ಉನ್ನತ ಶಿಕ್ಷಣ -ಯುಜಿಸಿ ನಿಯಮಗಳ ಉಲ್ಲಂಘನೆ
ಒಂದು ಹುದ್ದೆಗೆ ನಿರ್ದಿಷ್ಟ ವಿದ್ಯಾರ್ಹತೆ ನಿಗದಿಪಡಿಸಿದ ಮೇಲೆ ಅರ್ಹರು ಮಾತ್ರ ಅರ್ಜಿ ಹಾಕುವಂತೆ ನೋಡಿಕೊಳ್ಳುವುದು ನೇಮಕಾತಿ ಪ್ರಾಧಿಕಾರದ ಆದ್ಯ ಕರ್ತವ್ಯ. ಅಕ್ರಮವಾಗಿ ನುಸುಳುವವರನ್ನು ಮೊದಲ ಹೆಜ್ಜೆಯಲ್ಲಿ ಪತ್ತೆ ಹಚ್ಚಿ ಅನರ್ಹರ ಪಟ್ಟಿಯಲ್ಲಿ ಸೇರಿಸುವುದು ಜಾಣ ನಡೆ. ಯುಜಿಸಿ ರೂಪಿಸಿದ, ಸರಕಾರ ಒಪ್ಪಿಕೊಂಡ ವಿದ್ಯಾರ್ಹತೆಯ ಮಾನದಂಡಗಳನ್ನು ಉಲ್ಲಂಘಿಸಿ ನೌಕರಿ ಪಡೆಯುವುದು ಮತ್ತು ನೀಡುವುದು ಕ್ರಿಮಿನಲ್ ಅಪರಾಧ ಎನಿಸಿಕೊಳ್ಳುತ್ತದೆ. ಮಾನ್ಯತೆ ಇಲ್ಲದ ವಿಶ್ವವಿದ್ಯಾನಿಲಯದ ಪದವಿ ಪ್ರಮಾಣ ಪತ್ರ ಲಗತ್ತಿಸಿ ನೌಕರಿ ಪಡೆಯುವುದು ಅಪರಾಧವೇ.
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಎಂಬುದು ಉನ್ನತ ಶಿಕ್ಷಣದಲ್ಲಿನ ಸಮಸ್ತವನ್ನು ನಿರ್ಧರಿಸುವ ಒಂದು ಉನ್ನತ ಸಂಸ್ಥೆ. ಉನ್ನತ ಶಿಕ್ಷಣದ ಗುಣಮಟ್ಟ ಕಾಪಾಡಲು ಯುಜಿಸಿ ಕಾಲಕಾಲಕ್ಕೆ ನೀತಿ ನಿಯಮಗಳನ್ನು ರೂಪಿಸುತ್ತದೆ. ಭಾರತದ ಎಲ್ಲ ವಿಶ್ವವಿದ್ಯಾ ನಿಲಯಗಳು, ಉನ್ನತ ಶಿಕ್ಷಣ ನೀಡುವ ಎಲ್ಲ ಪ್ರಮುಖ ಸಂಸ್ಥೆಗಳು
ಯುಜಿಸಿ ನಿಯಮಗಳನ್ನು ಶಾಸನಗಳು ಎಂಬಂತೆ ಪಾಲಿಸುತ್ತವೆ. ಒಂದೊಮ್ಮೆ ಯಾವುದಾದರೂ ಒಂದು ವಿಶ್ವವಿದ್ಯಾನಿಲಯ ಯುಜಿಸಿ ನಿಯಮಗಳ ಉಲ್ಲಂಘನೆ ಮಾಡಿದ್ದು ಸಾಬೀತಾದರೆ ಆ ಸಂಸ್ಥೆ ಮತ್ತು ಆ ಸಂಸ್ಥೆ ನೀಡುವ ಪದವಿಗಳು ಮಾನ್ಯತೆ ಕಳೆದುಕೊಳ್ಳುತ್ತವೆ.
ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಯುಜಿಸಿ ನಿಯಮಗಳನ್ನು ಉಲ್ಲಂಘಿಸಿ ಮಾನ್ಯತೆ ಕಳೆದುಕೊಂಡಿತ್ತು.. ಯುಜಿಸಿ ಪ್ರತೀ ವರ್ಷ ತನ್ನ ವೆಬ್ ಸೈಟ್ ನಲ್ಲಿ ಮಾನ್ಯತೆ ಕಳೆದುಕೊಂಡ ವಿಶ್ವವಿದ್ಯಾನಿಲಯಗಳ ಪಟ್ಟಿ ನೀಡಿ ಅಂಥ ಸಂಸ್ಥೆಯಲ್ಲಿ ಯಾರೂ ಪ್ರವೇಶ ಪಡೆದುಕೊಳ್ಳಬಾರದೆಂದು ಎಚ್ಚರಿಕೆ ಕೂಡಾ ನೀಡುತ್ತದೆ. ಯುಜಿಸಿ ನೀಡಿದ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಯಾರಾದರೂ ಮಾನ್ಯತೆ ಕಳೆದುಕೊಂಡ ಸಂಸ್ಥೆಯಿಂದ ಪದವಿ ಪಡೆದರೆ ಆ ಪದವಿಗೆ ಭಾರತ ಮಾತ್ರವಲ್ಲ, ವಿದೇಶದಲ್ಲೂ ಕಿಮ್ಮತ್ತು ಇರುವುದಿಲ್ಲ.
1953 ಡಿಸೆಂಬರ್ 28ರಂದು ಆರಂಭವಾದ ಯುನಿವರ್ಸಿಟಿ ಗ್ರಾಂಟ್ ಕಮಿಷನ್(ಯುಜಿಸಿ) ಎಂದೇ ಜನಪ್ರಿಯವಾದ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ 1956ರಲ್ಲಿ ಲೋಕಸಭೆಯ ಕಾಯ್ದೆ ಮೂಲಕ ಅಧಿಕೃತಗೊಂಡಿತು. ಅದರ ಮೊದಲ ಅಧ್ಯಕ್ಷರಾಗಿ ಸಿ. ಡಿ. ದೇಶಮುಖ ಅವರು ನೇಮಕಗೊಂಡಿದ್ದರು. ಯುಜಿಸಿ ಅಧ್ಯಕ್ಷರ ಅಧಿಕಾರಾವಧಿ ಐದು ವರ್ಷ ಎಂದು ನಿಗದಿಪಡಿಸಲಾಗಿದೆ.. ಪ್ರತೀ ವಿಶ್ವವಿದ್ಯಾನಿಲಯ ಆರಂಭಗೊಳ್ಳುವ ಮುಂಚೆ ಅದಕ್ಕೆ ಸಂಬಂಧಪಟ್ಟ ಕಾಯ್ದೆ ಆಯಾ ರಾಜ್ಯದ ಉಭಯ ಸದನಗಳಲ್ಲಿ ಪಾಸ್ ಆಗಿ ರಾಜ್ಯಪಾಲರ ಅಂಕಿತದೊಂದಿಗೆ ಕಾನೂನು ಆಗಿ ಜಾರಿ ಮಾಡಲಾಗುತ್ತದೆ. ಒಮ್ಮೆ ವಿಶ್ವವಿದ್ಯಾನಿಲಯವೊಂದು ಅಸ್ತಿತ್ವಕ್ಕೆ ಬಂದ ಕೂಡಲೇ ಅದು ಯುಜಿಸಿ ವ್ಯಾಪ್ತಿಗೆ ಒಳಪಡುತ್ತದೆ. ಯುಜಿಸಿಯ ಶರತ್ತುಗಳನ್ನು ಪೂರೈಸಿದರೆ 12ಬಿ ಮಾನ್ಯತೆ ಪಡೆಕೊಳ್ಳುತ್ತದೆ. ಇಲ್ಲದಿದ್ದರೆ ಕೇವಲ ಯುಜಿಸಿ ಮಾನ್ಯತೆಯೊಂದಿಗೆ ಪದವಿ ನೀಡುವ ಸಂಸ್ಥೆಯಾಗಿ ಉಳಿಯುತ್ತದೆ. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಕೇವಲ ಅನುದಾನ ನೀಡುವ ಸಂಸ್ಥೆ ಎಂದೇ ಹಲವರು ಭಾವಿಸಿದ್ದಾರೆ. ಒಟ್ಟು ಉನ್ನತ ಶಿಕ್ಷಣದ ಸ್ವರೂಪವನ್ನು ಯುಜಿಸಿ ನಿರ್ಧರಿಸುತ್ತದೆ. ಯುಜಿಸಿ ಕಾಲಕಾಲಕ್ಕೆ ಸಿದ್ಧಪಡಿಸುವ ರೆಗುಲೇಷನ್‌ಗಳನ್ನು ಕಟ್ಟು ನಿಟ್ಟಿನಿಂದ ಪಾಲಿಸಲಾಗುತ್ತದೆ. ಕೇಂದ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಅಥವಾ ಇನ್ನಾವುದೇ ಪಕ್ಷದ ಸರಕಾರ ಇರಲಿ ಯುಜಿಸಿ ಬಹುತೇಕ ಪಕ್ಷಾತೀತವಾಗಿ ಕಾರ್ಯ ನಿರ್ವಹಿಸುತ್ತದೆ. ಸಾಮಾನ್ಯವಾಗಿ ಯುಜಿಸಿ ರೂಪಿಸುವ ಶೈಕ್ಷಣಿಕ ಮಹತ್ವದ ಕಾನೂನುಗಳನ್ನು ಆಯಾ ರಾಜ್ಯಗಳು ಒಪ್ಪಿಕೊಂಡು ಜಾರಿಗೊಳಿಸುತ್ತವೆ. ಆದರೆ ರಾಜ್ಯಗಳ ಅಸ್ಮಿತೆಗೆ, ಭಾಷೆ -ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳು ಬಂದಾಗ ಯುಜಿಸಿ ರೂಪಿಸುವ ಕಾನೂನುಗಳನ್ನು ಒಪ್ಪಿಕೊಳ್ಳುವುದಿಲ್ಲ.. ಆಗ ಸಂಘರ್ಷ ಶುರುವಾಗುತ್ತದೆ.
ಭಾರತದಲ್ಲಿ ಉನ್ನತ ಶಿಕ್ಷಣವನ್ನು ಅತ್ಯಂತ ಮಹತ್ವದ ಕ್ಷೇತ್ರ ಎಂದು ಪರಿಗಣಿಸಲಾಗಿದೆ. ಉನ್ನತ ಶಿಕ್ಷಣ ಇಲಾಖೆಯನ್ನು ನಿಭಾಯಿಸಲು ರಾಜ್ಯ ಮತ್ತು ಕೇಂದ್ರದಲ್ಲಿ ಸಂಪುಟ ದರ್ಜೆ ಸಚಿವರು ಇದ್ದಾಗಲೂ ರಾಜ್ಯ ವಿಶ್ವವಿದ್ಯಾನಿಲಯಗಳಿಗೆ ಆಯಾ ರಾಜ್ಯದ ರಾಜ್ಯಪಾಲರು ಮತ್ತು ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೆ ರಾಷ್ಟ್ರಪತಿಗಳು ಕುಲಾಧಿಪತಿ ಸ್ಥಾನ ಅಲಂಕರಿಸುತ್ತಾರೆ. ಅಂದರೆ ಆ ಸಂಸ್ಥೆಗಳ ಮುಖ್ಯಸ್ಥರು ರಾಜ್ಯಪಾಲರು -ರಾಷ್ಟ್ರಪತಿಗಳು ಆಗಿರುತ್ತಾರೆ.
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಅನುಕೂಲವಾಗುವಂತೆ ಪಠ್ಯ ಕ್ರಮದ ಸ್ವರೂಪ, ಪದವಿಗಳ ಅವಧಿ, ಸಂಶೋಧನೆಯ ವಿಧಾನ, ಪ್ರಾಧ್ಯಾಪಕರ ನೇಮಕಾತಿ, ಪಿಎಚ್‌ಡಿ ಪದವಿಗೆ ಮಾರ್ಗದರ್ಶಕರ ನಿಯೋಜನೆ ಸೇರಿದಂತೆ ಎಲ್ಲವನ್ನು ಯುಜಿಸಿ ನಿಯಮಗಳ ವ್ಯಾಪ್ತಿಗೆ ಒಳಪಟ್ಟಿರುತ್ತವೆ.
ವಿಶೇಷವಾಗಿ ಪ್ರಾಧ್ಯಾಪಕರ ನೇಮಕ, ಪಿಎಚ್‌ಡಿ ಪದವಿಯ ವಿದ್ಯಾರ್ಹತೆ, ಅದರ ಅವಧಿಗೆ ಸಂಬಂಧಿಸಿದ ನಿಯಮಗಳು ಸ್ಪಷ್ಟವಾಗಿರಲಿಲ್ಲ. 1991ರಲ್ಲಿ ಯುಜಿಸಿಯು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿ ಜಾರಿಗೊಳಿಸಲು ವಿಶ್ವವಿದ್ಯಾನಿಲಯಗಳಿಗೆ ಸೂಚಿಸಿತ್ತು. ಅದಕ್ಕೂ ಮೊದಲು ಕೇವಲ ಸ್ನಾತಕೋತ್ತರ ಪದವಿ ಪೂರೈಸಿದವರು ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡಬಹುದಾಗಿತ್ತು. ಅಂಕಗಳ ಮಿತಿ ಕೂಡಾ ವಿಧಿಸಿರಲಿಲ್ಲ. 1992ರ ಯುಜಿಸಿ ನಿಯಮಗಳು ಅತ್ಯಂತ ವೈಜ್ಞಾನಿಕವಾಗಿ ರೂಪಿಸಿ ಪ್ರಾಧ್ಯಾಪಕರ ನೇಮಕಾತಿಯಿಂದ ಹಿಡಿದು ಪಿಎಚ್‌ಡಿ ಪದವಿಯ ಪ್ರವೇಶ ಪಡೆಯಲು ಅನುಸರಿಸಬಹುದಾದ ವಿಧಾನಗಳನ್ನು ಸ್ಪಷ್ಟಪಡಿಸಿತು.
ಪಿಎಚ್‌ಡಿ ಪ್ರವೇಶಕ್ಕೆ ಮೊದಲು ಮಾನದಂಡಗಳೇ ಇರಲಿಲ್ಲ.. 1991ರಲ್ಲಿ ಮೊದಲ ಬಾರಿಗೆ ಎಂಫಿಲ್ ಪದವಿಯನ್ನು ಪರಿಚಯಿಸಿ ಆ ಪದವಿ ಪೂರೈಸಿದವರು ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಲು ಅರ್ಹರು ಎಂದು ನಿಯಮ ಮಾಡಲಾಯಿತು. ಒಂದೆರಡು ವರ್ಷಗಳ ನಂತರ ವಿಶ್ವವಿದ್ಯಾನಿಲಯಗಳ ಉಪನ್ಯಾಸಕ ಹುದ್ದೆಗೆ ನೆಟ್, ಸೆಟ್ ಅಥವಾ ಎಂಫಿಲ್ ಅಥವಾ ಪಿಎಚ್‌ಡಿ ಪದವಿ ಕಡ್ಡಾಯಗೊಳಿಸಿ ಯುಜಿಸಿ ನಿಯಮಗಳನ್ನು ಮತ್ತಷ್ಟು ವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿತ್ತು. ಪದವಿಪೂರ್ವ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಉಪನ್ಯಾಸಕರು ಕೇವಲ ಸ್ನಾತಕೋತ್ತರ ಪದವಿ ಪಡೆದರೆ ಸಾಕು ಎಂದು ವಿದ್ಯಾರ್ಹತೆ ನಿಗದಿಪಡಿಸಿತು. ಅವರ ಸಂಬಳ ರಾಜ್ಯ ಸ್ಕೇಲ್ ಎಂದೂ ಸ್ಪಷ್ಟಪಡಿಸಿತು. ನಂತರ ರಾಜ್ಯ ಸ್ಕೇಲ್ ಮತ್ತು ಯುಜಿಸಿ ಪೇ ಸ್ಕೇಲ್ ಗಳನ್ನು ಪ್ರತ್ಯೇಕ ಮಾಡಲಾಯಿತು. ಯುಜಿಸಿ ಪೇ ಸ್ಕೇಲ್ ಪಡೆಯುವ ಅಧ್ಯಾಪಕರು, ಪ್ರವಾಚಕರು ಮತ್ತು ಪ್ರಾಧ್ಯಾಪಕರ ನೇಮಕಾತಿಗೆ ವಿದ್ಯಾರ್ಹತೆ, ಸೇವಾ ಅವಧಿ ನಿಗದಿಪಡಿಸಿ ಹೊಸ ನಿಯಮಗಳನ್ನು ಜಾರಿಗೊಳಿಸ ಲಾಯಿತು. ಪದವಿ ಕಾಲೇಜುಗಳ ಶಿಕ್ಷಕರ ನೇಮಕಾತಿಗೂ ಹೊಸ ನಿಯಮಗಳು ಜಾರಿಯಾದವು. ಪದವಿ ಕಾಲೇಜುಗಳನ್ನು ಬೋಧನೆಗೆ ಸೀಮಿತಗೊಳಿಸಿ, ವಿಶ್ವವಿದ್ಯಾನಿಲಯಗಳನ್ನು ಬೋಧನೆ ಮತ್ತು ಸಂಶೋಧನಾ ಕೇಂದ್ರಗಳನ್ನಾಗಿ ಗುರುತಿಸಲಾಯಿತು. ಎಷ್ಟೋ ವರ್ಷಗಳ ಕಾಲ ಪದವಿ ಕಾಲೇಜುಗಳ ಉಪನ್ಯಾಸಕರಿಗೆ ಯುಜಿಸಿ ಪೇ ಸ್ಕೇಲ್ ನೀಡಿದರೂ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಲು ಅವಕಾಶ ಮಾಡಿಕೊಟ್ಟಿರಲಿಲ್ಲ.
ಪದವಿ ಕಾಲೇಜುಗಳ ಉಪನ್ಯಾಸಕರ ನೇಮಕಾತಿಗೂ ನೆಟ್, ಸೆಟ್,
ಎಂಫಿಲ್ ಅಥವಾ ಪಿಎಚ್‌ಡಿ ಕಡ್ಡಾಯಗೊಳಿಸಿದ್ದರಿಂದ ಖೊಟ್ಟಿ ಪ್ರಮಾಣ ಪತ್ರಗಳ ಹಾವಳಿ ಶುರುವಾಯಿತು. ಬಹಳ ಜನರಿಗೆ ನೆಟ್, ಸೆಟ್ ಪಾಸ್ ಮಾಡುವುದು ಸಾಧ್ಯವೇ ಇರಲಿಲ್ಲ. ಪಿಎಚ್‌ಡಿ ಪ್ರವೇಶ ದುರ್ಲಬವಾಗಿತ್ತು. ಆಗ ತಮಿಳುನಾಡಿನ ಅಳಗಪ್ಪ ವಿಶ್ವವಿದ್ಯಾನಿಲಯ ಸೇರಿದಂತೆ ಯುಜಿಸಿ ಮಾನ್ಯತೆ ಪಡೆಯದ ಹಲವು ವಿಶ್ವವಿದ್ಯಾನಿಲಯಗಳಿಂದ ಎಂಫಿಲ್ ಪದವಿ ಪಡೆದ ಅಭ್ಯರ್ಥಿಗಳಿಗೆ ಪದವಿ ಕಾಲೇಜುಗಳ ಉಪನ್ಯಾಸಕರನ್ನಾಗಿ ನೇಮಕ ಮಾಡಲಾಯಿತು. ಆ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಅದರ ಜೊತೆಗೆ ಯುಜಿಸಿ ನಿಯಮ ಉಲ್ಲಂಘಿಸಿ ನೇಮಕಾತಿ ಮಾಡಿದ ಹಲವು ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದವು. ಕೆಲವು ಕಡೆ ನ್ಯಾಯ ದೊರೆಯಿತು. ಇನ್ನು ಕೆಲವು ಕಡೆ ನಿಜವಾದ ಅರ್ಹರಿಗೆ ನ್ಯಾಯ ಸಿಗಲೇ ಇಲ್ಲ. ದುರಂತವೆಂದರೆ ಅಸಂಖ್ಯಾತ ಅಕ್ರಮ ನೇಮಕಾತಿ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲು ತುಳಿಯಲೇ ಇಲ್ಲ.
1992 ರ ಮೊದಲು ಸ್ನಾತಕೋತ್ತರ ಪದವಿ ಪೂರೈಸಿದವರಿಗೆ ಪಿಎಚ್‌ಡಿ ಪ್ರವೇಶ ಪಡೆಯಲು ಮತ್ತು ವಿಶ್ವವಿದ್ಯಾನಿಲಯದ ಉಪನ್ಯಾಸಕ (ಈಗ ಅದು ಸಹಾಯಕ ಪ್ರಾಧ್ಯಾಪಕ ಹುದ್ದೆಯಾಗಿದೆ )ಹುದ್ದೆ ಪಡೆಯಲು ಪ್ರತಿ ಶತ 55 ಅಂಕಗಳ ಕಡ್ಡಾಯ ನೀತಿಗೆ ವಿನಾಯಿತಿ ನೀಡಲಾಗಿತ್ತು.
ಆದರೆ 1992ರ ನಂತರ ಸ್ನಾತಕೋತ್ತರ ಪದವಿ ಪಡೆದವರು ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಉಪನ್ಯಾಸಕರ ಅಥವಾ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಹಾಕಲು ಪ್ರತಿಶತ 55 ಅಂಕಗಳಿರುವುದು ಕಡ್ಡಾಯ ಮಾಡಿದರು. ಅಷ್ಟು ಮಾತ್ರವಲ್ಲ,ಆ ಹುದ್ದೆಗೆ ಸೇರಲು ನೆಟ್, ಸೆಟ್, ಎಂಫಿಲ್ ಅಥವಾ ಪಿಎಚ್‌ಡಿ ಪದವಿ ಹೊಂದಿರುವುದು ಕಡ್ಡಾಯಗೊಳಿಸಿದರು. ಆ ವಿದ್ಯಾರ್ಹತೆ ಹೊಂದದವರು ಉಪನ್ಯಾಸಕರ ಅಥವಾ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸುವಂತಿಲ್ಲ.
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಉಪನ್ಯಾಸಕರು -ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಪ್ರಾಧ್ಯಾಪಕರ ಹುದ್ದೆಗೆ ವಿದ್ಯಾರ್ಹತೆ, ಸೇವಾವಧಿ ಮತ್ತು ಇನ್ನಿತರ ನಿಯಮಗಳನ್ನು ಕಡ್ಡಾಯಗೊಳಿಸಿ ಕಟ್ಟುನಿಟ್ಟಿನ ಕಾನೂನು ರೂಪಿಸಿದ್ದರೂ,ಕರ್ನಾಟಕದ ಹಲವು ವಿಶ್ವವಿದ್ಯಾನಿಲಯಗಳು ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ನೇಮಕಾತಿ ಮಾಡಿದ ನೂರಾರು ನಿದರ್ಶನಗಳಿವೆ. ಲೆಕ್ಕ ಪರಿಶೋಧನಾ ಇಲಾಖೆಯವರು ಗಂಭೀರವಾಗಿ ಆಕ್ಷೇಪಿಸಿದ್ದಾರೆ. ಸದನ ಸಮಿತಿಯ ವರದಿಗಳು ಅಕ್ರಮ ನೇಮಕಾತಿಗಳನ್ನು ರದ್ದು ಪಡಿಸಬೇಕೆಂದು ಶಿಫಾರಸು ಮಾಡಿವೆ. ಹೀಗಿದ್ದೂ ಅಕ್ರಮ ನೇಮಕಾತಿಗೆ ಕಡಿವಾಣ ಬಿದ್ದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಿಲ್ಲ.
ಹಾಗಾದರೆ ಅಕ್ರಮ ನೇಮಕಾತಿ ಎಂದರೆ ಯಾವುದು ಎಂಬ ಗಂಭೀರ ಸ್ವರೂಪದ ಪ್ರಶ್ನೆ ಉದ್ಭವಿಸುತ್ತದೆ. ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಎಲ್ಲ ನೇಮಕಾತಿಗಳು ಅಕ್ರಮವಲ್ಲ. ಹಾಗೆಯೇ ಯುಜಿಸಿ ನಿಯಮಗಳ ಉಲ್ಲಂಘನೆ ಎನಿಸುವುದಿಲ್ಲ. ಕರ್ನಾಟಕ ಸರಕಾರ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಯುಜಿಸಿ ನಿಯಮ ಅನುಸರಿಸದೆ ತನ್ನದೇ ನಿಯಮಗಳನ್ನು ರೂಪಿಸಿಕೊಂಡಿದೆ. ಆ ನಿಯಮಗಳಲ್ಲೂ ಏಕರೂಪತೆ ಇಲ್ಲ. ನಿದರ್ಶನಕ್ಕೆ ಗಮನಿಸಿ: ಸರಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಕರ್ನಾಟಕ ಪರೀಕ್ಷೆ ಪ್ರಾಧಿಕಾರ ನಡೆಸುವ ಪ್ರವೇಶ ಪರೀಕ್ಷೆಗಳ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ. ಕಲಿಕಾ ಸಾಮರ್ಥ್ಯ ಪತ್ತೆ ಹಚ್ಚುವ ಒಂದು ಸಣ್ಣ ಮೌಖಿಕ ಸಂದರ್ಶನ ಕೂಡ ನಡೆಸುವುದಿಲ್ಲ. ಈ ಹಿಂದೆ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಭರ್ತಿ ಮಾಡುತ್ತಿದ್ದರು. ಒಂದು ಹುದ್ದೆಗೆ ಹೆಚ್ಚು ಅಂಕ ಪಡೆದ ಮೂವರನ್ನು ಸಂದರ್ಶನಕ್ಕೆ ಆಹ್ವಾನಿಸಿ ಒಬ್ಬರನ್ನು ಆಯ್ಕೆ ಮಾಡುತ್ತಿದ್ದರು. ಈಗ ಅರ್ಜಿ ಸಲ್ಲಿಸಿದ ಎಲ್ಲರನ್ನೂ ಒಎಂಆರ್ ಸೀಟ್ ಪರೀಕ್ಷೆಯ ಮೂಲಕ ನೇರ ನೇಮಕಾತಿ ಮಾಡಿಕೊಳ್ಳುತ್ತಾರೆ. ಇಲ್ಲಿ ನೆಟ್, ಸೆಟ್ ಅಥವಾ ಪಿಎಚ್‌ಡಿ ಪದವಿ ಪಡೆದವರಿಗೂ ಒಎಂಆರ್ ಪರೀಕ್ಷೆ ಕಡ್ಡಾಯ. ಪಾರದರ್ಶಕ ನೇಮಕಾತಿಗಾಗಿ ಈ ವಿಧಾನ ಎಂಬ ಸಮರ್ಥನೆ ನೀಡಲಾಗಿತ್ತು. ಒಎಂಆರ್ ಸೀಟ್ ಗಳನ್ನು ಟ್ಯಾಂಪೆರ್ ಮಾಡುತ್ತಾರೆ ಎಂಬುದು ಸಾಬೀತಾದ ಮೇಲೂ ಅದೇ ಪದ್ಧತಿ ಮುಂದುವರಿದಿದೆ..
ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಖಾಸಗಿ ಪದವಿ(ಅನುದಾನಿತ ) ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಬೇರೊಂದು ವಿಧಾನ ಅನುಸರಿಸುತ್ತಿದ್ದಾರೆ. ಕಾಲೇಜು ಆಡಳಿತ ಮಂಡಳಿಯವರು, ವಿಷಯ ತಜ್ಞರು ಮತ್ತು ಶಿಕ್ಷಣ ಇಲಾಖೆಯ ಪ್ರತಿನಿಧಿಗಳನ್ನೊಳಗೊಂಡ ಆಯ್ಕೆ ಸಮಿತಿ ಮೌಖಿಕ ಸಂದರ್ಶನದ ಮೂಲಕ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮಾಡುತ್ತದೆ. ಖಾಸಗಿ ಕಾಲೇಜುಗಳು ಯಾವುದೇ ಪ್ರವೇಶ ಪರೀಕ್ಷೆ ನಡೆಸುವುದಿಲ್ಲ. ವಿಶ್ವವಿದ್ಯಾನಿಲಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಒಎಂಆರ್ ಸೀಟ್ ಪರೀಕ್ಷೆಯ ಮೂಲಕ ಭರ್ತಿ ಮಾಡಲಾಗುತ್ತದೆ. ವಿಶ್ವವಿದ್ಯಾನಿಲಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಸಂದರ್ಶನದ ಮೂಲಕ ಭರ್ತಿ ಮಾಡಬೇಕೆಂದು ಯುಜಿಸಿ ನಿಯಮ ರೂಪಿಸಿದೆ. ಒಂದೆಡೆ ಕರ್ನಾಟಕ ಸರಕಾರವೇ ಯುಜಿಸಿ ನಿಯಮಗಳಿಗೆ ಗೌರವ ನೀಡುವುದಿಲ್ಲ.. ಇನ್ನೊಂದೆಡೆ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಯುಜಿಸಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ನೇಮಕಾತಿ ಮಾಡಿಕೊಂಡಿದ್ದಾರೆ.
1997ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಅಧ್ಯಾಪಕರ ಹುದ್ದೆಗೆ ಅಧಿಸೂಚನೆ ಹೊರಡಿಸಿತ್ತು. ಆ ಅಧಿಸೂಚನೆಯನ್ನು ಆಯ್ದ ಪತ್ರಿಕೆಗಳಲ್ಲಿ ಜಾಹೀರಾತು ರೂಪದಲ್ಲಿ ಪ್ರಕಟಿಸಲಾಗಿತ್ತು. ಆ ಅಧಿಸೂಚನೆಯಲ್ಲಿ ಅಧ್ಯಾಪಕರ ಹುದ್ದೆಗೆ ನೆಟ್, ಸೆಟ್, ಅಥವಾ
ಎಂಫಿಲ್, ಪಿಎಚ್‌ಡಿ ವಿದ್ಯಾರ್ಹತೆ ಕಡ್ಡಾಯ ಎಂದೂ ನಮೂದಿಸ
ಲಾಗಿತ್ತು.. ದುರಂತವೆಂದರೆ, ಎಂಟು ಜನ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನಮೂದಿಸಿದ ವಿದ್ಯಾರ್ಹತೆ ಇಲ್ಲದಿದ್ದರೂ ಅಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ನಿಯಮಾನುಸಾರ ಕಡ್ಡಾಯಗೊಳಿಸಿದ ವಿದ್ಯಾರ್ಹತೆ ಹೊಂದದ ಅಭ್ಯರ್ಥಿಗಳ ಅರ್ಜಿಯನ್ನು ತಿರಸ್ಕರಿಸಬೇಕು. ಆದರೆ ಕನ್ನಡ ವಿಶ್ವವಿದ್ಯಾನಿಲಯ ತನ್ನದೇ ಅಧಿಸೂಚನೆಯಲ್ಲಿ ಕಡ್ಡಾಯಗೊಳಿಸಿದ ವಿದ್ಯಾರ್ಹತೆ ಹೊಂದದ ಎಂಟು ಜನ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನಕ್ಕೆ ಕರೆದು ಆಯ್ಕೆ ಮಾಡಿ ನೇಮಕಾತಿ ಆದೇಶ ನೀಡಿತ್ತು. ಹಾಗೆ ನೋಡಿದರೆ ಆಗ ನೆಟ್, ಸೆಟ್ ಅಥವಾ ಎಂಫಿಲ್, ಪಿಎಚ್‌ಡಿ ಪದವಿ ಪಡೆದುಕೊಂಡಿದ್ದ ನೂರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿಲ್ಲ.
ಇಂಥ ವಿದ್ಯಾರ್ಹತೆ ಇದ್ದವರು ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಿ,ವಿದ್ಯಾರ್ಹತೆ ಇಲ್ಲದವರನ್ನು ನೇಮಕಾತಿ ಮಾಡಿದರೆ ಅದು ಅಕ್ರಮ ಎನಿಸಿಕೊಳ್ಳುತ್ತದೆ. ಅಧಿಸೂಚನೆಯಲ್ಲಿ ನಮೂದಿಸಿದ ವಿದ್ಯಾರ್ಹತೆ ಹೊಂದಿದ ನೂರು ಅಭ್ಯರ್ಥಿಗಳಲ್ಲಿ ಯಾರನ್ನೇ ಆಯ್ಕೆ ಮಾಡಿದರೂ ಅದು ಆಯ್ಕೆ ಸಮಿತಿಯ ಪರಮಾಧಿಕಾರ ಎನಿಸಿಕೊಳ್ಳುತ್ತದೆ. ಅಂಥ ಆಯ್ಕೆಯನ್ನು ಅಕ್ರಮ ಎಂದು ಹೇಳಲಾಗದು.
ಸಹ ಪ್ರಾಧ್ಯಾಪಕರ ಹುದ್ದೆಗೆ : ಸಹಾಯಕ ಪ್ರಾಧ್ಯಾಪಕರಾಗಿ ಎಂಟು ವರ್ಷ ಸೇವೆ ಸಲ್ಲಿಸಿದವರು (ಪದವಿ ಕಾಲೇಜು ಅಥವಾ ವಿಶ್ವವಿದ್ಯಾನಿಲಯ ), ಪಿಎಚ್‌ಡಿ ಪದವಿ ಪಡೆದವರು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು ಎಂದು ಅಧಿಸೂಚನೆಯಲ್ಲಿ ನಮೂದಿಸಿರುತ್ತಾರೆ. ಆದರೆ ಎಂಟು ವರ್ಷ ಸೇವಾವಧಿ ಇಲ್ಲದ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಅಕ್ರಮ ನೇಮಕಾತಿ ಎನಿಸಿಕೊಳ್ಳುತ್ತದೆ. ಎಂಟು ವರ್ಷ ಸೇವಾವಧಿ ಪೂರೈಸಿದ ಅರ್ಹ ಅಭ್ಯರ್ಥಿಗಳ ಪೈಕಿ ಯಾರನ್ನೇ ಆಯ್ಕೆ ಮಾಡಿದರೂ ಅದು ಸಕ್ರಮ ನೇಮಕಾತಿ ಎನಿಸಿಕೊಳ್ಳುತ್ತದೆ. ಅರ್ಹ ನೂರು ಜನರಲ್ಲಿ ತಮಗೆ ಬೇಕಾದ ಕಡಿಮೆ ಪ್ರತಿಭೆಯುಳ್ಳ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೂ ಆ ಆಯ್ಕೆಯನ್ನು ಅಕ್ರಮ ಎಂದು ಹೇಳಲಾಗದು. ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗಲೇ ಅಧಿಸೂಚನೆಯಲ್ಲಿ ಅರ್ಹತೆಯನ್ನು ಸ್ಪಷ್ಟವಾಗಿ ನಮೂದಿಸಿರುತ್ತಾರೆ. ಸಹಾಯಕ ಪ್ರಾಧ್ಯಾಪಕರಾಗಿ ಹತ್ತು ವರ್ಷ ಕಡ್ಡಾಯವಾಗಿ ಸೇವಾವಧಿ ಪೂರೈಸಿರಬೇಕು. ಅಷ್ಟು ಮಾತ್ರವಲ್ಲ ಒಬ್ಬ ಪಿಎಚ್‌ಡಿ ವಿದ್ಯಾರ್ಥಿಗೆ ಯಶಸ್ವಿಯಾಗಿ ಮಾರ್ಗದರ್ಶನ ಮಾಡಿರಬೇಕು. ಈ ಅರ್ಹತೆ ಹೊಂದದವರು ಅರ್ಜಿ ಸಲ್ಲಿಸಲು ಬರುವುದಿಲ್ಲ. ಯುಜಿಸಿ ಕಡ್ಡಾಯಗೊಳಿಸಿದ ಅರ್ಹತೆ. ದುರಂತವೆಂದರೆ ಕರ್ನಾಟಕದ ಬಹುತೇಕ ವಿಶ್ವವಿದ್ಯಾನಿಲಯಗಳಲ್ಲಿ ಯುಜಿಸಿ ನಿಯಮಗಳನ್ನು ಉಲ್ಲಂಘಿಸಿ ನೇಮಕವಾದ ಅಭ್ಯರ್ಥಿಗಳೇ ಜಾಸ್ತಿ ಇದ್ದಾರೆ.
ಯುಜಿಸಿ ನಿಯಮಗಳನ್ನು ನೇಮಕಾತಿಯಲ್ಲಿ ಮಾತ್ರವಲ್ಲ, ಪಿಎಚ್‌ಡಿ ವಿದ್ಯಾರ್ಥಿಗೆ ಮಾರ್ಗದರ್ಶಕರನ್ನು ಆಯ್ಕೆ ಮಾಡುವಾಗ, ಪಿಎಚ್‌ಡಿ ಸೀಟು ನೀಡುವಾಗ ಅನುಸರಿಸಬೇಕಾಗುತ್ತದೆ. ಸ್ನಾತಕೋತ್ತರ ಕೇಂದ್ರದಲ್ಲಿ ಅಥವಾ ವಿಶ್ವವಿದ್ಯಾನಿಲಯದಲ್ಲಿ ಖಾಯಂ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುವವರಿಗೆ ಮಾತ್ರ ಪಿಎಚ್‌ಡಿ ಮಾರ್ಗದರ್ಶಕರನ್ನಾಗಿ ನೇಮಕ ಮಾಡಬೇಕು ಎಂಬ ನಿಯಮಗಳನ್ನು ಯುಜಿಸಿ ರೂಪಿಸಿದೆ. ಆದರೆ ಬಹುತೇಕ ಕಡೆ, ಸ್ನಾತಕೋತ್ತರ ಕೇಂದ್ರವಿಲ್ಲದ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರನ್ನು ಪಿಎಚ್‌ಡಿ ಮಾರ್ಗದರ್ಶಕರನ್ನಾಗಿ ನೇಮಕ ಮಾಡಲಾಗಿದೆ. ಇತ್ತೀಚಿಗೆ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿಗೂ ಯುಜಿಸಿ ನೆಟ್, ಸೆಟ್ ಅಥವಾ ಪಿಎಚ್‌ಡಿ ವಿದ್ಯಾರ್ಹತೆ ಹೊಂದಿರುವುದು ಕಡ್ಡಾಯಗೊಳಿಸಿತ್ತು. ಕೆಲವರು ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯ ಅವರ ಮನವಿಯನ್ನು ಪುರಸ್ಕರಿಸಲಿಲ್ಲ. ಆಗ ಹಲವರು ನಕಲಿ ಪಿಎಚ್‌ಡಿ ಪದವಿ ಪ್ರಮಾಣ ಪತ್ರಗಳನ್ನು ಸಲ್ಲಿಸಿ ನೌಕರಿ ಉಳಿಸಿಕೊಂಡಿದ್ದರು. ಆ ಹಗರಣ ಬಯಲಿಗೆ ಬಂದ ಮೇಲೆ ನೌಕರಿಗೆ ರಾಜೀನಾಮೆ ಸಲ್ಲಿಸಿದ್ದರು.
ಒಂದು ಹುದ್ದೆಗೆ ನಿರ್ದಿಷ್ಟ ವಿದ್ಯಾರ್ಹತೆ ನಿಗದಿಪಡಿಸಿದ ಮೇಲೆ ಅರ್ಹರು ಮಾತ್ರ ಅರ್ಜಿ ಹಾಕುವಂತೆ ನೋಡಿಕೊಳ್ಳುವುದು ನೇಮಕಾತಿ ಪ್ರಾಧಿಕಾರದ ಆದ್ಯ ಕರ್ತವ್ಯ. ಅಕ್ರಮವಾಗಿ ನುಸುಳುವವರನ್ನು ಮೊದಲ ಹೆಜ್ಜೆಯಲ್ಲಿ ಪತ್ತೆ ಹಚ್ಚಿ ಅನರ್ಹರ ಪಟ್ಟಿಯಲ್ಲಿ ಸೇರಿಸುವುದು ಜಾಣ ನಡೆ. ಯುಜಿಸಿ ರೂಪಿಸಿದ, ಸರಕಾರ ಒಪ್ಪಿಕೊಂಡ ವಿದ್ಯಾರ್ಹತೆಯ ಮಾನದಂಡಗಳನ್ನು ಉಲ್ಲಂಘಿಸಿ ನೌಕರಿ ಪಡೆಯುವುದು ಮತ್ತು ನೀಡುವುದು ಕ್ರಿಮಿನಲ್ ಅಪರಾಧ ಎನಿಸಿಕೊಳ್ಳುತ್ತದೆ. ಮಾನ್ಯತೆ ಇಲ್ಲದ ವಿಶ್ವವಿದ್ಯಾನಿಲಯದ ಪದವಿ ಪ್ರಮಾಣ ಪತ್ರ ಲಗತ್ತಿಸಿ ನೌಕರಿ ಪಡೆಯುವುದು ಅಪರಾಧವೇ.
ಕರ್ನಾಟಕ ಸರಕಾರ ಅಕ್ರಮಗಳ ತಡೆಗೆ ಒಂದು ವ್ಯವಸ್ಥೆ ರೂಪಿಸಬೇಕು. ಅಧಿಸೂಚನೆಯಲ್ಲಿ ನಮೂದಿಸಿದ ವಿದ್ಯಾರ್ಹತೆ ಇಲ್ಲದ ಅನೇಕರು ಸದ್ಯ ಸೇವೆಯಲ್ಲಿದ್ದಾರೆ. ಅಂಥವರನ್ನು ಪತ್ತೆ ಹಚ್ಚಿ ಹೊರ ದಬ್ಬಿದರೆ ಅಕ್ರಮ ಮಾಡುವವರು ಮತ್ತು ಅದಕ್ಕೆ ಬೆಂಬಲ ನೀಡುವವರಿಗೆ ಎಚ್ಚರಿಸಿದಂತಾಗುತ್ತದೆ. ಒಂದು ಹುದ್ದೆಗೆ ಒಂದು ವಿದ್ಯಾರ್ಹತೆ ನಿಗದಿಪಡಿಸಿದ ಮೇಲೆ ಅರ್ಹರ ಪ್ರವೇಶ ಮತ್ತು ಅನರ್ಹರ ನಿರ್ಬಂಧವಾಗುವಂತೆ ಮಾಡುವುದು ಉನ್ನತ ಶಿಕ್ಷಣ ಇಲಾಖೆಯ ಜವಾಬ್ದಾರಿಯಾಗಬೇಕು. ಆಗ ಮಾತ್ರ ಉನ್ನತ ಶಿಕ್ಷಣ ಇಲಾಖೆಯ ಮಾನ ಮರ್ಯಾದೆ, ಘನತೆ ಗೌರವ ಹೆಚ್ಚುತ್ತದೆ. ತುಮಕೂರು ವಿಶ್ವವಿದ್ಯಾನಿಲಯದ ಇಬ್ಬರು ಪ್ರಾಧ್ಯಾಪಕರು ಇತ್ತೀಚೆಗೆ ಅಕ್ರಮ ಭಡ್ತಿ ಪಡೆದ ಮಾದರಿಯಲ್ಲೇ ಎಲ್ಲವೂ ನಡೆಯುತ್ತವೆ. ಒಂದು ಹುದ್ದೆಗೆ ಒಬ್ಬ ಅಭ್ಯರ್ಥಿ ಅರ್ಹನಲ್ಲ ಎಂದು ಗೊತ್ತಿದ್ದೂ ಅರ್ಜಿ ಸಲ್ಲಿಸಿ ಆಯ್ಕೆಯಾಗುತ್ತಾನೆ ಎಂದ ಮೇಲೆ ಆತ ಮಹಾನ್ ಕ್ರಿಮಿನಲ್ ವ್ಯಕ್ತಿ ಎಂದೇ ಪರಿಗಣಿಸಬೇಕಾಗುತ್ತದೆ. ಶಿಕ್ಷಣ ಕ್ಷೇತ್ರದ ಅಪರಾಧಗಳು ಒಂದು ಜನಾಂಗವನ್ನು ಪ್ರಭಾವಿಸುತ್ತವೆ.
ಆ ಕಾರಣಕ್ಕೆ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು.