ಒಪಿಎಸ್ ಮರು ಸ್ಥಾಪನೆಗೆ ಹೆಚ್ಚುತ್ತಿರುವ ಒತ್ತಡ...

Update: 2026-07-18 12:33 IST

ಆರ್ಥಿಕ ಮಿತವ್ಯಯ ಸಾಧಿಸುವುದೇ ಅಟಲ್ ಬಿಹಾರಿ ವಾಜಪೇಯಿ ಸರಕಾರದ ಗುರಿಯಾಗಿದ್ದರೆ ಪ್ರಧಾನಮಂತ್ರಿ ಸೇರಿದಂತೆ ಸಂಪುಟದ ಎಲ್ಲ ಸಚಿವರು, ಸಂಸದರಿಗೂ ಅನ್ವಯವಾಗುವಂತೆ ಪಿಂಚಣಿ ಯೋಜನೆ ರೂಪಿಸಬೇಕಾಗಿತ್ತು. ಅಷ್ಟು ಮಾತ್ರವಲ್ಲ, ಒಂದೇ ಬಗೆಯ ಕೆಲಸ ಮಾಡುವ ನೌಕರರಲ್ಲೇ ಕೆಲವರಿಗೆ ಹಳೆಯ ಪಿಂಚಣಿ, ಇನ್ನುಳಿದವರಿಗೆ ಹೊಸ ಪಿಂಚಣಿ ನೀಡುವುದು ಸಮಾನ ಕೆಲಸಕ್ಕೆ ಸಮಾನ ಸವಲತ್ತು ನೀತಿಗೆ ವಿರುದ್ಧವಾಗಿತ್ತು. ಭಾರತದ ಸಂವಿಧಾನ ಈ ರೀತಿಯ ಇಬ್ಬಗೆ ನೀತಿಯನ್ನು ಒಪ್ಪುವುದಿಲ್ಲ.

ಸರಕಾರಿ ನೌಕರರ ಹಳೆಯ ಪಿಂಚಣಿ ಯೋಜನೆ ಮತ್ತು ಹೊಸ ಪಿಂಚಣಿ ಯೋಜನೆಯ ಕತೆ, ಭಾರತೀಯ ಜನತಾ ಪಕ್ಷದವರ ತಾರತಮ್ಯ ನೀತಿಗೆ ಹಿಡಿದ ಕನ್ನಡಿಯಂತಿದೆ. ಜನವರಿ 1, 2004ರಂದು ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದಾಗಲೇ ಕಾಂಗ್ರೆಸ್ ಪಕ್ಷ, ಬಿಜೆಪಿಯವರ ಈ ನೀತಿ ಸಂವಿಧಾನ ವಿರೋಧಿ ಎಂದು ವ್ಯಾಪಕ ಪ್ರಚಾರ ಮಾಡಿದ್ದರೆ ಮೋದಿ ಯುಗಕ್ಕೆ ಅವಕಾಶವೇ ಇರುತ್ತಿರಲಿಲ್ಲ.

ಭಾರತೀಯ ಜನಸಂಘ ಕಾಲದಿಂದಲೂ ಬಿಜೆಪಿಯನ್ನು ನಿರಂತರ ಬೆಂಬಲಿಸುತ್ತಾ ಬಂದವರು ಭಾರತದ ಮಧ್ಯಮ ವರ್ಗದವರು. ಮಧ್ಯಮ ವರ್ಗದಲ್ಲಿ, ವಿಶೇಷವಾಗಿ ಸರಕಾರಿ ನೌಕರರು ಮತ್ತು ಪಟ್ಟಣ, ನಗರ, ಮಹಾನಗರಗಳಲ್ಲಿ ನೆಲೆ ನಿಂತ ವ್ಯಾಪಾರಿಗಳು. 1980ರಲ್ಲಿ ಬಿಜೆಪಿ ಸ್ಥಾಪನೆಯಾಗಿ, ಅದರ ಮೊದಲ ಅಧ್ಯಕ್ಷ ಅಟಲ್ ಬಿಹಾರಿ ವಾಜಪೇಯಿ ಮುಂಚೂಣಿಗೆ ಬರುವ ಮುನ್ನ ಸಂಘ ಪರಿವಾರದ ಶಾಖೆಗಳು ಕೇವಲ ಮಧ್ಯಮ ವರ್ಗದ ಆಕರ್ಷಣೆಯ ಕೇಂದ್ರಗಳಾಗಿದ್ದವು. ಕೈಗಾರಿಕಾ ವಲಯ ಮತ್ತು ಬ್ಯಾಂಕಿಂಗ್ ನೌಕರ ವರ್ಗದಲ್ಲಿ ‘ಹಿಂದ್ ಮಜದೂರ್ ಸಭಾ’ ಇತ್ತಾದರೂ ಮಾನ್ಯತೆ ಕಡಿಮೆ ಇತ್ತು. ಕಮ್ಯುನಿಸ್ಟ್ ಮತ್ತು ಸಮಾಜವಾದಿ ನಾಯಕರು ಕಾರ್ಮಿಕ ಸಂಘಟನೆಗಳನ್ನು ಮುನ್ನಡೆಸುತ್ತಿದ್ದರು. ಕಾರ್ಮಿಕರ ಸಂಬಳ, ಭತ್ತೆ ಮತ್ತು ಇನ್ನಿತರ ಸವಲತ್ತು ಕೊಡಿಸಲು ನಿರಂತರ ಹೋರಾಡುತ್ತಿದ್ದರು. ಪ್ರತಿಯಾಗಿ ವಂತಿಗೆ ಸಂಗ್ರಹಿಸಿ ರಾಜಕೀಯ ಪಕ್ಷಗಳಿಗೆ ಆರ್ಥಿಕ ನೆಲೆ ಒದಗಿಸುತ್ತಿದ್ದರು. ಎಡ ಮತ್ತು ಸಮಾಜವಾದಿ ಕಾರ್ಮಿಕ ಸಂಘಟನೆಯ ಮುಖಂಡರು ಬಲಿಷ್ಠವಾಗಿದ್ದರು. ಆದರೆ ಕಾರ್ಮಿಕ ಸಮುದಾಯವನ್ನು ಸೈದ್ಧಾಂತಿಕವಾಗಿ ಗಟ್ಟಿಗೊಳಿಸಲಿಲ್ಲ. ಸಂಬಳ, ಭತ್ತೆ ಮತ್ತು ಇನ್ನಿತರ ಸೌಲಭ್ಯ ಪಡೆದುಕೊಳ್ಳಲು ಎಡಪಂಥೀಯ ಕಾರ್ಮಿಕ ಸಂಘಟನೆಗಳನ್ನು ಅವಲಂಬಿಸಿದ್ದ ಕಾರ್ಮಿಕರು ಆಳದಲ್ಲಿ ಸಂಘ ಪರಿವಾರ ಮತ್ತು ಬಿಜೆಪಿ ಪರ ಒಲವು ಇಟ್ಟುಕೊಂಡಿದ್ದರು. ಭಾರತದಲ್ಲಿ ಬಿಜೆಪಿ ಬೆಳೆದಿದ್ದೇ ಮಧ್ಯಮ ವರ್ಗದ ಹೆಗಲ ಕೂಸಾಗಿ. ದುರಂತವೆಂದರೆ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಬ್ಯಾಂಕ್, ಎಲ್‌ಐಸಿ ಮತ್ತು ಸರಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ಕಾರ್ಮಿಕ ಸಮುದಾಯವನ್ನು ಬೀದಿಪಾಲು ಮಾಡಿದರು. ಭಾರತದಾದ್ಯಂತ ಸರಕಾರಿ ನೌಕರರ ಸಂಘಟನೆಗಳು ಎಲ್ಲ ಸವಲತ್ತುಗಳನ್ನು ಪಡೆದದ್ದು ಕಾಂಗ್ರೆಸ್ ಮತ್ತು ಜನತಾ ಪರಿವಾರದ ಸರಕಾರಗಳಿಂದ. ಆದರೆ ಆಳದಲ್ಲಿ ಬಿಜೆಪಿ ಅಭಿಮಾನಿಗಳಾಗಿ ರೂಪುಗೊಳ್ಳುತ್ತಿದ್ದರು. ಕರ್ನಾಟಕದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲದ ಕಾಲದಿಂದಲೂ ಶಿಕ್ಷಕರ ಮತ್ತು ಪದವೀಧರರ ಮತಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದರು. ಸರಕಾರಿ ನೌಕರ ಸಮುದಾಯಕ್ಕೆ ಬಿಜೆಪಿಯ ಒಳ ಹುನ್ನಾರ ಅರ್ಥ ಮಾಡಿಸುವಲ್ಲಿ ಕಾಂಗ್ರೆಸ್ ಮತ್ತು ಜನತಾ ಪರಿವಾರದ ಮುಖಂಡರು ಸಂಪೂರ್ಣ ವಿಫಲರಾಗಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವವರೆಗೆ ಸರಕಾರಿ ನೌಕರರು ಮತ್ತು ಸಾರ್ವಜನಿಕ ಉದ್ಯಮಗಳು ನಿರಾತಂಕ ಬದುಕು ನಡೆಸುತ್ತಿದ್ದವು. ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಲಾಭದಲ್ಲಿರುವ ಸಾರ್ವಜನಿಕ ಉದ್ಯಮಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಪ್ರತ್ಯೇಕ ಸಚಿವ ಖಾತೆಯನ್ನೇ ಸೃಷ್ಟಿಸಿದರು. ಸಾರ್ವಜನಿಕ ಉದ್ಯಮಗಳನ್ನು ಖರೀದಿಸಿದ ಮಾಲಕರು ಉದ್ಧಾರವಾದರು. ಆದರೆ ಅಲ್ಲಿ ದುಡಿಯುತ್ತಿದ್ದ ಕಾರ್ಮಿಕರ ಕುಟುಂಬಗಳು ಬೀದಿ ಪಾಲಾದವು. ನೆಹರೂ ಕಾಲದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಬಹುತೇಕ ಸಾರ್ವಜನಿಕ ಉದ್ಯಮಗಳು ಬಿಜೆಪಿ ಅಧಿಕಾರಾವಧಿಯಲ್ಲಿ ಖಾಸಗಿಯವರ ಪಾಲಾಗಿವೆ. ಹಿಂದ್ ಮಜದೂರ್ ಸಭಾ ಸಂಘ ಪರಿವಾರದ ವೈಚಾರಿಕತೆ ಪ್ರಸಾರ ಮಾಡಲು ಹೆಚ್ಚು ಸಮಯ ವ್ಯಯಿಸಿತೇ ಹೊರತು ಕಾರ್ಮಿಕರು ಬೀದಿ ಪಾಲಾಗುವುದನ್ನು ತಪ್ಪಿಸಲಿಲ್ಲ. ಎಡ ಮತ್ತು ಸಮಾಜವಾದಿ ಸಂಘಟನೆಗಳು ವಿಘಟನೆಯಾಗಿ ದುರ್ಬಲವಾಗತೊಡಗಿದವು. ಎಡ ಪಕ್ಷಗಳು ಕಾಂಗ್ರೆಸ್ ಮೈತ್ರಿ ಕೂಟ ಸೇರಿದರೆ, ಜಾರ್ಜ್ ಫೆರ್ನಾಂಡಿಸ್, ನಿತೀಶ್ ಕುಮಾರ್ ಮುಂತಾದ ಸಮಾಜವಾದಿ ನಾಯಕರು ಬಿಜೆಪಿ ಮೈತ್ರಿ ಕೂಟ ಸೇರಿ ಕಾರ್ಮಿಕರ ಸಮಾಧಿ ಮೇಲೆ ರಾಜಕಾರಣ ಮಾಡತೊಡಗಿದರು.

ಒಂದು ಕಾಲದಲ್ಲಿ ರೈಲ್ವೆ ನೌಕರರು ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ಉದ್ಯಮಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರ ಹಿತ ಕಾಪಾಡಲು ಜೀವ ಒತ್ತೆ ಇಟ್ಟು ಹೋರಾಡುತ್ತಿದ್ದ ಜಾರ್ಜ್ ಫೆರ್ನಾಂಡಿಸ್ ಅವರು ವಾಜಪೇಯಿ ಸರಕಾರದಲ್ಲಿ ಮಂತ್ರಿಯಾಗಿ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿ ತಂದರು.

ಪಿ.ವಿ. ನರಸಿಂಹ ರಾವ್ ಪ್ರಧಾನಮಂತ್ರಿಯಾಗಿದ್ದಾಗ ಖ್ಯಾತ ಅರ್ಥ ಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ಅವರು ಹಣಕಾಸು ಮಂತ್ರಿಯಾಗಿದ್ದರು. ವಿಶ್ವ ಬ್ಯಾಂಕ್ ಒತ್ತಾಸೆ ಮತ್ತು ಗ್ಯಾಟ್ ಒಪ್ಪಂದದ ಫಲವಾಗಿ ಡೆಂಕಲ್ ಪ್ರಸ್ತಾವಗಳನ್ನು ಒಪ್ಪಿಕೊಂಡರು. ಜಾಗತೀಕರಣ, ಖಾಸಗೀಕರಣ, ಉದಾರೀಕರಣ ನೀತಿಗಳನ್ನು ಜಾರಿಗೆ ತಂದರು. ಆದರೆ ಡಾ. ಮನಮೋಹನ್ ಸಿಂಗ್ ಅವರು ಸಾರ್ವಜನಿಕ ಉದ್ಯಮಗಳನ್ನು ಖಾಸಗಿಯವರ ಪಾಲು ಮಾಡಲಿಲ್ಲ. ಸರಕಾರಿ ನೌಕರರ ಪಿಂಚಣಿ ಯೋಜನೆಯ ಕತ್ತು ಹಿಸುಕಲಿಲ್ಲ. ಕಾಲದ ಒತ್ತಡದಿಂದಾಗಿ ಖಾಸಗಿ ವಲಯವನ್ನು ಬೆಂಬಲಿಸಿದರು. ಭಾರತ ಮಾತ್ರವಲ್ಲ, ಚೀನಾ, ರಶ್ಯದಂತಹ ದೇಶಗಳು ಮುಕ್ತ ಆರ್ಥಿಕತೆಗೆ ತೆರೆದುಕೊಂಡವು.

ಅಲ್ಲಿಯವರೆಗೂ ಸ್ವದೇಶಿ ಮಂತ್ರ ಜಪಿಸುತ್ತಿದ್ದ ಭಾರತೀಯ ಜನತಾ ಪಕ್ಷದ ಮುಖಂಡರು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಲೇ ಅತಿ ವೇಗದಲ್ಲಿ ಖಾಸಗೀಕರಣ ಪ್ರಕ್ರಿಯೆಗೆ ಚಾಲನೆ ನೀಡಿದರು. ಬ್ಯಾಂಕ್ ರಾಷ್ಟ್ರೀಕರಣದಿಂದಲೇ ಬಡವರ ಮನ ಗೆದ್ದಿದ್ದ ಕಾಂಗ್ರೆಸ್ ಪಕ್ಷ ಬಿಜೆಪಿಯ ಬಂಡವಾಳ ಹಿಂದೆಗೆತ ನೀತಿಯನ್ನು ಆಗಲೇ ವಿರೋಧಿಸಿ ಜನಾಂದೋಲನ ರೂಪಿಸಬೇಕಿತ್ತು. ಕಾಂಗ್ರೆಸ್ ಪಕ್ಷದಲ್ಲಿ ನೆಲೆ ನಿಂತಿದ್ದ ಬಿಜೆಪಿ ಮನಸ್ಥಿತಿಯ ನಾಯಕರೇ ಆ ಹೋರಾಟಕ್ಕೆ ಅಡ್ಡಿಯಾಗಿದ್ದರು. ಸಾರ್ವಜನಿಕ ಉದ್ಯಮಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವಾಗ, ಕಾರ್ಮಿಕರು ಬೀದಿ ಪಾಲಾಗುವಾಗ ಕಾಂಗ್ರೆಸ್ ಗಟ್ಟಿ ದನಿಯಲ್ಲಿ ಮಾತನಾಡಿದ್ದರೆ ಬಿಜೆಪಿ ಈ ಪರಿಯಲ್ಲಿ ವಿಸ್ತರಿಸುತ್ತಿರಲಿಲ್ಲ.

ಅಟಲ್ ಬಿಹಾರಿ ವಾಜಪೇಯಿ ಸರಕಾರ ಸರಕಾರಿ ನೌಕರರ ಪಿಂಚಣಿ ಯೋಜನೆಯ ಕತ್ತು ಹಿಚುಕಿ ನ್ಯಾಷನಲ್ ಪೆನ್ಷನ್ ಸಿಸ್ಟಮ್ (ಎನ್‌ಪಿಎಸ್)ಜಾರಿಗೆ ತಂದರು. ಆಗ ಸರಕಾರಿ ನೌಕರರ ಸಂಘಟನೆಗಳು ಪ್ರತಿಭಟನೆ, ಹೋರಾಟ ನಡೆಸಿದವು. ಆಗಲೇ ಕಾಂಗ್ರೆಸ್ ಪಕ್ಷ ಅದನ್ನೊಂದು ಜನಾಂದೋಲನವನ್ನಾಗಿ ರೂಪಿಸಿ, ನೌಕರರ ಬೆಂಬಲಕ್ಕೆ ನಿಂತಿದ್ದರೆ ಬಿಜೆಪಿಯ ಬಣ್ಣ ಬಯಲಾಗುತ್ತಿತ್ತು. ಆರ್ಥಿಕ ಮಿತವ್ಯಯ ಸಾಧನೆಯ ತತ್ವ ಹೇಳಿ ಬಿಜೆಪಿ ಎಲ್ಲರ ಬಾಯಿ ಮುಚ್ಚಿಸಿತು. ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರ ಸರಕಾರಿ ನೌಕರ ವರ್ಗದಲ್ಲೇ ಎರಡು ಪ್ರಭೇದ ಮಾಡಿತು. ಆಗ ಸೇವೆಯಲ್ಲಿದ್ದ ಸರಕಾರಿ ನೌಕರರು ಬಂಡೇಳಬಾರದು ಎಂದು ಎನ್‌ಪಿಎಸ್ ಸೇವೆಯಲ್ಲಿರುವ ನೌಕರರಿಗೆ ಅನ್ವಯಿಸುವುದಿಲ್ಲ. ಜನವರಿ ಒಂದು 2004ರ ನಂತರ ಸರಕಾರಿ ನೌಕರಿ ಸೇರುವವರಿಗೆ ಅನ್ವಯಿಸುತ್ತದೆ ಎಂದು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿತು. ಆರ್ಥಿಕ ಮಿತವ್ಯಯ ಸಾಧಿಸುವುದೇ ಅಟಲ್ ಬಿಹಾರಿ ವಾಜಪೇಯಿ ಸರಕಾರದ ಗುರಿಯಾಗಿದ್ದರೆ ಪ್ರಧಾನಮಂತ್ರಿ ಸೇರಿದಂತೆ ಸಂಪುಟದ ಎಲ್ಲ ಸಚಿವರು, ಸಂಸದರಿಗೂ ಅನ್ವಯವಾಗುವಂತೆ ಪಿಂಚಣಿ ಯೋಜನೆ ರೂಪಿಸಬೇಕಾಗಿತ್ತು. ಅಷ್ಟು ಮಾತ್ರವಲ್ಲ, ಒಂದೇ ಬಗೆಯ ಕೆಲಸ ಮಾಡುವ ನೌಕರರಲ್ಲೇ ಕೆಲವರಿಗೆ ಹಳೆಯ ಪಿಂಚಣಿ, ಇನ್ನುಳಿದವರಿಗೆ ಹೊಸ ಪಿಂಚಣಿ ನೀಡುವುದು ಸಮಾನ ಕೆಲಸಕ್ಕೆ ಸಮಾನ ಸವಲತ್ತು ನೀತಿಗೆ ವಿರುದ್ಧವಾಗಿತ್ತು. ಭಾರತದ ಸಂವಿಧಾನ ಈ ರೀತಿಯ ಇಬ್ಬಗೆ ನೀತಿಯನ್ನು ಒಪ್ಪುವುದಿಲ್ಲ. ಆರ್ಥಿಕ ಮಿತವ್ಯಯ ಬಿಜೆಪಿ ಸರಕಾರದ ಮೊದಲ ಆದ್ಯತೆಯಾಗಿದ್ದರೆ, ಪ್ರಧಾನಿಯಿಂದ ಹಿಡಿದು ಮಂತ್ರಿ, ಸಂಸದ, ಶಾಸಕರನ್ನೂ ಎನ್‌ಪಿಎಸ್ ವ್ಯಾಪ್ತಿಗೂ ತರಬೇಕಿತ್ತು. ಅಷ್ಟು ಮಾತ್ರವಲ್ಲ ಆಗ ಸೇವೆಯಲ್ಲಿದ್ದ ಎಲ್ಲ ಸರಕಾರಿ ನೌಕರರನ್ನೂ ಹೊಸ ಪಿಂಚಣಿ ವ್ಯಾಪ್ತಿಗೆ ಸೇರಿಸಬೇಕಿತ್ತು. ಎಲ್ಲ ಸರಕಾರಿ ನೌಕರರನ್ನು ಸಮಾನವಾಗಿ ಪರಿಗಣಿಸಿದಂತಾಗುತ್ತಿತ್ತು. ಹೊಸ ಪಿಂಚಣಿ ವ್ಯವಸ್ಥೆ ಸರಕಾರಿ ನೌಕರರಿಗೆ ಅನುಕೂಲಕರವಾಗಿಲ್ಲ ಎಂಬುದು ಈಗ ಬಯಲಾಗುತ್ತಿದೆ. ಆದರೆ ಆ ಯೋಜನೆ ರೂಪಿಸುವ ಸರಕಾರಕ್ಕೆ ಸರಕಾರಿ ನೌಕರರ ಹಿತ ಕಾಪಾಡುವುದು ಮೊದಲ ಆದ್ಯತೆಯಾಗಿರಲಿಲ್ಲ. ಕಾರ್ಪೊರೇಟ್ ವಲಯದ ಹಿತವನ್ನು ಗಮನದಲ್ಲಿರಿಸಿಕೊಂಡು ಎನ್‌ಪಿಎಸ್ ರೂಪಿಸಲಾಗಿತ್ತು. ಸರಕಾರಿ ನೌಕರರಿಗಾಗಿಯೇ ರೂಪಿಸಿದ್ದ ಜನರಲ್ ಪ್ರಾವಿಡೆಂಟ್ ಫಂಡ್ (ಜಿಪಿಎಫ್)ನಿಶ್ಚಿತ ಆದಾಯ ನೀಡುತ್ತದೆ. ಎನ್‌ಪಿಎಸ್ ಯೋಜನೆ ಸರಕಾರಿ ನೌಕರರ ಸಂಬಳದ ಹಣವನ್ನು ಕಾರ್ಪೊರೇಟ್ ವಲಯದ ಷೇರು ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿ ಲಾಭ ದೊರೆಯುತ್ತದೆ ಎಂದು ಆಮಿಷ ತೋರಿಸುತ್ತದೆ. ಷೇರು ಮಾರುಕಟ್ಟೆಯಲ್ಲಿ ಪ್ರತಿಶತ ತೊಂಭತ್ತರಷ್ಟು ಜನ ಹಣ ಕಳೆದುಕೊಳ್ಳುತ್ತಾರೆ. 2004ರಲ್ಲಿ ಸರಕಾರಿ ನೌಕರಿಗೆ ಸೇರಿದವರಲ್ಲಿ ಕೆಲವರು ನಿವೃತ್ತಿ ಹೊಂದಿದ್ದಾರೆ. ಎನ್‌ಪಿಎಸ್ ಫಲಾನುಭವಿಗಳಾಗಿದ್ದಾರೆ.. ಆರೇಳು ಸಾವಿರ ಮಾತ್ರ ಪ್ರತೀ ತಿಂಗಳಿಗೆ ದೊರೆಯುತ್ತಿದೆ. ಕುಟುಂಬ ನಿರ್ವಹಣೆ ದೂರದ ಮಾತು. ಎನ್‌ಪಿಎಸ್ ಪಿಂಚಣಿ ಹಣದಲ್ಲಿ ಒಬ್ಬ ವ್ಯಕ್ತಿ ಬದುಕು ಸಾಗಿಸುವುದು ಕಷ್ಟವಾಗುತ್ತದೆ. ಎನ್‌ಪಿಎಸ್ ಯೋಜನೆ ಸರಕಾರಿ ನೌಕರರ ಹಿತ ಕಾಪಾಡುವುದಿಲ್ಲ. ಅದು ಕಾರ್ಪೊರೇಟ್ ದಣಿಗಳ ಲಾಭಕ್ಕಾಗಿ ರೂಪಿಸಿದ್ದ ಯೋಜನೆ ಎಂಬುದು ರುಜುವಾತಾಗಿದೆ.

ಎನ್‌ಪಿಎಸ್ ವಿರುದ್ಧ ವ್ಯಾಪಕ ವಿರೋಧ, ಟೀಕೆ ವ್ಯಕ್ತವಾಗಿದ್ದರಿಂದ ಸ್ವಯಂ ಮೋದಿ ಸರಕಾರವೇ ಅದರ ಬದಲಿಗೆ ಮತ್ತೊಂದು ಪಿಂಚಣಿ ಯೋಜನೆ ರೂಪಿಸಿದೆ. ಆ ಯೋಜನೆಯೂ ಅದಾನಿ, ಅಂಬಾನಿಗಳ ಹಿತವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರೂಪಿಸಲಾಗಿದೆ. ಯೂನಿಫೈಡ್ ಪೆನ್ಷನ್ ಯೋಜನೆ (ಯುಪಿಎಸ್) ನಿವೃತ್ತಿ ನಂತರ ಮಾಜಿ ಸರಕಾರಿ ನೌಕರನಿಗೆ ನಿಶ್ಚಿತ ಪಿಂಚಣಿ ನೀಡುವ ಅವಕಾಶ ಕಲ್ಪಿಸಿದೆ. ಆದರೆ ಪ್ರತೀ ತಿಂಗಳು ವಂತಿಗೆ ನೀಡುವುದು ಮತ್ತು ಆ ಹಣವನ್ನು ಕಾರ್ಪೊರೇಟ್ ಕಂಪೆನಿಗಳಲ್ಲಿ ಹೂಡಿಕೆ ಮಾಡುವ ಪದ್ಧತಿ ಮುಂದುವರಿಸಿದೆ. ಹೀಗಾಗಿ ಈಗಲೂ ಯೂನಿಫೈಡ್ ಪೆನ್ಷನ್ ಯೋಜನೆ ಬಗ್ಗೆ ಯಾರಿಗೂ ಸಮಾಧಾನ ಇಲ್ಲ. ವಿಚಿತ್ರವೆಂದರೆ, ಬಿಜೆಪಿ ಮತದಾರರೇ ತುಂಬಿರುವ ವಿಶ್ವವಿದ್ಯಾನಿಲಯಗಳು, ಐಐಟಿ, ಐಐಎಂ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಗಳ ಪ್ರಾಧ್ಯಾಪಕರು, ಇನ್ನಿತರ ಸಿಬ್ಬಂದಿ ಸರಕಾರಿ ನೌಕರರು ಅಲ್ಲ ಎಂದು ಪರಿಗಣಿಸಿ ಅವರನ್ನು ಇನ್ನೂ ಎನ್‌ಪಿಎಸ್ ವ್ಯಾಪ್ತಿಯಲ್ಲಿ ಇರಿಸಿದ್ದಾರೆ.

ಬಿಜೆಪಿಯ ಬಗ್ಗೆ ಪ್ರೀತಿ ಗೌರವ ಇಟ್ಟುಕೊಂಡಿದ್ದ ಸರಕಾರಿ ನೌಕರರನ್ನು ಎನ್‌ಪಿಎಸ್ ಮೂಲಕ ಕತ್ತು ಹಿಚುಕಿದರೆ, ಮಧ್ಯಮ ವರ್ಗದ ವ್ಯಾಪಾರಿಗಳನ್ನು ನೋಟ್ ಬಂದಿ ಮೂಲಕ ಬದುಕು ಕಸಿದುಕೊಳ್ಳಲಾಯಿತು. ಈಗ ಅಹಿಂದ ವರ್ಗವನ್ನು ಬಿಜೆಪಿ ಎಸ್‌ಐಆರ್ ನಡೆಸುವ ಮೂಲಕ ಮತದಾನದ ಹಕ್ಕನ್ನು ಕಿತ್ತುಕೊಳ್ಳುತ್ತಿದೆ. ಅಂಬಾನಿ, ಅದಾನಿ ಮತ್ತು ಇನ್ನಿತರ ಕಾರ್ಪೊರೇಟ್ ವಲಯದ ದಣಿಗಳ ಹಿತ ಕಾಪಾಡುವುದು ಮಾತ್ರ ಭಾರತ ಸರಕಾರದ ಆದ್ಯ ಕರ್ತವ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾವಿಸಿದ್ದಾರೆ. ಕಾಂಗ್ರೆಸ್ ಪಕ್ಷ ಹಳೆಯ ಪಿಂಚಣಿ ಯೋಜನೆ ಮರು ಸ್ಥಾಪಿಸುವ ಭರವಸೆ ನೀಡಿ ಕೆಲವು ರಾಜ್ಯಗಳಲ್ಲಿ ಚುನಾವಣೆಗಳನ್ನು ಗೆದ್ದಿದೆ. ಆದರೆ ಬಿಜೆಪಿ ಜನ ವಿರೋಧಿ ಎಂದು ಬಿಂಬಿಸುವಲ್ಲಿ ಹಿಂದೆ ಬಿದ್ದಿದೆ. ಈಗಾಗಲೇ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳ ಸರಕಾರ ಇರುವ ರಾಜಸ್ಥಾನ, ಛತ್ತೀಸ್‌ಗಡ, ಜಾರ್ಖಂಡ್, ಪಂಜಾಬ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಮರು ಸ್ಥಾಪಿಸಲಾಗಿದೆ. ಆದರೆ ಬಿಜೆಪಿಯನ್ನು ಬೆತ್ತಲೆಗೊಳಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ರಾಜಸ್ಥಾನ ಮತ್ತು ಛತ್ತೀಸ್‌ಗಡ ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರಗಳು ಹಳೆಯ ಪಿಂಚಣಿ ಯೋಜನೆ ಮರು ಸ್ಥಾಪಿಸಲು ಹೊರಟಾಗ ಕೇಂದ್ರದಲ್ಲಿನ ಮೋದಿ ಸರಕಾರ ಸಾಕಷ್ಟು ಅಡ್ಡಿ ಪಡಿಸಿತು. ಈಗಾಗಲೇ ಎನ್‌ಪಿಎಸ್ ಯೋಜನೆಯಡಿ ಜಮೆಯಾದ ಸರಕಾರಿ ನೌಕರರ ವಂತಿಗೆ ಹಣವನ್ನು ರಾಜ್ಯ ಸರಕಾರಗಳಿಗೆ ಹಿಂದಿರುಗಿಸಲು ತಕರಾರು ಮಾಡಿತು. ಹಾಗಾಗಿ ಆ ರಾಜ್ಯಗಳಲ್ಲಿ ಒಪಿಎಸ್ ಮರು ಸ್ಥಾಪನೆಯಾದರೂ ಚುನಾವಣೆಯಲ್ಲಿ ಹೆಚ್ಚಿನ ಲಾಭ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಯೋಜನೆಯ ಸಂಪೂರ್ಣ ಲಾಭ ದೊರೆಯದ ಹೊರತು ಸರಕಾರಿ ನೌಕರರು ಬೆಂಬಲಿಸಲಾರರು.

ಹಿಮಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಹಳೆಯ ಪಿಂಚಣಿ ಯೋಜನೆಯನ್ನು ವ್ಯವಸ್ಥಿತವಾಗಿ ಮರು ಸ್ಥಾಪಿಸಿ ಯಶಸ್ವಿಯಾಗಿದ್ದಾರೆ. ಇನ್ನೊಂದು ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಕಲ್ಪಿಸಿಕೊಂಡಿದ್ದಾರೆ. ಜಿಪಿಎಫ್ ಲಿಂಕ್ಡ್ ಪೆನ್ಷನ್ ಯೋಜನೆ ಒಪಿಎಸ್ ಮರು ಸ್ಥಾಪಿಸುವಲ್ಲಿನ ಎಲ್ಲ ಅಡ್ಡಿ ಆತಂಕಗಳನ್ನು ನಿವಾರಿಸಿದೆ.

ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರಕಾರಿ ನೌಕರರ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಸರಕಾರಿ ನೌಕರ ಸಂಘದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಹಳೆಯ ಪಿಂಚಣಿ ಯೋಜನೆ ಮರು ಸ್ಥಾಪಿಸುವ ಭರವಸೆ ನೀಡಿದ್ದಾರೆ. ಹಾಗೆ ನೋಡಿದರೆ, 2023ರ ಸಾರ್ವತ್ರಿಕ ಚುನಾವಣಾ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಒಪಿಎಸ್ ಮರು ಸ್ಥಾಪಿಸುವ ಭರವಸೆ ನೀಡಿದ್ದರು. ಈಗ ಡಿ.ಕೆ. ಶಿವಕುಮಾರ್ ಅದನ್ನೇ ಪುನಃರುಚ್ಚರಿಸಿದ್ದಾರೆ. ಹಳೆಯ ಪಿಂಚಣಿ ವ್ಯವಸ್ಥೆ ಮರು ಸ್ಥಾಪಿಸುವುದು ಚುನಾವಣಾ ಭರವಸೆಯ ಭಾಗ. ಆದರೆ ಕಾಂಗ್ರೆಸ್ ಪಕ್ಷ ಅಷ್ಟಕ್ಕೆ ವಿರಮಿಸಬಾರದು. ಭಾರತೀಯ ಜನತಾ ಪಕ್ಷ, ಸರಕಾರಿ ನೌಕರರು ಸೇರಿ ಮಧ್ಯಮ ವರ್ಗದವರನ್ನು ಹೇಗೆ ಬಳಸಿ ಬಿಸಾಕಿತು ಎಂಬುದರ ಕಥಾನಕವನ್ನು ಮನ ಮುಟ್ಟುವಂತೆ ಆ ವರ್ಗದ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಕರ್ನಾಟಕದಲ್ಲಿ ಬಿಜೆಪಿ ದುರ್ಬಲವಾಗಿದೆ. ಬಿಜೆಪಿಯಲ್ಲಿ ನಾಯಕತ್ವದ ಗೊಂದಲ ನಿವಾರಣೆಯಾಗಿಲ್ಲ. ಸಮನ್ವಯತೆ ಸಾಧಿಸಲು ಆಗುತ್ತಿಲ್ಲ. ಇದೇ ಸಂದರ್ಭ ಬಳಸಿಕೊಂಡು ಕಾಂಗ್ರೆಸ್ ಸರಕಾರ ತನ್ನ ವೋಟ್ ಬ್ಯಾಂಕ್ ಭದ್ರ ಮಾಡಿಕೊಂಡರೆ 2028ರ ಚುನಾವಣೆಯಲ್ಲಿ ಗೆಲುವಿಗೆ ಹತ್ತಿರವಾಗುತ್ತದೆ. ಹುದ್ದೆಗಳ ಭರ್ತಿ, ಹಳೆಯ ಪಿಂಚಣಿ ಯೋಜನೆ ಮರು ಸ್ಥಾಪನೆ ಸೇರಿ ಕಾಂಗ್ರೆಸ್ ಸರಕಾರ ಕೈಗೊಳ್ಳಲಿರುವ ಅಭಿವೃದ್ಧಿ ಯೋಜನೆಗಳನ್ನು ಜನಸಾಮಾನ್ಯರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಯಶಸ್ವಿಯಾದರೆ. ಮತದಾರರ ವಿಶ್ವಾಸ ಗೆದ್ದಂತೆ. ಕೊನೆಯ ಗಳಿಗೆಯಲ್ಲಿ ಕೈಗೊಳ್ಳುವ ಯಾವ ತೀರ್ಮಾನವೂ ಮತದಾರರಿಗೆ ತಲುಪುವುದಿಲ್ಲ. ಹಳೆಯ ಪಿಂಚಣಿ ವ್ಯವಸ್ಥೆ ಮರು ಸ್ಥಾಪನೆಗೆ ಹಿಮಾಚಲ ಪ್ರದೇಶದ ಸುಖವಿಂದರ್ ಸಿಂಗ್ ಮಾದರಿ ಅತ್ಯುತ್ತಮವಾಗಿದೆ. ಅದನ್ನು ಪರಿಶೀಲಿಸಿ ಕರ್ನಾಟಕದಲ್ಲಿ ಅಳವಡಿಸಿಕೊಂಡರೆ ನೌಕರ ವರ್ಗದ ಹಿತ ಕಾಪಾಡಿದಂತಾಗುತ್ತದೆ. ಬಿಜೆಪಿಯ ದುರುಳ ನೀತಿಯ ಅನಾವರಣ ಮಾಡಿದಂತಾಗುತ್ತದೆ. ಬಿಜೆಪಿ ಹಿಂದೂಗಳ ರಕ್ಷಣೆಯ ಪಕ್ಷವಾಗಿ ಯಾವತ್ತೂ ಕಾರ್ಯ ನಿರ್ವಹಿಸಿಲ್ಲ. ಹಿಂದೂಗಳನ್ನು ಬಳಸಿಕೊಂಡು ಚುನಾವಣೆಗಳನ್ನು ಗೆದ್ದಿದೆ. ಬಿಜೆಪಿ ಕಾರ್ಪೊರೇಟ್ ವಲಯದ ಹಿತ ಕಾಪಾಡುವುದೇ ಮೊದಲ ಆದ್ಯತೆಯಾಗಿಸಿಕೊಂಡಿದೆ. ಕೋಮುವಾದದ ಅಸ್ತ್ರದ ಮೂಲಕ ಮತದಾರರನ್ನು ಭಾವನಾತ್ಮಕವಾಗಿ ಕೆರಳಿಸಲು ಬಳಸಿಕೊಳ್ಳುತ್ತದೆ. ಬಿಜೆಪಿಯ ಯೂಸ್ ಆಂಡ್ ಥ್ರೋ ನೀತಿಯನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವಲ್ಲಿ ಕಾಂಗ್ರೆಸ್ ಪಕ್ಷ ಇತ್ತೀಚೆಗೆ ಯಶಸ್ವಿಯಾಗುತ್ತಿದೆ. ಅಟಲ್ ಬಿಹಾರಿ ವಾಜಪೇಯಿ, ಮೋದಿ ಸಜ್ಜನರ ಮುಖವಾಡ ಧರಿಸಿದ ಕಾರ್ಪೊರೇಟ್ ವಲಯದ ಕಾಲಾಳುಗಳು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News