್ತು ಉದ್ಯೋಗ ನೀಡುವುದಾಗಿಯೂ ಭರವಸೆ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor