ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ವೋಟ್ ಬ್ಯಾಂಕ್ ಮಾತ್ರ!
ಮುಸ್ಲಿಮರೆಂದರೆ ಭಯೋತ್ಪಾದಕರು, ಪಾಕಿಸ್ತಾನದ ಏಜೆಂಟರು ಎಂಬಂತೆ ಬಿಂಬಿಸಿ ಅಪಪ್ರಚಾರ ಮಾಡುವ ಬಿಜೆಪಿ, ಆರೆಸ್ಸೆಸ್‌ನವರು ಒಂದು ಮಿಷನ್‌ನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರ, ಆ ಸರಕಾರದ ಭಾಗವಾಗಿರುವ ಮಂತ್ರಿಗಳು, ಶಾಸಕರು ಮುಸ್ಲಿಮ್ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್‌ನಂತೆ ಬಳಸಿಕೊಳ್ಳುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಮುಸ್ಲಿಮ್ ಅಭ್ಯರ್ಥಿಗೆ ನೀಡದಿರುವುದು ಕಾಕತಾಳೀಯ ಅಲ್ಲ ಅಥವಾ ಚುನಾವಣೆ ಗೆಲ್ಲುವ ತಂತ್ರವೂ ಅಲ್ಲ. ಅದು ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರ ಮನಸ್ಥಿತಿ.
ಭಾರತೀಯ ಜನತಾ ಪಕ್ಷವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿಯಂತ್ರಿಸುತ್ತದೆ ಎಂಬುದು ಹೊಸ ಮಾತಲ್ಲ. ಆರೆಸ್ಸೆಸ್ ಉದ್ದೇಶ ಈಡೇರಿಕೆಗೆ ಭಾರತೀಯ ಜನತಾ ಪಕ್ಷ ಒಂದು ಸಾಧನವಷ್ಟೇ. ಆರೆಸ್ಸೆಸ್ ಎಷ್ಟೇ ಸಾಮರಸ್ಯದ ಮಾತುಗಳನ್ನಾಡಿದರೂ ಅದು ಮುಸ್ಲಿಮ್ ಸಮುದಾಯದ ಬಗ್ಗೆ ಪೂರ್ವಾಗ್ರಹಪೀಡಿತ ನಿಲುವು ಇಟ್ಟುಕೊಂಡಿದೆ. ಆರೆಸ್ಸೆಸ್ ಮೂಲದ ಬಹುಪಾಲು ಬಿಜೆಪಿ ಮುಖಂಡರು ‘‘ನಮಗೆ ಮುಸ್ಲಿಮ್ ಮತಗಳು ಬೇಕಾಗಿಲ್ಲ’’-ಎಂದು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಾರೆ. ಬಿ.ಎಸ್. ಯಡಿಯೂರಪ್ಪ ಅವರಂತಹ ಕೆಲವೇ ಬಿಜೆಪಿ ನಾಯಕರು ಮುಸ್ಲಿಮ್ ವಿರೋಧಿ ನೀತಿ ಅನುಸರಿಸದೆ ಎಲ್ಲರ ಒಳಗೊಳ್ಳುವಿಕೆಯ ಮಂತ್ರ ಜಪಿಸುತ್ತ ಅಲ್ಪ ಮಟ್ಟಿಗೆ ಸಾಮರಸ್ಯ ಕಾಪಾಡಿದ ನಿದರ್ಶನಗಳಿವೆ. ಕರ್ನಾಟಕವೂ ಸೇರಿದಂತೆ ಭಾರತದಾದ್ಯಂತ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮುಸ್ಲಿಮ್ ಸಮುದಾಯದವರಿಗೆ ಟಿಕೆಟ್ ನೀಡುವುದಿಲ್ಲ.
ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಆಯ್ದ ಕೆಲ ಮುಸ್ಲಿಮರಿಗೆ ಪಕ್ಷದ ವಕ್ತಾರನ ಸ್ಥಾನ ಮತ್ತು ರಾಜ್ಯಸಭಾ ಹುದ್ದೆ ನೀಡಲಾಗಿತ್ತು. ಕಾಂಗ್ರೆಸ್ ಪಕ್ಷದಿಂದ ಹೊರ ಬಂದ ನಜ್ಮಾ ಹೆಫ್ತುಲ್ಲಾ, ಆರಿಫ್ ಮುಹಮ್ಮದ್ ಖಾನ್ ಅವರಿಗೆ ಬಿಜೆಪಿ ಉನ್ನತ ಹುದ್ದೆ ನೀಡಿತ್ತು. ಆರಿಫ್ ಮುಹಮ್ಮದ್ ಖಾನ್ ಅವರು ಶಾಬಾನು ಪ್ರಕರಣದಲ್ಲಿ ದಿ. ರಾಜೀವ್ ಗಾಂಧಿಯವರ ಜೊತೆಗೆ ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದ ಕಾರಣಕ್ಕೆ ಕಾಂಗ್ರೆಸ್ ತೊರೆದಿದ್ದರು. ಆನಂತರ ಮೋದಿ ಆಡಳಿತದಲ್ಲಿ ಅವರಿಗೆ ಕೇರಳ ರಾಜ್ಯಪಾಲ ಹುದ್ದೆ ಸೇರಿದಂತೆ ರಾಜಕೀಯ ನೆಲೆ ಕಲ್ಪಿಸಲಾಗಿತ್ತು. ವಿವಾದಿತ ಬಾಬರಿ ಮಸೀದಿ-ರಾಮಜನ್ಮ ಭೂಮಿ ನ್ಯಾಯಪೀಠದಲ್ಲಿದ್ದ ಕರ್ನಾಟಕದ ಅಬ್ದುಲ್ ನಝೀರ್ ಅವರಿಗೂ ರಾಜ್ಯಪಾಲ ಹುದ್ದೆ ದಯಪಾಲಿಸಿದೆ.
ಕರ್ನಾಟದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವಾಗ ಮುಮ್ತಾಝ್ ಅಲಿಖಾನ್ ಅವರಿಗೆ ಸಚಿವ ಸ್ಥಾನ ನೀಡಿ ಎಂಎಲ್‌ಸಿಯನ್ನಾಗಿಸಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಅಝೀಮ್ ಅವರಿಗೆ ಎಂಎಲ್‌ಸಿ ಸ್ಥಾನ ನೀಡಿದ್ದೂ ಯಡಿಯೂರಪ್ಪನವರೇ. ಮಂಗಳೂರು ಮೂಲದ ಮಾಣಿಪ್ಪಾಡಿ ಅವರನ್ನು ಆರೆಸ್ಸೆಸ್ ನಾಯಕರು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರನ್ನಾಗಿಸಿದ್ದರು. ವಕ್ಫ್ ಆಸ್ತಿಯನ್ನು ಕಾಂಗ್ರೆಸ್ ನಾಯಕರು ಕಬಳಿಸಿದ್ದಾರೆ ಎಂದು ವರದಿ ಸಿದ್ಧಪಡಿಸಿ ರಾಜಕೀಯ ಲಾಭ ಮಾಡಿಕೊಳ್ಳುವುದು ಅವರ ಉದ್ದೇಶವಾಗಿತ್ತು. ಯಡಿಯೂರಪ್ಪ ಅವರು ಮುಸ್ಲಿಮ್ ಸಮುದಾಯದ ಬಗ್ಗೆ ಮೃದು ಧೋರಣೆ ತಳೆಯಲು ಶಿವಮೊಗ್ಗ ಲೋಕಸಭೆ ಮತ್ತು ಶಿಕಾರಿಪುರ ವಿಧಾನಸಭಾ ಚುನಾವಣೆಯಲ್ಲಿ ಆ ಸುಮುದಾಯ ಮೊದಲಿಂದಲೂ ಯಡಿಯೂರಪ್ಪ ಬೆನ್ನಿಗೆ ನಿಂತಿದ್ದು ಕಾರಣವಾಗಿರಬಹುದು. ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮ್ ಸಮುದಾಯದ ಬೆಂಬಲದಿಂದ ಗೆಲ್ಲುತ್ತಿದ್ದ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಲೇ ಉಗ್ರ ಹಿಂದುತ್ವವಾದಿಯಾಗಿ ಬದಲಾದರು. ಬಿ.ಎಲ್. ಸಂತೋಷ್ ಮತ್ತು ನಳಿನ್ ಕುಮಾರ್ ಕಟೀಲು ಅವರನ್ನು ಮೀರಿಸುವಷ್ಟು ಕೋಮುವಾದಿ ಮನಸ್ಥಿತಿ ರೂಢಿಸಿಕೊಂಡ ಬೊಮ್ಮಾಯಿ ಹಿಜಾಬ್ ವಿವಾದಕ್ಕೆ ತುಪ್ಪ ಸುರಿದರು. ಯಡಿಯೂರಪ್ಪ ಕೂಡಾ ಜಾರಿಗೆ ತರದ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದರು. ಎಲ್ಲಕ್ಕಿಂತಲೂ ಮಿಗಿಲಾಗಿ ಮುಸ್ಲಿಮ್ ಸಮುದಾಯಕ್ಕಿರುವ ಉದ್ಯೋಗ ಮತ್ತು ಶಿಕ್ಷಣಕ್ಕಾಗಿರುವ 2ಬಿಯಡಿ ಸಿಗುತ್ತಿದ್ದ ಪ್ರತಿಶತ ನಾಲ್ಕರಷ್ಟು ಮೀಸಲಾತಿಯನ್ನು ಕಸಿದುಕೊಂಡರು. ಬಸವರಾಜ ಬೊಮ್ಮಾಯಿಯವರ ಅತಿಯಾದ ಮುಸ್ಲಿಮ್ ವಿರೋಧಿ ನೀತಿಯಿಂದಾಗಿ ಶಿಗ್ಗಾವಿ ವಿಧಾನಸಭಾ ಉಪಚುನಾವಣೆಯಲ್ಲಿ ಅವರ ಮಗ ಭರತ್ ಬೊಮ್ಮಾಯಿ ಹೀನಾಯವಾಗಿ ಸೋಲಬೇಕಾಯಿತು. ಜನತಾ ದಳದ ಹಿರಿಯ ನಾಯಕರಾಗಿದ್ದ ಎಸ್.ಆರ್. ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಜನ್ಮತಃ ಮುಸ್ಲಿಮ್ ವಿರೋಧಿಯಾಗಿರಲಿಲ್ಲ. ಆರೆಸ್ಸೆಸ್ ನಾಯಕರನ್ನು ಅತಿಯಾಗಿ ಓಲೈಸಲು ಹೋಗಿ ಮುಸ್ಲಿಮ್ ವಿರೋಧಿ ನೀತಿ ಅನುಸರಿಸಬೇಕಾಯಿತು. ಕರ್ನಾಟಕದ ನಗರ ಮತ್ತು ಮಹಾನಗರದ ಮುಸ್ಲಿಮ್ ಸಮುದಾಯ ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ಆಗಿ ಬೆಂಬಲಿಸುತ್ತಾ ಬಂದಿದೆ. ಗ್ರಾಮೀಣ ಭಾಗದಲ್ಲಿ ಬಿಜೆಪಿ ನಾಯಕರು ಉದಾರಿಯಾಗಿದ್ದ ಸಂದರ್ಭದಲ್ಲಿ ಮಾತ್ರ ಮುಸ್ಲಿಮ್ ಸಮುದಾಯ ಅಂಥವರಿಗೆ ಬೆಂಬಲ ವ್ಯಕ್ತಪಡಿಸುತ್ತಾರೆ. ಜಾತ್ಯತೀತ ಜನತಾ ದಳ ಬಿಜೆಪಿಯೊಂದಿಗೆ ಅಂತರ ಕಾಯ್ದುಕೊಂಡಿದ್ದಾಗ ಕೆಲವು ಕಡೆ ಮುಸ್ಲಿಮ್ ಸಮುದಾಯ ಆ ಪಕ್ಷವನ್ನು ಬೆಂಬಲಿಸಿದ ನಿದರ್ಶನಗಳಿವೆ. ಉಳಿದಂತೆ ಮುಸ್ಲಿಮ್ ಸಮುದಾಯ ಕಾಂಗ್ರೆಸ್ ಪಕ್ಷದ ಖಾಯಂ ವೋಟ್ ಬ್ಯಾಂಕ್. ಕೆಲವೊಮ್ಮೆ ಅಭ್ಯರ್ಥಿ ಮುಸ್ಲಿಮ್ ವಿರೋಧಿಯಾಗಿದ್ದರೂ ಅನಿವಾರ್ಯವಾಗಿ ಬೆಂಬಲಿಸುತ್ತಾ ಬಂದಿದೆೆ.
ಕಾಂಗ್ರೆಸ್ ಪಕ್ಷದಲ್ಲಿ ಸದ್ಯ ಮುಸ್ಲಿಮ್ ಸಮುದಾಯದ ಭಾವನೆಗಳಿಗೆ ಸ್ಪಂದಿಸುವ ಗುಣ ಇರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತ್ರ. ಮುಸ್ಲಿಮ್ ಟೋಪಿ ಹಾಕಿಕೊಂಡು ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಕರ್ತವ್ಯ ಮುಗಿಯಿತು ಎನ್ನುವ ಮನಸ್ಥಿತಿ ಸಿದ್ದರಾಮಯ್ಯ ಅವರದಲ್ಲ. ಸಾಮಾಜಿಕ ನ್ಯಾಯ ಮತ್ತು ಮುಸ್ಲಿಮ್ ಸಮುದಾಯದ ಬಗೆಗಿನ ಸಿದ್ದರಾಮಯ್ಯ ಅವರ ಪ್ರೀತಿ ಅಚಲವಾದುದು. ಆದರೆ ಅವರೊಬ್ಬರೇ ಎಲ್ಲವನ್ನೂ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಅಂಥ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸರಕಾರ ಮುಸ್ಲಿಮ್ ಸಮುದಾಯವನ್ನು ಕಡೆಗಣಿಸುತ್ತಲೇ ಇರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಬಂದರೆ ಮಾತ್ರ ತಿದ್ದುಪಡಿ ಸಾಧ್ಯವಾಗುತ್ತದೆ.
ಕರ್ನಾಟಕದಲ್ಲಿ ಪ್ರತಿಶತ ಹದಿನಾಲ್ಕರಷ್ಟು ಮುಸ್ಲಿಮ್ ಸಮುದಾಯದ ಜನಸಂಖ್ಯೆ ಇದೆ. ಕಾಂಗ್ರೆಸ್ ಪಕ್ಷದ ಬಹುತೇಕ ಮುಸ್ಲಿಮೇತರ ನಾಯಕರು ಚುನಾವಣೆಯಲ್ಲಿ ಗೆಲುವು ಸಾಧಿಸುವುದೇ ಮುಸ್ಲಿಮ್ ವೋಟ್ ಬ್ಯಾಂಕ್ ಕಾರಣಕ್ಕೆ. ಮುಸ್ಲಿಮ್ ಸಮುದಾಯದ ವೋಟ್ ಬ್ಯಾಂಕ್ ಕಾರಣದಿಂದ ಗೆಲುವು ಸಾಧಿಸುವ ಕಾಂಗ್ರೆಸ್ ನಾಯಕರು ಪ್ರತಿನಿತ್ಯ ಮುಸ್ಲಿಮ್ ವಿರೋಧಿ ನೀತಿ ಅನುಸರಿಸುತ್ತಿರುತ್ತಾರೆ. ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸುವ ಸಮುದಾಯಗಳನ್ನೇ ಓಲೈಸುತ್ತಿರುತ್ತಾರೆ. ಇದು ಈ ನಾಡಿನ ದುರಂತ. ಅರಣ್ಯ ಸಚಿವ ಈಶ್ವರ್ ಖಂಡ್ರೆಯವರಿಗೆ ಭಾಲ್ಕಿಯಲ್ಲಿ ನೂರಕ್ಕೆ ನೂರು ಲಿಂಗಾಯತ ಮತಗಳು ಸಿಗುವುದಿಲ್ಲ. ಯಾಕೆಂದರೆ, ಬಿಜೆಪಿಯಿಂದ ಕಡ್ಡಾಯವಾಗಿ ಲಿಂಗಾಯತ ಸಮುದಾಯದ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಿರುತ್ತಾರೆ. ಭಾಲ್ಕಿ ಮತಕ್ಷೇತ್ರದ ಮರಾಠಾ ಸಮುದಾಯ ಈಶ್ವರ್ ಖಂಡ್ರೆಯವರ ಬಗ್ಗೆ ಪೂರ್ವಾಗ್ರಹ ಪೀಡಿತವಾಗಿದೆ. ಈಶ್ವರ್ ಖಂಡ್ರೆಯವರ ಚುನಾವಣಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವುದು ಕುರುಬ, ಮುಸ್ಲಿಮ್ ಮತ್ತು ದಲಿತರಲ್ಲಿನ ಬಲಗೈ ಸಮುದಾಯಗಳು ಮಾತ್ರ. ಯಾಕೆಂದರೆ ಆ ಮೂರೂ ಸಮುದಾಯಗಳಿಗೆ ಕಾಂಗ್ರೆಸ್ ಬಿಟ್ಟರೆ ಗತಿಯಿಲ್ಲ. ಸಿದ್ದರಾಮಯ್ಯ ಅವರ ಕಾರಣಕ್ಕೆ ಕುರುಬರು, ಖರ್ಗೆಯವರ ಕಾರಣಕ್ಕೆ ದಲಿತರು ಅನಿವಾರ್ಯವಾಗಿ ಕಾಂಗ್ರೆಸ್ ಪರ. ಆದರೆ ಮುಸ್ಲಿಮ್ ಸಮುದಾಯಕ್ಕೆ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವ ಅನಿವಾರ್ಯತೆ ಇದೆ. ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗುವ ಈಶ್ವರ್ ಖಂಡ್ರೆಯವರಿಗೆ ತನ್ನ ಗೆಲುವಿಗೆ ಕಾರಣವಾದ ಸಮುದಾಯಗಳ ಪರ ನಿಲ್ಲಬೇಕೆಂಬ ಕನಿಷ್ಠ ಪ್ರಜ್ಞೆ ಇರುವುದಿಲ್ಲ. ಋಣ ತೀರಿಸುವುದು ದೂರದ ಮಾತಾಯಿತು. ಹಾಗೆ ನೋಡಿದರೆ ಮುಸ್ಲಿಮ್ ಸಮುದಾಯಕ್ಕೆ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಇರುವುದು ಬೀದರ್‌ನಲ್ಲಿ. ಚಿಟಗುಪ್ಪ, ಬೀದರ್ ನಗರ, ಬಸವ ಕಲ್ಯಾಣ, ಚಿಂಚೋಳಿ, ಆಳಂದ, ಔರಾದ, ಭಾಲ್ಕಿ, ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮ್ ಮತದಾರರ ಸಂಖ್ಯಾ ಬಾಹುಳ್ಯವಿದೆ. ಆದರೆ ಸಚಿವ ಈಶ್ವರ್ ಖಂಡ್ರೆಯವರಿಗೆ ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ ಒಬ್ಬ ಮುಸ್ಲಿಮ್ ಅಭ್ಯರ್ಥಿಗೆ ನೀಡಿ ಗೆಲ್ಲಿಸಿಕೊಳ್ಳಬೇಕೆಂಬ ದೊಡ್ಡ ಗುಣ ಬರುವುದೇ ಇಲ್ಲ. ಮಗನಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಳ್ಳುತ್ತಾರೆ. ಒಂದೇ ಒಂದು ವೋಟಿನ ಲಾಭ ಇಲ್ಲದ ಬ್ರಾಹ್ಮಣ ಸಮುದಾಯದ ವ್ಯಕ್ತಿಗೆ ಮಾಧ್ಯಮ ಸಲಹೆಗಾರ ಹುದ್ದೆ ನೀಡುತ್ತಾರೆ. ಆದರೆ ತನ್ನ ಮತ್ತು ಮಗನ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮುಸ್ಲಿಮ್ ಸಮುದಾಯದವರನ್ನು ಅಧಿಕಾರದ ಕೇಂದ್ರಕ್ಕೆ ಬಿಟ್ಟುಕೊಡುವುದೇ ಇಲ್ಲ.
ತಾನು ವೀರಶೈವ ಮಹಾಸಭಾದ ಅಧ್ಯಕ್ಷರನ್ನಾಗಿ ನೇಮಕಗೊಳ್ಳಲು ಬೆಂಬಲಿಸಿದ ಎಸ್.ಎಸ್. ಮಲ್ಲಿಕಾರ್ಜುನ್ ಋಣ ತೀರಿಸಲು ಈಶ್ವರ್ ಖಂಡ್ರೆ ಹರಸಾಹಸ ಪಡುತ್ತಾರೆ. ಮುಖ್ಯಮಂತ್ರಿ ಮನವೊಲಿಸಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ಅತ್ಯಂತ ಅಸಮರ್ಥ ಅಭ್ಯರ್ಥಿ ಸಮರ್ಥ್‌ಗೆ ಕೊಡಿಸುತ್ತಾರೆ. ಮುಸ್ಲಿಮ್ ಸಂಖ್ಯಾ ಬಾಹುಳ್ಯ ಇರುವ ಮತಕ್ಷೇತ್ರದಲ್ಲಿ ಅದೇ ಸಮುದಾಯದ ವ್ಯಕ್ತಿ ಅಭ್ಯರ್ಥಿಯಾಗುವುದು ಸೂಕ್ತ ಎಂದು ಹೇಳುವ ದೊಡ್ಡ ಮನಸ್ಸು ಮಾಡುವುದೇ ಇಲ್ಲ. ಇದೊಂದು ಸ್ಯಾಂಪಲ್ ಮಾತ್ರ. ಮುಸ್ಲಿಮ್ ಸಮುದಾಯದ ಮತಗಳ ಕಾರಣಕ್ಕೆ ಗೆಲ್ಲುವ ಬಹುತೇಕ ಮುಸ್ಲಿಮೇತರ ಕಾಂಗ್ರೆಸ್ ಮುಖಂಡರ ಮನಸ್ಥಿತಿ ಇದೇ ಬಗೆಯದು. ವಿಜಯಪುರ ನಗರದಲ್ಲಿ ಮುಸ್ಲಿಮ್ ಮತದಾರರ ಸಂಖ್ಯೆ ಜಾಸ್ತಿ ಇದೆ. ಆ ಮತಕ್ಷೇತ್ರದಲ್ಲಿ ಎಂ.ಎಲ್. ಉಸ್ತಾದ್ ನಿರಂತರ ಗೆದ್ದು ಮಂತ್ರಿಯೂ ಆಗುತ್ತಿದ್ದರು. ಆದರೆ ವಿಜಯಪುರ ನಗರದಲ್ಲಿ ಮುಸ್ಲಿಮ್ ಅಭ್ಯರ್ಥಿ ಗೆಲ್ಲುವುದು ಸ್ವತಃ ಸಚಿವ ಎಂ.ಬಿ. ಪಾಟೀಲರಿಗೆ ಇಷ್ಟವಿಲ್ಲ. ಕಟ್ಟರ್ ಮುಸ್ಲಿಮ್ ವಿರೋಧಿ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗೆ ಎಂ.ಬಿ. ಪಾಟೀಲ್ ಮ್ಯಾಚ್ ಫಿಕ್ಸಿಂಗ್. ಬಬಲೇಶ್ವರ್ ಮತಕ್ಷೇತ್ರದಲ್ಲಿ ಪಂಚಮಸಾಲಿ ಮತಗಳು ಜಾಸ್ತಿ. ಅಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಗೆಲುವು ಸುಲಭ. ಆ ಕಾರಣಕ್ಕೆ ವಿಜಯಪುರ ನಗರದಲ್ಲಿ ಬಸನಗೌಡ ಗೆಲ್ಲಲು ಎಂ.ಬಿ. ಪಾಟೀಲ್ ಸಹಕರಿಸುತ್ತಾರೆ. ಗೆಲ್ಲುವ ಸಮರ್ಥ ಮುಸ್ಲಿಮ್ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡಿಸಲು ಎಂ.ಬಿ. ಪಾಟೀಲ್ ಮನಸ್ಸು ಮಾಡುವುದೇ ಇಲ್ಲ.
ಬೆಳಗಾವಿಯಲ್ಲಿ ಬಹುತೇಕ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುವುದೇ ಮುಸ್ಲಿಮ್ ಮತಗಳ ಕಾರಣಕ್ಕೆ. ಲಕ್ಷೀ ಹೆಬ್ಬಾಳ್ಕರ್ ಮತಕ್ಷೇತ್ರದಲ್ಲಿ ಮುಸ್ಲಿಮ್ ಸಮುದಾಯ ನಿರ್ಣಾಯಕ. ಆದರೆ ಸ್ಥಳೀಯ ಸಂಸ್ಥೆಗಳ ಎಂಎಲ್‌ಸಿ ಚುನಾವಣೆಯಲ್ಲಿ ಒಬ್ಬ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡಿ ಗೆಲ್ಲಿಸಬೇಕು ಅಂತ ಯಾರಿಗೂ ಅನಿಸುವುದಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಹೋದರ ಚೆನ್ನರಾಜ್ ಹಟ್ಟಿಹೊಳಿಯನ್ನು ಗೆಲ್ಲಿಸಿಕೊಳ್ಳುವುದು ಮುಖ್ಯವಾಗುತ್ತದೆ.
ಹಾಗೆ ನೋಡಿದರೆ ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಕೆ. ಪಾಟೀಲ್ ಅವರೇ ಉತ್ತಮ. ಗದಗ ವಿಧಾನಸಭಾ ಕ್ಷೇತ್ರದಲ್ಲಿ ಪಂಚಮಸಾಲಿ, ಮುಸ್ಲಿಮ್, ವಾಲ್ಮೀಕಿ, ದಲಿತ ಬಲಗೈ ಮತ್ತು ಕುರುಬ ಮತಗಳು ನಿರ್ಣಾಯಕ. ಬಿಜೆಪಿಯಿಂದ ಪಂಚಮಸಾಲಿ ಸಮುದಾಯದ ವ್ಯಕ್ತಿ ಅಭ್ಯರ್ಥಿಯಾಗುವುದರಿಂದ ಆ ಮತಗಳು ಎಚ್.ಕೆ. ಪಾಟೀಲರಿಗೆ ಬೀಳುವುದಿಲ್ಲ. ಮುಸ್ಲಿಮ್ ಮತಗಳು ನಿರ್ಣಾಯಕವಾಗಿರುವುದರಿಂದ ಎಚ್. ಕೆ. ಪಾಟೀಲರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಸಲೀಂ ಅಹ್ಮದ್ ಅವರನ್ನು ಬೆಂಬಲಿಸುತ್ತಾರೆ. ಋಣ ಪ್ರಜ್ಞೆಯೆಂದರೆ ಇದು. ಕರ್ನಾಟಕ ರಾಜ್ಯದಲ್ಲಿ ಮುಸ್ಲಿಮ್ ಸಮುದಾಯದ ಸಂಖ್ಯಾ ಬಾಹುಳ್ಯಕ್ಕೆ ಅನುಗುಣವಾಗಿ ಶಾಸಕರು, ಸಂಸದರು ಇಲ್ಲ. ಪ್ರತಿಶತ ಹದಿನಾಲ್ಕರಷ್ಟು ಜನಸಂಖ್ಯೆಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂಭತ್ತು ಜನ ಮುಸ್ಲಿಮ್ ಶಾಸಕರು ಆಯ್ಕೆಯಾಗಿದ್ದಾರೆ. ಅದು ಕಾಂಗ್ರೆಸ್ ಪಕ್ಷದ ಟಿಕೆಟ್ ಮೇಲೆ. ಬಿಜೆಪಿಯವರು ಒಬ್ಬ ಮುಸ್ಲಿಮ್ ಅಭ್ಯರ್ಥಿಗೂ ಟಿಕೆಟ್ ನೀಡಿರಲಿಲ್ಲ. ಜೆಡಿಎಸ್ ಕೆಲವರಿಗೆ ಟಿಕೆಟ್ ನೀಡಿದ್ದರೂ ಅವರು ಗೆಲವು ಸಾಧಿಸಿರಲಿಲ್ಲ. ಶಿಗ್ಗಾವಿ ಉಪಚುನಾವಣೆ ಗೆಲುವಿನಿಂದಾಗಿ ಮುಸ್ಲಿಮ್ ಶಾಸಕರ ಸಂಖ್ಯೆ ಹತ್ತಕ್ಕೇರಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಏಳು ಜನ ಮುಸ್ಲಿಮ್ ಶಾಸಕರು ಗೆಲುವು ಸಾಧಿಸಿದ್ದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನರೇಂದ್ರ ಮೋದಿಯವರ ಕೋಮುವಾದಿ ರಾಜಕಾರಣದ ಅಬ್ಬರ ಹೆಚ್ಚಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷವೂ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಸ್ಲಿಮ್ ನಾಯಕರಿಗೆ ಅವಕಾಶ ನೀಡುತ್ತಿಲ್ಲ. ಬೆಂಗಳೂರು ಕೇಂದ್ರ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿತ್ತು. ಆ ಅಭ್ಯರ್ಥಿಯೂ ಗೆಲುವು ಸಾಧಿಸಲಿಲ್ಲ. ರಾಜ್ಯಸಭಾ ಸದಸ್ಯ ಡಾ. ನಾಸಿರ್ ಹುಸೇನ್ ಏಕೈಕ ಮುಸ್ಲಿಮ್ ಪ್ರತಿನಿಧಿ. ಅವರು ಸಾಮಾನ್ಯ ಮುಸ್ಲಿಮರೊಂದಿಗೆ ಹೆಚ್ಚಿನ ನಂಟು ಹೊಂದಿಲ್ಲ. ಸಂಸತ್‌ನಲ್ಲಿ ಕರ್ನಾಟಕದ ಮುಸ್ಲಿಮ್ ಪ್ರಾತಿನಿಧ್ಯ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಜಾಫರ್ ಶರೀಫ್, ಆಜೀಝ್ ಶೇಟ್, ಖಮರುಲ್ ಇಸ್ಲಾಂ ಅವರು ಹೋದ ಮೇಲೆ ಮುಸ್ಲಿಮ್ ಸಮುದಾಯದ ಪ್ರಾತಿನಿಧ್ಯಕ್ಕೆ ಹೋರಾಡುವವರೇ ಇಲ್ಲದಂತಾಗಿದೆ. ಸದ್ಯ ಸಿದ್ದರಾಮಯ್ಯ ಒಬ್ಬರೇ ಮುಸ್ಲಿಮ್ ಹಿತ ಕಾಪಾಡುವ ನಾಯಕ ಎನಿಸಿಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಮುಸ್ಲಿಮ್ ಸಮುದಾಯಕ್ಕೆ ಕೊಟ್ಟಿದ್ದು ಕಡಿಮೆ ಹೇಳಿಕೊಳ್ಳುವುದು ಜಾಸ್ತಿ. ಆದರೂ ಬಿಜೆಪಿ ಅಸ್ತ್ರ ಮಾಡಿಕೊಂಡು ಮುಸ್ಲಿಮ್ ಸಮುದಾಯದ ವಿರುದ್ಧ ಕೆಂಡ ಕಾರುತ್ತಲೇ ಇರುತ್ತದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಮ್ ಸಮುದಾಯಕ್ಕೆ ಸಿಗಬೇಕಾದ ಪ್ರಾತಿನಿಧ್ಯ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಮನಗರದಲ್ಲಿ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡಿದ್ದೇ ಮಹಾನ್ ಸಾಧನೆ ಎಂಬ ಭ್ರಮೆಯಲ್ಲಿ ಕೆಪಿಸಿಸಿ. ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಇದ್ದಾರೆ.
ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮುಸ್ಲಿಮ್ ಸಮುದಾಯದವರಿಗೆ ಅತ್ಯಂತ ಕಡಿಮೆ ಪ್ರಾತಿನಿಧ್ಯದೊರೆತಿದೆ. ಕರ್ನಾಟಕದಲ್ಲಿ ಹದಿನೈದಕ್ಕೂ ಹೆಚ್ಚು ಅಕಾಡಮಿ ಮತ್ತು ಪ್ರಾಧಿಕಾರಗಳಿವೆ. ಬ್ಯಾರಿ ಅಕಾಡಮಿ ಅಧ್ಯಕ್ಷತೆ ಬಿಟ್ಟು ಮುಸ್ಲಿಮ್ ಸಮುದಾಯದ ಬೇರೆ ಯಾವ ಸಾಹಿತಿ, ಕಲಾವಿದರಿಗೂ ಅಧ್ಯಕ್ಷ ಹುದ್ದೆ ನೀಡಲಿಲ್ಲ. ಚಲನಚಿತ್ರ ಕ್ಷೇತ್ರದಲ್ಲಿ ಮುಸ್ಲಿಮ್ ಸಮುದಾಯದ ಭಾಗವಹಿಸುವಿಕೆಯೇ ವಿರಳ. ರಂಗಭೂಮಿ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಮುಸ್ಲಿಮ್ ಸಮುದಾಯದ ಸಾಧಕರು ಹೆಚ್ಚಾಗಿದ್ದಾರೆ. ಅವರನ್ನಾದರೂ ಗುರುತಿಸಿ ಅವಕಾಶ ನೀಡಬೇಕಲ್ಲವೇ. ರಂಗಭೂಮಿಗಾಗಿ ಕುಕನೂರು ರೆಹಮಾನವ್ವ ಸೇರಿದಂತೆ ಅಸಂಖ್ಯಾತ ಕಲಾವಿದರು ಬದುಕನ್ನೇ ಪಣಕ್ಕಿಟ್ಟು ರಂಗ ಸೇವೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಸೂಕ್ತ ಪ್ರಾತಿನಿಧ್ಯ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ದುರಂತ ನೋಡಿ, ಬಿಜೆಪಿಯವರು ಕಾಂಗ್ರೆಸ್ ಸರಕಾರದಲ್ಲಿ ಮುಸ್ಲಿಮ್ ಸಮುದಾಯ ಮಾತ್ರ ಹೆಚ್ಚು ಅವಕಾಶ ಪಡೆಯುತ್ತಿದೆ ಎಂಬಂತೆ ಬಿಂಬಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ವಾಸ್ತವದಲ್ಲಿ, ಕಾಂಗ್ರೆಸ್ ಸರಕಾರದಲ್ಲಿ ಸಂಘ ಪರಿವಾರದ ಸಾಹಿತಿ ಕಲಾವಿದರು, ಶಿಕ್ಷಣ ತಜ್ಞರು ಪಡೆದಷ್ಟು ಅವಕಾಶವನ್ನು ಮುಸ್ಲಿಮ್ ಸಮುದಾಯದವರು ಪಡೆಯಲು ಸಾಧ್ಯವಾಗಿಲ್ಲ.
ಕರ್ನಾಟಕದಲ್ಲಿ ಕೃಷಿ, ತೋಟಗಾರಿಕೆ, ಕಾನೂನು, ತಾಂತ್ರಿಕ ವಿಶ್ವವಿದ್ಯಾನಿಲಯಗಳು ಸೇರಿ ಒಟ್ಟು 42 ವಿಶ್ವವಿದ್ಯಾನಿಲಯಗಳಿವೆ. 42 ವಿಶ್ವವಿದ್ಯಾನಿಲಯಗಳಲ್ಲಿ ಒಬ್ಬರು ಮಾತ್ರ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಕುಲಪತಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅತ್ಯಾಸಕ್ತಿಯ ಫಲವಾಗಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ಎ.ಎಂ. ಖಾನ್ ಅವರನ್ನು ಕುಲಪತಿಯನ್ನಾಗಿ ಕಳೆದ ಏಳು ತಿಂಗಳ ಹಿಂದೆ ನೇಮಕ ಮಾಡಲಾಯಿತು. ಆದರೆ ಆ ವಿಶ್ವವಿದ್ಯಾನಿಲಯಕ್ಕೆ ನಿತ್ಯ ಕಿರುಕುಳ ಕೊಡುವ ಶಂಕರಪ್ಪ ವಣಿಕ್ಯಾಳ ಅವರನ್ನು ಕುಲಸಚಿವರನ್ನಾಗಿ ಕಳುಹಿಸಿಕೊಡಲಾಗಿದೆ. ಆರೇಳು ತಿಂಗಳಿಂದ ಪ್ರೊ. ಖಾನ್ ಅವರು ತೊಂದರೆ ಅನುಭವಿಸುತ್ತಿದ್ದರೂ ಆ ಕುಲಸಚಿವರನ್ನು ವರ್ಗಾವಣೆ ಮಾಡುವ ಮನಸ್ಸು ಸರಕಾರ ಮಾಡುತ್ತಿಲ್ಲ.
ನರೇಂದ್ರ ಮೋದಿಯವರು ಮತ್ತು ಸಂಘ ಪರಿವಾರದವರು ಕೋಮುವಾದಿ ನಿಲುವಿನ ಚಲನಚಿತ್ರಗಳನ್ನು ನಿರ್ಮಾಣ ಮಾಡುವ ಮೂಲಕ ವ್ಯವಸ್ಥಿತವಾಗಿ ಮುಸ್ಲಿಮ್ ಸಮುದಾಯದ ವಿರುದ್ಧ ಜನಾಭಿಪ್ರಾಯ ರೂಪಿಸಲು ನಿರಂತರ ಯತ್ನಿಸುತ್ತಿದ್ದಾರೆ. ಮುಸ್ಲಿಮರೆಂದರೆ ಭಯೋತ್ಪಾದಕರು, ಪಾಕಿಸ್ತಾನದ ಏಜೆಂಟರು ಎಂಬಂತೆ ಬಿಂಬಿಸಿ ಅಪಪ್ರಚಾರ ಮಾಡುವ ಬಿಜೆಪಿ, ಆರೆಸ್ಸೆಸ್‌ನವರು ಒಂದು ಮಿಷನ್‌ನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರ, ಆ ಸರಕಾರದ ಭಾಗವಾಗಿರುವ ಮಂತ್ರಿಗಳು, ಶಾಸಕರು ಮುಸ್ಲಿಮ್ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್‌ನಂತೆ ಬಳಸಿಕೊಳ್ಳುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಮುಸ್ಲಿಮ್ ಅಭ್ಯರ್ಥಿಗೆ ನೀಡದಿರುವುದು ಕಾಕತಾಳೀಯ ಅಲ್ಲ ಅಥವಾ ಚುನಾವಣೆ ಗೆಲ್ಲುವ ತಂತ್ರವೂ ಅಲ್ಲ. ಅದು ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರ ಮನಸ್ಥಿತಿ.
ಎಲ್ಲವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಾಡಬೇಕು ಎಂದು ನಿರೀಕ್ಷಿಸುವುದು ತಪ್ಪು. ಆದರೆ ಆ ಪಕ್ಷದ ಹಿರಿಯ ನಾಯಕರು, ಮುಖ್ಯಮಂತ್ರಿಯೂ ಆಗಿರುವ ಸಿದ್ದರಾಮಯ್ಯ ಅವರು ಮುಸ್ಲಿಮ್ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಎಂದು ಪರಿಗಣಿಸಬೇಡಿ, ಅವರ ಸಂಖ್ಯಾ ಬಲಕ್ಕೆ ಅನುಗುಣವಾಗಿ ಎಲ್ಲದರಲ್ಲೂ ಪಾಲು ನೀಡುವುದು ಸಾಮಾಜಿಕ ನ್ಯಾಯದ ಭಾಗ ಎಂಬುದನ್ನು ಮನವರಿಕೆ ಮಾಡಿಕೊಡಬೇಕು.
ಕಾಂಗ್ರೆಸ್ ಪಕ್ಷದ ಈ ಉಡಾಫೆ ನಡವಳಿಕೆಗೆ ಮುಸ್ಲಿಮ್ ನಾಯಕರೂ ಕಾರಣ. ಮುಸ್ಲಿಮ್ ಸಮುದಾಯದಲ್ಲಿ ಅತಿ ಶ್ರೀಮಂತರು ಇರುವಂತೆ ಅತಿ ಬಡವರೂ ಇದ್ದಾರೆ. ಝಕಾತ್ ತತ್ವದ ಅನುಸಾರ ಆ ಸಮುದಾಯದ ಶ್ರೀಮಂತರು ಬಡವರ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾದರೆ ಒಟ್ಟು ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ ಪ್ರಬಲಗೊಳ್ಳುತ್ತದೆ. ಕೇವಲ ಪ್ರತಿಶತ ಮೂರು ಜನಸಂಖ್ಯೆ ಹೊಂದಿರುವ ಬ್ರಾಹ್ಮಣ ಸಮುದಾಯದ ಮೂರು ಜನ ಸಂಸದರು, ಹೆಚ್ಚು ಶಾಸಕರು ಮತ್ತು ಎಲ್ಲಾ ಕ್ಷೇತ್ರದ ಆಯಕಟ್ಟಿನ ಜಾಗದಲ್ಲಿ ಇರಲು ಸಾಧ್ಯವಾಗಿದ್ದು ಆರ್ಥಿಕ-ಶೈಕ್ಷಣಿಕ ಶಕ್ತಿಯಿಂದ. ಮುಸ್ಲಿಮ್ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಆಗಿ ಪರಿಗಣಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಅಲ್ಲಿನ ಮುಖಂಡರಿಗೆ ಜಾಗೃತ ಮುಸ್ಲಿಮರು ಮಾತ್ರ ಉತ್ತರ ಕೊಡಬಲ್ಲದು.